ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಿಗ್ಗೆಯಿಂದ ಹಲವಾರು ತಾಸುಗಳ ಕಾಲ ಜನತಾ ದರ್ಶನವನ್ನು ಮಾಡಿ ಸಾರ್ವಜನಿಕರಿಂದ ಅವಹಾಲುಗಳನ್ನು ಸ್ವೀಕರಿಸಿದಂತಹ ಕಾರ್ಯಕ್ರಮ ಉತ್ತಮವಾದದ್ದಾಗಿತ್ತು. ಮುಖ್ಯಮಂತ್ರಿಗಳ ಬಳಿಯಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಜನರು ವಿಶ್ವಾಸದಿಂದ ಆಗಮಿಸಿದ್ದರು.
ಮುಖ್ಯಮಂತ್ರಿಗಳು ಕಾನೂನಾತ್ಮಕವಾದ ರೀತಿಯಲ್ಲಿ ಸಾಧ್ಯವಿರುವ ಹಲವಾರು ಸಮಸ್ಯೆಗಳನ್ನು ಮತ್ತು ಕೆಲವು ವ್ಯಕ್ತಿಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿರುವುದು ಸಹ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿನ ಉತ್ತಮ ಗುಣಲಕ್ಷಣವೇ ಸರಿ.
ಮಾನ್ಯ ಮುಖ್ಯಮಂತ್ರಿಗಳು ತಮ್ಮ ಕೆಲಸದ ಒತ್ತಡದ ನಡುವೆ ಇಂತಹ ಕೆಲಸಗಳನ್ನು ಮೇಲಿಂದ ಮೇಲೆ ಮಾಡಲು ಕಷ್ಟಸಾಧ್ಯವಾಗುತ್ತದೆ. ಸಾರ್ವಜನಿಕರೂ ಸಹ ಬೇರೆ ಬೇರೆ ಜಿಲ್ಲೆಗಳಿಂದ ನಗರಕ್ಕೆ ಬರುವುದು ದುಬಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಯಾವುದೇ ಜಿಲ್ಲೆಯ ಕಾರ್ಯಕ್ರಮಗಳಿಗೆ ಹೋದ ಸಂದರ್ಭದಲ್ಲಿ ಆಯಾ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕನಿಷ್ಠ ಒಂದು ಘಂಟೆಗಳ ಕಾಲವಾದರೂ ಜನರ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಮಾಡಲಿ.
ಜಿಲ್ಲಾ ಉಸ್ತುವಾರಿ ಸಚಿವರು ಜನತಾ ದರ್ಶನದ ಕಾರ್ಯಕ್ರಮದಲ್ಲಿ ಭಾಷಣಗಳಿಗೆ ಅವಕಾಶವಿರದೆ ನೇರವಾಗಿ ಜನರ ಸಮಸ್ಯೆ ಕೇಳುವ ಸಂಪ್ರದಾಯವನ್ನು ಆರಂಭಿಸಿ. ಪ್ರತಿದಿನ ರಾಜ್ಯದಾದ್ಯಂತ ಲಕ್ಷಾಂತರ ಮಂದಿ ಒಂದಲ್ಲ ಒಂದು ಸಮಸ್ಯೆಯನ್ನು ಅನುಭವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸಾರ್ವಜನಿಕರ ಕುಂದುಕೊರತೆಗಳ ಇಲಾಖೆಯನ್ನು ಸ್ಥಾಪಿಸಿ ಪ್ರತಿಯೊಂದು ಜಿಲ್ಲಾಧಿಕಾರಿ ಮತ್ತು ತಾಲ್ಲೂಕು ಕಛೇರಿಯಲ್ಲಿ ಜನರ ಅರ್ಜಿಯನ್ನು ಸ್ವೀಕರಿಸಲು ಒಬ್ಬರಿಗೆ ಜವಾಬ್ದಾರಿಯನ್ನು ನೀಡಿ ಆ ಅರ್ಜಿಗಳನ್ನು ಜಿಲ್ಲಾಧಿಕಾರಿ ಮತ್ತು ತಾಲ್ಲೂಕು ಕಛೇರಿಗಳ ಮೂಲಕವೇ ಕಡತವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸುವಂತಹ ವ್ಯವಸ್ಥೆ ಮಾಡಲಿ.
ಪ್ರತಿ ತಿಂಗಳಿಗೊಮ್ಮೆ ಸಾರ್ವಜನಿಕ ಕುಂದುಕೊರತೆ ಇಲಾಖೆಯವರು ಸ್ವೀಕರಿಸಿದ ಅರ್ಜಿಗಳು ಎಷ್ಟು, ಪರಿಹರಿಸಿದ ಅರ್ಜಿಗಳು ಎಷ್ಟು ಎಂಬ ಮಾಹಿತಿಯನ್ನು ಬಿಡುಗಡೆ ಮಾಡಲಿ. ಮುಖ್ಯಮಂತ್ರಿಗಳು ಈ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದರೆ ಆಡಳಿತ ಯಂತ್ರ ಚುರುಕಾಗುತ್ತದೆ ಎಂದು ಮುಖ್ಯಮಂತ್ರಿಯ ಜನತಾ ದರ್ಶನದ ಕಾರ್ಯಕ್ರಮಕ್ಕೆ ಜನಜಂಗುಳಿ ಕಡಿಮೆಯಾಗುತ್ತದೋ ಅಂದು ಇಲಾಖೆಗಳು ಕ್ರಿಯಾಶೀಲವಾಗಿದೆ ಎಂದರ್ಥ.
- ಕೆ.ಎಸ್.ನಾಗರಾಜ್, ಬೆಂಗಳೂರು




