ಬೆಂಗಳೂರು: ಬಾಂಬ್ ಸ್ಫೋಟದ ಕುರಿತು ಹುಸಿ ಬೆದರಿಕೆ ಕರೆ ಮಾಡುವವರು, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರತ್ಯೇಕ ಕಾಯ್ದೆ ರೂಪಿಸುವುದಾಗಿ ಗೃಹ ಸಚಿವ ಡಾ.ಪರಮೇಶ್ವರ್ ತಿಳಿಸಿದ್ದಾರೆ.
ಈ ಮೂಲಕ ರಾಜಧಾನಿ ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕಳುಹಿಸಿ ಆತಂಕ ಸೃಷ್ಟಿಯಾದ ಬೆನ್ನಲ್ಲೇ ಇಂತಹ ಕೃತ್ಯಗಳನ್ನು ನಡೆಸುವರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾದಂತಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ನಕಲಿ ಬೆದರಿಕೆ ಹಾಕುವವರ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಜೊತೆಯಲ್ಲೇ ಶಾಲೆಗಳಿಗೆ ಆಯಾ ಪೊಲೀಸ್ ಠಾಣೆಯ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಪೊಲೀಸರು ಇಂತಹ ಕ್ರಮಗಳನ್ನು ಆರಂಭಿಸಿದ್ದಾರೆ ಎಂದರು.
ಬೆಂಗಳೂರಿನ ಶಾಲೆಗಳಿಗೆ ಬಂದಿರುವ ಬೆದರಿಕೆ ಇ-ಮೇಲ್ನ ಐಪಿ ಅಡ್ರೆಸ್ ವಿದೇಶಿ ಮೂಲದ್ದಾಗಿರುವ ಅನುಮಾನಗಳಿದ್ದು, ಈ ಬಗ್ಗೆ ಗಂಭೀರ ತನಿಖೆ ನಡೆಸಲಾಗುತ್ತಿದೆ. ಶಾಲೆಗಳಿಗೆ ಬೆದರಿಕೆ ಕರೆ ಬಂದಿರುವ ಮೇಲ್ ಐಡಿಯ ಐಪಿ ವಿಳಾಸ ಭಾರತದಲ್ಲಿಲ್ಲ. ಹೀಗಾಗಿ ಅದರ ಮೂಲ ಮಾಹಿತಿಗಳನ್ನು ನೀಡಲು ಸಂಬಂಧಿಸಿದ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ನಮ್ಮ ಸಂಪರ್ಕದಲ್ಲಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜೊತೆ ಚರ್ಚೆ ನಡೆಸಿದೆ. ಆರಂಭದಲ್ಲಿ 15 ಶಾಲೆಗಳಿಗೆ ಬೆದರಿಕೆ ಬಂದಿತ್ತು. ನಂತರ ಅದು 45 ಶಾಲೆಗಳಿಗೆ ಎಂದು ಖಚಿತವಾಗಿದೆ. ಎಲ್ಲಾ ಶಾಲೆಗಳಲ್ಲೂ ತಪಾಸಣೆ ನಡೆಸಿ ಯಾವುದೇ ಸ್ಪೋಟಕಗಳಿಲ್ಲ ಎಂದು ದೃಢಪಡಿಸಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದರು.
ಆಧುನಿಕ ಪರಿಸ್ಥಿತಿಯಲ್ಲಿ ಪ್ರತಿದಿನ ಈ ರೀತಿಯ ಸವಾಲುಗಳು ಉದ್ಭವಿಸುತ್ತಲೇ ಇರುತ್ತವೆ. ಅವುಗಳನ್ನು ನಿಭಾಯಿಸಲೇಬೇಕು. ಒಂದು ವೇಳೆ ಆರೋಪಿ ವಿದೇಶದಲ್ಲಿದ್ದು, ಆತನನ್ನು ಬಂಧಿಸಿ ಕರೆತರಲು ಅನುಮತಿಸಿದರೆ ಆ ಕಾರ್ಯಾಚರಣೆಗಾಗಿ ವಿಶೇಷ ತಂಡ ರಚಿಸಲಾಗುವುದು ಎಂದರು.




