ತಕರಾರು ಅರ್ಜಿ ವಿಲೇಗೊಳಿಸದ ತಹಶೀಲ್ದಾರರ ವಿರುದ್ಧ ಆಕ್ರೋಶ
ಕಂದಾಯ ಗ್ರಾಮಗಳ ಶೀಘ್ರ ಘೋಷಣೆಗೆ ಸೂಚನೆ
ಕುಡಿಯುವ ನೀರಿನ ಪೂರೈಕೆಗೆ ಸೂಕ್ತ ಕ್ರಮ: ಮೆಚ್ಚುಗೆ
ಸೋಮವಾರದಿಂದಲೇ ಶೇ.100 ರಷ್ಟು ಇ-ಆಫೀಸ್ ಬಳಕೆ
ಬೆಂಗಳೂರು: ಅಧಿಕಾರಿಗಳು ಭೂಮಿ ಮೇಲಿರಿ, ಆಕಾಶದಲ್ಲಿ ಹಾರಾಡಬೇಡಿ. ಹಾಗೆ ಹಾರಾಡಿದರೆ ನಿಮ್ಮನ್ನು ಕೆಳಗಿಳಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆ. ಸೂಚನೆಯಂತೆ ತಹಶೀಲ್ದಾರ್ ಹಾಗೂ ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ 1 ವರ್ಷಕ್ಕಿಂತ ಹಳೆಯ ತಕರಾರು ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿಗೊಳಿಸಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಇಂದು ವಿಕಾಸಸೌಧದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಆರು ತಿಂಗಳಿಗಿಂತ ಒಂದು ವರ್ಷದವರೆಗಿನ ಅತಿಹೆಚ್ಚಿನ ಸಂಖ್ಯೆಯ ತಕರಾರು ಅರ್ಜಿಗಳನ್ನು ವಿಲೇಗೊಳಿಸದೆ ಬಾಕಿ ಉಳಿಸಿಕೊಂಡಿದ್ದ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರ ವಿರುದ್ಧ ಅವರು ಹರಿಹಾಯ್ದರು.
ತಹಶೀಲ್ದಾರ್ ಮತ್ತು ಎಸಿ ನ್ಯಾಯಾಲಯಗಳಲ್ಲಿ ಸಾವಿರಾರು ತಕರಾರು ಅರ್ಜಿಗಳು ವಿಲೇವಾರಿಗೊಳ್ಳದೆ ಬಾಕಿ ಉಳಿದಿವೆ. ಈ ಎಲ್ಲಾ ಅರ್ಜಿಗಳನ್ನೂ ಶೀಘ್ರವಾಗಿ ಮತ್ತು ನ್ಯಾಯಯುತವಾಗಿ ವಿಲೇವಾರಿಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಂದ ಸೂಚನೆಯೂ ಇದೆ. ಈ ಸೂಚನೆ ಮೇರೆಗೆ ಕಳೆದ 6 ತಿಂಗಳಿನಿಂದ ಒಂದು ವರ್ಷಕ್ಕೂ ಹಳೆಯ ಎಲ್ಲಾ ಪ್ರಕರಣಗಳನ್ನು ಶೀಘ್ರ ವಿಲೇವಾರಿಗೊಳಿಸಲಾಗುತ್ತಿದೆ. ಎಸಿ ನ್ಯಾಯಾಲಯದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆಯನ್ನು ಶೇ.50ಕ್ಕೆ ಇಳಿಸಲಾಗಿದೆ. ಆದರೂ, ಕೆಲವು ಭಾಗದಲ್ಲಿ ಅಧಿಕಾರಿಗಳ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಅಕ್ಷಮ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಹಶೀಲ್ದಾರ್ ನ್ಯಾಯಾಲಯದಲ್ಲಿ ಒಂದು ವರ್ಷಕ್ಕಿಂತ ಹಳೆಯ 1318 ಪ್ರಕರಣಗಳು ರಾಯಚೂರಿನಲ್ಲಿ ಬಾಕಿ ಇದ್ದರೆ, ತುಮಕೂರಿನ ಎಸಿ ನ್ಯಾಯಾಲಯದಲ್ಲಿ 6590 ಪ್ರಕರಣಗಳು ಬಾಕಿ ಇವೆ. ಕೋಲಾರದಲ್ಲಿ ಆರು ತಹಶೀಲ್ದಾರರಿದ್ದೂ ಸಹ ಕಳೆದ 20 ದಿನಗಳಲ್ಲಿ ಕೇವಲ 11 ಪ್ರಕರಣಗಳನ್ನು ಮಾತ್ರ ವಿಲೇವಾರಿಗೊಳಿಸಲಾಗಿದೆ. ಬೆಂಗಳೂರು ನಗರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನು ಇಲ್ಲ. ಸಿಎಂ ಸಿದ್ದರಾಮಯ್ಯ ಅವರ ಜನತಾ ದರ್ಶನದಲ್ಲಿ ಕಂದಾಯ ಇಲಾಖೆಯ ಬಗ್ಗೆಯೇ 458 ದೂರುಗಳು ದಾಖಲಾಗಿವೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸರ್ಕಾರ ತಲೆತಗ್ಗಿಸಬೇಕಾ? ಜನವರಿ 15ರ ಒಳಗಾಗಿ ಆರು ತಿಂಗಳಿಗಿಂತ ಹಳೆಯ ಎಲ್ಲಾ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು ಎಂದು ಅವರು ಸಮಯದ ಗಡುವು ನೀಡಿದರು.
ಕಂದಾಯ ಗ್ರಾಮಗಳನ್ನು ಶೀಘ್ರ ಘೋಷಿಸಿ: ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿರುವ ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಜನವಸತಿ ಪ್ರದೇಶಗಳಿಗೆ ಸರ್ಕಾರಿ ಸವಲತ್ತುಗಳನ್ನು ನೀಡುವ ಸಲುವಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಅದರಂತೆ ನಿಯಮದ ಪ್ರಕಾರ ಬಡವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶೀಘ್ರವಾಗಿ ಕಂದಾಯ ಗ್ರಾಮಗಳನ್ನು ಘೋಷಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದರು.
ನಿಯಮಗಳ ಪ್ರಕಾರ 50ಕ್ಕೂ ಹೆಚ್ಚು ಕುಟುಂಬಗಳಿದ್ದರೆ ಆ ಗ್ರಾಮಗಳನ್ನು ಕಂದಾಯ ಗ್ರಾಮಗಳು ಎಂದು ಘೋಷಿಸಬೇಕು. ಈ ಬಗ್ಗೆ ಕಳೆದ ಆರು ತಿಂಗಳಿನಿಂದ ಸೂಚನೆ ನೀಡುತ್ತಿದ್ದಾಗ್ಯೂ ಜಿಲ್ಲಾಧಿಕಾರಿಗಳು ಅರ್ಹ ತಾಂಡ-ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ವಿಳಂಬ ಮಾಡುತ್ತಿರುವುದೇಕೆ? ಬಡಜನರ ಕೆಲಸಕ್ಕೆ ಮೀನಾಮೇಶ ಎಣಿಸಬೇಡಿ ಎಂದು ಸೂಚಿಸಿದರು.
ಕಂದಾಯ ಗ್ರಾಮಗಳ ಘೋಷಣೆ ಸಾಧ್ಯವಿಲ್ಲ ಎಂದಾದರೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಮ್ಮೆ ಆಲೋಚಿಸಿ ರದ್ದುಗೊಳಿಸಿ. ಯಾರೋ ಅನುಕೂಲಸ್ಥರಿಗಾಗಿ ಬಡವರಿಗೆ ಅನ್ಯಾಯ ಮಾಡಬೇಡಿ. ಕಂದಾಯ ಗ್ರಾಮ ಘೋಷಣೆಯಾಗುತ್ತಿದ್ದಂತೆ, ಎಲ್ಲಾ ಕುಟುಂಬಗಳಿಗೆ ಹಕ್ಕುಪತ್ರ ಸಿದ್ದಪಡಿಸುವ ಕೆಲಸವೂ ಜೊತೆ ಜೊತೆಗೆ ಆಗಲಿ, ಜನವರಿ 10ರೊಳಗೆ ಹಕ್ಕುಪತ್ರ ವಿತರಿಸಿ ಎಂದು ತಾಕೀತು ಮಾಡಿದರು.
ಕುಡಿಯುವ ನೀರಿನ ಪೂರೈಕೆಗೆ ಸೂಕ್ತ ಕ್ರಮ: ಮೆಚ್ಚುಗೆ: ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲಾಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು.
ಬಳ್ಳಾರಿಯಲ್ಲಿ 99 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಕಂಡುಬಂದಿದ್ದು, ಈಗಾಗಲೇ ಖಾಸಗಿ ಬೋರ್ ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ರಾಜ್ಯಾದ್ಯಂತ ಮುಂಜಾಗ್ರತಾ ಕ್ರಮವಾಗಿ 3600 ಖಾಸಗಿ ಬೋರ್ ವೆಲ್ ಗಳನ್ನು ಗುರುತಿಸಲಾಗಿದೆ ಎಂದು ಮೆಚ್ಚುಗೆ ಸೂಚಿಸಿದ ಸಚಿವರು, ಎಲ್ಲಾ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳು ಖಾಸಗಿ ಬೋರ್ ವೆಲ್ ಗೆ ಹೆಚ್ಚು ಒತ್ತುನೀಡಿ ಮತ್ತು ಬೋರ್ ವೆಲ್ ದರ ಮಾತುಕತೆಯಲ್ಲೂ ಗಮನವಿರಲಿ ಎಂದರು.
ರಾಮನಗರ, ಕೋಲಾರ, ಚಿಕ್ಕ ಬಳ್ಳಾಪುರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕೇವಲ 35 ಬೋರ್ ವೆಲ್ ಗಳನ್ನು ಮಾತ್ರ ಗುರುತಿಸಲಾಗಿದೆ. ಬೇಸಿಗೆಯ ಸಂದರ್ಭದಲ್ಲಿ ಇದು ಸಾಲುತ್ತಾ? ಟ್ಯಾಂಕರ್ ಗಳಲ್ಲಿ ನೀರು ಪೂರೈಸುವುದಾದರೆ ಮೊದಲೇ ಟೆಂಡರ್ ಆಗಿರಬೇಕು, ತಾಲೂಕುಗಳಲ್ಲಿ ಟಾಸ್ಕ್ ಫೋರ್ಸ್ ಸಭೆ ಆಗದಿದ್ದರೆ ಕೂಡಲೇ ಮಾಡಿ ಎಂದೂ ಸೂಚಿಸಿದರು.
ಇ-ಆಫೀಸ್ ಬಳಸದ ಅಧಿಕಾರಿಗಳ ತರಾಟೆ: ಸಭೆಯಲ್ಲಿ ಇ-ಆಫೀಸ್ ಅನ್ನು ಸಮರ್ಪಕವಾಗಿ ಬಳಸದ ಅಧಿಕಾರಿಗಳನ್ನೂ ಸಹ ಅವರು ತರಾಟೆಗೆ ತೆಗೆದುಕೊಂಡರು. ಹೆಸರಿಗೆ ಇ-ಆಫೀಸ್ ಅನುಷ್ಠಾನಗೊಳಿಸಿ ಶೇ100 ರಷ್ಟು ಅನುಷ್ಠಾನ ಆಗದಿದ್ದರೆ ನಮ್ಮ ಉದ್ದೇಶವೇ ವ್ಯರ್ಥ ಎಂದು ಕಿಡಿಕಾರಿದರು.
ಕಂದಾಯ ಇಲಾಖೆಯಲ್ಲಿ ಎಲ್ಲಾ ಕಡತಗಳೂ ಇ-ಆಫೀಸ್ ಮೂಲಕವೇ ವಿಲೇವಾರಿಯಾಗಬೇಕು ಎಂದು ಕಳೆದ ಆರು ತಿಂಗಳಿನಿಂದ ಹೇಳಲಾಗುತ್ತಿದೆ. ಆದರೂ, ಇನ್ನೂ ಯಾವ ಜಿಲ್ಲೆಯಲ್ಲೂ ಶೇ. 100ರಷ್ಟು ಇ-ಆಫೀಸ್ ಜಾರಿಯಾಗಿಲ್ಲ. ಚಾಮರಾಜನಗರದಂತಹ ಅತ್ಯಂತ ಹಿಂದುಳಿದ ಜಿಲ್ಲೆಯಲ್ಲೂ ಇ-ಆಫೀಸ್ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಆದರೆ, ಮುಂದುವರೆದ ಜಿಲ್ಲೆಗಳಿಗೇನು ಕಷ್ಟ? ಎಂದು ಅಸಮಾಧಾನ ಹೊರಹಾಕಿದರು.
ಈ ವೇಳೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, “ತಾಲೂಕು ಕಚೇರಿ ಸೇರಿದಂತೆ ಕೆಳಹಂತದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ಕಡತಗಳನ್ನು ಸೃಷ್ಟಿಸಬೇಕು. ಟಪಾಲು ಸ್ವೀಕರಿಸುವಾಗಲೇ ಇ-ಆಫೀಸ್ ಬಳಕೆಯಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನವಹಿಸಬೇಕು. ಮುಂದಿನ ಸೋಮವಾರದಿಂದಲೇ ಎಸಿ-ಡಿಸಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಶೇ.100 ರಷ್ಟು ಇ-ಆಫೀಸ್ ಮೂಲಕವೇ ನಿರ್ವಹಿಸಬೇಕು. ಭೌತಿಕ ದಾಖಲೆಗಳನ್ನು ಇನ್ನು ಸ್ವೀಕರಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ, ಸಭೆಯಲ್ಲಿ ರೈತರ ಒಟ್ಟಾರೆ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು “ಫ್ರೂಟ್ಸ್”ತಂತ್ರಾಂಶದಲ್ಲಿ ನಮೂದಿಸುವುದು, ಬಗರ್ ಹುಕುಂ ಸಮಿತಿ ರಚನೆಗೆ ಒತ್ತು ನೀಡುವುದು, ರೆಕಾರ್ಡ್ ರೂಂ ನಿರ್ವಹಣೆ ಮತ್ತು ಡಿಜಿಟಲೀಕರಣ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.




