ಪ್ರತಾಪ್ ಸಿಂಹ ಈಗ ಬಿಜೆಪಿಯೊಳಗೆ ಅಕ್ಷರಶಃ ಒಬ್ಬಂಟಿಯಾಗಿದ್ದಾರೆ. ಯಾರಿಗೂ ಬೇಡದವರಾಗಿದ್ದಾರೆ. ಮರಗಳ್ಳತನದ ಪ್ರಕರಣದಲ್ಲಿ ಅವರ ತಮ್ಮ ವಿಕ್ರಂ ಸಿಂಹ ಅರೆಸ್ಟಾಗುವವರೆಗೆ ಪ್ರಕರಣ ಬೆಳೆದರೂ ಇದುವರೆಗೆ ಒಬ್ಬರೇ ಒಬ್ಬ ಬಿಜೆಪಿ ನಾಯಕ ಆ ಕುರಿತು ತುಟಿ ಬಿಚ್ಚಿಲ್ಲ; ಪ್ರತಾಪ್ ಸಿಂಹ ಪರವಾಗಿ ನಿಂತಿಲ್ಲ. ಈ ಅನಾಥಪ್ರಜ್ಞೆಯಿಂದ ತತ್ತರಿಸಿಹೋಗಿರುವ ಪ್ರತಾಪ್ ಸಿಂಹ, ಮೊನ್ನೆ ಹತಾಶೆಯಲ್ಲಿ ಮೀಡಿಯಾದವರ ಎದುರು ’ನನ್ನ ತಂಗಿಯನ್ನೂ ಬಂಧಿಸಿ, ತಾಯಿಯನ್ನೂ ಬಂಧಿಸಿ, ನನ್ನನ್ನೂ ಬಂಧಿಸಿ…’ ಎಂದು ಹೆಚ್ಚೂಕಮ್ಮಿ ಕಣ್ಣೀರಿಡುವ ಪರಿಸ್ಥಿತಿಯಲ್ಲಿ ಗೋಳಾಡಬೇಕಾಯ್ತು.
ಪ್ರತಾಪ್ ಸಿಂಹರ ಈ ಅನಾಥ ಪರಿಸ್ಥಿತಿಗೆ ಕಾರಣವೇನಿರಬಹುದು?
ಇತ್ತೀಚೆಗಷ್ಟೆ ಮೋದಿ ಸರ್ಕಾರದ ಮರ್ಯಾದೆಯನ್ನು ಜಗತ್ತಿನ ಮುಂದೆ ಮೂರು ಕಾಸಿಗೆ ಹರಾಜು ಹಾಕಿದ ಸಂಸತ್ ಭದ್ರತಾ ವೈಫಲ್ಯ ಪ್ರಕರಣದಲ್ಲಿ ನುಸುಳುಕೋರರಿಗೆ ಪಾಸ್ ಕೊಟ್ಟಿದ್ದೇ ಈ ಪುಣ್ಯಾತ್ಮ. ಅವತ್ತೇ ಅವರ ರಾಜಕೀಯ ಬದುಕು ಹೆಚ್ಚೂಕಮ್ಮಿ ಮುಕ್ತಾಯದ ಅಂಚಿಗೆ ಬಂದಿತ್ತು. ಮೋದಿ ಬಂದ ನಂತರದಲ್ಲಿ ಕಾಶ್ಮೀರದ ಗಡಿಗೆ ಲೇಸರ್ ಬೇಲಿ ಹಾಕಿ ಭಯೋತ್ಪಾದನೆಯನ್ನೇ ನಿರ್ಮೂಲನೆ ಮಾಡಿದ್ದೇವೆ ಎಂದು ಸುಳ್ಳುಸುಳ್ಳೇ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಮೋದಿಯ ವರ್ಚಸ್ಸಿಗೆ ಆ ಪ್ರಕರಣ ಮಾಡಿದ ಹಾನಿ ಅಷ್ಟಿಷ್ಟಲ್ಲ. ಭಾರತದ ಚರಿತ್ರೆಯಲ್ಲೆ ಮೊದಲ ಬಾರಿಗೆ ವಿಪಕ್ಷ ಸಂಸದರನ್ನೆಲ್ಲ ಅಮಾನತು ಮಾಡಿ, ಚೂರುಪಾರು ಮರ್ಯಾದೆ ಕಾಪಾಡಿಕೊಳ್ಳಬೇಕಾದ ದೈನೇಸಿ ಸ್ಥಿತಿ ಮೋದಿ ಸರ್ಕಾರಕ್ಕೆ ಬಂದೆರಗಿತು. ಅದಕ್ಕೆಲ್ಲ ಕಾರಣವಾದದ್ದು ಪ್ರತಾಪ್ ಸಿಂಹ! ಹಾಗಾಗಿ, ಬಿಜೆಪಿಯೊಳಗೆ ಪ್ರತಾಪರನ್ನು ಹೆಚ್ಚೂಕಮ್ಮಿ ಮೂಲೆಗೆ ತಳ್ಳಲಾಗಿದೆ. ಇದು ಸ್ವತಃ ಹೈಕಮಾಂಡ್ ರವಾನಿಸಿದ ಸೂಚನೆ. ಅದೇ ಕಾರಣಕ್ಕೆ ಅವರ ತಮ್ಮನ ಪ್ರಕರಣದಲ್ಲಿ ಯಾರೂ ತುಟಿ ಬಿಚ್ಚುತ್ತಿಲ್ಲ.
ಆದರೆ ಕಥೆ ಇಷ್ಟಕ್ಕೇ ಮುಗಿಯುವುದಿಲ್ಲ!
ಸ್ವತಃ ಪ್ರತಾಪ್ ಸಿಂಹರ ದುರಹಂಕಾರವೇ ಇದಕ್ಕೆ ಕಾರಣ ಎನ್ನುತ್ತವೆ ಬಿಜೆಪಿ ಮೂಲಗಳು. ಹೌದು, ಬೇರೆಲ್ಲರಂತೆ ಪ್ರತಾಪ್ ಹುಟ್ಟಾ ರಾಜಕಾರಣಿಯಲ್ಲ. ವಿಧಾನಸೌಧದ ಮೆಟ್ಟಿಲಿರಲಿ, ಗ್ರಾಮ ಪಂಚಾಯ್ತಿ ರಾಜಕಾರಣವನ್ನೂ ಕಂಡವರಲ್ಲ. ಪತ್ರಿಕೆಯಲ್ಲಿ ‘ಬೆತ್ತಲೆ’ಯಾಗಿ ಬರೆಯುತ್ತಾ ಸಂಘ ಪರಿವಾರದ ಕಣ್ಮಣಿಯಾಗಿದ್ದೊಂದೆ ಅವರ ಅದೃಷ್ಟ ಖುಲಾಯಿಸಲು ಕಾರಣ. ಅದರಲ್ಲೂ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರನ್ನು ಹಾಡಿಹೊಗಳಿ ಬರೆದ ಪುಸ್ತಕ ಅವರಿಗೊಂದಷ್ಟು ರಾಜಕೀಯ ಸ್ಪೇಸ್ ಸೃಷ್ಟಿಸಿತು. ಅದನ್ನೇ ಬಂಡವಾಳ ಮಾಡಿಕೊಂಡ ಪ್ರತಾಪ್, ಎಂಪಿ ಟಿಕೇಟ್ ಗಿಟ್ಟಿಸಿಕೊಂಡು ಮೋದಿಯ ನಾಮಜಪದಲ್ಲಿ ಗೆದ್ದು ಸಂಸದರೂ ಆದರು.
ಅಷ್ಟಕ್ಕೇ ಸುಮ್ಮನಾಗಿದ್ದಿದ್ದರೆ ಪ್ರತಾಪರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೊ, ಆದರೆ ಅನಾಯಸವಾಗಿ ಒದಗಿಬಂದ ಅಧಿಕಾರದ ಪಿತ್ತ ನೆತ್ತಿಗೇರಿದ ಪ್ರತಾಪರು, ತಾನೇ ಭವಿಷ್ಯದ ಯುವನಾಯಕ ಎಂಬ ಭ್ರಮೆಯಲ್ಲಿ ಪಕ್ಷದ ಹಿರಿಯರನ್ನೇ ಹೀಯಾಳಿಸಲು ಶುರು ಮಾಡಿದರು. ಕರ್ನಾಟಕದ ಬಿಜೆಪಿ ಪಾಲಿನ ಅನಭಿಷಕ್ತ ದೊರೆಯಂತೆ ಮೆರೆದ ಯಡಿಯೂರಪ್ಪನವರಿಗೆ ಪ್ರತಾಪ್ ಸಿಂಹ ಆಡಿದ ಮಾತುಗಳು ಒಂದಾ, ಎರಡಾ…! ತನ್ನ ‘ಮೈನಿಂಗ್ ಮಾಫಿಯಾ’ ಪುಸ್ತಕದಲ್ಲಿ ಯಡಿಯೂರಪ್ಪನವರನ್ನು ಖಳನಾಯಕರಂತೆ ಚಿತ್ರಿಸಿದ್ದರು. ಅವರ ಒಂದು ಲೇಖನದ ಬರಹದ ಸಾಲುಗಳು ಹೀಗಿವೆ: “ಯಡಿಯೂರಪ್ಪನವರ ಸಾಚಾತನದ ಮಾತು ಬೇಡ ಬಿಡಿ. ಎಲ್ಲರೂ ಮಾಡುವುದು ಕುರ್ಚಿಗಾಗಿ, ನಾನು ಮಾಡಿದ್ದೆಲ್ಲ ಕುರ್ಚಿಗಾಗಿ ಎಂದು ಪರಮ ಪ್ರಾಮಾಣಿಕರಂತೆ ನಾಚಿಕೆ ಬಿಟ್ಟು ಹೇಳುವ ಅವರ ಬಗ್ಗೆ ಮತ್ತೊಂದು ಮಹಾಗ್ರಂಥವನ್ನೇ ಬರೆಯಬಹುದು. ದುಡ್ಡೇ ಮಾಡದವರು ಎಲ್ಲವ್ರೇ ಎಂಬಂತೆ ಕಾನ್‌ಸ್ಟೇಬಲ್, ಪ್ಯೂನ್ ವರ್ಗಾವಣೆಗೂ ಇಂತಿಷ್ಟು ಪಡೆದುಕೊಂಡು ಪುಡಿಗಾಸು ಮಾಡಿಕೊಳ್ಳುತ್ತಿದ್ದ ಯಡಿಯೂರಪ್ಪನವರು….”. ಹೀಗೆಲ್ಲ ಹೀನಾಮಾನ ಹೀಯಾಳಿಸಿದ್ದು ಸಾಲದೆಂಬಂತೆ, ಅವರು ಬಿಜೆಪಿ ತೊರೆದು ಹೋದಾಗ ವೈಯಕ್ತಿಕವಾಗಿ ಅವರ ಮೇಲೆ ದಾಳಿ ನಡೆಸಿದ್ದರು. ಯಡಿಯೂರಪ್ಪ ವಾಪಾಸ್ ಬಂದ ನಂತರವೂ ಉಪಚುನಾವಣೆಗಳಲ್ಲಿ ಬಿಜೆಪಿ ಗೆದ್ದಾಗ, ‘ಈ ಗೆಲುವಿನಲ್ಲಿ ಯಡಿಯೂರಪ್ಪನವರ ಪಾತ್ರವಿಲ್ಲ; ಮೋದಿ-ಅಮಿತ್ ಶಾ ವರ್ಚಸ್ಸು ಕೆಲಸ ಮಾಡಿದೆ’ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ಹೆಜ್ಜೆಹೆಜ್ಜೆಗೂ ಯಡಿಯೂರಪ್ಪನವರನ್ನು ಕಾಡುತ್ತಲೇ ಬಂದರು.
ಅದೇ ಈಗ ಅವರಿಗೆ ಮುಳುವಾಗುತ್ತಿದೆ. ರಾಜ್ಯಾಧ್ಯಕ್ಷರ ಸ್ಥಾನದಲ್ಲಿರೋದು ಯಡಿಯೂರಪ್ಪನವರ ಮಗ ವಿಜಯೇಂದ್ರ! ಈ ಹಿಂದೆ ತನ್ನ ತಂದೆಯ ಮೇಲೆ ಕಿಡಿಕಾರಿದ್ದ ಪ್ರತಾಪರನ್ನು ಮಟ್ಟಹಾಕಲು ವಿಜಯೇಂದ್ರ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಒಂದು ಕಡೆ, ಪಾಸ್ ಕೊಟ್ಟ ಕಾರಣದಿಂದಾಗಿ ಹೈಕಮಾಂಡ್ ಅವಕೃಪೆಗೆ ಗುರಿಯಾಗಿರುವ ಪ್ರತಾಪ, ಮತ್ತೊಂದೆಡೆ ತಮ್ಮನ ಮರಗಳ್ಳತನದ ಆರೋಪದಲ್ಲೂ ಬೆತ್ತಲಾಗಿದ್ದಾರೆ. ಆತನನ್ನು ಮೂಲೆಗುಂಪಾಗಿಸಲು ಇದೇ ಸರಿಯಾದ ಸಮಯ ಎಂದರಿತ ಯಡಿಯೂರಪ್ಪನವರ ಬಣ, ಯಾವ ಕಾರಣಕ್ಕೂ ಪ್ರತಾಪ್ ಸಿಂಹ ಪರವಾಗಿ ಮಾತನಾಡದಂತೆ ಪಕ್ಷದ ಎಲ್ಲಾ ನಾಯಕರಿಗೆ ತಾಕೀತು ಮಾಡಿದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಯಾರೂ ಅವರ ಪರವಾಗಿ ತುಟಿ ಬಿಚ್ಚುತ್ತಿಲ್ಲ.
ಪ್ರತಾಪರಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ಮರುಗುವಷ್ಟು ಅನುಕಂಪಕ್ಕೆ ಯೋಗ್ಯನಾದವರಲ್ಲ ಪ್ರತಾಪ್. ಇತ್ತ ಪತ್ರಕರ್ತರೂ ಆಗದೆ, ಅತ್ತ ನೆಟ್ಟಗೆ ರಾಜಕಾರಣಿಯೂ ಆಗದೆ ಅತಂತ್ರ ಸ್ಥಿತಿಯಲ್ಲಿರುವ ಪ್ರತಾಪರ ಪಾಪಗಳ ಲೆಕ್ಕ ಹಿಡಿದರೆ ಇದು ಏನೇನೂ ಅಲ್ಲ… ಅವರು ರಾಜಕಾರಣದಲ್ಲಿ ಅನುಭವಿಸಬೇಕಾದ್ದು ಇನ್ನೂ ಇದೆ. ಪಿಚ್ಚರ್ ಅಭಿ ಬಾಕಿ ಹೈ….. ಕೀಲಿ ಕೈ ಯಡಿಯೂರಪ್ಪಾಕೆ ಹಾಥ್ ಮೈ ಹೈ!
- ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




