ಕೇಂದ್ರದಿಂದ ಬರಬೇಕಾಗಿದ್ದ 40 ಸಾವಿರ ಕೋಟಿ ರೂ. ಅನುದಾನ ಕಡಿಮೆಯಾಗಿದೆ

2 years ago

#40thousandcrores #Centre #Grants #reduced

ಬೆಳಗಾವಿ: ಕರ್ನಾಟಕದ ಕುರಿತು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮುಂದುವರೆದಿದೆ. ರಾಜ್ಯದ ಬಜೆಟ್ ನ ಗಾತ್ರಕ್ಕೆ ಅನುಗುಣವಾಗಿ ಆರ್ಥಿಕಾನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಆರೋಪ ಮಾಡಿದೆ.

ಕಳೆದ 5 ವರ್ಷಗಳಿಂದ ಕೇಂದ್ರ ಪುರಸ್ಕೃತ ಯೋಜನೆ ಹಾಗೂ ಜಿಎಸ್ಟಿ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದ 40 ಸಾವಿರ ಕೋಟಿ ರೂ. ಅನುದಾನ ಕಡಿಮೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನ ಪರಿಷತ್ತಿನಲ್ಲಿ ಹೇಳಿಕೆ ನೀಡಿದರು.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ನ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪರವಾಗಿ ಉತ್ತರಿಸಿದ ಅವರು, ನಮ್ಮ ರಾಜ್ಯದ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ನಾವು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ತೆರಿಗೆ ಪಾಲು ಹೆಚ್ಚಳವಾಗಿದೆ. ಆದರೆ, ಬಜೆಟ್ ಗಾತ್ರಕ್ಕೆ ಹೋಲಿಕೆ ಮಾಡಿದರೆ, ಕೇಂದ್ರದಿಂದ ಕಳೆದ 5 ವರ್ಷಗಳಲ್ಲಿ ಸುಮಾರು 40 ಸಾವಿರ ಕೋಟಿ ರೂ. ಅನುದಾನ ಕಡಿತವಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಕೇಂದ್ರದ ನಿಲುವುನಿಂದಾಗಿ ನಮ್ಮ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಹೊಡೆತ ಬಿದ್ದಿದೆ. ಕೇಂದ್ರ ಪುರಸ್ಕೃತ ಯೋಜನೆಯಿಂದ ರಾಜ್ಯಕ್ಕೆ 20 ಸಾವಿರ ಕೋಟಿ ರೂ. ಹಾಗೂ ಜಿಎಸ್ಟಿ ಪರಿಹಾರವಾಗಿ 20 ಸಾವಿರ ಕೋಟಿ ರೂ. ರಾಜ್ಯಕ್ಕೆ ಬರಬೇಕು ಎಂದರು.

ವರ್ಷದಿಂದ ವರ್ಷಕ್ಕೆ ಕೇಂದ್ರದ ತೆರಿಗೆ ಪಾಲು ಕಡಿಮೆಯಾಗುತ್ತಿದೆಯೇ ಹೊರತು, ಹೆಚ್ಚಳವಾಗುತ್ತಿಲ್ಲ. ನಮ್ಮ ಪಾಲು ಮಾತ್ರ ಹೆಚ್ಚಾಗುತ್ತಲೇ ಇದೆ. ಕೇಂದ್ರ ಸರ್ಕಾರ ನಮಗೆ ಆರ್ಥಿಕ ವರ್ಷದ ಅವಧಿಯೊಳಗೆ ನಮ್ಮ ಪಾಲಿನ ಹಣ ಕೊಡಬಹುದು ಎಂದು ಇದೇ ವೇಳೆ ಸದನದಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಹೊರತುಪಡಿಸಿ ಕರ್ನಾಟಕದ ಬಜೆಟ್ ಗಾತ್ರ ದೊಡ್ಡದಾಗಿದೆ. ಈ ಹಿಂದೆ ರಾಜ್ಯ 2.27 ಕೋಟಿ ರೂ. ಬಜೆಟ್ ಮಂಡಿಸಿದಾಗ ಕೇಂದ್ರ ಸರ್ಕಾರ 43,369 ಕೋಟಿ ರೂ ಅನುದಾನ ನೀಡಿತ್ತು. ಪ್ರಸ್ತುತ 3.25 ಕೋಟಿ ರೂ. ಬಜೆಟ್ ಮಂಡಿಸಲಾಗಿದೆ. ಇದಕ್ಕೆ ಅನುಗುಣವಾಗಿ ಅನುದಾನ ಸಿಗುತ್ತಿಲ್ಲ. ಕೇಂದ್ರದಿಂದ ನಮಗೆ ಸಿಗುವುದು 75 ಸಾವಿರ ಕೋಟಿ ರೂ. ಮಾತ್ರ. ನಮ್ಮ ಬಜೆಟ್ ಗಾತ್ರ ಹೆಚ್ಚುತ್ತಿದೆಯೇ ಹೊರತು, ಕೇಂದ್ರದ ಪಾಲು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಬಜೆಟ್ ಗಾತ್ರಕ್ಕೆ ತಕ್ಕಂತೆ ಅನುದಾನ ನೀಡಬೇಕಲ್ಲವೇ? ಎಂದರು.

14 ಮತ್ತು 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕೇಂದ್ರಕ್ಕೆ 5495 ಕೋಟಿ ರೂ. ವಿಶೇಷ ಅನುದಾನ ಹಾಗೂ 6 ಸಾವಿರ ಕೋಟಿ ರೂ. ಜಿಎಸ್ಟಿ ಪರಿಹಾರ ಸೇರಿದಂತೆ ರಾಜ್ಯಕ್ಕೆ 11.495ಕೋಟಿ ರೂ. ಅನುದಾನ ಬರಬೇಕು. ಕಳೆದ ಆ.10ರಂದು ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದರು. ಆದರೂ ಹಣ ಬಿಡುಗಡೆ ಮಾಡಿಲ್ಲ. ಮತ್ತೊಮ್ಮೆ ಈ ಬಗ್ಗೆ ಮನವಿ ಮಾಡುತ್ತಿದ್ದು, ಖಂಡಿತವಾಗಿಯೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದರು.

ಜಿಎಸ್ಟಿ ಪರಿಹಾರವಾಗಿ 2339 ಕೋಟಿ ರೂ. ಹಾಗೂ ಕೇಂದ್ರ ಪುರಸ್ಕೃತ ಯೋಜನೆಗೆ 1191ಕೋಟಿ ರೂ. ಬಾಕಿ ಇದ್ದು, ಇದನ್ನು ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ನಮ್ಮ ಪ್ರಯತ್ನವನ್ನು ನಾವು ಮುಂದುವರೆಸಿದ್ದೇವೆ. ಕೇಂದ್ರ ಸರ್ಕಾರ ನಮಗೆ ಅನುದಾನವನ್ನು ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ಒಂದು ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದಾಗ, ಶೇ.23ರಷ್ಟು ಕೇಂದ್ರದ ಅನುದಾನ ದೊರೆಯುತ್ತಿತ್ತು. ಈಗ ಮೂರು ಲಕ್ಷ ಕೋಟಿ ರೂ. ಗೂ ಹೆಚ್ಚು ಬಜೆಟ್ ಮಂಡಿಸಿರುವಾಗ 76 ಸಾವಿರ ಕೋಟಿ ರೂ. ಅನುದಾನ ದೊರೆಯಬೇಕು. ದುರ್ದೈವವೆಂದರೆ, ಬಜೆಟ್ ಗಾತ್ರವನ್ನೇ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ನಮ್ಮ ಸಂಪತ್ತಿನ ಮೇಲೆ ನಾವು ಅವಲಂಭಿತವಾಗಿರುವುದರಿಂದ ನಮಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಕೋರಿದರು.

ಬಿಜೆಪಿಯ ಎಸ್.ವಿ.ಸುಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ, ಹೊಸ ಪಿಂಚಣಿ ಯೋಜನೆ ಜಾರಿಗೆ ಬಂದ ಮೇಲೆ ಇದನ್ನು ಮುಂದುವರೆಸಬೇಕೆ? ಇಲ್ಲವೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಮಾಡಬೇಕೇ ಎಂಬುದರ ಬಗ್ಗೆ ವಿಸ್ತೃತ ವರದಿ ನೀಡುವಂತೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ಇತ್ತರೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಈಗಾಗಲೇ ಮೂರು ಬಾರಿ ಸಭೆ ನಡೆಸಿದೆ. ಆದಷ್ಟು ಬೇಗ ವರದಿ ನೀಡುವಂತೆ ಸರ್ಕಾರ ಸಮಿತಿಗ ಸೂಚಿಸಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ವರದಿ ನೀಡಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ವರದಿ ನೀಡಲು ಸಂಬಂಧಪಟ್ಟವರಿಗೆ ಸೂಚನೆ ನೀಡುವುದಾಗಿ ಮಾಹಿತಿ ನೀಡಿದರು.

ಎನ್ಪಿಎಸ್ನಿಂದ ಕೆಲವು ನೌಕರರ ಭವಿಷ್ಯ ನಿಧಿ ಹಣ ಕೇಂದ್ರಕ್ಕೆ ಹೋಗುತ್ತದೆ. ನಾವು ಹಳೇ ಪಿಂಚಣಿ ವ್ಯವಸ್ಥೆ ಮುಂದುವರೆಸಿದರೆ ಈ ಹಣ ಬರುವುದಿಲ್ಲ. ಇದನ್ನು ಹೇಗೆ ಸರಿಪಡಿಸಬೇಕು ಎಂಬುದರ ಬಗ್ಗೆ ಸಮಿತಿ ಕೂಲಂಕುಷವಾಗಿ ಪರಿಶೀಲಿಸಲಿದೆ. ರಾಜಸ್ಥಾನ ಸರ್ಕಾರ ನಮ್ಮ ನೌಕರರ ಪಿಎಫ್ ಹಣವನ್ನು ಹಿಂದಿರುಗಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದೆ. ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿ ಕ್ರಮ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಸಿಎಂ ಸೂಚಿಸಿದ್ದಾರೆ ಎಂದರು.

ಕೇಂದ್ರದಲ್ಲಿರುವ ನಮ್ಮ ನೌಕರರ ಹಣವನ್ನು ನಾವೇ ಕಟ್ಟಬೇಕು ಎಂದರೆ ಆರ್ಥಿಕವಾಗಿ ಹೊರೆಯಾಗಲಿದೆ. ಈ ಎಲ್ಲದರ ಬಗ್ಗೆಯೂ ಸಮಿತಿ ಪರಿಶೀಲಿಸಿ ವರದಿ ನೀಡಲಿದೆ. ಅದಾದ ನಂತರ ಸರ್ಕಾರ ವರದಿ ಪರಿಶೀಲಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.

Leave a Reply