ಕೋಮುವಾದಿ ಶಕ್ತಿಗಳ ವಿರುದ್ಧದ ಹೋರಾಟಕ್ಕೆ ಮುಲಾಯಂ ಸಿಂಗ್ ನಾಯಕತ್ವ ಅಗತ್ಯವಿತ್ತು: ಸಿದ್ದರಾಮಯ್ಯ

4 years ago

ದೆಹಲಿ/ಬೆಂಗಳೂರು: ಉತ್ತರ ಪ್ರದೇಶದ ಮಾಜಿಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಸಾವು ದೇಶದ ಜಾತ್ಯತೀತ ರಾಜಕೀಯ ಹೋರಾಟಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ಕೆಲಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕಾಲವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ,
ರಾಮಮನೋಹರ ಲೋಹಿಯಾ ಅವರ ಅನುಯಾಯಿಯಾಗಿ ರಾಜಕೀಯ ಪ್ರವೇಶ ಮಾಡಿದ್ದ ಮುಲಾಯಂ ಸಿಂಗ್, ಜೆಪಿ ಚಳುವಳಿಯಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡವರು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ ಮಂಡಲ್ ವರದಿಯ ಅನುಷ್ಠಾನಕ್ಕಾಗಿ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಬೆಂಬಲಕ್ಕೆ ನಿಂತಿದ್ದ ಮುಲಾಯಂ ಸಿಂಗ್, ದೇಶದಲ್ಲಿ ಸಾಮಾಜಿಕ ನ್ಯಾಯದ ಹೋರಾಟವನ್ನು ಕಟ್ಟಿದವರಲ್ಲಿ ಪ್ರಮುಖರು ಎಂದು ಹೇಳಿದ.

ಬಾಬರಿ ಮಸೀದಿ ಧ್ವಂಸದ ಪೂರ್ವ ಮತ್ತು ನಂತರದ ಕೋಮುವಾದಿ ರಾಜಕೀಯಕ್ಕೆ ಉತ್ತರಪ್ರದೇಶದಲ್ಲಿ ಪ್ರಬಲ ಪ್ರತಿರೋಧ ಒಡ್ಡಿದ್ದ ಮುಲಾಯಂ ಸಿಂಗ್ ಬಿಜೆಪಿ ಜೊತೆ ರಾಜಿ ಮಾಡಿಕೊಂಡವರಲ್ಲ. ರಾಜ್ಯದಲ್ಲಿ ‘ನೇತಾಜಿ’ ಎಂದೇ ಖ್ಯಾತರಾಗಿದ್ದ ಮುಲಾಯಂ ಸಿಂಗ್, ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆ ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಪರವಾದ ಆಡಳಿತ ನೀಡಿದವರು. ದೇಶಾದ್ಯಂತ ಇಂದು ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿರುವಾಗ ಅದರ ವಿರುದ್ಧದ ಹೋರಾಟಕ್ಕೆ ಮುಲಾಯಂ ಸಿಂಗ್ ಅವರ ನಾಯಕತ್ವ ಮತ್ತು ಮಾರ್ಗದರ್ಶನ ಹಿಂದಿಗಿಂತಲೂ ಈಗ ಹೆಚ್ಚು ಅಗತ್ಯ ಇತ್ತು ಎಂದು ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಮತ್ತು ಮಗ ಅಖಿಲೇಶ್ ಯಾದವ್ ಅವರು ಅಪ್ಪನ ಸಾಮಾಜಿಕ ನ್ಯಾಯದ ಹೋರಾಟವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂಬ ಭರವಸೆ ನನಗಿದೆ. ಮುಲಾಯಂ ಸಿಂಗ್ ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದಿದ್ದಾರೆ.

Leave a Reply