9 ವರ್ಷಗಳ ಅವಧಿಯಲ್ಲಿ ಕಾರ್ಪೊರೇಟ್ ಉದ್ಯಮಪತಿಗಳ 10 ಲಕ್ಷ ಕೋಟಿ ಸಾಲ ಮನ್ನಾ
14.56 ಲಕ್ಷ ಕೋಟಿ ಸಾಲವನ್ನು ರಿಟ್ ಆಫ್ ಮಾಡಲಾಗಿದೆ
2014ರಲ್ಲಿ 80 – 90 ಸಾವಿರ ಕೊಟಿಯಷ್ಟಿದ್ದ ಅದಾನಿ ಸಂಪತ್ತು 2023 ರಅವಧಿಯಲ್ಲಿ 15 ಲಕ್ಷ ಕೋಟಿಗೆ ಏರಿಕೆ
ರಾಯಚೂರು: ಕಳೆದ 40 ವರ್ಷಗಳಲ್ಲಿ ದೇಶ ಕಂಡರಿಯದಂತಹ ನಿರುದ್ಯೋಗ ಸಮಸ್ಯೆ ಉಂಟಾಗಿದೆ. ರೈತರು, ಕಾರ್ಮಿಕರು ಅಷ್ಟೆ ಅಲ್ಲ ಸಣ್ಣ ವ್ಯಾಪಾರಿಸ್ಥರು ಮತ್ತು ನಿರುದ್ಯೋಗಿ ಯುವಕರ ಆತ್ಮಹತ್ಯೆಗಳು ಹೆಚ್ಚಾಗಿವೆ ಎಂದು ಹೋರಾಟಗಾರ ಡಿ.ಎಚ್.ಪೂಜಾರ್ ಹೇಳಿದರು.
ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಲೆನಿನ್ ರವಲ್ಯೂಷನರಿ ಇನ್ಸೇಟಿವ್ CPIML RI ವತಿಯಿಂದ ಸಿಂಧನೂರ ನಗರದ ಹಾಗೂ ಮಸ್ಕಿ ಪಟ್ಟಣದ ತಾಲೂಕ ಘಟದಲ್ಲಿ ವಾರ್ಷಿಕ ಸ್ಥಾಯಿ ನಿಧಿ ಆಂದೋಲನ ಕಾರ್ಯಕ್ರಮ (ಜನವರಿ 5 ರಿಂದ 20-2024 ರ ವರಿಗೆ) ಪ್ರಾರಂಭವಾಗಿದೆ. ಸಿಂಧನೂರಿನ ನಗರದ ಬಸವೇಶ್ವರ ಸರ್ಕಲ್ ನಲ್ಲಿ ಹಾಗೂ ಮಸ್ಕಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತಾಡಿದ ಡಿ.ಎಚ್.ಪೂಜಾರ್, ದೇಶದ ಸಾಲ 200 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ 9 ವರ್ಷಗಳ ಅವಧಿಯಲ್ಲಿ ಕಾರ್ಪೊರೇಟ್ ಉದ್ಯಮಪತಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ ಮತ್ತು 14.56 ಲಕ್ಷ ಕೋಟಿ ಸಾಲವನ್ನು ರಿಟ್ ಆಫ್ ಮಾಡಿದೆ. ಅಂದರೆ ವಸೂಲಾಗದ ಸಾಲದ ಪಟ್ಟಿಗೆ ಸೇರಿಸಿ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಬಡತನ ರೇಖೆಯಲ್ಲಿ ಭಾರತ 107ನೇ ಸ್ಥಾನದಲ್ಲಿದೆ. ಎಲ್ಲಾ ಸರ್ವೆಗಳ ಅಂಕಿ ಅಂಶಗಳು ವಾಸ್ತವ ಸತ್ಯದಿಂದ ಕೂಡಿದ್ದರೂ, ದೇಶ ಜಗತ್ತಿನಲ್ಲಿ ಮುಂದುವರೆದಿದೆ ಎಂದು ಗೋಧಿ ಮೀಡಿಯಗಳು (ಮಬ್ಬಕ್ತರು ಕೂಡ) ಕೂಗಾಡುತ್ತಿವೆ. ಆಳುವ ವರ್ಗದ ತುತ್ತೂರಿಗಳ ಪ್ರಕಾರ ದೇಶ ಮುಂದುವರೆದಿದೆ ಎಂದರೆ ಆದಾನಿ, ಅಂಬಾನಿ ಸೇರಿದಂತೆ ಬೆರಳಣಿಕೆಯ ಕಾರ್ಪೋರೇಟ್ ಕುಟುಂಬದವರು ಸಂಪತ್ತಿನಲ್ಲಿ ಮುಂದುವರೆದಿದ್ದಾರೆಂದು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಆಕ್ಸ್ ಫಾಮ್ ನ 2020 ರ ವರದಿಯ ಪ್ರಕಾರ, ದೇಶದ ಶೇ.10ರಷ್ಷು ಜನ, ಕಾರ್ಪೋರೇಟ್ ಕುಟುಂಬಗಳು ಕೆಲವು ಕಂಪನಿಗಳು ಇತರರು ಶೇ.74.3ರಷ್ಟು ಸಂಪತ್ತಿನ ಒಡೆಯರಾಗಿದ್ದಾರೆ. ಶೇ.40 ರಷ್ಚು ಜನರು “ಸಣ್ಣ ಮಧ್ಯಮ ವ್ಯಾಪಾರಿಗಳು ಇತರರು” ಕೇವಲ ಶೇ.22.9ರಷ್ಟು ಸಂಪತ್ತಿನ ಒಡೆಯರು. ಶೇ.50 ರಷ್ಟು ಜನ ಅತ್ಯಂತ ಕಡಿಮೆ ಶೇ. 2.8ರಷ್ಷು ಸಂಪತ್ತಿಗೆ ಮಾತ್ರ ಒಡೆಯರು. ಈ ಅಂಕಿ ಅಂಶಗಳು ದೇಶದ ಅಸಮಾನತೆಯ ಅಸಲಿ ಸ್ಥಿತಿಗತಿಯ ಚಿತ್ರಣವನ್ನು ತೋರಿಸುತ್ತಿವೆ ಎಂದರು.
2014ಕ್ಕಿಂತ ಮುಂಚೆ 80 ರಿಂದ 90 ಸಾವಿರ ಕೊಟಿಯಷ್ಟಿದ್ದ ಅದಾನಿ ಸಂಪತ್ತು 2023 ಅವಧಿಯಲ್ಲಿ 15 ಲಕ್ಷ ಕೋಟಿಗೆ ಏರಿಕೆಯಾಗಿದೆ. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು RSS ಸಂಘ ಪರಿವಾರ ನಿಯಂತ್ರಣ ಮಾಡುತ್ತಿದೆ ಎಂದು ಚರ್ಚಿಸುವುದು ಅರ್ಧ ಮಾತ್ರ ಸತ್ಯ. ವಿದೇಶಿ ಕಂಪನಿಗಳು ಮತ್ತು ಕಾರ್ಪೋರೇಟ್ ಕುಟುಂಬಗಳು ಸರ್ಕಾರವನ್ನು ನಿಯಂತ್ರಿಸುತ್ತಿವೆ ಎನ್ನುವ ಸಂಪೂರ್ಣ ಸತ್ಯವನ್ನು ಪ್ರತಿಯೊಬ್ಬ ಪ್ರಜೆಗಳಿಗೆ ಅರ್ಥ ಮಾಡಿಸುವ ಜವಾಬ್ದಾರಿ ಪ್ರಜ್ಞಾವಂತರ ಮೇಲಿದೆ ಎಂದರು.
ಒಟ್ಟಾರೆ ಬಿಜೆಪಿ ನೇತೃತ್ವದ ಕೋಮುವಾದಿ ಫ್ಯಾಸಿಸ್ಟ್ ಕೇಂದ್ರ ಸರ್ಕಾರ ದೇಶದ 90ರಷ್ಟು ದುಡಿಯುವ ಜನರನ್ನು ಅಪಾಯಕ್ಕೆ ತಳ್ಳುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ದೇಶದಾದ್ಯಂತ ದುಡಿಯುವ ಜನರ ಮಧ್ಯ ದ್ವೇಷದ ಕಿಚ್ಚು ಹಚ್ಚಿ ರಾಜಕೀಯ ಲಾಭ ಪಡೆಯುವ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಹಿಮ್ಮಟ್ಟಿಸಬೇಕಾಗಿದೆ ಎಂದು ಕರೆನೀಡಿದರು.
ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕುಕಿ ಜನಾಂಗೀಯ ಹತ್ಯೆಯು RSS ಸಂಘ ಪರಿವಾರದ ಯೋಜಿತ ಕಾರ್ಯವೆಂದು ಹೇಳಲಾಗುತ್ತಿದೆ. ದಲಿತ, ಅಲ್ಪಸಂಖ್ಯಾತ, ಆದಿವಾಸಿ, ಬಹುಸಂಖ್ಯಾತ ಹಿಂದುಳಿದ ಜನಾಂಗವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಗುಪ್ತ ಅಜೆಂಡಗಳ ಕುರಿತು ಜನರಿಗೆ ಸರಿಯಾಗಿ ಅರ್ಥ ಮಾಡಿಸದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದರು.
ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಬರದಿಂದ ಜನರು ಸಂಕಷ್ಟದಲ್ಲಿದ್ದಾರೆ. ಕೂಲಿಗಾಗಿ ಬೆಂಗಳೂರ ಇತರೆ ಮಹಾ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಉದ್ಯೋಗ ಖಾತ್ರಿ ಕೆಲಸ ಆರಂಭಿಸಲು ಜನರು ಹೋರಾಟ ನಡೆಸುವ ಅನಿವಾರ್ಯತೆ ಇದೆ. ದನಕರುಗಳಿಗೆ ಮೇವು ಇಲ್ಲದೆ, ರೈತರು ತಾವು ಸಾಕಿದ ಜಾನುವಾರುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆ. ಕೇಂದ್ರ ರಾಜ್ಯ ಸರ್ಕಾರ ಪರಿಹಾರ ಕೊಡದೆ ಮೊಸಳೆ ಕಣ್ಣೀರ ಸುರಿಸುತ್ತಿವೆ ಎಂದು ವಿವರಿಸಿದರು.
ಕೋಮುವಾದಿ ಬಿಜೆಪಿ-ಸಂಘ ಪರಿವಾರ, ಮೇಲಿನ ವಾಸ್ತವ ಸತ್ಯವನ್ನು ಮರೆ ಮಾಚುವ ಉದ್ದೇಶದಿಂದ, ದೇಶದ ಜನರನ್ನು ರಾಮ ಮಂದಿರದ ಉದ್ಘಾಟನೆ ಕಡೆಗೆ ಸೆಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.
TUCI ರಾಜ್ಯ ಕಾರ್ಯದರ್ಶಿಕೆ.ಬಿ.ಗೋನಾಳ ಮಾತನಾಡಿ, ಕರ್ನಾಟಕದಲ್ಲಿ ನಮ್ಮ ಪಕ್ಷ ಹಾಗೂ ವರ್ಗ ಸಮೂಹ ಸಂಘಟನೆಗಳು ಕಳೆದ 33 ವರ್ಷಗಳಿಂದ ನಿರಂತರ ಹೋರಾಟ ನಡೆಸಿವೆ. ರಾಯಚೂರ ಕೊಪ್ಪಳ ಜಿಲ್ಲೆಯಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಬಡವರಿಗೆ ಹಂಚುವ ಹೋರಾಟದಲ್ಲಿ ಯಶಸ್ಸು ಕಂಡಿದೆ ಎಂದರು.
ಜನತೆಯ ಹಕ್ಕುಗಳಿಗಾಗಿ ಹೋರಾಡುವ ಪಕ್ಷ ಆರ್ಥಿಕ ಸಹಾಯಕ್ಕಾಗಿ ಜನರನ್ನೆ ಅವಲಂಬಿಸಬೇಕಾಗಿದೆ. ರಾಜ್ಯ, ರಾಷ್ಟ್ರ ಮಟ್ಟದ ಹೋರಾಟಗಳಿಗೆ ರೈತರು ಕಾರ್ಮಿಕರು, ಸಣ್ಣ ಮಧ್ಯಮ ವ್ಯಾರಿಗಳು ಆರ್ಥಿಕ ಸಹಾಯ ನೀಡಿ ಬೆಂಬಲಿಸಿದ್ದಾರೆ. ಪೂರ್ಣಾವಧಿ ಕಾರ್ಯಕರ್ತರ ಭತ್ಯೆ, ಪ್ರಯಾಣ ವೆಚ್ಚ, ಪಕ್ಷದ ಕಾರ್ಯಾಲಯದ ಬಾಡಿಗೆ ಸೇರಿದಂತೆ ಪ್ರತಿ ತಿಂಗಳು ಲಕ್ಷಾಂತರ ರೂ. ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷ ಜನವರಿ 5 ರಿಂದ 20 -2024 ರ ವರಿಗೆ ವಾರ್ಷಿಕ ಸ್ಥಾಯಿ ನಿಧಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದಾರ ಆರ್ಥಿಕ ನೆರವು ನೀಡಿ ಜನಪರ ಚಳುವಳಿ ಬಲಿಷ್ಠಗೊಳ್ಳಲು ಹೆಗಲೊಡ್ಡಬೇಕೆಂದು ಕೋರಿದರು.
ಬಸವರಾಜ ಯರದಿಹಾಳ ಜಿಲ್ಲಾ ಕಾರ್ಯದರ್ಶಿ ರಾಯಚೂರ, ಚಿಟ್ಟಿಬಾಬು, ರಮೇಶ ಪಾಟೀಲ, ರೇಣುಕಾ ಬೂದಿವಾಳ ಕ್ಯಾಂಪ್, ಬಸನಗೌಡ ಮಾಂಪೂರ, ಯಮನೂರಪ್ಪ, ಛತ್ರಗೌಡ, ಮಹ್ಮದ್ ಸಾಬ, ಪರಶುರಾಮ ಇತರರು ಭಾಗವಹಿಸಿದ್ದರು.




