ತಲೆಬುರುಡೆ, ಮೂಳೆಗಳನ್ನು ಎಫ್ ಎಸ್ ಎಲ್ ಕಳುಹಿಸಲಿದೆ ಎಸ್ ಐ ಟಿ

9 months ago

ಮಂಗಳೂರು: ಧರ್ಮಸ್ಥಳದ ಬಳಿ ಶವಗಳನ್ನು ಹೂತಿರುವ ಪ್ರಕರಣದ ಸಂಬಂಧ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು  ಬಂಗ್ಲೆಗುಡ್ಡದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದೊರೆತ 5 ತಲೆಬುರುಡೆ, 113 ಮೂಳೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ(ಎಫ್ ಎಸ್ ಎಲ್)ಕಳುಹಿಸಲು ಮುಂದಾಗಿದ್ದಾರೆ.

ಬಂಗ್ಲೆಗುಡ್ಡದಲ್ಲಿ ಅನೇಕ ಅಸ್ಥಿಪಂಜರಗಳನ್ನು ನೋಡಿದ್ದೇನೆ ಎಂದು ವಿಠಲ್ ಗೌಡ ಮಾಡಿದ್ದ ಆರೋಪ ಸಂಬಂಧ ಎಸ್ಐಟಿ ಶೋಧ ತೀವ್ರಗೊಂಡಿದ್ದು, ಹಲವು ವಸ್ತುಗಳು ಪತ್ತೆಯಾಗಿವೆ. ಶೋಧದ ವೇಳೆ ಒಂದು ಅಸ್ಥಿಪಂಜರದ ಪಕ್ಕದಲ್ಲೇ ಹಿರಿಯ ನಾಗರಿಕರ ಕಾರ್ಡ್ ಪತ್ತೆಯಾಗಿದೆ.

ಅಲ್ಲದೆ, ಮರದಲ್ಲಿ ಎರಡು ಹಗ್ಗ ಮತ್ತು ಒಂದು ಸೀರೆ ಸಿಕ್ಕಿದ್ದು, ನೇಣುಬಿಗಿದ ಅನುಮಾನ ಮೂಡಿಸಿದೆ. ಮಹಜರು ಸಂದರ್ಭದಲ್ಲಿ ಪತ್ತೆಯಾದ ವಸ್ತುಗಳನ್ನು ಎಸ್ಐಟಿ ಅಧಿಕಾರಿಗಳು ಸೀಲ್ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಸೋಕೋ ಮತ್ತು ಎಫ್‌ಎಸ್‌ಎಲ್ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರ ಹಾಗೂ ಪತ್ತೆಯಾದ ವಸ್ತುಗಳನ್ನು ಸಂಗ್ರಹಿಸಿವೆ.

ಬಂಗ್ಲೆಗುಡ್ಡದಲ್ಲಿ ಒಟ್ಟು ಐದು ಬುರುಡೆಗಳು ಮತ್ತು ಮೂಳೆಗಳು ಪತ್ತೆಯಾಗಿದ್ದು, ಎಸ್ಐಟಿ ಪಂಚರ ಸಮ್ಮುಖದಲ್ಲಿ ಮಹಜರು ಪೂರ್ಣಗೊಳಿಸಲಾಗಿತ್ತು.ಇಂದು ಮತ್ತೇ ಶೋಧ ಕಾರ್ಯ ಮುಂದುವರೆದಿದೆ.

15 ಎಕರೆಯಷ್ಟಿರುವ ಕಾಡನ್ನು ಸಂಪೂರ್ಣವಾಗಿ ಶೋಧ ನಡೆಸಲು, ಭೂಮಿಯ ಮೇಲ್ಮೈಯಲ್ಲಿರುವ ಎಲುಬುಗಳನ್ನು ಎಸ್ ಐಟಿ ಸಂಗ್ರಹಿಸುತ್ತಿದೆ. ಇನ್ನು ಇದೇ ವೇಳೆ ಸೌಜನ್ಯಾ ಮಾವ ವಿಠಲಗೌಡ ವಿರುದ್ಧ ಧರ್ಮಸ್ಥಳ ಗ್ರಾಮಸ್ಥ ಸಂದೀಪ್ ರೈ ದೂರು ಸಲ್ಲಿಕೆ ಮಾಡಿದ್ದಾರೆ. ವಿಠಲಗೌಡರಿಂದ ಎಸ್ ಐಟಿ ತನಿಖೆಗೆ ಸಮಸ್ಯೆ ಆಗ್ತಿದೆ. ಕೆಲವರ ಜೊತೆ ಸೇರಿಕೊಂಡು ಷಡ್ಯಂತ್ರ ಮಾಡುತ್ತಿದ್ದಾರೆ. ಸಾಕ್ಷ್ಯ ನಾಶಕ್ಕೆ ಯತ್ನ ನಡೆಸುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.

ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ತನಿಖೆಗೆ ಒತ್ತಾಯಿಸಿ ಸಿಪಿಐಎಂ ಮುಖಂಡ ಬಿಎಂ ಭಟ್ ದೂರು ಸಲ್ಲಿಕೆ ಮಾಡಿದ್ದಾರೆ. ಕಳೆದ 20 ವರ್ಷಗಳ ಪ್ರಕರಣಗಳನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮತ್ತೊಂದೆಡೆ ಪುರಂದರ ಗೌಡ ಹಾಗೂ ತುಕಾರಾಮ ಗೌಡ, ಬಂಗ್ಲೆಗುಡ್ಡೆಯಲ್ಲಿ ಶವ ಶೋಧ ನಡೆಸಲು ಎಸ್ ಐಟಿ ಗೆ ನಿರ್ದೇಶನ ಕೊಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಅಸ್ಥಿಪಂಜರಗಳಿವೆ ಎಂದು ವಿಠಲ ಗೌಡ ಹೇಳಿಕೆ ನೀಡಿದ ಹೊರತಾಗಿಯೂ ಎಸ್‌ಐಟಿ ಯಾವುದೇ ಶೋಧ ನಡೆಸುತ್ತಿಲ್ಲ. ಈ ಬಗ್ಗೆ ಎಸ್‌ಐಟಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಪುರಂದರ ಗೌಡ ಎಂಬವರು ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯ ಎಸ್‌ಐಟಿಗೆ ನೊಟೀಸ್ ಜಾರಿ ಮಾಡಿದೆ. 

Leave a Reply