ನಿನ್ನೆ ಈ ಮಗುವಿಗೆ ಪದೇಪದೇ ಸೆಲ್ಯೂಟ್ ಹೊಡೆಯಲು ಹೇಳಲಾಗುತ್ತಿತ್ತು. ಏನೂ ಅರಿಯದ ಕಂದ ಅಳುತ್ತಿತ್ತು. ಮಗನಿಗೆ ಭಗತ್ ಅಂತ ಹೆಸರಿಟ್ಟ ಅಪ್ಪ ತಣ್ಣಗೆ ಮಲಗಿದ್ದಾನೆ! ಈ ಕೂಸಿಗೆ ಅವರಪ್ಪ ಊರಿಗೆ ಬಂದಾಗ ಚಾಕೊಲೇಟ್ ತರುತ್ತಿರುವದಷ್ಟೇ ಗೊತ್ತಿತ್ತು. ಇಷ್ಟೊಂದು ಜನರೇಕೆ ಡಬ್ಬಿಯಲ್ಲಿ ಮಲಗಿದ ಅಪ್ಪನ ಸುತ್ತ ನಿಂತಿದ್ದಾರೆ ಅಂತ ಅವನಿಗೆ ಗಾಬರಿ. ಫೋಟೊ, ವೀಡಿಯೋ ಮಾಡುವವರು ‘ಭಗತ್ ಸೆಲ್ಯೂಟ್ ಹೊಡಿ.. ಭಗತ್.. ಅವನಿಗೆ ಕೈ ಎತ್ತಿಸಿ’ ಅಂತ ಚೀರುತ್ತಿದ್ದಾರೆ. (https://fb.watch/v/14KEbjAh4/ ಈ ವೀಡಿಯೋ ನೋಡಿ) ಆದರೆ ಭಗತ್ ಅಳುತ್ತಿದ್ದಾನೆ. ಬೇರೆ ಗೊತ್ತಿಲ್ಲ ಅವನಿಗೆ.. ಈ ದೇಶ.. ಈ ಯುದ್ಧ.. ಗಡಿ.. ಫೋಟೊ ತೆಗುಯುವವರ ಆರ್ತನಾದ ಏನೆಂದರೆ ಏನೂ ಗೊತ್ತಿಲ್ಲ, ಪಾಪ.
ನಮ್ಮ ವಿಜಯಪುರ ಜಿಲ್ಲೆಯ ಬಾಗೇವಾಡಿಯ ಕುಗ್ರಾಮವೊಂದರ ಹೆಮ್ಮೆಯ ವೀರ ಯೋಧ ಕಾಶೀರಾಮ. ಆತನಿಗೆ ನನ್ನ ಸಾವಿರ ಸಲಾಮ್. ಆತ ಊರಿಗೆ ಬಂದಾಗಲೂ ವೀರನಂತೇ ಇರುತ್ತಿದ್ದನಂತೆ. ಆತ ಆದರ್ಶದ ಜೀವ. ಆದರೆ ಯೋಧ ಹೋದ ಮೇಲೆ ನಿಷ್ಪಾಪಿ ಹೆಂಡತಿ ಕೈಯಲ್ಲಿ ಸಂದರ್ಶನಕ್ಕಾಗಿ ಏನೋ ಹೇಳಿಸೋದು, ತಂದೆ ಮಲಗಿದ್ದು ನೋಡಿ ದಿಕ್ಕು ತೋಚದೇ ಆಳುತ್ತಿರುವ ಮಗುವಿನಿಂದ ಫೋಟೊಗಾಗಿ ಸೆಲ್ಯೂಟ್ ಮಾಡಿಸುವುದು ಎಂತಹ ನಿರ್ದಯಿ ಕೆಲಸ ಅಂತ ನಮಗೆ ಅನ್ನಿಸುವುದೇ ಇಲ್ಲವೇ?
ನಮ್ಮ ಮನೆಯಲ್ಲಿಯೇ ಹೀಗೊಬ್ಬ ಸತ್ತು ಮಲಗಿದ್ದರೆ ಹೀಗೆ ಮಾಡುತ್ತಿದ್ದೆವೆ ನಾವು? ಬೇರೊಬ್ಬರ ಮಕ್ಕಳನ್ನು ಬಾವಿಗೆ ತಳ್ಳಿ ದೇಶ ಪ್ರೇಮ ಉಕ್ಕಿಸುವ ದರ್ದು ನಮಗ್ಯಾಕೆ ಬಂದಿದೆ? ಕಳ್ಳು ಕಿತ್ತು ಬರುವ ಹಾಗೆ ಭಾಷಣ ಮಾಡಿಯೇ ದೇಶ ಪ್ರೇಮ ಕಲಿಸಬೇಕಾ? ನಿಜಕ್ಕೂ ಇಂತಹ ದೇಶ ಪ್ರೇಮದ ಮಜಲು ನಮಗೆ ಬೇಕಾ? ಬೇಡ, ಈ ಬಗೆಯ ‘ಕರುಳು ಹಿಂಡುವ’ ಕೆಲಸ.
ನಮ್ಮ ಉತ್ತರ ಕರ್ನಾಟಕದ ಸಾವಿರಾರು ಹುಡುಗರು ಹೀಗೆ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ನಿಜಕ್ಕೂ ನಮ್ಮ ರಕ್ತದಲ್ಲೇ ದೇಶ ಪ್ರೇಮವಿದೆ. ಇದರ ಜತೆಗೇ ಮನೆ ನೋಡಿಕೊಳ್ಳಲು ದೇಶ ಕಾಯಲು ಹೋದವರಿದ್ದಾರೆ.
ಯಾರೋ ದೇಶ ಕಾಯ್ದು ಸಾಯುತ್ತಾರೆ, ನಾವು ಪೋಸು ಕೊಡಬೇಕಾ.. ಇವರ ಸಾವುಗಳನ್ನು ನೆವಗಳಾಗಿ ಇಟ್ಟುಕೊಂಡು ದೇಶ ಪ್ರೇಮ ಜನಕ್ಕೆ ಮುಟ್ಟಿಸಲೇ ಬೇಕಾ? ಬೇಡ.
ನಮ್ಮ ಕಣ ಕಣದಲ್ಲೂ ‘ನಿಜವಾದ’ ದೇಶ ಪ್ರೇಮವಿದೆ. ವೀರ ಮರಣ ಹೊಂದಿದ ಕಟುಂಬದ ನೋವಿನ ಸೂಕ್ಷ್ಮ ಅರಿಯದ ನಾವೆಂತಹ ದೇಶಪ್ರೇಮಿಗಳು, ಮನುಜರು?
ಬೇಲಿಗಳಿಲ್ಲದ ಜಗತ್ತು ನಮ್ಮದಾಗಲಿ, ಯುದ್ಧಗಳು ನಿಲ್ಲಲಿ. ಕವಿಯೊಬ್ಬರು ಹೇಳಿದಂತೆ ‘ಬಂದೂಕಿನ ನಳಿಕೆಯಲಿ ಗುಬ್ಬಿ ಗೂಡು ಕಟ್ಟಲಿ’. ಮನುಷ್ಯ ರಾಕ್ಷಸನಾಗಿರುವ ಹೊತ್ತಲ್ಲಿ ಇದೆಲ್ಲ ಆಗದಿದ್ದರೂ ‘ವಿಶ್ವ ಮಾನವ’ನ ಆಶಯವಂತೂ ಪಡಲೇಬೇಕು.
ಜೈ ಹಿಂದ್..
- ಶಿವಕುಮಾರ್ ಉಪ್ಪಿನ, ಪತ್ರಕರ್ತರು



