ಸಂಡೂರು ಭೂ ಹೋರಾಟ ಕೃತಿ ಮರುಮುದ್ರಣಕ್ಕೆ ಅಣಿಯಾಗುತ್ತಿದೆ

3 years ago

#SandurBhuBhoohorata #Kriti #ready #reprint #arunjaladakudligi #bookpromotion

ಪ್ರಿಯರೆ, ನಾನು ಆಗ 2006 ರ ಸಮಯ. ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ ಎಂ.ಎ. ಮುಗಿಸಿ ಪಿಹೆಚ್.ಡಿ ಸಂಶೋಧನೆ ನಡೆಸುತ್ತಿದ್ದೆ. ಆಗ Rahamath Tarikere  ಸರ್ ರಾಮ ಮನೋಹರ ಲೋಹಿಯ ಅಧ್ಯಯನ ಪೀಠದ ಸಂಚಾಲಕರಾಗಿದ್ದರು. ಪ್ರೊ.ಬಿ.ಎ.ವಿವೇಕ ರೈ ಕುಲಪತಿಗಳಾಗಿದ್ದರು. ಲೋಹಿಯಾ ಅಧ್ಯಯನ ಪೀಠದಿಂದ ಸಮಾಜವಾದಿಗಳು ನಡೆಸಿದ ಭೂ ಹೋರಾಟಗಳ ಬಗ್ಗೆ ಪುಸ್ತಕ ಬರೆಸುವುದು ಮತ್ತು ಹಿರಿಯ ಸಮಾಜವಾದಿಗಳ‌ ಸಂದರ್ಶನ ಮಾಡಿಸುವುದು ಎಂದು ತೀರ್ಮಾನ ಮಾಡಿ, ನನಗೆ ಸಂಡೂರು ಭೂ ಹೋರಾಟ ಕೃತಿ ಬರೆಯಲು ಅವಕಾಶ ಕೊಟ್ಟರು. ಹೆಬ್ಬಳ್ಳಿ ಭೂ ಹೋರಾಟದ ಬಗ್ಗೆ ಕೊಟ್ಟೂರಿನ ಸತೀಶ್ ಪಾಟೀಲ್ Satish Patil , ಸಮಾಜವಾದಿಗಳ ಸಂದರ್ಶನದ ಸಂಪುಟದ ಜವಾಬ್ದಾರಿಯನ್ನು ಅಣ್ಣ Peer Bavaji  ಅವರಿಗೆ ವಹಿಸಲಾಯಿತು. ಆಗ ನನಗೆ ಲಭ್ಯವಿದ್ದ ದಾಖಲೆ ಅಂದರೆ ಸಮಾಜವಾದಿಗಳಾದ ಹನುಮಂತು ಅವರು ಸಂಡೂರು ಭೂ ಹೋರಾಟದ ಬಗ್ಗೆ ದಾಖಲಿಸಿದ ಕಿರು ಹೊತ್ತಿಗೆ ಮಾತ್ರ. ಈ ಕೃತಿಯ ಒಂದೊಂದು ಹೆಸರುಗಳನ್ನು/ದಾಖಲೆಗಳನ್ನು ಹುಡುಕಿಕೊಂಡು ಅಕ್ಷರಶಃ ಅಲೆದೆ. ಸಂಡೂರಿನಲ್ಲಿ ಈ ಹೋರಾಟದಲ್ಲಿ ಭಾಗವಹಿಸಿದವರ ಎಲ್ಲರ ಮನೆಗಳ ಹುಡುಕಿಕೊಂಡು ಹೋದೆ. ಬಹುಪಾಲು ಹೋರಾಟಗಾರರು ತೀರಿ ಹೋಗಿದ್ದರು. ಮತ್ತೆ ಕೆಲವರು ಕಣ್ಣು ಕಾಣದೆ ಕಿವಿ ಕೇಳದೆ ನೆನಪುಗಳೆಲ್ಲಾ ಮಾಸಿದ ಮಗುವಿನಂತಿದ್ದರು. ಉಳಿದ ಒಂದಷ್ಟು ಜನರ ಬಳಿ ಮಾತಾಡಿದೆ. ಆಗ ಕಾಗೋಡಿಗೆ ಹೋಗಿ ತಿಮ್ಮಪ್ಪರನ್ನು ಸಂದರ್ಶನ ಮಾಡಿದೆ, ಎಂ.ಪಿ.ಪ್ರಕಾಶ್, ಯು.ಆರ್.ಅನಂತಮೂರ್ತಿ, ಕೆ‌.ಜಿ.ಮಹೇಶ್ವರಪ್ಪ ಮೊದಲಾದವರನ್ನು ಬೇಟಿ ಮಾಡಿದೆ. ವಿಧಾನಸೌಧದಲ್ಲಿ ಕನಿಷ್ಟ 15 ದಿನ ಕೂತು 1972-74 ರ ತನಕದ ಅಸೆಂಬ್ಲಿ ಡಿಬೇಟ್ ಸಂಪುಟಗಳನ್ನು ಅಧ್ಯಯನ ಮಾಡಿದೆ. ಎಲಿಗಾರ ತಿಮ್ಮಪ್ಪನ ಮಗನಾದ ಎಲಿಗಾರ ನಾಗರಾಜಪ್ಪ ಅವರನ್ನು ಸಂದರ್ಶಿಸಿದೆ. ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕದ ಕಛೇರಿ, ಬೆಂಗಳೂರಿನ ಕನ್ನಡ ಪ್ರಭಾ ಕಛೇರಿಗೆ ಬೇಟಿ ನೀಡಿ 1973 ಪತ್ರಿಕೆಗಳನ್ನು ಪರಿಶೀಲಿಸಿದೆ. ಹುಬ್ಬಳ್ಳಿಯ ಪಾಟೀಲ ಪುಟ್ಟಪ್ಪ ಅವರನ್ನು ಸಂದರ್ಶನ ಮಾಡಿ ಅವರ 1973 ರ ಪ್ರಪಂಚ ಪತ್ರಿಕೆಯನ್ನು ಪರಿಶೀಲಿಸಿದೆ. ಕೋ.ಚೆನ್ನಬಸಪ್ಪ ಅವರನ್ನು ಮಾತನಾಡಿಸಿ ಅವರ ರೈತ ಪತ್ರಿಕೆಯನ್ನು ಪರಿಶೀಲಿಸಿದ್ದೆ. ಬಳ್ಳಾರಿಯಲ್ಲಿ ಯಜಮಾನ ಶಾಂತರುದ್ರಪ್ಪ ಮತ್ತು ದಾಸನ್ ಸಾಲೊಮನ್ ಅವರ ಮನೆಗಳ ಪತ್ತೆಹಚ್ಚಿ ಮೂಲ‌ ದಾಖಲೆಗಳನ್ನು ಹುಡುಕಾಡಿದೆ. ಯಜಮಾನರು ಸಂಗ್ರಹಿಸಿದ ದಾಖಲೆಗಳು ಸಂಡೂರು ಭೂ ಹೋರಾಟ ಕೃತಿ ಬರೆಯಲು ತುಂಬಾ ಸಹಾಯಕವಾದವು. ಹೀಗೆ ಸಾಕಷ್ಟು ಕಷ್ಟಪಟ್ಟು ದಾಖಲೆಗಳನ್ನು ಸಂಗ್ರಹಿಸಿ ರಹಮತ್ ಸರ್ ಎದುರು ಗುಡ್ಡೆ ಹಾಕಿದಾಗ ಸರ್ ನಿಜಕ್ಕೂ ಅಚ್ಚರಿ ಪಟ್ಟು ಸಂತೋಷದಿಂದ ತೇಲಿಹೋಗಿದ್ದರು. ಪುಸ್ತಕ ಬರೆಯಲು ಹಂತ ಹಂತವಾಗಿ ರಹಮತ್ ಸರ್ ಮಾರ್ಗದರ್ಶನ ಮಾಡಿದರು. ಹೀಗೆ ರೂಪುಗೊಂಡದ್ದು ನನ್ನ ಮೊದಲ‌ ಸಂಶೋಧನ ಕೃತಿ ‘ ಸಂಡೂರು ಭೂ ಹೋರಾಟ’  (2007).

ಈ ಕೃತಿಗೆ ಸಾಕಷ್ಟು ಮೆಚ್ಚುಗೆ ಬಂತು. ಡಿ.ಎಸ್.ನಾಗಭೂಷಣ ಸರ್ ಟೀಕೆಯೊಂದಿಗೆ ವಿಕ್ರಾಂತ ಕರ್ನಾಟಕದಲ್ಲಿ ವಿಮರ್ಶೆ ಬರೆದರು. ವಿಕ್ರಮ ವಿಸಾಜಿ ಆಗಿನ ಅಗ್ನಿ ಪತ್ರಿಕೆಯಲ್ಲಿಯೂ, ಜಿ.ಪಿ.ಬಸವರಾಜು ಅವರು ಮಯೂರದಲ್ಲಿಯೂ, Vikas Negiloni ಉದಯವಾಣಿಯಲ್ಲಿಯೂ ವಿಮರ್ಶೆ ಪ್ರಕಟಿಸಿದರು. ಗೆಳೆಯ Ghanashyam Dm ಆಗಿನ ವಿಜಯ ಟೈಮ್ಸ್ ಇಂಗ್ಲೀಷ್ ಪೇಪರಲ್ಲಿ ಈ ಹೋರಾಟದ ಬಗ್ಗೆ ನನ್ನ ಲೇಖನ ಅನುವಾದ ಮಾಡಿ ಹಾಕಿದ.

ಹೀಗೆ ಸುಧಾ, ಮಯೂರ, ಅಗ್ನಿ, ಉದಯವಾಣಿ, ಕನ್ನಡ ಪ್ರಭ, ಹೀಗೆ ಎಲ್ಲಾ ಪತ್ರಿಕೆಗಳಲ್ಲಿ ಪುಸ್ತಕದ ಪರಿಚಯ ಪ್ರಕಟವಾಯ್ತು. ಗುಲ್ಬರ್ಗಾ ವಿವಿ ರಾಜ್ಯೋತ್ಸವ ಪ್ರಶಸ್ತಿ ನೀಡಿತು. ಅಂತೆಯೇ ಕಸಾಪದ ಮೊದಲ ನೃಪತುಂಗ ಪ್ರಶಸ್ತಿ ಪಡೆದ ಪಾಟೀಲ ಪುಟ್ಟಪ್ಪ ಅವರ ಜತೆ ಈ ಕೃತಿಗೆ ಅರಳು ಪ್ರಶಸ್ತಿಯೂ ಬಂದಿತು. (ಈ ಪ್ರಶಸ್ತಿಯನ್ನು ಎಂ.ಎಂ.ಕಲಬುರ್ಗಿ ಅವರ ಕೊಲೆಯ ತನಿಕೆಯ ವಿಳಂಬವನ್ನು ವಿರೋಧಿಸಿ ಸಾಹಿತ್ಯ ಪರಿಷತ್ತಿಗೆ ವಾಪಾಸ್ ಮರಳಿಸಿದ್ದೆ)  ಈ ಕೃತಿ ಪ್ರತಿಗಳು ಮುಗಿದು 2 ವರ್ಷಗಳೆ ಆಗಿತ್ತು.

ಇದೀಗ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಮರು ಮುದ್ರಿಸುತ್ತಿದೆ. ಇಷ್ಟದ ಮೇಷ್ಟ್ರು ಮತ್ತು ಮಾನ್ಯ ಕುಲಪತಿಗಳಾದ Paramashiva Murthy  ಸರ್ ಮರುಮುದ್ರಣಕ್ಕೆ ಸಮ್ಮತಿ ಸೂಚಿಸಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾದ ಗುರುಗಳಾದ  Profshailaja Hiremath  ಮರುಮುದ್ರಣಕ್ಕೆ ಆಸಕ್ತಿ ತೋರಿದ್ದಾರೆ. ಇದೀಗ ಸಂಡೂರು ಭೂ ಹೋರಾಟ ಕೃತಿ ಮರುಮುದ್ರಣಕ್ಕೆ ಅಣಿಯಾಗುತ್ತಿದೆ.

ಸಂಡೂರು ಭೂ ಹೋರಾಟದ ರೂವಾರಿಗಳಾದ ಎಲಿಗಾರ ತಿಮ್ಮಪ್ಪನ ಮೊಮ್ಮಗ ಸರ್ವೇಶ ಎರಡನೆ ಮುದ್ರಣ ಪ್ರಕಟವಾದ ತಕ್ಷಣ ಸಂಡೂರಿನಲ್ಲಿ ಹೋರಾಟದ 50 ನೇ ವರ್ಷದ ನೆನಪಿನ ಕಾರ್ಯಕ್ರಮ ಮಾಡಿ ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರೆ.

ಇಂದಿಗೆ ಸಂಡೂಡು ಭೂ ಹೋರಾಟ ನಡೆದು 50 ವರ್ಷ ತುಂಬುತ್ತಿದೆ. ಈ ಹೊತ್ತಲ್ಲಿ ಸಂಡೂರು ಭೂ ಹೋರಾಟ ಮತ್ತೆ ಮರುಮುದ್ರಣವಾಗುವುದು ಲೇಖಕನಾಗಿ ನನಗೆ ಖುಷಿಯ ಸಂಗತಿ.

ಸಂಡೂರು ಭೂ ಹೋರಾಟ ರೂಪಿಸಿದ ಎಲ್ಲಾ ಹೋರಾಟದ ಚೇತನಗಳನ್ನು ನೆನೆಯೋಣ.
#ಅಜೋ #ಸಂಡೂರುಭೂಹೋರಾಟ

– ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು

Leave a Reply