ಆದಿಚುಂಚನಗಿರಿ ಹೆಮ್ಮರವಾಗಿ ಬೆಳೆಯಲು ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳ ಪಾತ್ರ ದೊಡ್ಡದು: ಸಿದ್ದರಾಮಯ್ಯ

3 years ago

#SriBalagangadharnathSwamiji #Adichunchanagiri #famous #Siddaramaiah

ಮೈಸೂರು: ಕೆಲವೇ ಧಾರ್ಮಿಕ ಕ್ಷೇತ್ರಗಳಲ್ಲಿ ಆದಿಚುಂಚನಗಿರಿ ಕ್ಷೇತ್ರ ಕೂಡ ಬಹಳ ಪ್ರಸಿದ್ಧವಾದ ಕ್ಷೇತ್ರ. ಆ ಜವಾಬ್ದಾರಿಯನ್ನು ಹೊತ್ತು ಧಾರ್ಮಿಕ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ನಿರ್ಮಲಾನಂದನಾಥ ಸ್ವಾಮಿಗಳು ಸಾಧನೆ ಮಾಡಿದ್ದಾರೆ. ನಮ್ಮ ಸರ್ಕಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ತೀರ್ಮಾನ ಮಾಡಿದ್ದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶ್ರೀ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ ಹಾಗೂ ಬಿಜಿಎಸ್ ಸಾಂಸ್ಕೃತಿಕ ಭವನ ಉದ್ಘಾಟನೆ ಮತ್ತು ಉಚಿತ ವಿದ್ಯಾರ್ಥಿ ನಿಲಯದ ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಕೆಂಪೇಗೌಡ ಪ್ರಾಧಿಕಾರವನ್ನು ಕೂಡ ನಮ್ಮ ಸರ್ಕಾರವೇ ಸ್ಥಾಪಿಸಿತು. ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದು ಕೂಡ ನಮ್ಮ ಸರ್ಕಾರವೇ. ಕೆಂಪೇಗೌಡರ ಹೆಸರು ಚಿರಸ್ಥಾಯಿ ಎಂಬ ಕಾರಣದಿಂದ ಕೆಂಪೇಗೌಡ ಜಯಂತಿ ಆಚರಿಸಲು ತೀರ್ಮಾನ ಮಾಡಿದೆವು ಎಂದರು.

ರಾಜಕಾರಣ ಮಾಡಲು ಜನರ ಪ್ರೀತಿ, ,ಆಶೀರ್ವಾದ ಇಲ್ಲದೇ ಹೋದರೆ ಯಾರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜನರ ಪ್ರೀತಿ, ವಿಶ್ವಾಸ ಗಳಿಸಿದವರು ಮಾತ್ರ ನಾಯಕರಾಗಲು ಹಾಗೂ ರಾಜಕಾರಣದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಆದಿಚುಂಚನಗಿರಿ 1800 ವರ್ಷಗಳ ಇತಿಹಾಸವಿರುವ ಪ್ರಾಚೀನವಾದ ಕ್ಷೇತ್ರವಾಗಿದ್ದು, ಈಶ್ವರನ ತಪೋಭೂಮಿ. ಅನೇಕ ಸಾಧುಸಂತರನ್ನು ಕಂಡಿರುವ ಆದಿಚುಂಚನಗಿರಿ ಕ್ಷೇತ್ರ ಹೆಮ್ಮರವಾಗಿ ಬೆಳವಣಿಗೆಯಾಗುವಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಪಾತ್ರ ಬಹಳ ದೊಡ್ಡದು. ಸಾಮಾಜಿಕ, ಶಿಕ್ಷಣ, ಆರೋಗ್ಯ, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಮಠ ವಿಶಾಲವಾಗಿ ಬೆಳೆದಿದೆ. ನಾಥ ಪಂಥ ಜಾತಿರಹಿತವಾದದ್ದು. ನಾವೆಲ್ಲ ಮೂಲತಃ ಮನುಷ್ಯರು, ನಂತರ ವಿವಿಧ ಜಾತಿಗಳನ್ನು ಸೃಷ್ಟಿಸಿ ಸಮಾಜವನ್ನು ವಿಂಗಡಿಸಲಾಗಿದೆ. ಸಾಮಾಜಿಕ, ಆರ್ಥಿಕ ಅಸಮಾನತೆಯಿದ್ದು, ಮೇಲ್ವರ್ಗ ಮತ್ತು ಕೆಳವರ್ಗವೆಂಬ ಬೇಧಭಾವವಿದೆ. ಈ ಅಸಮಾನತೆಗಳನ್ನು ಹೋಗಲಾಡಿಸಿ, ಮಾನವೀಯ ಸಮಾಜವನ್ನು ನಿರ್ಮಿಸಲು ನಾಥಪಂಥ ಪ್ರಯತ್ನಿಸಿದಂತೆ ಆದಿಚುಂಚನಗಿರಿ ಮಠವೂ ಶ್ರಮಿಸಿದೆ ಎಂದರು.

ನಾನು ವಕೀಲ ವೃತ್ತಿಯಲ್ಲಿದ್ದಾಗ ಶ್ರೀ ಬಾಲಗಂಗಾಧರ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೆ. ಶ್ರೀ ಮಠವನ್ನು ಅಗಾಧವಾಗಿ ಬೆಳೆಸಲು ಶ್ರೀಗುರುಗಳು ಬಹಳ ಶ್ರಮವಹಿಸಿದ್ದಾರೆ. ಜನರನ್ನು ಧಾರ್ಮಿಕವಾಗಿ ಜಾಗೃತಗೊಳಿಸಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಶಕ್ತಿಯನ್ನು ತುಂಬಿದರು. 500ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿ, 1.50 ಲಕ್ಷಕ್ಕೂ ಹೆಚ್ಚು ಮಕ್ಕಳು ಶ್ರೀಮಠದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಸಾವಿರಾರು ವರ್ಷಗಳಿಂದ ಶೂದ್ರ ವರ್ಗ ಶಿಕ್ಷಣ ಸಂಸ್ಕೃತಿಯಿಂದ ವಂಚಿತವಾಗಿತ್ತು. ಡಾ. ಅಂಬೇಡ್ಕರ್ ರವರ ಸಂವಿಧಾನ ಸ್ಥಾಪಿತವಾದ ನಂತರ ಎಲ್ಲರಿಗೂ ಶಿಕ್ಷಣವನ್ನು ಕಡ್ಡಾಯಗೊಳಿಸಲಾಯಿತು. ಈಗ ಶಿಕ್ಷಣ ಪಡೆಯುವುದು ಹಕ್ಕು . ಶೂದ್ರರಂತೆ, ಮಹಿಳೆಯರನ್ನೂ ಶಿಕ್ಷಣದಿಂದ ದೂರ ಇರಿಸಲಾಗಿತ್ತು ಎಂದರು.

Leave a Reply