ಸೆ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

2 years ago

ಜಿಲ್ಲೆಯ 55 ಕೀ.ಮಿ ಉದ್ದದ ಮಾನವ ಸರಪಳಿ ನಿರ್ಮಾಣ

ಸುಮಾರು 55 ಸಾವಿರ ಜನರು ಭಾಗಿ: ದಿವ್ಯ ಪ್ರಭು

ಧಾರವಾಡ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಪ್ರತಿ ವರ್ಷ ಸೆಪ್ಟೆಂಬರ್ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದರಂತೆ ರಾಜ್ಯ ಸರಕಾರ ಅತ್ಯಂತ ವಿಶಿಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಆಚರಿಸಲು ನಿರ್ದೇಶಿಸಿದ್ದು, ಅಂದು ಬೀದರ್ ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ತೇಗೂರ ಗ್ರಾಮದಿಂದ ಮಾವಿನಕೊಪ್ಪ ಗ್ರಾಮವರೆಗೆ ಸುಮಾರು 55 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಈ ಕುರಿತು ಅಧಿಕಾರಿಗಳು ಪೂರ್ವಸಿದ್ದತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದ ರೂಪುರೇಷಗಳನ್ನು ಸಿದ್ದಪಡಿಸುವ ಕುರಿತು ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಸೆಪ್ಟೆಂಬರ 15 ರಂದು ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕು ಮೂಲಕ ಧಾರವಾಡ ಜಿಲ್ಲೆಯ ತೇಗೂರು ಗ್ರಾಮದ ಮೂಲಕ ಮಾನವ ಸರಪಳಿ ಆರಂಭವಾಗುತ್ತದೆ. ಅಲ್ಲಿಂದ ಧಾರವಾಡ ತಾಲೂಕಿನ ಮಾವಿನಕೊಪ್ಪ ಗ್ರಾಮದ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಮಾನವ ಸರಪಳಿ ಮುಂದುವರಿಯುತ್ತದೆ ಎಂದರು.

ಜಿಲ್ಲೆಯ ಒಂಬತ್ತು ಗ್ರಾಮ ಪಂಚಾಯತಗಳ 18 ಗ್ರಾಮಗಳಲ್ಲಿ ಮತ್ತು ಧಾರವಾಡ ನಗರದಲ್ಲಿ ಮಾನವ ಸರಪಳಿ ಮಾಡಲಾಗುತ್ತಿದೆ. ಮಾನವ ಸರಪಳಿಯಲ್ಲಿ ವಿದ್ಯಾರ್ಥಿಗಳು, ಎನ್.ಸಿ.ಸಿ., ಸ್ಕೌಟ್ಸ್, ಹೋಮ್ ಗಾರ್ಡ್ಸ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಮುಖಂಡರು, ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಒಟ್ಟು 55 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದರು.

ಬೆಳಿಗ್ಗೆ 8:30 ಕ್ಕೆ ಮಾನವ ಸರಪಳಿ: ರಾಜ್ಯ ಸರಕಾರದ ನಿರ್ದೇಶನದಂತೆ ಸೆಪ್ಟೆಂಬರ 15 ರಂದು ಜಿಲ್ಲೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಮಾನವ ಸರಪಳಿ ಆರಂಭವಾಗಿ ಬೆಳಿಗ್ಗೆ 8:30 ಗೆ ಮಾನವ ಸರಪಳಿ ನಿರ್ಮಾಣವಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯಿಂದ ಬೆಳಿಗ್ಗೆ 8:30 ರಿಂದ 8:40 ರವರೆಗೆ ಮಾನವ ಸರಪಳಿ ಚಿತ್ರೀಕರಣ ಮಾಡಲಾಗುತ್ತದೆ. ಬೆಳಿಗ್ಗೆ 8:45 ಗಂಟೆಗೆ ಮಾನವ ಸರಪಳಿಯಲ್ಲಿ ಪಾಲ್ಗೊಂಡ ಸರ್ವರಿಂದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಜರುಗುತ್ತದೆ. 9 ಗಂಟೆ ಸುಮಾರಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ ಎಂದರು.

ಅಧಿಕಾರಿಗಳ ನೇಮಕ: ಜಿಲ್ಲೆಯ 55 ಕೀ.ಮಿ. ಉದ್ದದ ಮಾನವ ಸರಪಳಿಯಲ್ಲಿ ಭಾಗವಹಿಸುವ 55 ಸಾವಿರ ಜನರ ಶಿಸ್ತುಬದ್ದ ಭಾಗವಹಿಸುವಿಕೆಗೆ ಮೇಲುಸ್ತುವಾರಿಗಾಗಿ ಪ್ರತಿ 100 ಮೀಟರಗೆ ಒಬ್ಬ ವಿಭಾಗ ಅಧಿಕಾರಿಯಂತೆ ಒಟ್ಟು 510 ಅಧಿಕಾರಿಗಳು, ಪ್ರತಿ ಕಿ.ಮೀಟರಗೆ ಒಬ್ಬ ಪ್ರದೇಶ ಅಧಿಕಾರಿಯಂತೆ ಒಟ್ಟು 51 ಅಧಿಕಾರಿಗಳು, ಪ್ರತಿ 2 ಕಿ.ಮೀ ಮೀಟರಗೆ ಒಬ್ಬ ತಾಲೂಕು ಮಟ್ಟದ ಅಧಿಕಾರಿಯಂತೆ ಒಟ್ಟು 26 ಅಧಿಕಾರಿಗಳು ಮತ್ತು ಪ್ರತಿ 5 ಕಿ.ಮೀಟರ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯಂತೆ ಒಟ್ಟು 12 ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಮಾನವ ಸರಪಳಿ ಸಂಚಾರ ಮಾರ್ಗ: ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ಮೂಲಕ ಧಾರವಾಡ ಜಿಲ್ಲೆಯ ತೇಗೂರ ಗ್ರಾಮದ ಮೂಲಕ ಮಾನವ ಸರಪಳಿ ಆರಂಭವಾಗುತ್ತದೆ. ಮಾನವ ಸರಪಳಿಯು ಧಾರವಾಡ ಜಿಲ್ಲೆಯ ತೇಗೂರ, ಗುಳೇದಕೊಪ್ಪ, ವೆಂಕಟಾಪೂರ, ಶಿಂಗನಹಳ್ಳಿ, ಕೋಟೂರ, ಬೇಲೂರ ಗ್ರಾಮ, ಮಮ್ಮಿಗಟ್ಟಿ, ಕೆ.ಎಂ.ನರೇಂದ್ರ, ಜುಬ್ಲಿ ಸರ್ಕಲ್, ಸಲಕಿನಕೊಪ್ಪ, ಬಾಡ, ಬೆನಕನಕಟ್ಟಿ, ನಿಗದಿ, ಬೋಮ್ಮರಸಿಕೊಪ್ಪ, ಮುರಕಟ್ಟಿ, ಹಳ್ಳಿಗೇರಿ, ಹೊಲ್ತಿಕೋಟಿ ಗ್ರಾಮದಿಂದ ಮಾವಿನಕೊಪ್ಪ ಗ್ರಾಮದಿಂದ ಹಳಿಯಾಳ ತಾಲೂಕು ಮೂಲಕ ಮಾನವ ಸರಪಳಿಯು ಉತ್ತರ ಕನ್ನಡ ಜಿಲ್ಲೆಯನ್ನು ಸೇರುತ್ತದೆ ಎಂದರು.

ಇದೊಂದು ಮಹತ್ವದ ಕಾರ್ಯಕ್ರಮವಾಗಿರುವುದರಿಂದ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಮತ್ತು ಜಿಲ್ಲಾಡಳಿತ ಸಿದ್ದಪಡಿಸಿರುವ ರೂಪುರೇಷೆ ಪ್ರಕಾರ ನೇಮಕಗೊಂಡಿರುವ ಅಧಿಕಾರಿಗಳು ಮತ್ತು ಇಲಾಖೆಗಳು ಕಾರ್ಯ ನಿರ್ವಹಿಸಬೇಕು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್ ವೇದಿಕೆಯಲ್ಲಿದ್ದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭಾ, ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವ ಎ.ಚನ್ನಪ್ಪ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಮಹಾನಗರ ಪಾಲಿಕೆಯ ಅಧೀಕ್ಷಕ ಇಂಜೀಯರ್ ತಿವ್ಮ್ಮಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ತಹಶಿಲ್ದಾರ ಡಿ.ಎಚ್.ಹೂಗಾರ, ಬಸವರಾಜ ಬೆಣ್ಣಿಶಿರೂರ, ಡಿಎಚ್‍ಓ ಡಾ.ಶಶಿ ಪಾಟೀಲ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಂಗಾಧರ ಕಂದಕೂರ, ಪ್ರಶಾಂತ ತುರಕಾಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಓ ಅವರು ಸೇರಿ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.

Leave a Reply