ಬೆಂಗಳೂರು: ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಸಮತಾವಾದದ ಹರಿಕಾರ ವಿಶ್ವ ಗುರು ಬಸವಣ್ಣನವರಿಗೆ ಬೆಳಗಾವಿಯ ಜಿಲ್ಲೆಯ ಖಾನಾಪುರದ ಹಲಸಿಯಲ್ಲಿ ನೀಚ MES ಮತ್ತು ಶಿವಸೇನೆ ಭಯೋತ್ಪಾದಕರು ಮಸಿ ಬಳಿದು ಸಮಸ್ತ ಮಾನವ ಕುಲಕ್ಕೆ ಅವಮಾನ ಎಸೆಗಿದ್ದಾರೆ. ಈ ಕೃತ್ಯವನ್ನ ಎಲ್ಲ ಕನ್ನಡಿಗರು ಖಂಡಿಸಬೇಕು. ಇದನ್ನು ನಾವು ಯಾರೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಜಗತ್ತಿನ ಶ್ರೇಷ್ಠ ಕ್ರಾಂತಿ ಬಸವ ಕ್ರಾಂತಿ, ಯಾರನ್ನೂ ದ್ವೇಷಿಸದೇ, ದಯವೇ ಧರ್ಮದ ಮೂಲವಯ್ಯ ಎಂದು ಸಕಲರನ್ನು ಬಿಗಿದಪ್ಪಿದ ಮಹಾನ್ ಚೇತನಕ್ಕೆ ಮಸಿ ಬಳಿದ ಜನರ ಸಂಸ್ಕೃತಿ ಎಂತದ್ದೆನ್ನುವುದು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಬಸವಣ್ಣ ಬದುಕಿದ್ದಿದ್ದರೆ ಇವರ ದ್ವೇಷ, ಅಸಹನೆ ಕಂಡು ಅನುಕಂಪ ಪಡುತ್ತಿದ್ದರು, ಮರುಗುತ್ತಿದ್ದರು ಎಂದಿದ್ದಾರೆ.
ಖಾನಾಪುರದ ಹಲಸಿ ಹಿಂದೊಮ್ಮೆ ಕನ್ನಡಿಗರ ಬೃಹತ್ ಕದಂಬ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಂತಹ ಕನ್ನಡಿಗರ ಪವಿತ್ರ ಭೂಮಿಯಲ್ಲಿ ವಿಶ್ವಗುರು ಬಸವಣ್ಣನವರಿಗಾದ ಅವಮಾನ ಸಹಿಸಲಸಾಧ್ಯ. ಮಹಾನ್ ಮಾನವತಾವಾದಿಗೆ ಅವಮಾನ ಮಾಡಿದ ನೀಚರಿಗೆ ಎಂತಹ ಘೋರ ಶಿಕ್ಷೆ ನೀಡಿದರೂ ಕಡಿಮೆಯೆ. ಸರ್ಕಾರ ಇವರನ್ನು ಶಿಕ್ಷಿಸದಿದ್ದರೆ, ಜನರೇ ಶಿಕ್ಷಿಸುವ ಕಾಲ ಬಂದಿದೆ ಎಂದಿದ್ದಾರೆ.
ಮಾತನಾಡಿದ್ದು ಸಾಕು, ಹೇಳಿಕೆಗಳನ್ನು ಕೇಳಿ ಸಾಕಾಗಿದೆ. ಸರ್ಕಾರ ಈಗಲಾದರೂ ಕಾರ್ಯೋನ್ಮುಖವಾಗಬೇಕು. ಮುಂದಿನ ೨೪ ಗಂಟೆಯಲ್ಲಿ ಈ ದುಷ್ಕೃತ್ಯ ಎಸಗಿದ ಅಪರಾಧಿಗಳನ್ನ ಸರ್ಕಾರ ಬಂಧಿಸಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಗಡಿಪಾರು ಮಾಡಬೇಕು. ಬಸವಣ್ಣನವರ ಮೇಲೆ ಈ ಸರ್ಕಾರಕ್ಕೆ ಕಿಂಚಿತ್ತು ಗೌರವ ಇದ್ದರೆ ಈ ಕೆಲಸ ತುರ್ತಾಗಿ ಮಾಡಲಿ ಎಂದು ಒತ್ತಾಯಿಸಿದ್ದಾರೆ.



