ಬೆಂಗಳೂರು: ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ ಹಾಗೂ ಸಂಪನ್ಮೂಲ ಹಂಚಿಕೆಯಲ್ಲಿ ರಾಜ್ಯಕ್ಕೆ ಮಾಡಿದ ದ್ರೋಹ ಹಾಗೂ ಈ ಹಿಂದೆ ಆಡಳಿತ ನಡೆಸಿದ್ದ ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಆರ್ಥಿಕ ಅಶಿಸ್ತು ಹಾಗೂ ಅರಾಜಕ ಆಡಳಿತದಿಂದಾಗಿ ರಾಜ್ಯದ ಹಣಕಾಸು ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಪ್ರಸಕ್ತ ಸಾಲಿನ ಬಜೆಟ್ ಕುರಿತು ವಿಧಾನ ಮಂಡಲದ ಉಭಯ ಸದನಗಳಲ್ಲಿ ನಡೆದ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಅವರು, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ ಎಂಬ ವಿಪಕ್ಷಗಳ ಆರೋಪ ಸಂಪೂರ್ಣ ಸುಳ್ಳು ಎಂದರು.
ಕೇಂದ್ರ ಸರ್ಕಾರಕ್ಕಿಂತಲೂ ನಮ್ಮ ರಾಜ್ಯದ ಬಜೆಟ್ನ ವಿಸ್ತರಣೆಯ ಗಾತ್ರ ದ್ವಿಗುಣಗೊಂಡಿದೆ. ದೇಶದಲ್ಲೇ ಕರ್ನಾಟಕ ಅತಿದೊಡ್ಡ ಬಜೆಟ್ ಹೊಂದಿರುವ 5ನೇ ಸ್ಥಾನ ಹೊಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಜೆಟ್ ಗಾತ್ರ ಶೇ.10.3ರಷ್ಟು ಬೆಳವಣಿಗೆ ಕಂಡಿದೆ ಎಂದರು.
ಜನಸಂಖ್ಯೆಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದ್ದರೆ ತೆರಿಗೆ ಸಂಗ್ರಹಿಸಿಕೊಡುವ ವಿಚಾರದಲ್ಲಿ 2ನೇ ಸ್ಥಾನದಲ್ಲಿದೆ. ಜಿಎಸ್ಡಿಪಿಯಲ್ಲಿ ಕರ್ನಾಟಕ ತಮಿಳುನಾಡಿನ ನಂತರ 3ನೇ ಸ್ಥಾನದಲ್ಲಿದೆ. ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ ನಮ್ಮದು 5ನೇ ದೊಡ್ಡ ಬಜೆಟ್ ಎಂದರು.
2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ 24.42 ಲಕ್ಷ ಕೋಟಿ ರೂ. ಇದ್ದಾಗ ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ 46,288 ಕೋಟಿ ರೂ. ಬಂದಿತ್ತು. ಈಗ ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿ ಮೀರಿದೆ. 2018-19ಕ್ಕೆ ಹೋಲಿಸಿದರೆ ಶೇ.100ರಷ್ಟು ಹೆಚ್ಚಾಗಿದೆ. ಆ ಲೆಕ್ಕಕ್ಕೆ ಹೋಲಿಸಿದರೆ 2025-26ನೇ ಸಾಲಿಗೆ ನಮಗೆ ಕನಿಷ್ಠ 1 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ ಅನುದಾನ ಬರಬೇಕಾಗಿತ್ತು. ಆ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮಗೆ ಸಮರ್ಪಕವಾಗಿ ತೆರಿಗೆ ಪಾಲೂ ಸಿಗುತ್ತಿಲ್ಲ. ಯೋಜನೆಗಳನ್ನೂ ತೆಗೆದುಕೊಳ್ಳುತ್ತಿಲ್ಲ. ಕರ್ನಾಟಕಕ್ಕೆ 14ನೇ ಹಣಕಾಸು ಆಯೋಗ ಶೇ.4.71ರಷ್ಟು ತೆರಿಗೆ ಪಾಲು ನೀಡಿತ್ತು. ಆದರೆ, 15ನೇ ಹಣಕಾಸು ಆಯೋಗ ಶೇ.3.64ಕ್ಕೆ ಇಳಿಸಿತು. ಶೇ.23ರಷ್ಟು ಕುಸಿತವಾಯಿತು. ಇದರಿಂದ ಪ್ರತಿ ವರ್ಷ 12 ಸಾವಿರ ಕೋಟಿ ರೂ. ರಾಜ್ಯಕ್ಕೆ ನಷ್ಟವಾಗುತ್ತಿದೆ. ಇದಷ್ಟೆ ಅಲ್ಲದೇ, 15ನೇ ಹಣಕಾಸು ಆಯೋಗ 5,495 ಕೋಟಿ ರೂ. ವಿಶೇಷ ಅನುದಾನ ಕೊಡಲು ಶಿಫಾರಸು ಮಾಡಿತ್ತು. ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ಹಾಗೂ ಫೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ 3,000 ಕೋಟಿ ರೂ. ಶಿಫಾರಸು ಮಾಡಿತ್ತು. ಅದನ್ನೂ ಕೊಡಲಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ, ಕೃಷಿ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಗಾಗಿ 18 ಸಾವಿರ ಕೋಟಿ, ಸಾಮಾಜಿಕ ಪಿಂಚಣಿ ಯೋಜನೆಗಳಿಗೆ 10,835 ಕೋಟಿ, ಮನೆ ನಿರ್ಮಾಣದ ಸಬ್ಸಿಡಿ, ವಿದ್ಯಾರ್ಥಿ ವೇತನ, ವಿವಿಧ ಇಲಾಖೆಗಳ ಸಹಾಯಧನ, ಹಾಲಿನ ಉತ್ಪಾದಕರಿಗೆ ಪ್ರೋತ್ಸಾಹ ಧನ ಸೇರಿ 20 ಸಾವಿರ ಕೋಟಿ, ಎಲ್ಲಾ ಒಟ್ಟು ಒಂದು ಲಕ್ಷ ಕೋಟಿ ರೂ.ಗಳನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಖರ್ಚು ಮಾಡಿದ ನಂತರವೂ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದರು.
ಕಳೆದ ವರ್ಷ ರಾಜ್ಯ ಸರ್ಕಾರಿ ನೌಕರರ ಸಂಬಳಕ್ಕಾಗಿ 71,862 ಕೋಟಿ, ಪಿಂಚಣಿಗೆ 3907 ಕೋಟಿ ಸೇರಿ 1,02,769 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. 7ನೇ ವೇತನ ಆಯೋಗದ ಜಾರಿಯಿಂದಾಗಿ ಸಂಬಳಕ್ಕಾಗಿ 85,860 ಕೋಟಿ, ಪಿಂಚಣಿಗಾಗಿ 38,580 ಕೋಟಿ ಸೇರಿ ಒಟ್ಟು 1,24,440 ಕೋಟಿ ರೂ.ಗಳ ಅಂದಾಜು ವೆಚ್ಚವನ್ನು ನಿರೀಕ್ಷಿಸಲಾಗಿದೆ ಎಂದರು.
ಸಾಲದ ಬಡ್ಡಿ ಪಾವತಿಗೆ 45,600 ಕೋಟಿ, ವೇತನ, ಪಿಂಚಣಿ, ಬಡ್ಡಿ ಪಾವತಿಗೆ 1.70 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ಎಲ್ಲಾ ಧರ್ಮದ ಪುರೋಹಿತರಿಗೆ ಮಾಸಿಕ ಗೌರವಧನ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತರು, ಶಾಲಾಕಾಲೇಜುಗಳ ಶಿಕ್ಷಕರು, ಅತಿಥಿ ಉಪನ್ಯಾಸಕರು, ಪತ್ರಕರ್ತರ, ಕಲಾವಿದರ, ಕುಸ್ತಿಪಟುಗಳ ಗೌರವಧನಗಳನ್ನು ಹೆಚ್ಚಿಸಲಾಗಿದೆ. ಇದೆಲ್ಲದರ ನಡುವೆಯೂ ಬಂಡವಾಳ ವೆಚ್ಚಗಳಿಗೆ 83,200 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದರು.
ಈ ಬಜೆಟ್ ಅನ್ನು ಪ್ರತಿಪಕ್ಷಗಳು ಮುಸ್ಲಿಂ ಬಜೆಟ್ ಎಂದೆಲ್ಲಾ ಹೇಳಿದ್ದಾರೆ. ಇದು ಸರ್ವೋದಯದ ಬಜೆಟ್ ಎಂದು ಹೇಳಿ, ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವನವನ್ನು ಉತ್ತರದಲ್ಲಿ ಉಲ್ಲೇಖಿಸಿದರು.
ಇನ್ನೆಷ್ಟು ದಿನ ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ದ್ವೇಷ, ಅಸಹನೆ ಹುಟ್ಟುಹಾಕುತ್ತೀರಿ. ಕುವೆಂಪು ಕಡೆಯದಾಗಿ ಸರ್ವೋದಯವಾಗಲಿ ಎನ್ನುತ್ತಾರೆ. ನಾವು ಬಜೆಟ್ ಪುಸ್ತಕದಲ್ಲಿ ಅದನ್ನೇ ಹೇಳಿದ್ದೇವೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.
ದೇಶದ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಶೇ. 15 ರಷ್ಟಿದೆ. ಇಷ್ಟು ದೊಡ್ಡ ಜನಸಂಖ್ಯೆಯ ಸಮುದಾಯದ ಕಲ್ಯಾಣಕ್ಕೆ ಈ ಬಾರಿ ಬಜೆಟ್ನಲ್ಲಿ 4514 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಇದು ಒಟ್ಟಾರೆ ಬಜೆಟ್ನಲ್ಲಿ ಶೇ. 1,1 ರಷ್ಟು ಮಾತ್ರ. ಇಷ್ಟಕ್ಕೆ ಇಷ್ಟೊಂದು ದ್ವೇಷ ಏಕೆ? ಶೇ. 15 ರಷ್ಟಿರುವ ಜನರನ್ನು ಅಭಿವೃದ್ಧಿಯ ಹಾದಿಗೆ ತರದೇ ಜಿಎಸ್ಡಿಪಿ ಮತ್ತು ಜಿಡಿಪಿಗಳನ್ನು ಹೆಚ್ಚು ಮಾಡಲು ಹೇಗೆ ಸಾಧ್ಯ? ಇದಷ್ಟೇ ಅಲ್ಲ, ಈ ಸಮುದಾಯಗಳನ್ನು ದೂರ ಇಡುವುದು ಸಂವಿಧಾನ ವಿರೋಧಿ ನಡೆಯೂ ಆಗಿದೆ ಎಂದರು.
ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಗಾಗಿ ನಮ್ಮ ಸರ್ಕಾರ ಈ ಬಾರಿ 42,018 ಕೋಟಿ ರೂ. ಗಳನ್ನು ಒದಗಿಸಿದೆ. ನಾವು ಪರಿಶಿಷ್ಟ ಸಮುದಾಯಗಳ ಏಳಿಗೆಯನ್ನು ಪ್ರಾಮಾಣಿಕವಾಗಿ ಬಯಸುವವರು. ನಮ್ಮ ಕಾಳಜಿ ಕೇವಲ ಬಾಯಿ ಮಾತಿನದಲ್ಲ. 2020-21 ರಿಂದ 2022-23 ರವರೆಗೆ 3 ವರ್ಷಗಳ ಅವಧಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎಸ್ಸಿಪಿ ಮತ್ತು ಟಿಎಸ್ಪಿಗಾಗಿ 80,415 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ, ನಾವು 2023 ರಿಂದ ಈಗ ಮಂಡಿಸಿರುವ ಬಜೆಟ್ವರೆಗೆ 1,15,509 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಬಿಜೆಪಿಯ 3 ವರ್ಷಗಳಿಗೆ ಹೋಲಿಸಿದರೆ ನಾವು 35,094 ಕೋಟಿ ರೂಗಳನ್ನು ಹೆಚ್ಚಿಗೆ ಒದಗಿಸಿದ್ದೇವೆ ಎಂದರು.
ಶೇ.43.64 ರಷ್ಟು ಹೆಚ್ಚಿನ ಅನುದಾನ ಒದಗಿಸಿದಂತಾಗುತ್ತದೆ. ಒಟ್ಟಾರೆ ಸಮಾಜ ಕಲ್ಯಾಣ ಇಲಾಖೆಗೆ ಶೇ.52.5 ರಷ್ಟು ಹೆಚ್ಚು ಅನುದಾನವನ್ನು ಕೊಟ್ಟಿದ್ದೇವೆ. ಪ್ರತಿಪಕ್ಷದ ನಾಯಕರು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಯೋಜನೆಗೂ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣವನ್ನು ವಿನಿಯೋಗಿಸಲಾಗಿದೆ ಎಂದಿದ್ದಾರೆ. ಆದರೆ, ಇದು ಕೇಂದ್ರ ಸರ್ಕಾರದ ಸಮಸ್ಯೆ. ಕೇಂದ್ರ ಸರ್ಕಾರವು ರೂಪಿಸಿರುವ ಕೇಂದ್ರ ಪುರಸ್ಕೃತ ಯೋಜನೆಗೆ ಮ್ಯಾಚಿಂಗ್ ಗ್ರಾಂಟ್ ಒದಗಿಸಿದ್ದೇವೆ ಅಷ್ಟೇ ಎಂದರು.


