ಸೌಹಾರ್ದ ಸಂಬಂಧಕ್ಕೆ ಸ್ಪೋರ್ಟ್ಸ್ ಫೆಸ್ಟ್: ಮೀನಾಕ್ಷಿ ಕೃಷ್ಣಬೈರೇಗೌಡ

5 months ago

ಅಪಾರ್ಟ್‌ಮೆಂಟ್‌ಗಳ ನಡುವೆ ಸೌಹಾರ್ದ ಸಂಬಂಧಕ್ಕೆ ನ.15,16 ರಂದು ಸ್ಪೋರ್ಟ್ಸ್ ಫೆಸ್ಟ್: ಮೀನಾಕ್ಷಿ ಕೃಷ್ಣಬೈರೇಗೌಡ

ಬೆಂಗಳೂರು: ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಜನರ ನಡುವೆ ಸೌಹಾರ್ದ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನವೆಂಬರ್ 15 ಹಾಗೂ 16 ರಂದು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಇಂಟರ್ ಅಪಾರ್ಟ್‌ಮೆಂಟ್‌ ಸ್ಪೋರ್ಟ್ಸ್ ಫೆಸ್ಟ್-2025 ಆಯೋಜಿಸಲಾಗಿದೆ ಎಂದು ಸಂಘಟಕಿ, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಪತ್ನಿ ಮೀನಾಕ್ಷಿ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಇಂಟರ್ ಅಪಾರ್ಟ್ಮೆಂಟ್ ಸ್ಪೋರ್ಟ್ಸ್ ಫೆಸ್ಟ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕ್ರೀಡೆಯ ಮೂಲಕ ಜನರನ್ನು ಒಂದುಗೂಡಿಸಲು ಸಾಧ್ಯವಿದೆ. ಹಾಗಾಗಿ, ಬ್ಯಾಟರಾಯನಪುರ ಕ್ಷೇತ್ರದ ಜನರ ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಗಮನದಲ್ಲಿರಿಸಿಕೊಂಡು ನಾಲ್ಕು ಒಳಾಂಗಣ ಕ್ರೀಡಾಂಗಣವನ್ನು ಸರ್ಕಾರ ನಿರ್ಮಿಸಿದೆ. ಮುಂಬರುವ ದಿನಗಳಲ್ಲಿ ಜಕ್ಕೂರು ಬಳಿ ಕೂಡ ಕ್ರೀಡಾಂಗಣ ನಿರ್ಮಾಣವಾಗಲಿದೆ. ಈ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ಬಳಸುವ ಉದ್ದೇಶದಿಂದ ಅಪಾರ್ಟ್‌ಮೆಂಟ್‌ಗಳ ನಡುವೆ ಸೌಹಾರ್ದ ಸಂಬಂಧಕ್ಕೆ ನ.15,16 ರಂದು ಸ್ಪೋರ್ಟ್ಸ್ ಫೆಸ್ಟ್ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಂಗಳೂರು ಉತ್ತರದಲ್ಲಿ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿನ ಜನರು ಸಮಾಜದ ಎಲ್ಲರೊಂದಿಗೆ ಬೆರೆಯುವಂತಾಗಬೇಕು. ನ.15,16 ರಂದು ಬ್ಯಾಟರಾಯನಪುರ ಕ್ಷೇತ್ರದ 8 ಪ್ರದೇಶಗಳಲ್ಲಿ ಇಂಟರ್ ಅಪಾರ್ಟ್‌ಮೆಂಟ್‌ ಸ್ಪೋರ್ಟ್ಸ್ ನಡೆಯಲಿದೆ. ಈ ಬಾರಿಯ ವಿಶೇಷವಾಗಿ ಜಿಮ್ನಾಸ್ಟಿಕ್ ಹಾಗೂ ಪಿಕಲ್ ಬಾಲ್ ಅನ್ನು ಸೇರ್ಪಡೆ ಮಾಡಿದ್ದೇವೆ. 14 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಈಗಾಗಲೇ ಸುಮಾರು ಜನರು ನೋಂದಣಿ ಮಾಡಿಕೊಂಡಿದ್ದಾರೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ. ವಿಜೇತರ ಪೈಕಿ ಮಹಿಳೆ ಇರಲಿ ಅಥವಾ ಪುರುಷರೇ ಇರಲಿ. ಸಮಾನತೆಯ ದೃಷ್ಟಿಯಿಂದ ಎಲ್ಲರಿಗೂ ಒಂದೇ ರೀತಿಯ ಬಹುಮಾನಗಳನ್ನು ನೀಡಲಾಗುವುದು ಎಂದರು.

ಕಳೆದ ಎರಡು ವಾರದ ಹಿಂದೆ ಆರಂಭವಾಗಿರುವ ನೋಂದಣಿ ಪ್ರಕ್ರಿಯೆಗೆ ಈ ಬಾರಿ ನೋಂದಣಿ ಮಾಡಿರುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಬಾರಿ 1500 ಜನ ಭಾಗವಹಿಸಿದ್ದರೆ, ಈ ಬಾರಿ ಈಗಾಗಲೇ ಮೂರು ಸಾವಿರಕ್ಕೂ ಅಧಿಕ ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮಾಡಿಕೊಂಡಿರುವವರ ವಿಳಾಸವನ್ನು ಪರಿಶೀಲಿಸಿ, ದೃಢೀಕರಿಸಲಾಗುತ್ತಿದೆ ಎಂದರು.

ಕಂದಾಯ ಸಚಿವ ಕೃಷ್ಣಬೈರೇಗೌಡರ ಕ್ಷೇತ್ರವಾಗಿರುವ ಬ್ಯಾಟರಾಯನಪುರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅದರ ಜೊತೆಗೆ ಇಲ್ಲಿನ ನಿವಾಸಿಗಳ ಆರೋಗ್ಯವನ್ನು ಕೂಡ ಗಮನಿಸುವುದು ನಮ್ಮ ಕರ್ತವ್ಯವಾಗಿದೆ. ಅವರ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ ಸೇರಿದಂತೆ ಎಲ್ಲದಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿಯೇ ಇಂಟರ್ ಅಪಾರ್ಟ್‌ಮೆಂಟ್‌ ಸ್ಪೋರ್ಟ್ಸ್ ಫೆಸ್ಟ್-2025 ಆಯೋಜಿಸಲಾಗಿದೆ ಎಂದರು.

Leave a Reply