ಕೇಂದ್ರದ “ವಿಕಸಿತ ಭಾರತ ಸಂಕಲ್ಪ ಯಾತ್ರೆ” ವಿರುದ್ಧ ರಾಜ್ಯದ “ಸಂವಿಧಾನ ಯಾತ್ರೆ”

2 years ago

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಬೇಕೆಂದು ತಂತ್ರ ರೂಪಿಸಿರುವ ಕೇಂದ್ರ ಸರ್ಕಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ಮತದಾರರ ಮನ ಗೆಲ್ಲಲು ಕಸರತ್ತು ಆರಂಭಿಸಿದೆ.

ಕೇಂದ್ರ ಸರ್ಕಾರದ ಈ ವಿಕಾಸದ ಭಾರತ ಯಾತ್ರೆಗೆ ಸೆಡ್ಡು ಹೊಡೆಯಲು ಮುಂದಾಗಿರುವ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಂವಿಧಾನ ಯಾತ್ರೆ ನಡೆಸಲು ನಿರ್ಧಾರ ಮಾಡಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಏಕತೆಯ ಸಮಾವೇಶ ಸಂಘಟನಾ ಸಮಿತಿ ಸಭೆಯಲ್ಲಿ ಈ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂವಿಧಾನದ ಮಹತ್ವ, ರಾಷ್ಟ್ರದ ಭಾವೈಕ್ಯತೆ ಕುರಿತಂತೆ ಅರಿವು ಮೂಡಿಸುವ ಕಿರುಚಿತ್ರಗಳು, ಸ್ತಬ್ಧ ಚಿತ್ರಗಳನ್ನೊಳಗೊಂಡಿರುವ ಸಂವಿಧಾನ ಯಾತ್ರೆ ಜನವರಿ 26ರಿಂದ ರಾಜ್ಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಈ ಯಾತ್ರೆ ಸಂಚರಿಸುತ್ತಿದ್ದು, ಸಂವಿಧಾನದ ಮಹತ್ವ, ರಾಷ್ಟ್ರದ ಭಾವೈಕ್ಯತೆ ಕುರಿತಂತೆ ಅರಿವು ಮೂಡಿಸುವ ಕಿರುಚಿತ್ರಗಳು, ಸ್ತಬ್ಧ ಚಿತ್ರಗಳನ್ನು ಒಳಗೊಂಡಿರಲಿದೆ.

ಜೊತೆಗೆ ಅಲ್ಲಲ್ಲಿ ವಿಚಾರ ಸಂಕಿರಣ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಸಮಾರೋಪ ಸಮಾರಂಭದಲ್ಲಿ ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ವಿಷಯಗಳ ಕುರಿತು ಪರಿಣಿತರ ಚರ್ಚೆಯನ್ನು ಆಧರಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರ ತನ್ನ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಡಿಸೆಂಬರ್ ನಿಂದ ಜನವರಿ 26 ರವರೆಗೆ ವಿಕಸಿತ ಭಾರತ್ ಸಂಕಲ್ಪ ಯಾತ್ರೆಯಡಿ ರಾಜ್ಯಾದ್ಯಂತ ಸಾವಿರಾರು ಗ್ರಾಮಗಳಿಗೆ, ನಗರ ಪ್ರದೇಶಗಳಿಗೆ ತಲುಪುವ ತ್ನ ನಡೆಸಿದೆ. ಅದರಲ್ಲಿ ರಾಜ್ಯದ ಅಧಿಕಾರಿಗಳು ಭಾಗವಹಿಸಬಾರದು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು.

ಪರಿಣಾಮ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಅಧಿಕಾರಿಗಳನ್ನು ಬಳಸಿಕೊಂಡು ಯಾತ್ರೆಯನ್ನು ಯಶಸ್ವಿಗೊಳಿಸಲಿದೆ. ಜನವರಿ 26ಕ್ಕೆ ವಿಕಸಿತ ಯಾತ್ರೆ ಸಮಾರೋಪಗೊಳ್ಳಲಿದೆ. ಅದರ ಬೆನ್ನಲ್ಲೇ ರಾಜ್ಯಸರ್ಕಾರ ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಅರಿವು ಮೂಡಿಸಲು ರಾಷ್ಟ್ರದ ಐಕ್ಯತೆ ಎತ್ತಿಹಿಡಿಯುವ ಉದ್ದೇಶದಿಂದ ಸಂವಿಧಾನ ಯಾತ್ರೆ ಆಯೋಜಿಸಿದೆ.

Leave a Reply