ಆನ್ ಲೈನ್ ವಂಚಕರ ಜಾಲಕ್ಕೆ ಸಿಲುಕಿದ ಬೆಂಗಳೂರಿನ ದಾಸರಹಳ್ಳಿ ಪ್ರದೇಶದ ಬಿಜೆಪಿ ನಾಯಕರ ಪುತ್ರ

2 years ago

#son #BJP #leader #Dasarahalli #​​Bengaluru #caught #web #online #fraudsters

ಬಿಜೆಪಿ ನಾಯಕರೊಬ್ಬರ ಪುತ್ರ ಮಾನಸಿಕ ಖಿನ್ನತೆಗೆ ಒಳಗಾಗಿ ಆಸ್ಪತ್ರೆ ಪಾಲು

ಬೆಂಗಳೂರು: ಆನ್ ಲೈನ್ ವಂಚಕರ ಜಾಲಕ್ಕೆ ಸಿಲುಕಿದ ಬೆಂಗಳೂರಿನ ದಾಸರಹಳ್ಳಿ ಪ್ರದೇಶದ ಬಿಜೆಪಿ ನಾಯಕರೊಬ್ಬರ ಪುತ್ರ ಮಾನಸಿಕ ಖಿನ್ನತೆಗೆ ಒಳಗಾಗಿ ಆಸ್ಪತ್ರೆ ಪಾಲಾಗಿದ್ದಾನೆ.

ತ್ವರಿತ ಸಾಲ ನೀಡುವ ಮೋಸದ ಜಾಲದಲ್ಲಿ ಸಿಲುಕಿ ಬಿಜೆಪಿ ಮುಖಂಡರೊಬ್ಬರ ಪುತ್ರ 45 ಲಕ್ಷ ರೂ. ಕಳೆದುಕೊಂಡು, ಖಿನ್ನತೆಯಿಂದ ಬಳಲುತ್ತಿದ್ದ ಅವರ ಇಡೀ ಕುಟುಂಬ ಹೇಳಲೂ ಆಗದೆ, ಸಹಿಸಲೂ ಆಗದೆ ಒದ್ದಾಡುವಂತಾಗಿದೆ.

ಬಿಜೆಪಿ ಮುಖಂಡನ ಪುತ್ರ ಕರಣ್ (ಹೆಸರು ಬದಲಾಯಿಸಲಾಗಿದೆ) ಆನ್ಲೈನ್ಲ್ಲಿ ತ್ವರಿತವಾಗಿ 6 ಲಕ್ಷ ರೂ. ಸಾಲ ಪಡೆದು 45 ಲಕ್ಷ ರೂ ಪಾವತಿಸಿದ್ದರೂ ಅವರ ಭಾವಚಿತ್ರವನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ವಂಚಕರು ಕರಣ್ ಅವರ ಕುಟುಂಬಕ್ಕೂ ಕಿರುಕಳ ನೀಡಿರುವ ಆರೋಪ ಕೇಳಿಬಂದಿದೆ.

ಇದರಿಂದ ಬೇಸರಗೊಂಡ ಆತನ ಚಿಕ್ಕಪ್ಪ ರಮೇಶ್ (ಹೆಸರು ಬದಲಿಸಲಾಗಿದೆ) ಕೊನೆಗೂ ಜಾಲಹಳ್ಳಿ ಪೊಲೀಸರಿಗೆ ನೀಡಿದರು. ಇವರು ನೀಡಿದ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕರಣ್  ಕೆಲ ತಿಂಗಳ ಹಿಂದೆ ತ್ವರಿತ ಸಾಲದ ಮೇಕ್ ಮನಿ ಆ್ಯಪ್ನಿಂದ 6 ಲಕ್ಷ ರೂ ಸಾಲ ಪಡೆದಿದ್ದರು. ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ, ಅವರು ತಮ್ಮ ದೂರವಾಣಿ ಸಂಖ್ಯೆ ಮತ್ತು ಭಾವಚಿತ್ರಗಳನ್ನು ನೀಡಿದ್ದಾರೆ. ಜೊತೆಗೆ ತಮ್ಮ ಸಂಪರ್ಕದ ವಿವರಗಳನ್ನು ಪಡೆಯಲು ಆನ್ ಲೈನ್ ನಲ್ಲಿ ಅಪರಿಚಿತರು ಪ್ರವೇಶ ನೀಡಲು ಅನುಮತಿಸುವ ಆಯ್ಕೆಯನ್ನು ಅನುಮತಿಸಿದ್ದರು.

ಸಾಲ ಪಡೆದ ಒಂದೆರಡು ವಾರಗಳ ನಂತರ, ಸಾಲದ ಆ್ಯಪ್‌ನ ವಂಚಕರು ಸಾಲದ ಮೊತ್ತವನ್ನು ಮರುಪಾವತಿಸುವಂತೆ ಒತ್ತಡ ಹೇರಲು ಪ್ರಾರಂಭಿಸಿದರು.

ತಾವು ಮಾಡಿಕೊಂಡ ಒಪ್ಪಂದದಂತೆ ಕರಣ್ ಅವರು ಅಸಲು ಮತ್ತು ಅದಕ್ಕೆ ವಿಧಿಸಲಾದವ ಎಲ್ಲ ಬಡ್ಡಿ ಕಟ್ಟಿದರು. ಆದರೆ ವಂಚಕರು ಬಡ್ಡಿ ಬಾಕಿ ಇದೆ ಎಂದು ಹೇಳುತ್ತಾ ಬಡ್ಡಿಯ ಮೊತ್ತವನ್ನು ಹೆಚ್ಚಿಸುತ್ತಲೇ ಇದ್ದರು. ಅಲ್ಲದೆ ನಿಮ್ಮ ಸಾಲದ ಮೊತ್ತವು ಇನ್ನೂ ಕ್ಲಿಯರ್ ಆಗಿಲ್ಲ ಎಂದು ಹೇಳಿದರು.

ಕರಣ್ ಇದನ್ನು ಒಪ್ಪದೆ ಹೆಚ್ಚಿನ ಹಣ ಕೊಡಲು ನಿರಾಕರಿಸಿದಾಗ ಅವರ ನಗ್ನ ಛಾಯಾಚಿತ್ರಗಳನ್ನು ಅವರ ಸಂಪರ್ಕಕ್ಕೆ ಇರುವ ವ್ಯಕ್ತಿಗಳಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ದೃಢೀಕರಣಕ್ಕಾಗಿ ವಂಚಕರು, ಕರಣ್ ಅವರ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅವರಿಗೆ ಕಳುಹಿಸಿದ್ದರು.

ಈ ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಿರುವ ಕರಣ್ ಅವರ ಚಿಕ್ಕಪ್ಪ, ವಂಚಕರು ಕರಣ್‌ನಿಂದ ಸುಮಾರು 45 ಲಕ್ಷ ರೂ. ಸುಲಿಗೆ ಮಾಡಿದರೂ ಹೆಚ್ಚಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಇವರ  ಕಿರುಕುಳ ಸಹಿಸಲಾಗದೆ ಕರಣ್ ಈಶಾನ್ಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಬಳಿಕ ವಂಚಕರು ಕರಣ್ ಅವರ ಸಾಲ ಮನ್ನಾ ಮಾಡಲಾಗಿದೆ ಎಂದು ಹೇಳಿದ್ದರು. ಇದಾದ ನಂತರ ಮತ್ತೆ ಮೇಕ್ ಮನಿ ಸಿಬ್ಬಂದಿ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ.

ಇದರಿಂದಾಗಿ ಖಿನ್ಮತೆಗೆ ಒಳಗಾದ ಕರಣ್ ಅವರು ಕಳೆದ 18 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದನು. ಇದನ್ನು ತಡೆದ ಪೋಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಕರಣ್ ದೂರು ನೀಡಿದ ನಂತರ, ದುಷ್ಕರ್ಮಿಗಳು 15 ದಿನಗಳ ಕಾಲ ಕಿರುಕುಳವನ್ನು ನಿಲ್ಲಿಸಿದರು.

ಬಳಿಕ ವಂಚಕರು ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿ “ಮೇಕ್ ಮನಿ” ಅಪ್ಲಿಕೇಶನ್ ನಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ಪದೆ ಪದೇ ಕರೆ ಮಾಡಿ ಪತ್ನಿ ಹಾಗೂ ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಕರಣ್‌ನ ತಂದೆಯ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರದು ಇಬ್ಬರು ಮಹಿಳೆಯರ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅಪ್‌ಲೋಡ್ ಮಾಡಿದ್ದಾರೆ.

ಈ ರೀತಿಯಾಗಿ ಕಳೆದ ಮೂರು ತಿಂಗಳಿಂದ ನನ್ನ ಪತ್ನಿ ಹಾಗೂ ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಅವರು ಕೆಲವು ಅಸಭ್ಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅವರ ಬಗ್ಗೆ ಕೆಟ್ಟದಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಅವರ ಕಿರುಕುಳದಿಂದ ನನ್ನ ಹೆಂಡತಿ ಮತ್ತು ಮಗಳು ಕೂಡ ಖಿನ್ನತೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

ದುಷ್ಕರ್ಮಿಗಳು ಸ್ಥಳೀಯ ಮತ್ತು ವಿದೇಶಿ ಸೇರಿದಂತೆ ಹಲವು ಸಂಖ್ಯೆಗಳಿಂದ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ, ನಿಂದನೀಯ ಭಾಷೆ ಬಳಸಿ ಮತ್ತು ಹಿಂದಿಯಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು ರಮೇಶ್ ಪೊಲೀಸರಿಗೆ ತಿಳಿಸಿದ್ದಾರೆ.

ಎರಡೂ ಪ್ರಕರಣಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಇತರ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕರಣ್ ಮತ್ತು ಅವರ ಕುಟುಂಬ ಸದಸ್ಯರಿಗೆ ಪಾಕಿಸ್ತಾನ ಮತ್ತು ಯುಎಇಯಿಂದ ಕೆಲವು ಫೋನ್ ಕರೆಗಳನ್ನು ಮಾಡಲಾಗಿದೆ ಮತ್ತು ಉಳಿದವು ಸ್ಥಳೀಯ ಸಂಖ್ಯೆಗಳಿಂದ ಬಂದವು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಕಲಿ ಫೇಸ್ ಬುಕ್ ಖಾತೆಯನ್ನು ಬ್ಲಾಕ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.

Leave a Reply