ಅಪರಾಧಿಗಳಿಗೆ ಕುಮ್ಮಕ್ಕು ನೀಡುವ ಮೂಲಕ ಬಿಜೆಪಿಯಿಂದ ನೀಚ ರಾಜಕಾರಣ: ಸಿದ್ದರಾಮಯ್ಯ

2 years ago

ಕೊಪ್ಪಳ: ಕರಸೇವಕರ ಬಂಧನದಲ್ಲಿ ನಾವು ಯಾವುದೇ ದ್ವೇಷದ ರಾಜಕಾರಣ ಮಾಡುವುದಾಗಲಿ, ನಿರಪರಾಧಿಗಳನ್ನು ಬಂಧಿಸುವ ಕೆಲಸವಾಗಲಿ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಹಿಂದೂ ಪರ ಕಾರ್ಯಕರ್ತರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪವನ್ನು ನಿರಾಕರಿಸಿದ್ದಾರೆ.

ಕೊಪ್ಪಳ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಏನು ಮಾಡಬೇಕು. ಅವರನ್ನು, ಸುಮ್ಮನೆ ಬಿಟ್ಟುಬಿಡಬೇಕೇ ಎಂದು ಪ್ರಶ್ನಿಸಿದರು.

ಸರ್ಕಾರ ಯಾವುದೇ ರೀತಿಯ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಅದರ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ನ್ಯಾಯಾಲಯದ ಸೂಚನೆ ಇದ್ದರೆ, ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಗೃಹಸಚಿವರು ಹಳೆ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕೆಂದು ಹೇಳಿದ್ದಾರೆ. ಇದರ ಪ್ರಕಾರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವಿಳಂಬವಾದಾಕ್ಷಣ ಕ್ರಮ ಕೈಗೊಳ್ಳಬಾರದು ಎಂದಿದೆಯೇ? ಸರ್ಕಾರ ಕಾನೂನಿನ ಪ್ರಕಾರ ನಡೆದುಕೊಂಡಿದೆ. ಪ್ರಹ್ಲಾದ್ ಜೋಷಿಯೇನು ಕಾನೂನು ತಜ್ಞರಲ್ಲ ಅಥವಾ ಅವರು ನ್ಯಾಯಾಲಯವೂ ಅಲ್ಲ, ಅವರು ಹೇಳಿದ್ದೆಲ್ಲವೂ ವೇದವಾಕ್ಯವೂ ಅಲ್ಲ. ಕಾನೂನು ಪ್ರಕಾರ ಮಾತನಾಡದೇ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಪರಾಧಿಗಳಿಗೆ ಕುಮ್ಮಕ್ಕು ನೀಡುವ ಮೂಲಕ ಬಿಜೆಪಿಯವರು ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮಮಂದಿರ ಉದ್ಘಾಟನೆಗೆ ಕೇವಲ ರಾಮಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ರಾಮಮಂದಿರದ ಮುಖ್ಯ ಅರ್ಚಕರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೆ ಆಹ್ವಾನ ಹೋಗಿದೆ , ಬಿಟ್ಟಿದೆ ಎಂದು ಗೊತ್ತಿಲ್ಲ. ಆಹ್ವಾನ ಬಂದವರು ಹೋಗುತ್ತಾರೆ, ಇಲ್ಲದವರು ಇಲ್ಲ ಎಂದರು.

ಅತಿಥಿ ಉಪನ್ಯಾಸಕರು ಪಾದಯಾತ್ರೆ ಮಾಡುವ ಬಗ್ಗೆ ಮಾತನಾಡಿ ಅವರೊಂದಿಗೆ ಮಾತನಾಡಿದ್ದರೂ ಪಾದಯಾತ್ರೆ ಮಾಡುತ್ತಿದ್ದಾರೆ. ಅವರನ್ನು ಖಾಯಂ ಮಾಡಿ ಎಂದು ಬೇಡಿಕೆ ಇದೆ. ಖಾಯಂ ಮಾಡುವುದು ಕಷ್ಟದ ಕೆಲಸ ಎಂದರು.

ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಮೊತ್ತ ರೈತರಿಗೆ ತಲುಪಲಿದೆ ಎಂದರು.

Leave a Reply