ಸಾಲುಮರದ ವೀರಾಚಾರಿ’ಯವರ ಸ್ಮರಣಾರ್ಥ KRS ಪಕ್ಷದ ವತಿಯಿಂದ ರಾಜ್ಯಾದ್ಯಂತ #OperationVeerachari ಕಾರ್ಯಾಚರಣೆ ಇಂದಿನಿಂದ ಆರಂಭ
ದಾವಣಗೆರೆ ಭಾಗದಲ್ಲಿ ಸಾವಿರಾರು ಮರಗಳನ್ನು ಬೆಳೆಸಿದ್ದ ಪರಿಸರಪ್ರೇಮಿ “ಸಾಲುಮರದ ವೀರಾಚಾರಿ”. ಅವರ ಕಾಳಜಿ ಪರಿಸರದ ವಿಚಾರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ತಮ್ಮ ಸಾಮಾಜಿಕ ಪರಿಸರದಲ್ಲಿ ನಡೆಯುವ ಅನ್ಯಾಯ ಹಾಗೂ ಭ್ರಷ್ಟಾಚಾರದ ವಿರುದ್ಧವೂ ಈ ಗಾಂಧಿಟೋಪಿಧಾರಿ ಹೋರಾಡುತ್ತಿದ್ದರು. ಹರಿಹರ ತಾಲ್ಲೂಕಿಗೆ ಸೇರಿದ ಮಿಟ್ಲಕಟ್ಟೆ ಎನ್ನುವ ತಮ್ಮೂರಿನ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ನ್ಯಾಯಬದ್ಧವಾಗಿ ಪಡಿತರ ವಿತರಣೆಯಾಗುತ್ತಿಲ್ಲ ಎಂದು ಆ ನ್ಯಾಯಬೆಲೆ ಅಂಗಡಿಯ ಅಕ್ರಮದ ವಿರುದ್ಧ ಕಳೆದ ಐದಾರು ವರ್ಷಗಳಿಂದ ಸತತವಾಗಿ ಹೋರಾಡುತ್ತಿದ್ದರು. ಇತ್ತೀಚೆಗೆ KRS ಪಕ್ಷದ ಸದಸ್ಯತ್ವವನ್ನು ಸಹಾ ಪಡೆದು ಪಕ್ಷದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಅಕ್ರಮ ಮತ್ತು ವಂಚನೆಗೆ ಕುಖ್ಯಾತಿ ಪಡೆದಿದ್ದ ತಮ್ಮೂರಿನ ನ್ಯಾಯಬೆಲೆ ಅಂಗಡಿಯ ವಿರುದ್ಧದ ಅವರ ನಿರಂತರ ಹೋರಾಟದಿಂದಾಗಿ ಆ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಸರ್ಕಾರಿ ಅಧಿಕಾರಿಗಳು ಅಮಾನತು ಮಾಡಿದ್ದರು. ಆದರೆ ಆಹಾರ ಇಲಾಖೆಯ ದಾವಣಗೆರೆ ಜಿಲ್ಲಾ ಜಂಟಿ ನಿರ್ದೇಶಕ ಮಂಟೇಸ್ವಾಮಿ ಎನ್ನುವ ಪರಮಭ್ರಷ್ಟ ಅಧಿಕಾರಿಯು ಹರಿಹರ ತಹಸೀಲ್ದಾರರ ಲಿಖಿತ ದೂರು ಮತ್ತು ಆಕ್ಷೇಪಣೆಯನ್ನು ಬದಿಗೊತ್ತಿ ಇದೇ ಜೂನ್ 6, 2022ರಂದು ಆ ವಂಚಕ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಪುನರ್‌ಸ್ಥಾಪಿಸಿ ಆದೇಶ ಮಾಡಿದ್ದರು. ಕೊನೆಗೆ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲನ್ನೂ ಹತ್ತಿತು. ಈ ವಿಚಾರವಾಗಿ ವೀರಾಚಾರಿಯವರು ಜಿಲ್ಲಾಧಿಕಾರಿಗಳೂ ಸೇರಿದಂತೆ ಹಲವಾರು ಅಧಿಕಾರಿಗಳನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಒತ್ತಾಯಿಸಿದ್ದರು.
ಆದರೆ ಭ್ರಷ್ಟ ಮತ್ತು ಅದಕ್ಷ ಅಧಿಕಾರಿಗಳು ಇವರ ಮನವಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ. ಇದರಿಂದ ತೀವ್ರವಾಗಿ ಮನನೊಂದು, ಬೇಸತ್ತ ವೀರಾಚಾರಿಯವರು ಇದೇ ಸೆಪ್ಟೆಂಬರ್ 20ರಂದು ತಮ್ಮೂರಿನ ನಡುರಸ್ತೆಯಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ದುರ್ಮರಣಕ್ಕೀಡಾದರು.
ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಬಡವರಿಗೆ ಆಗುತ್ತಿರುವ ಮೋಸ, ವಂಚನೆ, ಅನ್ಯಾಯ ಹಾಗೂ ಇದೇ ಕಾರಣದಿಂದ ಜನರ ತೆರಿಗೆ ಹಣ ದುರ್ವಿನಿಯೋಗ ಆಗುತ್ತಿರುವುದರ ವಿರುದ್ಧ ಕಳೆದ ಐದು ವರ್ಷಗಳಿಂದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಮತ್ತು ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ನಿರಂತರವಾಗಿ ಹೋರಾಟ, ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿವೆ. ಇದರಿಂದಾಗಿ ರಾಜ್ಯದ ಲಕ್ಷಾಂತರ ಬಡವರಿಗೆ ಒಂದಷ್ಟು ನ್ಯಾಯ ಸಿಕ್ಕಿದೆ, ನೂರಾರು ನ್ಯಾಯಬೆಲೆ ಅಂಗಡಿಗಳಲ್ಲಿ ವ್ಯವಸ್ಥೆ ಸುಧಾರಿಸಿದೆ, ಹತ್ತಾರು ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದಾಗಿದೆ, ಹಾಗೂ ಆಹಾರ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳು ತಮ್ಮ ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ಕಾರಣಕ್ಕೆ ಅಮಾನತುಗೊಂಡಿದ್ದಾರೆ ಅಥವಾ ಇಲಾಖಾ ವಿಚಾರಣೆ ಎದುರಿಸುತ್ತಿದ್ದಾರೆ.
ಆದರೆ ಈಗಲೂ ರಾಜ್ಯದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಬಡ ಫಲಾನುಭವಿಗಳಿಗೆ ಮೋಸ, ವಂಚನೆ ಆಗುತ್ತಿದೆ. ಅದೇ ರೀತಿ ಆಹಾರ ಇಲಾಖೆಯ ಭ್ರಷ್ಟ ಅಧಿಕಾರಿಗಳು ಪರವಾನಗಿದಾರರಿಗೆ ಈ ಮೋಸ ಮುಂದುವರಿಸಲು ಅವಕಾಶ ಮಾಡಿಕೊಟ್ಟು ಅವರಿಂದ ಮಾಮೂಲು ಪಡೆಯುತ್ತಿದ್ದಾರೆ. ಈ ಅಕ್ರಮ ಮತ್ತು ಶಾಮೀಲುಗಳ ಕಾರಣಕ್ಕೆ ವರ್ಷಕ್ಕೆ ಕನಿಷ್ಠವೆಂದರೂ ಸಾವಿರ ಕೋಟಿ ರೂಪಾಯಿಗಳಿಗಿಂತ ಅಧಿಕ ಭ್ರಷ್ಟಾಚಾರ ಈ ಒಂದೇ ಬಾಬತ್ತಿನಲ್ಲಿ ಆಗುತ್ತಿದೆ.
ಇಂತಹ ದೊಡ್ಡ ಮಾಫಿಯಾ ಮಾದರಿಯ ಭ್ರಷ್ಟಾಚಾರದ ವಿರುದ್ಧ ತಮ್ಮದೇ ನೆಲೆಯಲ್ಲಿ ಹೋರಾಡಿ, ನಿರಾಸೆಗೊಂಡು, ಬೇಸತ್ತು, ಖಿನ್ನತೆಗೆ ಒಳಗಾಗಿ, ಕೊನೆಗೆ ಕೈಚೆಲ್ಲಿ ಸಾಲುಮರದ ವೀರಾಚಾರಿ’ಯವರು ನೇಣಿಗೆ ಕೊರಳೊಡ್ಡಿ ಹುತಾತ್ಮರಾಗಿದ್ದಾರೆ. ಅವರ ಹೋರಾಟ ಮತ್ತು ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ, ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯಾದ್ಯಂತ ನಡೆಯುವ ಅವ್ಯವಹಾರ ಮತ್ತು ವಂಚನೆಯನ್ನು once and for all ನಿಲ್ಲಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ತೀರ್ಮಾನಿಸಿದ್ದು, ಸಾಲುಮರದ ವೀರಾಚಾರಿ’ಯವರ ಸ್ಮರಣಾರ್ಥ ಇದೇ ಅಕ್ಟೋಬರ್ 10ರಿಂದ ರಾಜ್ಯಾದ್ಯಂತ #OperationVeerachari ಹೆಸರಿನಲ್ಲಿ ಕಾರ್ಯಾಚರಣೆ ಹಮ್ಮಿಕೊಂಡಿದೆ.
#OperationVeerachari ಕಾರ್ಯಾಚರಣೆಯ ಸಂದರ್ಭದಲ್ಲಿ KRS ಪಕ್ಷದ ಸೈನಿಕರು ರಾಜ್ಯದ ಮೂಲೆಮೂಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಖುದ್ದು ಭೇಟಿ ಕೊಟ್ಟು ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಲಿದ್ದಾರೆ. ಅಲ್ಲಿಯ ವ್ಯವಸ್ಥೆ ಲೋಪಗಳಿಂದ ಕೂಡಿದ್ದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ ಅಥವ ಲಿಖಿತ ದೂರು ದಾಖಲಿಸುತ್ತಾರೆ. ಫಲಾನುಭವಿಗಳಿಗೆ ತೂಕದಲ್ಲಿ ಮೋಸ ಅಥವ ಅವರಿಂದ ಕಾನೂನುಬಾಹಿರವಾಗಿ ಹಣ ವಸೂಲಿ ಅಥವ ಅವರನ್ನು ಬೆದರಿಸುವುದು ಇತ್ಯಾದಿ ಕಂಡುಬಂದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲಿದ್ದಾರೆ. ಈ ಕಾರ್ಯಾಚರಣೆಯನ್ನು Facebook Live ಮೂಲಕ ಸಾರ್ವಜನಿಕವಾಗಿ ಮಾಡಲಿದ್ದಾರೆ ಮತ್ತು ಯಾವುದೇ ಸಂದರ್ಭದಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ. ಎಲ್ಲಿಯಾದರೂ ನ್ಯಾಯಬೆಲೆ ಅಂಗಡಿಯವರಿಂದ ಕಾನೂನುಬಾಹಿರ ವಿರೋಧ ಅಥವ ಗೂಂಡಾವರ್ತನೆ ಕಂಡುಬಂದರೆ ಅದಕ್ಕೆ ಹೆದರದೇ, ವಿಷಯವನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತಂದು ಪರಿಸ್ಥಿಯನ್ನು ನಿಭಾಯಿಸಲಿದ್ದಾರೆ.
#OperationVeerachari ಕಾರ್ಯಾಚರಣೆಯ ಸಂದರ್ಭದಲ್ಲಿ KRS ಪಕ್ಷದ ಸೈನಿಕರು ನ್ಯಾಯಬೆಲೆ ಅಂಗಡಿಯವರಿಂದ ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಂದ ಕನಿಷ್ಠ ಇಷ್ಟನ್ನು ನಿರೀಕ್ಷೆ ಮಾಡುತ್ತಾರೆ:-
ನ್ಯಾಯಬೆಲೆ ಅಂಗಡಿಗಳಲ್ಲಿ ಇರಬೇಕಾದ ವ್ಯವಸ್ಥೆ ಮತ್ತು ಫಲಾನುಭವಿಗಳಿಗೆ ಪಡಿತರ ವಿತರಣೆಯಲ್ಲಿ ಪಾಲಿಸಬೇಕಾದ ನಿಯಮಗಳು:
1. Electronic Scale ಕಡ್ಡಾಯ; ತೂಕದ Display ಫಲಾನುಭವಿಗಳಿಗೆ ಕಾಣಿಸಬೇಕು.
2. ಅಂಗಡಿಯ ಮುಂದೆ ಅಥವ ಒಳಗಿನ ನೋಟಿಸ್ ಬೋರ್ಡ್‌ನಲ್ಲಿ ಅಂಗಡಿಯವರ ಸಂಪರ್ಕ ಸಂಖ್ಯೆ, ಆಹಾರ ನಿರೀಕ್ಷಕರ ಮತ್ತು ಆಹಾರ ಶಿರಸ್ತೆದಾರರ ಫೋನ್ ನಂಬರ್, ಅಂಗಡಿಯ ಪರವಾನಗಿ ಮಂಜೂರು ಅಥವಾ ನವೀಕರಣದ ಪ್ರತಿಯನ್ನು ಕಡ್ಡಾಯವಾಗಿ ಪ್ರದರ್ಶಿಸಿರಬೇಕು.
3. ನ್ಯಾಯಬೆಲೆ ಅಂಗಡಿಯ ಮುಂದೆ ಅಥವ ಬಾಗಿಲ ಮೇಲೆ ಆ ನ್ಯಾಯಬೆಲೆ ಅಂಗಡಿಯ ಹೆಸರು, ಅದರ ಪರವಾನಗಿ ಸಂಖ್ಯೆ, ಪರವಾನಗಿದಾರರ ಹೆಸರು, ಮತ್ತು ಆಹಾರ ಇಲಾಖೆಯ ಸಹಾಯವಾಣಿ ಸಂಖ್ಯೆಯ ಮಾಹಿತಿಗಳನ್ನು ಒಳಗೊಂಡ ದೊಡ್ಡ ನಾಮಫಲಕವನ್ನು (Name Board) ಹಾಕಿರಬೇಕು.
4. ವಿವಿಧ ಬಗೆಯ ಕಾರ್ಡುಗಳ ಫಲಾನುಭವಿಗಳಿಗೆ ಸದರಿ ತಿಂಗಳಿನಲ್ಲಿ ಮಂಜೂರು ಆಗಿರುವ ಪಡಿತರದ ಮಾಹಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣಿಸುವಂತೆ ಪ್ರಕಟಿಸಿರಬೇಕು.
5. ಫಲಾನುಭವಿಗಳಿಗೆ ಮಂಜೂರಾಗಿರುವ ಪಡಿತರ ವಿತರಿಸಲು ಬಯೋಮೆಟ್ರಿಕ್ ಅಥವಾ ಇನ್ಯಾವುದೇ ನೆಪದಲ್ಲಿ ಅವರಿಂದ ಯಾವುದೇ ರೀತಿಯ ಹಣ ಪಡೆಯುವಂತಿಲ್ಲ.
6. ಬಯೋಮೆಟ್ರಿಕ್ ಪಡೆದ ನಂತರ ತಕ್ಷಣವೇ ಪಡಿತರ ವಿತರಣೆ ಮಾಡತಕ್ಕದ್ದು. ಆಮೇಲೆ ಬನ್ನಿ, ನಾಳೆ ಬನ್ನಿ ಎಂದೆಲ್ಲಾ ಹೇಳುವಂತಿಲ್ಲ.
7. ಮಂಜೂರಾಗಿರುವ ಪಡಿತರವನ್ನು ಬಿಟ್ಟು ಇತರೆ ಸಾಮಾನುಗಳನ್ನು ಒತ್ತಾಯಪೂರ್ವಕವಾಗಿ ಮಾರುವಂತಿಲ್ಲ.
8. ಮಂಗಳವಾರ ಮತ್ತು ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ದಿನಗಳಲ್ಲಿ ನಿಗದಿತ ಸಮಯದಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆದಿರಬೇಕು.
ಆಹಾರ ಇಲಾಖೆಯ ಅಧಿಕಾರಿಗಳು ಪಾಲಿಸಬೇಕಾದ ನಿಯಮಗಳು:
1. ನ್ಯಾಯಬೆಲೆ ಅಂಗಡಿಯಲ್ಲಿ electronic scale ಸೇರಿದಂತೆ ಪಡಿತರ ವಿತರಣೆಗಾಗಿ ಇರಲೇಬೇಕಾದ ಮೂಲಭೂತ ಸೌಕರ್ಯಗಳು, ಇಲಾಖೆಯ ಅಧಿಕಾರಿಗಳ ಸಂಪರ್ಕ ಸಂಖ್ಯೆಯೂ ಸೇರಿದಂತೆ ಫಲಾನುಭವಿಗಳಿಗೆ ಸ್ಪಷ್ಟವಾಗಿ ಕಾಣಿಸುವಂತೆ ನೀಡಬೇಕಾದ ಮಾಹಿತಿಗಳು ಅಂಗಡಿಯಲ್ಲಿ ಕಡ್ಡಾಯವಾಗಿ ಇರುವಂತೆ ಖಾತ್ರಿಪಡಿಸಿಕೊಳ್ಳುವುದು.
2. ನ್ಯಾಯಬೆಲೆ ಅಂಗಡಿಯವರಿಂದ ಮೋಸ, ವಂಚನೆ ಅಥವಾ ದಬ್ಬಾಳಿಕೆಗೆ ಒಳಗಾದ ಸಂತ್ರಸ್ತ ಫಲಾನುಭವಿಗಳು ಫೋನ್ ಮೂಲಕ ದೂರು ನೀಡಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿ ದೂರಿಗೆ ಸಂಬಂಧಿಸಿದಂತೆ ಪಾರದರ್ಶಕವಾಗಿ ವಿಚಾರಣೆ ನಡೆಸಬೇಕು.
3. ದಾಸ್ತಾನು ಪರಿಶೀಲನೆಯ (Stock Verification) ಸಂದರ್ಭದಲ್ಲಿ ಅಂಗಡಿಯಲ್ಲಿ ಆ ಸಮಯದಲ್ಲಿ ಇರಬೇಕಾದದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಡಿತರ ಇದ್ದಲ್ಲಿ ಖೋತಾ ಆಗಿರುವಷ್ಟು ಪ್ರಮಾಣದ ಪಡಿತರವನ್ನು ಈಗಾಗಲೇ ಕದ್ದು ಕಾಳಸಂತೆಯಲ್ಲಿ ಮಾರಲಾಗಿರುತ್ತದೆ. ಹಾಗಾಗಿ ಆಹಾರ ನಿರೀಕ್ಷಕರು ಆ ಕೂಡಲೇ ಆ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ IPC ಕಲಂ 379, Essential Commodities Act ಕಲಂ 3 ಮತ್ತು 7ರ ಅಡಿಯಲ್ಲಿ ಲಿಖಿತ ದೂರು ದಾಖಲಿಸಬೇಕು.
4. ದಾಸ್ತಾನು ಪರಿಶೀಲನೆಯ (Stock Verification) ಸಂದರ್ಭದಲ್ಲಿ ಅಂಗಡಿಯಲ್ಲಿ ಆ ಸಮಯದಲ್ಲಿ ಇರಬೇಕಾದದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಡಿತರ ಇದ್ದಲ್ಲಿ ಅದು ಫಲಾನುಭವಿಗಳಿಗೆ ವಂಚನೆ ಮಾಡಿ ಕೂಡಿಟ್ಟ ಪಡಿತರ ಆಗಿರುತ್ತದೆ. ಹಾಗಾಗಿ ಆಹಾರ ನಿರೀಕ್ಷಕರು ಆ ಕೂಡಲೇ ಆ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ IPC ಕಲಂ 379, 409, 420 ಮತ್ತು Essential Commodities Act ಕಲಂ 3 ಮತ್ತು 7ರ ಅಡಿಯಲ್ಲಿ ಲಿಖಿತ ದೂರು ದಾಖಲಿಸಬೇಕು.
5. ಇದರ ಜೊತೆಗೆ ಮೇಲಿನ ಎರಡೂ ಸಂದರ್ಭದಲ್ಲಿ ತಕ್ಷಣವೇ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಅಮಾನತು ಮಾಡಿ ಅದನ್ನು ಶಾಶ್ವತವಾಗಿ ವಜಾ ಮಾಡಲು ಕಾನೂನು ಕ್ರಮ ಜರುಗಿಸಬೇಕು.
6. ಅಕ್ರಮ ಎಸಗಿದ ನ್ಯಾಯಬೆಲೆಯ ಅಂಗಡಿಯು ಸರ್ಕಾರಿ ನ್ಯಾಯಬೆಲೆ ಅಂಗಡಿ ಆಗಿದ್ದಲ್ಲಿ ಅಕ್ರಮ ಎಸಗಿದ ಸರ್ಕಾರಿ ನೌಕರನನ್ನು ಕೂಡಲೇ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು ಮತ್ತು ಆತ/ಆಕೆಯನ್ನು ಕೆಲಸದಿಂದ ಅಮಾನತು ಮಾಡಲು ಶಿಫಾರಸು ಮಾಡಿ ಕಾನೂನು ಕ್ರಮ ಜರುಗಿಸಬೇಕು.
ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ತಿಳಿದಿರಬೇಕಾದ ಮಾಹಿತಿ:
1. ಪ್ರತಿ ಕಾರ್ಡಿಗೆ ಇಂತಿಷ್ಟು ಎಂದು ಸರ್ಕಾರದವರು ನ್ಯಾಯಬೆಲೆ ಅಂಗಡಿಯವರಿಗೆ ಹಣ ಪಾವತಿ ಮಾಡುತ್ತಾರೆ. ಹಾಗಾಗಿ ತಮಗೆ ಮಂಜೂರಾಗಿರುವ ಪಡಿತರ ಪಡೆಯಲು ಕಾರ್ಡುದಾರರು ಯಾವುದೇ ಕಾರಣಕ್ಕೂ ನ್ಯಾಯಬೆಲೆ ಅಂಗಡಿಯವರಿಗೆ ಹಣ ನೀಡುವ ಅಗತ್ಯವಿಲ್ಲ.
2. ನ್ಯಾಯಬೆಲೆ ಅಂಗಡಿಯವರು ಹಣಕ್ಕಾಗಿ ಒತ್ತಾಯ ಮಾಡಿದರೆ ಆ ಕೂಡಲೇ ಆಹಾರ ನಿರೀಕ್ಷಕರಿಗೆ ಮತ್ತು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು.
3. ನ್ಯಾಯಬೆಲೆ ಅಂಗಡಿಯವರು ಹೆದರಿಸಿ, ಬೆದರಿಸಿದಂತಹ ಸಂದರ್ಭದಲ್ಲಿ ಸಾಧ್ಯವಾದರೆ ವಿಡಿಯೋ ಮಾಡಿಕೊಳ್ಳಬೇಕು ಮತ್ತು ಆಹಾರ ಶಿರಸ್ತೆದಾರರಿಗೆ ಲಿಖಿತವಾಗಿ ದೂರು ನೀಡಬೇಕು.
4. ತಾವು ನೀಡಿದ ದೂರಿಗೆ ಆಹಾರ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದೆ ಇದ್ದ ಸಂದರ್ಭದಲ್ಲಿ ದಯವಿಟ್ಟು KRS ಪಕ್ಷದ (79756-25575) ಅಥವಾ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ (88842-77730) ಸಹಾಯವಾಣಿಗಳನ್ನು ಸಂಪರ್ಕಿಸಿ.
5. ಪಡಿತರ ಪಡೆಯುವುದಕ್ಕಿಂತ ಮೊದಲು ತಮಗೆ ಆ ತಿಂಗಳಿನಲ್ಲಿ ಸಿಗಬೇಕಾದ ಪಡಿತರದ ಪ್ರಮಾಣವನ್ನು ತಿಳಿದುಕೊಂಡಿರುವುದು ಉತ್ತಮ. ಹಾಗಾದಾಗ ಮಾತ್ರ ಅಂಗಡಿಯವರು ತೂಕದಲ್ಲಿ ಅಥವ ಪ್ರಮಾಣದಲ್ಲಿ ಮೋಸ ಮಾಡುವುದು ಗೊತ್ತಾಗುತ್ತದೆ ಮತ್ತು ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಿ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ.
6. ರಾಜ್ಯದ ಯಾವುದೇ ಕಾರ್ಡುದಾರ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತನ್ನ ಪಾಲಿನ ಪಡಿತರ ಪಡೆಯಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಅಂಗಡಿಯವರು ಪಡಿತರ ನೀಡಲು ನಿರಾಕರಿಸುವಂತಿಲ್ಲ. ಹಾಗೆ ನಿರಾಕರಿಸಿದಂತಹ ಸಂದರ್ಭದಲ್ಲಿ ಸ್ಥಳೀಯ ಆಹಾರ ನಿರೀಕ್ಷಕರಿಗೆ ಅಥವ ಆಹಾರ ಇಲಾಖೆಯ ಸಹಾಯವಾಣಿಗೆ ಅಥವಾ KRS ಪಕ್ಷದ ಅಥವಾ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸಹಾಯವಾಣಿಗೆ ಕರೆ ಮಾಡಿ ದೂರು/ಮಾಹಿತಿ ನೀಡಿ.
KRS ಪಕ್ಷವು ಹಮ್ಮಿಕೊಂಡಿರುವ #OperationVeerachari ಕಾರ್ಯಾಚರಣೆಗೆ ಸಾರ್ವಜನಿಕರು, ನ್ಯಾಯಬೆಲೆ ಅಂಗಡಿಗಳವರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು ಮತ್ತು ಎಲ್ಲರೂ ಕೂಡಿ ಅದನ್ನು ಯಶಸ್ವಿಗೊಳಿಸಬೇಕು ಎಂದು ಈ ಮೂಲಕ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮನವಿ ಮಾಡುತ್ತಿದೆ. ಈ ಕಾರ್ಯಾಚರಣೆ ಯಶಸ್ವಿಯಾಗಿ, ಅನ್ನಭಾಗ್ಯ ಯೋಜನೆ ಹಾಗೂ ಪಡಿತರ ವಿತರಣೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಮೋಸ, ವಂಚನೆ ನಿಲ್ಲುವಂತಾದರೆ ಮಾತ್ರ ಸಾಲುಮರದ ವೀರಾಚಾರಿಯವರ ಬಲಿದಾನಕ್ಕೆ ಒಂದು ಅರ್ಥ ಇರುತ್ತದೆ. ಅದಾದಾಗ ಮಾತ್ರ ನಾವು ವೀರಾಚಾರಿಯವರಿಗೆ ಪ್ರಾಮಾಣಿಕ ಗೌರವ ಸಲ್ಲಿಸಿದಂತಾಗುತ್ತದೆ.
ಸಾಲುಮರದ ವೀರಾಚಾರಿ’ಯವರ ಸ್ಮರಣಾರ್ಥ KRS ಪಕ್ಷವು ರಾಜ್ಯಾದ್ಯಂತ ಹಮ್ಮಿಕೊಂಡಿರುವ #OperationVeerachari ಕಾರ್ಯಾಚರಣೆಗೆ KRS ಪಕ್ಷದ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ’ಯವರು ಅಕ್ಟೋಬರ್ 10ರಂದು ತುಮಕೂರಿನಲ್ಲಿ ಚಾಲನೆ ನೀಡಲಿದ್ದಾರೆ. ವೀರಾಚಾರಿಯವರ ಮರಣಕ್ಕೆ ಕಾರಣರಾದ ಪ್ರಮುಖರಲ್ಲಿ ಒಬ್ಬರಾದ ಭ್ರಷ್ಟ ಅಧಿಕಾರಿ, ದಾವಣಗೆರೆ ಜಿಲ್ಲೆಯ ಆಹಾರ ಇಲಾಖೆಯ ಮಾಜಿ ಜಂಟಿ ನಿರ್ದೇಶಕ ಮತ್ತು ತುಮಕೂರು ಜಿಲ್ಲೆಯ ಆಹಾರ ಇಲಾಖೆಯ ಹಾಲಿ ಜಂಟಿ ನಿರ್ದೇಶಕ ಮಂಟೇಸ್ವಾಮಿ’ಯ ಕಚೇರಿಗೆ KRS ಪಕ್ಷದ ಅಧ್ಯಕ್ಷರು ಅಂದು ಪಕ್ಷದ ಕಾರ್ಯಕರ್ತ ಸೈನಿಕರೊಂದಿಗೆ ಭೇಟಿ ಕೊಟ್ಟು ಭ್ರಷ್ಟ ಅಧಿಕಾರಿ ಮಂಟೇಸ್ವಾಮಿ ಮಾಡಿರುವ ಪಾಪವನ್ನು ಅವರಿಗೆ ನೇರವಾಗಿ ಹೇಳುವ ಮೂಲಕ ಮತ್ತು ಪಡಿತರ ವಿತರಣೆಯ ವಿಚಾರಕ್ಕೆ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಅವರಿಗೆ ತಿಳಿಸಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕೆಲಸ ಮಾಡಲು ಆಗ್ರಹಿಸುವ ಮೂಲಕ ಚಾಲನೆ ನೀಡಲಾಗುತ್ತದೆ.
ರಾಜ್ಯದ ಎಲ್ಲಾ ಮಾಧ್ಯಮ ಮಿತ್ರರು ಮತ್ತು ಸಂಸ್ಥೆಗಳು ಈ ನ್ಯಾಯಪರ ಹೋರಾಟವನ್ನು ವಸ್ತುನಿಷ್ಟವಾಗಿ ಮತ್ತು ಪ್ರಾಮಾಣಿಕವಾಗಿ ವರದಿ ಮಾಡಬೇಕೆಂದು ಈ ಮೂಲಕ ಅವರಲ್ಲಿಯೂ ಮನವಿ ಮಾಡಲಾಗುತ್ತಿದೆ.
– ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ



