ಧಾರವಾಡ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯದವರ ಕುಂದು ಕೊರತೆಗಳ ಸಭೆ ಜರುಗಿತು.
ಸಭೆಯಲ್ಲಿ ಸಮುದಾಯದ ವ್ಯಕ್ತಿಗಳ ವೈಯಕ್ತಿಕ ಸಮಸ್ಯೆಗಳನ್ನು, ಸಮುದಾಯದ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಸಂಬಂಧಿಸಿದ ಅಧಿಕಾರಿಗಳಿಗೆ ಪ್ರತಿ ಕುಂದುಕೊರತೆಗಳನ್ನು ಸೂಕ್ತವಾಗಿ ಸ್ಪಂದಿಸಿ, ಪರಿಹರಿಸಬೇಕು. ಸರಕಾರದ ಹಂತದಲ್ಲಿ ಕ್ರಮ ಅಗತ್ಯವಿದ್ದರೆ, ವರದಿಯೊಂದಿಗೆ ಶಿಪಾರಸ್ಸು ಮಾಡುವಂತೆ ನಿರ್ದೇಶಿಸಿದರು.
ಎಲ್ಲ ತಹಸಿಲ್ದಾರರು ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯದವರ ಕುಂದುಕೊರತೆಗಳ ಸಭೆಯನ್ನು ತಾಲೂಕು ಮಟ್ಟದಲ್ಲಿ ಜರುಗಿಸಲು ಸೂಚಿಸಿದರು.
ಹುಬ್ಬಳಿಯ ರಾಜಗೋಪಾಲ ನಗರದ ಖಾಸಗಿ ಅನುದಾನಿತ ಶಾಲೆಯ ಶಿಕ್ಷಕರ ನೇಮಕ, ಕುಡಿಯುವ ನೀರು ವ್ಯವಸ್ಥೆ ಮತ್ತು ಸಂಸ್ಥೆಯ ಹೆಸರು ತಿದ್ದುಪಡಿ ಕುರಿತು ಶಿವಶಂಕರ ಭಂಡಾರಿ ಮನವಿ ಸಲ್ಲಿಸಿದರು. ಈ ಕುರಿತು ಪರಿಶೀಲಿಸಿ ತಕ್ಷಣ ಕ್ರಮವಹಿಸಲು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ ಜಿಲ್ಲಾಧಿಕಾರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಮನ್ವಯ ಸಾಧಿಸಲು ತಿಳಿಸಿದರು.
ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ವಿವಿಧ ನಗರಗಳಲ್ಲಿ ಆಶ್ರಯ ಹಾಗೂ ವಿವಿಧ ವಸತಿ ಯೋಜನೆ ಮನೆಗಳ ಕುರಿತು ಈಗಾಗಲೇ ಅಧಿಕಾರಿಗಳ ನೇತೃತ್ವದಲ್ಲಿ ಸಮೀಕ್ಷೆ ಮಾಡಲಾಗಿದ್ದು, ಬಾಡಿಗೆದಾರರು, ಮಾಲೀಕರು, ಬೀಗ ಹಾಕಿದ ಮನೆಗಳು ಮತ್ತು ಮಾರಾಟ ಮಾಡಿದ ಮನೆಗಳ ಕುರಿತು ಸಮೀಕ್ಷಾ ವರದಿ ತಯಾರಿಸಿ, ಜಿಲ್ಲಾಡಳಿತಕ್ಕೆ ಹಾಗೂ ಸಚಿವರಿಗೆ ಸಲ್ಲಿಸಲಾಗುವುದು ಎಂದರು.
ವಿವಿಧ ಕುಂದುಕೊರತೆಗಳ ಕುರಿತು ದಾನಪ್ಪ ಕಬ್ಬೇರ, ಮೋಹನ ಹಿರೇಮನಿ, ಆನಂದ ಅದ್ವಾನಿ, ಅಶೋಕ ದೊಡಮನಿ, ಲಕ್ಷ್ಮಣ ದೊಡಮನಿ, ಚಿಕ್ಕತುಂಬಳ, ಲಕ್ಷ್ಮಣ ಬಕ್ಕಾಯಿ, ಕಲ್ಮೇಶ ಹಾದಿಮನಿ, ಗುರುನಾಥ ಉಳ್ಳಿಕಾಶಿ, ತಿಪ್ಪಣ್ಣ ತಳವಾರ, ಸೇರಿದಂತೆ ವಿವಿಧ ಮುಖಂಡರು ಮಾತನಾಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲೆಯ ಕಲಘಟಗಿ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಹುಬ್ಬಳ್ಳಿ, ಅಳ್ನಾವರ, ಧಾರವಾಡ ತಾಲೂಕುಗಳ ವಿವಿಧ ಗ್ರಾಮಗಳ ಮತ್ತು ನಗರಗಳ ದಲಿತ ಸಂಘಟನೆಗಳ ಪ್ರತಿನಿಧಿಗಳು, ಮುಖಂಡರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಸಮುದಾಯದವರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಸಹಾಯಕ ಪೆÇಲೀಸ್ ಆಯುಕ್ತ ಪ್ರಶಾಂತ ಸಿದ್ಧನಗೌಡರ ಇದ್ದರು. ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ ಅಲ್ಲಾ ಭಕ್ಷ್ ಎಂ.ಎಸ್. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.




