ಇಂಧೋರ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮೇಲೆ ಆರೋಪ ಹೊರಿಸಿದ್ದಾರೆ.
ಅಂಚೆ ಮತಗಳ ಎಣಿಕೆಯಲ್ಲಿ ತಮ್ಮ ಪಕ್ಷ 199 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಆದರೆ ಇವಿಎಂ ಮತಗಳ ಎಣಿಕೆಯಲ್ಲಿ ಹಿಂದುಳಿದಿದೆ. ಚಿಪ್ ಇರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಭಾರತೀಯ ಪ್ರಜಾಪ್ರಭುತ್ವವನ್ನು ಉಳಿಸಲು ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಒಂದರ ಹಿಂದೆ ಒಂದರಂತೆ ಹಲವಾರು ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಬರೆದಿರುವ ಅವರು, ಇವಿಎಂಗಳಿಂದಾಗಿ ತಮ್ಮ ಪಕ್ಷ ಸೋಲು ಎದುರಿಸಬೇಕಾಯಿತು ಎಂದಿದ್ದಾರೆ.
‘ಚಿಪ್ ಇರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದು. ನಾನು 2003ರಿಂದ ಇವಿಎಂ ಮೂಲಕ ಮತದಾನ ಮಾಡುವುದನ್ನು ವಿರೋಧಿಸುತ್ತಿದ್ದೇನೆ. ವೃತ್ತಿಪರ ಹ್ಯಾಕರ್‌ಗಳಿಂದ ಭಾರತೀಯ ಪ್ರಜಾಪ್ರಭುತ್ವವನ್ನು ನಿಯಂತ್ರಿಸಲು ನಾವು ಅನುಮತಿಸಬಹುದೇ? ಇದು ಎಲ್ಲ ರಾಜಕೀಯ ಪಕ್ಷಗಳು ಉತ್ತರಿಸಬೇಕಾದ ಮೂಲಭೂತ ಪ್ರಶ್ನೆಯಾಗಿದೆ. ಮಾನ್ಯ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್, ದಯವಿಟ್ಟು ನೀವು ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಬಹುದೇ? ಎಂದು ಅವರು ಪ್ರಶ್ನಿಸಿದ್ದಾರೆ. ತಮ್ಮ ಟ್ವೀಟ್ ಜೊತೆಗೆ, ಹಳೆಯ ಸುದ್ದಿಯ ತುಣಕುನ್ನು ಹಂಚಿಕೊಂಡಿದ್ದು, ಅದರಲ್ಲಿ ಸೋಲಿಗೆ ಬಿಜೆಪಿ ಇವಿಎಂಗಳನ್ನು ಹೊಣೆ ಮಾಡಿದೆ ಎಂಬ ವರದಿಯಿದೆ.
ಮತ ಎಣಿಕೆಯ ಕೆಲವು ಪೇಪರ್‌ಗಳನ್ನು ಹಂಚಿಕೊಂಡಿರುವ ಅವರು, ಅಂಚೆ ಮತಗಳ ಎಣಿಕೆಯಲ್ಲಿ ತಮ್ಮ ಪಕ್ಷ 230 ರಲ್ಲಿ 199 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಂಚೆ ಮತದಾನದ ಮೂಲಕ ಕಾಂಗ್ರೆಸ್‌ಗೆ ಮತ ಹಾಕಿ ನಮ್ಮ ಮೇಲೆ ವಿಶ್ವಾಸವಿಟ್ಟ ಎಲ್ಲ ಮತದಾರರಿಗೆ ಧನ್ಯವಾದಗಳು! ಪೋಸ್ಟಲ್ ಬ್ಯಾಲೆಟ್ ಮೂಲಕ ನಾವು ಅಂದರೆ ಕಾಂಗ್ರೆಸ್ 199 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂಬುದಕ್ಕೆ ಛಾಯಾಚಿತ್ರಗಳ ಡೇಟಾದಲ್ಲಿ ಪುರಾವೆ ಇದೆ. ಆದರೆ ಈ ಹೆಚ್ಚಿನ ಸ್ಥಾನಗಳಲ್ಲಿ ಇವಿಎಂ ಎಣಿಕೆಯಲ್ಲಿ ನಮಗೆ ಮತದಾರರ ಸಂಪೂರ್ಣ ವಿಶ್ವಾಸವನ್ನು ಪಡೆಯಲು ಸಾಧ್ಯವಾಗಲಿಲ್ಲ. ವ್ಯವಸ್ಥೆ ಗೆದ್ದಾಗ ಸಾರ್ವಜನಿಕರು ಸೋಲುತ್ತಾರೆ ಎಂದೂ ಹೇಳಬಹುದು. ನಮ್ಮ ತಳಮಟ್ಟದ ಕಾರ್ಯಕರ್ತರು ಕಾಂಗ್ರೆಸ್‌ಗಾಗಿ ಪೂರ್ಣ ಹೃದಯದಿಂದ ದುಡಿದಿದ್ದಾರೆ ಮತ್ತು ಪ್ರಜಾಪ್ರಭುತ್ವದಲ್ಲಿ ಅವರ ನಂಬಿಕೆಯನ್ನು ಬಲಪಡಿಸಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ ಎಂದು ಅವರುಹೇಳಿದ್ದಾರೆ.
ದಿಗ್ವಿಜಯ್ ಸಿಂಗ್ ಅವರ ಹೇಳಿಕೆ ಹೊರತಾಗಿ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್, ಪಕ್ಷದ ಸೋಲು ಮತ್ತು ಸಾರ್ವಜನಿಕರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ ಗೆಲುವಿಗೆ ಅಭಿನಂದನೆ ಸಲ್ಲಿಸಿರುವ ಅವರು, ಸಾರ್ವಜನಿಕ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸೋಲು ಖಚಿತವಾದ ನಂತರ ಪ್ರತಿಕ್ರಿಯಿಸಿದ ಕಮಲ್ ನಾಥ್, ಚುನಾವಣೆ ಫಲಿತಾಂಶದಲ್ಲಿ ಮಧ್ಯಪ್ರದೇಶದ ಜನರ ನಿರ್ಧಾರವನ್ನು ನಾನು ಒಪ್ಪಿಕೊಳ್ಳುತ್ತೇನೆ. ವಿರೋಧ ಪಕ್ಷದಲ್ಲಿ ಕೂರುವ ಜವಾಬ್ದಾರಿ ನಮಗೆ ನೀಡಲಾಗಿದ್ದು, ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ ಎಂದರು.
ಈ ವಿವದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸ್ ನವರು ತಮ್ಮ ತಪ್ಪುಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ಇವಿಎಂಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ ಎಂದು ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ತೆಲಂಗಾಣ, ಪಂಜಾಬ್, ಹಿಮಾಚಲ ಪ್ರದೇಶದ ಗೆಲುವನ್ನು ಪ್ರತಿಪಕ್ಷಗಳು ಪ್ರಶ್ನಿಸುವುದಿಲ್ಲ. ಆದರೆ ಸೋಲಿಗೆ ಇವಿಎಂಗಳನ್ನು ದೂಷಿಸುತ್ತಾರೆ. ಪ್ರತಿಪಕ್ಷಗಳು ಗೆದ್ದಾಗ ಇವಿಎಂಗಳನ್ನು ಪ್ರಶ್ನಿಸುವುದಿಲ್ಲ, ತೆಲಂಗಾಣದಲ್ಲಿ ಗೆದ್ದರೆ ಇವಿಎಂಗಳನ್ನು ಪ್ರಶ್ನಿಸುವುದಿಲ್ಲ, ಪಂಜಾಬ್ ಮತ್ತು ಹಿಮಾಚಲದಲ್ಲಿ ಪ್ರಶ್ನೆ ಎತ್ತುವುದಿಲ್ಲ. ಆದರೆ ಸೋತಾಗ ಇವಿಎಂಗಳನ್ನು ಪ್ರಶ್ನಿಸುತ್ತಾರೆ. ಇದು ಹೊಸ ವಿಷಯವಲ್ಲ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.



