ಬೆಳಗಾವಿ ಛಳಿಗಾಲದ ಅಧಿವೇಶನಕ್ಕೆ ವೇದಿಕೆ ಸಜ್ಜು

3 years ago

#Belgavi #sets #stage #wintersession

ಬೆಂಗಳೂರು: ಬೆಳಗಾವಿಯ ಸುವರ್ಣ ವಿಕಾಸ ಸೌಧದದಲ್ಲಿ ಡಿ. 4ರಿಂದ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಆಡಳಿತ – ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗುವ ಎಲ್ಲ ಸಾಧ್ಯತೆಗಳಿವೆ.

ಪಂಚರಾಜ್ಯಗಳ ಚುನಾವಣೆಯ ಪೈಕಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಡ ರಾಜ್ಯಗಳಲ್ಲಿ ಗೆಲುವಿನ ನಗೆ ಬೀಗಿರುವ ಬಿಜೆಪಿ ಸರ್ಕಾರದ ಸುಮಾರು 60 ವೈಫಲ್ಯಗಳನ್ನು ಮುಂದಿಟ್ಟು ಮುಗಿಬೀಳಲು ಸನ್ನದ್ಧವಾಗಿದೆ. ಸರ್ಕಾರವನ್ನು ಮುಜುಗರದಿಂದ ರಕ್ಷಿಸಿಕೊಂಡು ವಿಪಕ್ಷ ಬಿಜೆಪಿಯನ್ನು ಸದನದಲ್ಲೇ ಕಟ್ಟಿ ಹಾಕಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

ಆರ್.ಅಶೋಕ್ ಮೊದಲ ಬಾರಿ ವಿಪಕ್ಷ ನಾಯಕನಾಗಿ ಅಧಿವೇಶನದ ಕಲಾಪದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ದಾಳಿ ನಡೆಸಲು ಸನ್ನದ್ಧರಾಗಿದ್ದಾರೆ. ಈ ನಡುವೆ ವಿಧಾನಪರಿಷತ್ ವಿಪಕ್ಷದ ನಾಯಕ, ಉಪನಾಯಕ, ಮುಖ್ಯ ಸಚೇತಕ ನೇಮಕವಾಗುವ ಸಾಧ್ಯತೆ ಕೂಡ ಇದೆ.

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಸರ್ಕಾರದ ವಿರುದ್ಧ ಸದನದಲ್ಲಿ ಉಭಯ ಪಕ್ಷಗಳು ಜಂಟಿ ಹೋರಾಟ ನಡೆಸಲು ಮುಂದಾಗಿವೆ ಕೆಲವು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದೆ. ಜೆಡಿಎಸ್ ನಾಯಕ ಕುಮಾರಸ್ವಾಮಿ, ಬಿಜೆಪಿಯ ಅಶೋಕ್ ಹಾಗೂ ವಿಜಯೇಂದ್ರ ಸಭೆ ನಡೆಸಿ, ಸದನದಲ್ಲಿ ಜಂಟಿ ಹೋರಾಟ ನಡಸಲು ಕಾರ್ಯತಂತ್ರ ರೂಪಿಸಿ ವಾಗ್ದಾಳಿ ನಡೆಸಲು ಸಿದ್ಧರಾಗಿದ್ದಾರೆ.

ಈ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳಿಗೆ ಸಾಕಷ್ಟು ಅಸ್ತ್ರಗಳು ಸಿಕ್ಕಿವೆ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಬರಗಾಲದಿಂದ ತತ್ತರಿಸಿರುವ ರೈತರಿಗೆ ಸರ್ಕಾರದ ವತಿಯಿಂದ ಕನಿಷ್ಠ 1 ಸಾವಿರದಿಂದ ಗರಿಷ್ಠ 2 ಸಾವಿರ ಹಣ ನೀಡುವುದಾಗಿ ಘೋಷಿಸಿದ್ದಾರೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಸಂಕಷ್ಟದಲ್ಲಿರುವ ರೈತರ ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂ. ಹಣವನ್ನು ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ಹೋರಾಟ ನಡೆಸಲು ವಿಪಕ್ಷಗಳು ತೀರ್ಮಾನ ಮಾಡಿವೆ.

ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ರೈತರಿಗೆ ನಿರಂತರವಾಗಿ ಆರು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡದಿರುವುದು ಸೇರಿದಂತೆ ಕೆಲವು ಪ್ರಚಲಿತ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ಸಜ್ಜಾಗಿವೆ.

ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ವಿಧಾನಸಭೆಯ ಸ್ಪೀಕರ್ ಸ್ಥಾನಮಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ವಸತಿ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ವಿಪಕ್ಷಗಳು ತೀರ್ಮಾನ ಮಾಡಿವೆ. ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿರುವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿದ್ದು, ಸರ್ಕಾರ ಮಣಿಯದೇ ಹೋದಲ್ಲಿ ಸದನದಲ್ಲಿ ಹೋರಾಟ ನಡೆಸಲಿವೆ.

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಮತ್ತು ವಿಪಕ್ಷ ನಾಯಕನ ನೇಮಕ ಪ್ರಕ್ರಿಯೆ ಕುರಿತು ತೀವ್ರ ಅಸಮಾಧಾನ ಹೊಂದಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್ ವಿಪಕ್ಷ ನಾಯಕ ಅಶೋಕ್ ಅವರ ಮಾತುಗಳಿಗೆ ಎಷ್ಟರಮಟ್ಟಿಗೆ ಕಿವಿಗೊಡುತ್ತಾರೆ, ಸದನದಲ್ಲಿ ನಾಯಕತ್ವಕ್ಕೆ ಉಂಟುಮಾಡುವ ಮುಜುಗರವನ್ನು ಯಾವ ರೀತಿ ಎದುರಿಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.

Leave a Reply