RTGS ಪ್ರಥಮವಾಗಿ ಪರಿಚಯಿಸಿದ್ದು ನಮ್ಮ ಸರ್ಕಾರ: ಸಿದ್ದರಾಮಯ್ಯ

4 years ago

ಬೆಂಗಳೂರು: ಫಲಾನುಭವಿಗಳಿಗೆ ಆರ್.ಟಿ.ಜಿ.ಎಸ್ ಮೂಲಕ ನೇರಪಾವತಿ ಮಾಡುವ ತಂತ್ರಾಂಶವನ್ನು ದೇಶದಲ್ಲಿಯೇ ಪ್ರಥಮ ಬಾರಿ ರೂಪಿಸಿ ಜಾರಿಗೆ ತಂದದ್ದು ನಮ್ಮ ಸರ್ಕಾರ. ಮುಖ್ಯಮಂತ್ರಿಯವರು ಇದು ತಮ್ಮ ಸಾಧನೆ ಎಂದು ಹೇಳಿಕೊಂಡಿದ್ದಾರೆ. ಇದು ತಪ್ಪು ಮಾಹಿತಿ. 2018-19ರ ಅವದಿಯಲ್ಲಿ 2,450 ಕೊಟಿ ರೂಪಾಯಿ ಇನ್ ಪುಟ್ ಸಬ್ಸಿಡಿಯನ್ನು 35 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಹೊಸ ತಂತ್ರಾಂಶದ ಮೂಲಕ ಜಮೆ ಮಾಡಿದ್ದೆವು. ಇದು ನಮ್ಮ 2018-19ರ ಬಜೆಟ್ ಪುಸ್ತಕದಲ್ಲಿಯೂ ದಾಖಲು ಮಾಡಿದ್ದೆವು. ಸಂಶಯವಿದ್ದವರು ಅಲ್ಲಿ ಓದಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆ ಅಧಿವೇಶನದಲ್ಲಿ ಮಾತಾಡಿದ ಅವರು, ಮುಂಗಾರಿನಲ್ಲಿ ಬಿತ್ತನೆಯಾಗಬೇಕಿದ್ದ ಒಟ್ಟು ಬೆಳೆಗಳಲ್ಲಿ ಕಾರಣಾಂತರಗಳಿಂದ ಸುಮಾರು 10 ರಿಂದ 12 ಲಕ್ಷ ಪ್ರದೇಶದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ 10 ಲಕ್ಷದ 62 ಸಾವಿರ ಹೆಕ್ಟೇರ್ ನಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಇತ್ತು, ಆದರೆ ಬಿತ್ತನೆಯಾದದ್ದು 8.3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ. ಜೋಳ ಸುಮಾರು 1.24 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಆಗಬೇಕಿತ್ತು ಆದರೆ 59 ಸಾವಿರ ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆಯಾಗಿದೆ. ಸಿರಿಧಾನ್ಯ 45 ಸಾವಿರ ಹೆಕ್ಟೇರ್ ನಲ್ಲಿ ಬಿತ್ತನೆ ಆಗಬೇಕಿತ್ತು, ಆದರೆ ಬಿತ್ತನೆ ಆಗಿರುವುದು 28 ಸಾವಿರ ಹೆಕ್ಟೇರ್ ನಲ್ಲಿ ಮಾತ್ರ. ತೊಗರಿ 16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು, ಆದರೆ 13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ರಾಗಿ 7.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು, ಆದರೆ 4.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದರು. 

ರೈತರು ಬಿತ್ತನೆ ಬೀಜ, ಗೊಬ್ಬರ ಮುಂತಾದವುಗಳನ್ನು ಖರೀದಿ ಮಾಡಿ, ಬಿತ್ತನೆ ಮಾಡಲಾಗದೆ ನಷ್ಟಕ್ಕೀಡಾಗಿದ್ದಾರೆ, ಈ ನಷ್ಟಕ್ಕೆ ಬೆಳೆವಿಮಾ ಸೌಲಭ್ಯ ಅನ್ವಯಿಸದೆ ಇರುವುದರಿಂದ ಸರ್ಕಾರವೇ ಈ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬೆಳೆ ಪರಿಹಾರ ಪಡೆಯಲು 33% ಬೆಳೆ ನಷ್ಟ ಆಗಿರಲೇಬೇಕು. 32% ಬೆಳೆ ನಷ್ಟ ಆದವರಿಗೆ ಪರಿಹಾರ ಸಿಗುವುದಿಲ್ಲ. ಬೆಳೆ ನಷ್ಟ ಪರಿಹಾರ ಪಡೆಯಲು ಕೃಷಿ ಭೂಮಿಯನ್ನು 2.5 ಹೆಕ್ಟೇರ್ ಗೆ ಮಿತಿಗೊಳಿಸಲಾಗಿದೆ. ಬಿತ್ತನೆ ಮಾಡಲು ಅಗತ್ಯ ತಯಾರಿ ಮಾಡಿಕೊಂಡು, ಕೊನೆ ಕ್ಷಣದಲ್ಲಿ ನೈಸರ್ಗಿಕ ಕಾರಣಗಳಿಗಾಗಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ ಅಂಥವರಿಗೂ ಪರಿಹಾರ ನೀಡುವಂತೆ ಎಸ್,ಡಿ,ಆರ್,ಎಫ್ ನಿಯಮಗಳಿಗೆ ತಿದ್ದುಪಡಿ ತರುವಂತೆ ನಾವು ನಿರ್ಣಯ ಮಾಡೋಣ ಎಂದರು.

2019ರಿಂದ ಈ ವರೆಗೆ 3.40,543 ಮನೆಗಳು ಹಾನಿಯಾಗಿವೆ, ಇದರಿಂದ 16,649 ಕೋಟಿ ನಷ್ಟವಾಗಿದೆ. ಈ ವರ್ಷ 24,408 ಮನೆಗಳು ಹಾನಿಯಾಗಿವೆ ಎಂದು ಸರ್ಕಾರ ಹೇಳಿದೆ. 2019ರಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಿರುವ ಮನವಿಯಲ್ಲಿ 2,47,628 ಮನೆಗಳಿಗೆ ಪ್ರವಾಹದಿಂದ ಹಾನಿಯಾಗಿದೆ ಎಂದಿದೆ. ಈ ನಷ್ಟಕ್ಕೆ 9,622 ಕೋಟಿ ಪರಿಹಾರ ನೀಡಬೇಕಾಗಿತ್ತು. ವಸತಿ ಇಲಾಖೆ 2,029 ಕೋಟಿ ರೂಪಾಯಿಗಳನ್ನು ಮಾತ್ರ ಪರಿಹಾರವಾಗಿ ನೀಡಲಾಗಿದೆ ಎಂದು ಹೇಳಿದೆ. ಇದರಿಂದ ಸುಮಾರು 1,34,936 ಜನರಿಗೆ ಮಾತ್ರ ಪರಿಹಾರ ದೊರೆಯುತ್ತದೆ. ಅಂದರೆ 2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡು ಸುಮಾರು 1 ಲಕ್ಷಕ್ಕೂ ಅಧಿಕ ಮನೆಗಳಿಗೆ ಪರಿಹಾರ ನೀಡಿಲ್ಲ. ಅನೇಕ ಕಡೆಗಳಲ್ಲಿ ಊರುಗಳನ್ನು ಸ್ಥಳಾಂತರ ಮಾಡುವ ಭರವಸೆ ನೀಡಲಾಗಿತ್ತು, ಇನ್ನೂ ಈ ಕಾರ್ಯ ಆರಂಭವಾಗಿಲ್ಲ ಎಂದರು.

2021ರಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೀಡಾದ 15,238 ಮನೆಗಳಿಗೆ ಈ ವರೆಗೆ ಪರಿಹಾರ ನೀಡಿಲ್ಲ. ಹಿಂದಿನ ಮೂರು ವರ್ಷಗಳಲ್ಲಿ 93.52 ಲಕ್ಷ ಎಕರೆ ಬೆಳೆ ನಷ್ಟವಾಗಿದೆ ಎಂದು ಸರ್ಕಾರ ಮನವಿ ನೀಡಿದೆ. ಈ ವರ್ಷದ ಬೆಳೆ ನಷ್ಟವನ್ನೂ ಸೇರಿಸಿದ್ರೆ ಸುಮಾರು 1 ಕೋಟಿ 19 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾದಂತೆ ಆಗುತ್ತದೆ, ಇವುಗಳಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಕಳೆದ 4 ವರ್ಷಗಳಲ್ಲಿ ರಾಜ್ಯದ ರೈತರಿಗೆ ಸುಮಾರು 2 ಲಕ್ಷ ಕೋಟಿ ನಷ್ಟವಾಗಿದೆ ಇದಕ್ಕೆ ಪ್ರತಿಯಾಗಿ ಸರ್ಕಾರ ವಿತರಣೆ ಮಾಡಿರುವ ಒಟ್ಟು ಪರಿಹಾರದ ಮೊತ್ತ 2,134 ಕೋಟಿ. ಇಷ್ಟು ಸಾಕೇ? ಎಂದು ಪ್ರಶ್ನಿಸಿದರು.

ನಾನು ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದೆ, ಕೊಡಗಿನ ಡಿ.ಸಿ ಕಚೇರಿ ಬಳಿ 7.5 ಕೋಟಿ ರೂಪಾಯಿ ಖರ್ಚು ಮಾಡಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ, ಈ ತಡೆಗೋಡೆ ನಿರ್ಮಾಣ ಹಂತದಲ್ಲಿ ಕುಸಿದು ಬಿದ್ದಿದೆ. ಕೊಡಗಿನ ರೈತರ ಕಷ್ಟ ಕೇಳಲು ಹೋಗುತ್ತಿದ್ದಾಗ ನನ್ನ ಮೇಲೆ ಕಲ್ಲು, ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶನ ಮಾಡಲಾಯಿತು. ಸರ್ಕಾರದ ಭ್ರಷ್ಟಾಚಾರ, ಅಪ್ರಯೋಜಕತೆಯನ್ನು ನೋಡದಂತೆ ತಡೆಯಲು ಪ್ರಯತ್ನಿಸಲಾಯಿತು. ಇಂಥದಕ್ಕೆಲ್ಲ ಹೆದರಿ ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ. ಅಗತ್ಯ ಬಿದ್ದರೆ ನಾಳೆಯೇ ಮತ್ತೆ ಕೊಡಗಿಗೆ ಬರಲು ಸಿದ್ಧನಿದ್ದೇನೆ. ಜನರನ್ನು ಬಿಟ್ಟು ಕಲ್ಲು ಹೊಡೆಸುವ ಅಪ್ಪಚ್ಚು ರಂಜನ್, ಬೋಪಯ್ಯರಂಥ ನಾಯಕರಿಂದ ಕೊಡಗಿನ ಗೌರವಕ್ಕೆ ಧಕ್ಕೆಯಾಗುತ್ತಿದೆ. ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಕೊಡಗು ಭಾಗದಲ್ಲಿ ಕಾಫಿ, ಕಾಳು ಮೆಣಸು ಬೆಳೆ ನಷ್ಟವಾಗಿದೆ. ಅನೇಕ ಕಡೆ ಭೂ ಕುಸಿತ ಉಂಟಾಗಿ ಜನ ಮನೆಗಳನ್ನು ತೊರೆದು ಬೇರೆ ಕಡೆ ಆಶ್ರಯ ಪಡೆದುಕೊಂಡಿದ್ದಾರೆ. ಶಾಲೆಯ ಮೇಲೆ ಮಣ್ಣು ಕುಸಿದು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಇನ್ನೊಂದು ಕಡೆ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿದ್ದಾರೆ, ಅಲ್ಲಿ ನೀರು ಹರಿಯದೆ ನದಿ ನೀರು ಉಕ್ಕಿ ಮನೆ, ಕೃಷಿ ಜಮೀನಿನ ಮೇಲೆ ಹರಿಯಲು ಆರಂಭಿಸಿದೆ. ಇದರಿಂದ ನದಿಪಾತ್ರದ ಜನರಿಗೆ ತೊಂದರೆ ಆಗಿದೆ ಎಂದರು.

ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಆನೆ ತುಳಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು. ನಾನು ಅಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆನೆಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಉಮೇಶ್ ಕತ್ತಿಯವರಿಗೆ ಕರೆ ಮಾಡಿ ಹೇಳಿದ್ದೆ. ಪಾಪ ಕತ್ತಿಯವರು ಈಗ ನಮ್ಮೊಂದಿಗೆ ಇಲ್ಲ ಎಂದರು.

ಬೆಂಗಳೂರಿನ ಅನೇಕ ಕಡೆಗಳಲ್ಲಿ ಪ್ರವಾಹ ವೀಕ್ಷಣೆಗೆ ಹೋದಾಗ ಜನ ತಮಗೆ ನ್ಯಾಯಯುತ ಪರಿಹಾರ ಕೊಡಿಸಿ ಎಂದು ನನ್ನಲ್ಲಿ ಮನವಿ ಮಾಡಿದ್ದಾರೆ. ಇಲ್ಲಿ ಮಳೆ ಬಂದಾಗ ಸಮಸ್ಯೆ ಉಂಟಾಗಲು ಮುಖ್ಯ ಕಾರಣ ರಾಜಕಾಲುವೆಗಳ ಒತ್ತುವರಿ ಮತ್ತು ಚಿಕ್ಕ ಗಾತ್ರದ ಕಾಲುವೆಗಳು ಇರುವುದು. ಸರ್ಕಾರ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಒತ್ತುವರಿ ತೆರವು ಮತ್ತು ಕಾಲುವೆಗಳ ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರಿಗೆ ಕ್ರಯಕ್ಕೆ ಮನೆ ನೀಡುವ ಕಾನೂನನ್ನು ಸರ್ಕಾರ ಮಾಡಿದೆ. ಇದರಿಂದ ಅಕ್ರಮಕ್ಕೆ ಸರ್ಕಾರ ನೆರವು ನೀಡಿದಂತೆ ಆಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 1953 ಒತ್ತುವರಿ ಪ್ರಕರಣಗಳನ್ನು ಪತ್ತೆಮಾಡಿ, 1,300 ಒತ್ತುವರಿಗಳನ್ನು ತೆರವು ಮಾಡಿದ್ದೆವು. ಉಳಿದ 653 ಒತ್ತುವರಿಗಳ ತೆರವು ಕಾರ್ಯ ಪೂರ್ಣಗೊಂಡಿದ್ದರೆ ಇಷ್ಟು ದೊಡ್ಡ ಪ್ರಮಾಣದ ಹಾನಿ ಆಗುತ್ತಿರಲಿಲ್ಲ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಇಲ್ಲ, ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ ಹೀಗಾಗಿ ಮಳೆ ಬಂದಾಗ ಸಮಸ್ಯೆ ಉಂಟಾಗುತ್ತದೆ ಎಂದರು.

2007ಕ್ಕೂ ಮೊದಲು ಬೆಂಗಳೂರು ನಗರದ ವ್ಯಾಪ್ತಿ 225 ಚ.ಕಿ.ಮೀ ಇತ್ತು, ನಂತರ 225 ಹಳ್ಳಿಗಳನ್ನು ಸೇರಿಸಿದ್ದರಿಂದ 800 ಚ.ಕಿ.ಮೀ ಆಯಿತು. ಇದರಿಂದ ಹೊಸದಾಗಿ ಸೇರಿದ ಹಳ್ಳಿಗಳಿಗೆ ಕುಡಿಯುವ ನೀರು, ಚರಂಡಿ, ರಾಜಕಾಲುವೆ ಯಾವು ಇಲ್ಲ ಹೀಗಾಗಿ ಸಮಸ್ಯೆ ಉಂಟಾಗುತ್ತಿದೆ ಎಂದರು.

ಬೆಂಗಳೂರು ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವಂತೆ ರಾಜ್ಯದ ಹೈಕೋರ್ಟ್ ಎಷ್ಟು ಬಾರಿ ಛೀಮಾರಿ ಹಾಕಿದೆ ಎಂಬುದನ್ನು ನಾನು ಬಿಡಿಸಿ ಹೇಳಲು ಹೋಗುವುದಿಲ್ಲ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು, ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಮಾಡದೆ ಹೋದರೆ ಜನರಿಗೂ ಕಷ್ಟ, ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತದೆ ಎಂದರು.

ಐಟಿ, ಬಿಟಿಯವರು ತಮಗೆ ಮಳೆಯಿಂದಾಗಿ ರೂ. 250 ಕೋಟಿ ನಷ್ಟವಾಗಿದೆ, ಮೂಲಸೌಕರ್ಯ ಸುಧಾರಣೆಯಾಗದೆ ಹೋದರೆ ನಾವು ಕಂಪನಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಇದಕ್ಕೆ  ಸಚಿವರೊಬ್ಬರು ಕಂಪನಿಗಳಿಗೆ ಧಮಕಿ ಹಾಕಿದ್ದಾರೆ. ಈ ರೀತಿಯ ದುರ್ವರ್ತನೆಯಿಂದ ಉದ್ಯಮಿಗಳು ರಾಜ್ಯ ಬಿಟ್ಟುಹೋದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದರು.

Leave a Reply