‘ಭಕ್ತರ ಬಂಧನ’ ವಿರೋಧಿಸಿ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ

2 years ago

ಬೆಂಗಳೂರು: ತಾನು ಹಿಂದೂ ವಿರೋಧಿ ಎಂಬುದನ್ನು ಈ ಸರಕಾರವು ರಾಜ್ಯ ಮತ್ತು ದೇಶದ ಜನತೆಗೆ ಪದೇಪದೇ ನೆನಪು ಮಾಡುವ ಕೆಲಸ ಮಾಡುತ್ತಿದೆ. ನಿನ್ನೆ ಹುಬ್ಬಳ್ಳಿಯಲ್ಲಿ 31 ವರ್ಷದ ಹಳೆಯ ಕೇಸನ್ನು ರೀ ಓಪನ್ ಮಾಡಿ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 22ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಠಾಪನೆ ಆಗುವ ಶುಭ ಸಂದರ್ಭದಲ್ಲಿ ಇಡೀ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಕೋಟ್ಯಂತರ ಹಿಂದೂ ಕಾರ್ಯಕರ್ತರು ಸಂತಸದಲ್ಲಿದ್ದಾರೆ. ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಇದೆ. ಇಂಥ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಕೈಗೊಂಡ ಕ್ರಮದ ಮೂಲಕ ತಮ್ಮದು ಹಿಂದೂ ವಿರೋಧಿ ಸರಕಾರ ಎಂದು ದೇಶಕ್ಕೇ ತೋರಿಸಿಕೊಟ್ಟಿದ್ದಾರೆ ಎಂದರು.

ರಾಮನ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಕೆತ್ತನೆ ಮಾಡಿದ್ದಾಗಿ ನಿನ್ನೆ ಸಂಭ್ರಮದಿಂದ ಇದ್ದೆವು. ರಾಜ್ಯದ ಪ್ರತಿಯೊಬ್ಬರು ಹೆಮ್ಮೆ ಪಡುವ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ, ಹಳೆಯ ಕೇಸನ್ನು ಮತ್ತೆ ಓಪನ್ ಮಾಡಿ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿರುವುದು ಖಂಡನೀಯ. ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ನಾಳೆ ಇಡೀ ರಾಜ್ಯಾದ್ಯಂತ ಹೋರಾಟ ಮಾಡಲು ಕರೆ ನೀಡುತ್ತಿದ್ದೇವೆ ಎಂದರು.

ಬೆಂಗಳೂರಿನ ಫ್ರೀಡಂ ಪಾರ್ಕ್ ಮಾತ್ರವಲ್ಲದೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಪದೇಪದೇ ಅಲ್ಪಸಂಖ್ಯಾತರನ್ನು ಓಲೈಸುವ ರಾಜ್ಯದ ಕಾಂಗ್ರೆಸ್ ಸರಕಾರ, ಬರಗಾಲದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಇಡೀ ದೇಶದಲ್ಲಿ ಸಂಭ್ರಮ ಇರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದೆ. ಇದಕ್ಕೆ ತಕ್ಕ ಶಾಸ್ತಿಯನ್ನು ಮತದಾರರು ಮುಂದಿನ ದಿನಗಳಲ್ಲಿ ಮಾಡುತ್ತಾರೆ ಎಂದರು.

ಅಯೋಧ್ಯೆಯ ಮಂತ್ರಾಕ್ಷತೆಯನ್ನು ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಪ್ರತಿ ಮನೆಗೂ ತಲುಪಿಸುತ್ತಿದ್ದಾರೆ. ಅಲ್ಲಿ ಕೂಡ ಕಾಂಗ್ರೆಸ್ ಸರಕಾರ ಅಡ್ಡಿ ಮಾಡುತ್ತಿದೆ. ಪುಡಾರಿತನ ಮಾಡುತ್ತಿದೆ ಎಂದು ಗೊತ್ತಾಗಿದೆ. ಇದನ್ನೆಲ್ಲ ಗಮನಿಸಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.

ದೇಶವೇ ಸಂಭ್ರಮದಲ್ಲಿರುವಾಗ ರಾಮನ ಭಕ್ತನನ್ನು ಬಂಧಿಸಲು ನಿಮಗೆಷ್ಟು ಧೈರ್ಯ? ಕಾನೂನು- ಸುವ್ಯವಸ್ಥೆಗೆ ಭಂಗ ತರುವ ದುಸ್ಸಾಹಸಕ್ಕೆ ಮುಖ್ಯಮಂತ್ರಿಗಳೇ ಕೈ ಹಾಕುತ್ತಿದ್ದಾರೆ. ರಾಜ್ಯ ಸರಕಾರಕ್ಕೆ ಆದ್ಯತೆ ಯಾವುದು? ಸಂದರ್ಭ ಮತ್ತು ನಿಮ್ಮ ಉದ್ದೇಶ ಏನು? ತಪ್ಪು ಮಾಡಿದ್ದಾರೆ ಅಥವಾ ಇಲ್ಲವೇ ಎಂದು ನೀವು ತೀರ್ಮಾನ ಮಾಡುವುದಲ್ಲ; 31 ವರ್ಷ ಹಳೆಯ ಕೇಸನ್ನು ಈಗಲೇ ರೀ ಓಪನ್ ಮಾಡಬೇಕಿತ್ತೇ ಎಂದರು.

Leave a Reply