ಸಿಜಿಕೆ ಮತ್ತು ಸಿದ್ದಲಿಂಗಯ್ಯ ಎರಡು ಅಪರೂಪದ ವ್ಯಕ್ತಿತ್ವಗಳು: ಪಂಡಿತಾರಾಧ್ಯ ಸ್ವಾಮೀಜಿ

5 years ago

ಬೆಂಗಳೂರು: ಸಿಜಿಕೆ ಮತ್ತು ಸಿದ್ದಲಿಂಗಯ್ಯ ಎರಡು ಅಪರೂಪದ ವ್ಯಕ್ತಿತ್ವಗಳು. ಸರಳತೆಯಲ್ಲಿ ಸಮಾಜ ಪರಿವರ್ತನೆ ಮಾಡುವ ಕೆಲಸವನ್ನು ಮಾಡುತ್ತಿದ್ದರು ಅವರ ತತ್ವ ಮತ್ತು ಸಿದ್ಧಾಂತಗಳು ಈ ಸಮಾಜಕ್ಕೆ ಮಾದರಿ ಎನ್ನಬಹುದು ಎಂದು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ನುಡಿದರು.

ರಂಗ ಚಂದಿರ ಮತ್ತು ರಂಗ ವಿಜಯ ಸಂಸ್ಥೆಗಳು ಸಿಜಿಕೆ ಎಪ್ಪತ್ತರ ಸವಿನೆನಪು ಹಾಗೂ ನಾಡೋಜ ಕವಿ ಸಿದ್ದಲಿಂಗಯ್ಯನವರ ನುಡಿನಮನ ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬದುಕಿನುದ್ದಕ್ಕೂ ಸಾವಿರಾರು ಕಲಾವಿದರು ಹಾಗೂ ರಂಗದ ಹಿಂದೆ ದುಡಿಯುವವರ ದನಿಯಾಗಿ ದುಡಿದವರು ಸಿಜಿಕೆ. ಆದರೆ ದಮನಿತರ ಶೋಷಿತರ ದನಿಯಾಗಿ ದುಡಿದವರು ಸಿದ್ದಲಿಂಗಯ್ಯ. ಇಬ್ಬರ ಹೋರಾಟವು ನಾಡಿನ ಶೋಷಿತವರ್ಗದ ದನಿಯಾಗಿತ್ತು ಎಂದರು.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಸಿಜಿಕೆ ಅವರು ಹೃದಯದ ತೊಂದರೆಯಿಂದ ನನ್ನ ಬಳಿ ಚಿಕಿತ್ಸೆಗಾಗಿ ಬಂದಿದ್ದರು. ಅವರ ಒಡನಾಟದಿಂದ ನನಗೆ ಅರ್ಥವಾಗಿದ್ದು ಹೃದಯದ ತೊಂದರೆ ಇದ್ದರೂ ಹೃದಯ ವೈಶಾಲ್ಯತೆ ಅಮೋಘವಾದದ್ದು. ರಂಗಕರ್ಮಿಗಳು, ಕಲಾವಿದರು, ನಾಡಿಗೆ ನೀಡುವ ಕೊಡುಗೆಯ ಪರಿಚಯವಾದದ್ದೆ ಅವರಿಂದ. ಸಿದ್ದಲಿಂಗಯ್ಯನವರು ಜನರ ದನಿಯಾಗಿ ಜನರ ಕವಿಯಾಗಿ ದುಡಿದಿರುವುದು ನಮಗೆಲ್ಲ ತಿಳಿದ ವಿಷಯ ಎಂದರು.

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಸಿಜಿಕೆ ಮತ್ತು ಸಿದ್ದಲಿಂಗಯ್ಯ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಕೆಲಸ ಮಾಡುವ ಎಲ್ಲಾ ವರ್ಗದ ಕಲಾವಿದರನ್ನು, ತಂತ್ರಜ್ಞರನ್ನು ಸಮಾನವಾಗಿ ಕಾಣುತ್ತಿದ್ದದ್ದು ಇವರಿಬ್ಬರಲ್ಲೂ ಇರುವ ಸಾಮ್ಯತೆ ಎಂದರು.

ಸಿಜಿಕೆ ಹಾಗೂ ಕವಿ ಸಿದ್ದಲಿಂಗಯ್ಯ ದೈಹಿಕವಾಗಿ ನಮ್ಮೊಂದಿಗಿಲ್ಲವಾದರೂ ಈ ಸಮಾಜಕ್ಕೆ ಅವರು ಅವಿಭಾಜ್ಯ ಅಂಗಗಳು. ಕಲಾವಿದರ ದಮನಿತರ ಧ್ವನಿಗಳು ಇವರಿಬ್ಬರು ಇವರ ಸಾಧನೆ ಅನುಕರಣೀಯ ಹಾಗೂ ಆದರ್ಶಪ್ರಾಯ ಎಂದರು.

ಕಾರ್ಯಕ್ರಮದಲ್ಲಿ ಮಾತಾಡಿದ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ದಲಿತ  ಸಾಂಸ್ಕೃತಿಕ ಆಯಾಮಕ್ಕೆ ನೈತಿಕತೆ ತಂದುಕೊಟ್ಟವರು ಡಾ.ಸಿದ್ದಲಿಂಗಯ್ಯ. ಆದರೆ ನಾಟಕದ ಹಾಗೂ ರಂಗಭೂಮಿಯ ಹೊಸ ತಲೆಮಾರನ್ನು  ಹುಟ್ಟುಹಾಕಿದವರು ಸಿಜಿಕೆ ಎಂದರು.

ಸಾಹಿತ್ಯ ಅಕಾಡೆಮಿಯ ಸದಸ್ಯ ಎಲ್.ಎನ್.ಮುಕುಂದರಾಜ್ ಮಾತನಾಡಿ, ಸಿಜಿಕೆ ಮತ್ತು ಸಿದ್ದಲಿಂಗಯ್ಯ ರಂಗಭೂಮಿ ಹಾಗೂ ಸಾಹಿತ್ಯಕ್ಷೇತ್ರಕ್ಕೆ ಆಪಾರ ಕೊಡುಗೆ ನೀಡಿದ್ದಷ್ಟೇ ಅಲ್ಲದೆ ಸಾಮಾನ್ಯ ಜನರ ಬದುಕಿಗೆ ಹೊಸ ಅರ್ಥವನ್ನು ಕಲ್ಪಿಸಿಕೊಡುವಲ್ಲಿ ಇವರಿಬ್ಬರ ಶ್ರಮ ಇದೆ. ಬದುಕಿನುದ್ದಕ್ಕೂ ಅವರಿಬ್ಬರು ಜನರ ನಡುವೆ ಇದ್ದು ಈಗಲೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ಕಾರ್ಯಕ್ರಮದ ನಿರೂಪಣೆಯನ್ನು ಶಿವಲಿಂಗ ಪ್ರಸಾದ್ ನಡೆಸಿದರೆ, ಸ್ವಾಗತವನ್ನು ರಂಗ ಚಂದಿರ ಕಾರ್ಯದರ್ಶಿ ಜಿಪಿಒ ಚಂದ್ರು ನಡೆಸಿಕೊಟ್ಟರು. ಜೋಗಿಲ ಸಿದ್ದರಾಜು ರಂಗ ಗೀತೆಗಳನ್ನು ಹಾಡಿದರು ರಂಗ ವಿಜಯದ ಅಧ್ಯಕ್ಷ ಮಾಲೂರು ವಿಜಿ  ವಂದನಾರ್ಪಣೆ ಮಾಡಿದರು.

Leave a Reply