ಪಿಜಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೆ ಸಿದ್ಧತೆ

2 years ago

#Preparation #release #new #guidelines #PG #regulation #bbmp #Bangalore

ಬೆಂಗಳೂರು: ಮಹಾನಗರ ಬೆಂಗಳೂರಿನ ಪಿ.ಜಿ.ಗಳಲ್ಲಿನ ಅಕ್ರಮಗಳು ಹಾಗೂ ಅವ್ಯವಸ್ಥೆಗಳಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ.

ಪಿಜಿಗಳಲ್ಲಿ ಅಕ್ರಮಗಳು ಹಾಗೂ ಅವ್ಯವಸ್ಥೆ ಕುರಿತು ಪಿಜಿ ಸುತ್ತಮುತ್ತಲ ಮನೆಯವರಿಂದ ಬಿಬಿಎಂಪಿಗೆ ಬರುವ ದೂರುಗಳ ಹಿನ್ನೆಲೆಯಲ್ಲಿ ಬಿಬಿಎಂಪಿ ಪಿಜಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಇದರ ಬೆನ್ನಲ್ಲೇ ನಗರದ ಪಿಜಿಗಳ ಅಂಕಿ ಅಂಶ ಕಲೆ ಹಾಕಲು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸಲಹೆ ನೀಡಿದ್ದಾರೆ. ಜೊತೆಗೆ ಪಿಜಿಗಳಿಗೆ ವೆಬ್ ಪೋರ್ಟಲ್ ನೀಡಲಾಗಿದ್ದು ಅದಕ್ಕೆ ಪಿಜಿ ಮಾಲೀಕರು ಮಾಹಿತಿ ಅಪ್ಲೋಡ್ ಮಾಡಬಹುದು ಎಂದು ಸೂಚನೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ ದಯಾನಂದ್, ನಗರದಲ್ಲಿ ಸುಮಾರು 5 ಸಾವಿರ ಪಿಜಿಗಳಿವೆ. ಪಿಜಿಗಳಲ್ಲಿ ಸುಮಾರು 4 ಲಕ್ಷ ಜನ ವಾಸವಾಗಿದ್ದಾರೆ. ಬೆಂಗಳೂರಿನ ಪೂರ್ವ, ಸೌತ್ ಈಸ್ಟ್, ವೈಟ್ ಫೀಲ್ಡ್ ಭಾಗದಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಐಟಿ ಬಿಟಿ ಕಂಪನಿ ನೌಕರರು ಹೆಚ್ಚಾಗಿ ಪಿಜಿಗಳಲ್ಲಿ ವಾಸ ಮಾಡುತ್ತಿದ್ದಾರೆ ಎಂದರು.

ಪಿಜಿಗಳಲ್ಲಿ ವಾಸಿಸುತ್ತಿರುವವರ ವಿವರ ಹೆಚ್ಚು ಗೊತ್ತಿಲ್ಲ. ಹೀಗಾಗಿ ಕಾನೂನಿನ ವಿಚಾರದಲ್ಲಿ ತೊಡಕುಗಳಾಗುತ್ತಿವೆ. ಪಿಜಿ, ಹಾಸ್ಟೆಲ್ ಗಳಿಗೆ ವೆಬ್ ಪೋರ್ಟಲ್ ಸಜೆಸ್ಟ್ ಮಾಡಿದ್ದೀವಿ. ಪಿಜಿ ಮಾಲೀಕರು ಇದಕ್ಕೆ ಮಾಹಿತಿ ಅಪ್ಲೋಡ್ ಮಾಡಬಹುದು. ಆದರೆ ಇದು ಕಡ್ಡಾಯವೇನಲ್ಲ. ಮಾಲೀಕರೇ ಸ್ವಯಂಪ್ರೇರಿತವಾಗಿ ಮಾಡಬಹುದು. ಮಾರತ್ತಹಳ್ಳಿಯ 167 ಪಿಜಿಗಳಲ್ಲಿ ಇದನ್ನ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಈ ಯೋಜನೆ ಈಗಾಗಲೇ ದೇಶದ ಹಲವಾರು ರಾಜ್ಯದಲ್ಲಿ ಇದೆ. ಇದರಿಂದ ಯಾರು ಬರಲಿದ್ದಾರೆ, ಯಾರು ಪಿಜಿಗಳಲ್ಲಿ ಇರಲಿದ್ದಾರೆ ಎಂಬ ಮಾಹಿತಿ ದೊರೆಯಲಿದೆ ಎಂದರು.

ನಗರದಲ್ಲಿ ಬಿಬಿಎಂಪಿಯಿಂದ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಆ ಬಳಿಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಮಾನವಸಂಪನ್ಮೂಲಗಳಿಗೆ ಅನುಗುಣವಾಗುವ ರೀತಿಯಲ್ಲಿ ಪಿಜಿಯಗಳನ್ನು ನಿರ್ವಹಿಸುತ್ತಿಲ್ಲ. ದುಡ್ಡಿನ ಆಸೆಗೆ ನಿಯಮ ಮೀರಿ ಒಂದು ರೂಂನಲ್ಲಿ ಹೆಚ್ಚಿನ ಜನರಿಗೆ ಅವಕಾಶ ನೀಡಲಾಗುತ್ತಿದೆ. ಮೂಲ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಒಂದು ಪಿಜಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ವ್ಯವಸ್ಥೆ ಇಲ್ಲ. ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ನಿಯಮ ಮೀರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಹೀಗೆ ಪಿಜಿಗಳಿರುವ ಏರಿಯಾಗಳಿಂದ ಸಾರ್ವಜನಿಕರಿಂದ ಸಾಕಷ್ಟು ದೂರುಬಂದಿವೆ. ಈ ನಿಟ್ಟಿನಲ್ಲಿ ಪಿಜಿಗಳಿಗೆ ಬಿಬಿಎಂಪಿಯಿಂದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ನಿರ್ಧಾರ ಕೈಗೊಂಡಿದ್ದು, ನಗರದಲ್ಲಿ ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಆ ಬಳಿಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದರು.

Leave a Reply