“M ಡಾಕ್ಯುಮೆಂಟ್” ನಾವೀಗ ಇರುವ ಈ ಕಾಲಕ್ಕೆ ತುರ್ತು ಓದು

3 years ago

#breaking #MDocument #urgent #reading #our #times #rajaramtallur #aharnishi #bookpromotion #manteksinghahluwalia #economy #reality #noteban #GST

1980-2014 ತನಕದ ಭಾರತದ ಸಾಮಾಜಿಕ, ಆರ್ಥಿಕ ಚರಿತ್ರೆ ಇದು. ಇದನ್ನು “ಫರ್ಸ್ಟ್ ಹ್ಯಾಂಡ್ ಇನ್ಫಾರ್ಮೇಷನ್”ಗಳ ಸಹಿತ ಒಳಮನೆಯ ದೃಷ್ಟಿಕೋನದಿಂದ ಬರೆಯಬಹುದಾಗಿದ್ದವರು ಕೇವಲ ಇಬ್ಬರೇ ಇಬ್ಬರು. ಒಬ್ಬರು ಭಾರತದ ಪ್ರಧಾನಿ ಆಗಿದ್ದ ಡಾ. ಮನಮೋಹನ್ ಸಿಂಗ್; ಇನ್ನೊಬ್ಬರು ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ. ಮನಮೋಹನ್ ಸಿಂಗ್ ಈ ಚರಿತ್ರೆಯನ್ನು ದಾಖಲಿಸಿಲ್ಲ ಮತ್ತು ಹೆಚ್ಚಿನಂಶ ಇನ್ನು ದಾಖಲಿಸುವುದು ಅವರ ಪ್ರಾಯದ ಕಾರಣಕ್ಕೆ ಸಾಧ್ಯವಾಗದು. ಹಾಗಾಗಿ ಈ ಪುಸ್ತಕ ನಿಸ್ಸಂದೇಹವಾಗಿ ಭಾರತದ ಆ ಅವಧಿಯ ಬಹಳ ಅಥೆಂಟಿಕ್ ದಾಖಲೆ.

ಇದನ್ನು ಅನುವಾದಿಸುವ ಅವಕಾಶ ನನಗೆ ದೊರೆತಿರುವುದು ನನ್ನ ಅದೃಷ್ಟ. ಈ ಅವಕಾಶ ಕಲ್ಪಿಸಿದ್ದಕ್ಕಾಗಿ ಅಕ್ಷತಾ ಹುಂಚದಕಟ್ಟೆ ಮತ್ತವರ ಅಹರ್ನಿಶಿ ಪ್ರಕಾಶನಕ್ಕೆ ನಾನು ಆಭಾರಿ. ಪುಸ್ತಕ ಇದೇ 24ರಂದು ಉಡುಪಿ ಟೌನ್‌ಹಾಲಿನಲ್ಲಿ ಸ್ವತಃ ಮೊಟೆಕ್ ಸಿಂಗ್ ಅಹ್ಲೂವಾಲಿಯಾ ಅವರಿಂದ ಬಿಡುಗಡೆಗೊಳ್ಳಲಿದೆ. ನಾಡಿನ ಇನ್ನೊಬ್ಬ ಪ್ರಮುಖ ಅರ್ಥಶಾಸ್ತ್ರಜ್ಞ ಎಂ. ಎಸ್. ಶ್ರೀರಾಂ ಅವರು ಪುಸ್ತಕವನ್ನು ಪರಿಚಯಿಸಲಿದ್ದಾರೆ ಮತ್ತು ಮಂಟೆಕ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಕಡೆಯಲ್ಲಿ ಮೊಂಟೆಕ್ ಸಿಂಗ್ ಅವರ ಉಪನ್ಯಾಸ ಕೂಡ ಇದೆ.

ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ.
ಮೊದಲ ಭಾಗ ಮೊಂಟೆಕ್ ಅವರ ಬದುಕಿನ ಆರಂಭಿಕ ದಿನಗಳ ಆತ್ಮಕಥೆಯಂತಿದೆ.
ಎರಡನೇ ಭಾಗ 1980-1991ರ ತನಕದ ನಡುವಿನ ಅವಧಿಯಲ್ಲಿ ಆರ್ಥಿಕ ಉದಾರೀಕರಣದ ಚಿಂತನೆಗಳಿಗೆ ಕಾರಣವಾದ ರಾಜಕೀಯ-ಆರ್ಥಿಕ-ಸಾಮಾಜಿಕ-ಜಾಗತಿಕ ಬಿಕ್ಕಟ್ಟುಗಳ ಸನ್ನಿವೇಶಗಳನ್ನು ವಿವರಿಸುತ್ತದೆ.
ಮೂರನೇ ಭಾಗದಲ್ಲಿ, 1991ರ ಬಳಿಕದ ಆರ್ಥಿಕ ಸುಧಾರಣೆಗಳ ಆರಂಭದ ದಿನಗಳನ್ನು ವಿವರಿಸಲಾಗಿದೆ.
ಭಾಗ 4ರಲ್ಲಿ ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ಅವಧಿಯನ್ನು ಇಂಚಿಂಚಾಗಿ ಬಿಚ್ಚಿಡಲಾಗಿದೆ.
ಇದಲ್ಲದೇ ಉಪಸಂಹಾರದಲ್ಲಿ ತೀರಾ ಇತ್ತೀಚೆಗಿನ ನೋಟು ರದ್ಧತಿ, GST ಮತ್ತಿತರ ಸಂಗತಿಗಳನ್ನೂ ಅವರು ಚರ್ಚಿಸಿದ್ದಾರೆ.

ತೀರಾ ಒಣಕಲು ಎಕನಾಮಿಕ್ಸ್ ಪಠ್ಯಪುಸ್ತಕ ಆಗಬಹುದಾಗಿದ್ದ ಈ ಪುಸ್ತಕವನ್ನು ಮೊಂಟೆಕ್ ಅತ್ಯಂತ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಅವರ ತಮಾಷೆಯ ಶೈಲಿ, ಸ್ವತಃ ಒಳ್ಳೆಯ ಪಾಲಿಸಿ ಬರಹಗಾರರಾಗಿರುವ ಅವರ ಬರಹದ ಪ್ರಿಸಿಷನ್ ಮತ್ತು ಇಡಿಯ ಚರಿತ್ರೆಯನ್ನು ಒಂದು ಕಥನವಾಗಿ ಕಟ್ಟಿಕೊಡುವ ಶೈಲಿ ಅನನ್ಯ. ಭಾರತದ ಮುಂದಿನ ಭವಿಷ್ಯದ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಓದಿಕೊಳ್ಳಬೇಕಾದ ಪುಸ್ತಕ ಇದು ಎಂಬ ಕಾರಣಕ್ಕೆ ನಾನು ಇದನ್ನು ಇಷ್ಟಪಟ್ಟು ಅನುವಾದಿಸಿದ್ದೇನೆ; ನಾಲ್ಕು ತಿಂಗಳ ಕಾಲ ಅನುವಾದ ಪ್ರಕ್ರಿಯೆಯ ಪ್ರತೀಕ್ಷಣವನ್ನೂ ಆನಂದಿಸಿದ್ದೇನೆ.

ಭಾರತದ ಉದಾರೀಕರಣ ಎಲ್ಲಿಂದ ಹೊರಟಿತು, ಎತ್ತ ಹೊರಳಿತು ಮತ್ತು ಎಲ್ಲಿ ದಾರಿತಪ್ಪಿತು ಎಂಬುದನ್ನು ಅರ್ಥಮಾಡಿಕೊಳ್ಳಬಯಸುವವರು ದಯವಿಟ್ಟು ಇದನ್ನು ಓದಿ. ಇದು ಕೋವಿಡ್ ಕಾಲದಲ್ಲಿ ಇಂಗ್ಲೀಷಿನಲ್ಲಿ BACKSTAGE ಎಂಬ ಹೆಸರಿನಲ್ಲಿ ಪ್ರಕಟಗೊಂಡಿತ್ತು. ಹೆಚ್ಚಿನಂಶ “ಕೋವಿಡ್ ಬ್ಲೂ” ಕಾರಣದಿಂದ ಹೆಚ್ಚು ಚರ್ಚೆಯಾಗಲಿಲ್ಲ. ಈ ಪುಸ್ತಕದ ನೆಪದಲ್ಲಿ ಉದಾರೀಕರಣದ ಕುರಿತ ಚರ್ಚೆ ಕನ್ನಡದಲ್ಲೇ ಆರಂಭವಾಗಲಿ ಎಂಬುದು ನನ್ನ ಮಹದಾಸೆ.

ಪುಸ್ತಕವನ್ನು ಅಹರ್ನಿಶಿ ಶಿವಮೊಗ್ಗ (Akshatha Humchadakatte) ಪ್ರಕಟಿಸಿದ್ದಾರೆ. ಪುಸ್ತಕ 600 ಪುಟಗಳದು. ಬೆಲೆ ಇತ್ಯಾದಿ ವಿವರಗಳನ್ನು ಪ್ರಕಾಶಕರು ಶೀಘ್ರವೇ ಪ್ರಕಟಿಸಲಿದ್ದಾರೆ.

– ರಾಜಾರಾಮ್ ತಲ್ಲೂರ್

Leave a Reply