ಬೆಳಗಾವಿ: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ಮಾಡಲಾಗುತ್ತಿದೆ. ಇದರಲ್ಲಿ ಪತ್ತೆಯಾದ ಅಕ್ರಮ ವಲಸಿಗರನ್ನು ಗಡಿವರೆಗೂ ಕರೆದೊಯ್ದು ಬಿಟ್ಟು ಬರುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿಂದು ಕಾಂಗ್ರೆಸ್ ನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ನಿವಾಸಿಗಳನ್ನು ಪತ್ತೆಹಚ್ಚಲಾಗುತ್ತಿದೆ. ಆನಂತರ, ಅವರನ್ನು ಗಡಿವರೆಗೂ ಕರೆದೊಯ್ದು ಬಿಎಸ್ಎಫ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿ ಗಡಿಪಾರು ಮಾಡಲಾಗುವುದು ಎಂದರು.
ಇತ್ತೀಚಿಗೆ ಪೊಲೀಸ್ ಇಲಾಖೆಯೂ 45 ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ ಬರೋಬ್ಬರಿ 5 ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಇನ್ನೂ, ಅಕ್ರಮ ವಲಸಿಗರು ಇರುವ 28 ಹಾಟ್ಸ್ಪಾಟ್ಗಳನ್ನು ಗುರುತಿಸಲಾಗಿದೆ. ಹೀಗೆ ಹಂತ ಹಂತವಾಗಿ ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಇದುವರೆಗೂ ಅಕ್ರಮ ಬಾಂಗ್ಲಾ ಮತ್ತು ವಿದೇಶಿಯರ ಮೇಲೆ ಒಟ್ಟು 764 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ 53 ಪ್ರಕರಣಗಳು ದಾಖಲಾಗಿವೆ. ವಿದೇಶಿಯರ ವಿರುದ್ಧವೂ 711 ಪ್ರಕರಣಗಳು ದಾಖಲಾಗಿವೆ. ಜೊತೆಗೆ ಒಟ್ಟು 135 ಜನ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದರು.
ಪ್ರಮುಖವಾಗಿ ಈ ಅಕ್ರಮ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಮಾಡಿ ಕೊಡುತ್ತಿರುವ ಎಂಟಕ್ಕೂ ಅಧಿಕ ಜನ ಮಧ್ಯವರ್ತಿ ಏಜೆಂಟ್ಗಳನ್ನು ಪತ್ತೆ ಮಾಡಿ ಹಲವಾರು ದಾಖಲೆ ಜಪ್ತಿ ಮಾಡಲಾಗಿದೆ ಎಂದರು.




