ವಿಧಾನ ಮಂಡಲ ಅಧಿವೇಶನವನ್ನು 1 ವಾರ ವಿಸ್ತರಿಸಿ: ಸಿದ್ದರಾಮಯ್ಯ

4 years ago

ಬೆಳಗಾವಿ: ಪ್ರವಾಹ, ಅತಿವೃಷ್ಟಿ, ಭ್ರಷ್ಟಾಚಾರ ಸೇರಿದಂತೆ ರಾಜ್ಯದ ಹಲವು ಜ್ವಲಂತ ಸಮಸ್ಯೆಗಳ ಚರ್ಚೆಗೆ ಸಮಯಾವಕಾಶದ ಕೊರತೆ ಎದುರಾಗಿರುವುದರಿಂದ ಅಧಿವೇಶನವನ್ನು ಕನಿಷ್ಠ ಇನ್ನೂ ಒಂದು ವಾರ ಕಾಲ ವಿಸ್ತರಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಭಾಧ್ಯಕ್ಷರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಸಿದ್ದರಾಮಯ್ಯ, 3 ವರ್ಷಗಳ ಬಳಿಕ ಬೆಳಗಾವಿಯಲ್ಲಿ 10 ದಿನಗಳ ಕಾಲದ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಪ್ರವಾಹ, ಅತಿವೃಷ್ಟಿ, ಉತ್ತರ ಕರ್ನಾಟಕದ ನೀರಾವರಿ ವಿಷಯಗಳು, ಕೃಷಿ ಬಿಕ್ಕಟ್ಟುಗಳು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಸಮಸ್ಯೆಗಳು, ಯುವಜನರನ್ನು ಕಾಡುತ್ತಿರುವ ನಿರುದ್ಯೋಗ, ಪ್ರಾದೇಶಿಕ ಅಸಮಾನತೆ, ಭ್ರಷ್ಟಾಚಾರ ಹಾಗೂ ಇನ್ನಿತರೆ ನಾಡಿನ ಪ್ರಮುಖ ವಿಷಯಗಳನ್ನು ಪ್ರಧಾನವಾಗಿ ಚರ್ಚಿಸಬೇಕಾಗಿದೆ ಎಂದು ನೆನಪಿಸಿದ್ದಾರೆ.

ಆದರೆ ಅಧಿವೇಶನ ನಡೆಯುವ ಸಂದರ್ಭದಲ್ಲೇ ದುರುದ್ದೇಶಪೂರ್ವಕವಾಗಿ ಕೆಲವು ದುಷ್ಟ ಶಕ್ತಿಗಳು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗೆ ಹಾನಿ ಮಾಡುವ, ನಾಡ ಧ್ವಜ ಸುಡುವ ಮೂಲಕ ಕನ್ನಡಿಗರ ಭಾವನೆಗಳಿಗೆ ಅಪಮಾನ ಮಾಡುವ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿವೆ. ಜೊತೆಗೆ ಸರ್ಕಾರ ಪ್ರತಿ ಪಕ್ಷಗಳ ನ್ಯಾಯಯುತ ಬೇಡಿಕೆಗಳನ್ನು ಪ್ರಜಾ ತಾಂತ್ರಿಕವಾಗಿ ಬಗೆಹರಿಸದೆ ಮೊಂಡು ಹಠಕ್ಕೆ ಬಿದ್ದಿದೆ. ಇದರಿಂದಾಗಿ ಚರ್ಚೆಗೆ ಬೇಕಾದಷ್ಟು ಸಮಯ ಸಿಗುತ್ತಿಲ್ಲ ಎಂದು ದೂರಿದ್ದಾರೆ.

ಆದ್ದರಿಂದ ಈ ಮೇಲಿನ ಪ್ರಮುಖ ವಿಷಯಗಳನ್ನು ಚರ್ಚಿಸಲು ಅಧಿವೇಶನವನ್ನು ಕನಿಷ್ಠ ಒಂದು ವಾರ ಕಾಲ ವಿಸ್ತರಿಸಲು ಕ್ರಮ ವಹಿಸಬೇಕೆಂದು ಅವರು ಕೋರಿದ್ದಾರೆ.

Leave a Reply