ಸೈಬರ್ ಸೆಕ್ಯುರಿಟಿಗಾಗಿ ಡೆಲ್ ಜೊತೆಗೆ ಸರ್ಕಾರದ ಒಪ್ಪಂದ

4 years ago

  • ಬೆಂಗಳೂರು: ಶಾಲಾ ವಿದ್ಯಾರ್ಥಿಗಳು, ನವ್ಯೋದ್ಯಮ ಮತ್ತು ಸರಕಾರಿ ಕಚೇರಿಗಳಲ್ಲಿ ಸೈಬರ್ ಸೆಕ್ಯುರಿಟಿ ಕುರಿತು ಅರಿವು ಮೂಡಿಸುವ ಸಲುವಾಗಿ ಡೆಲ್ ಟೆಕ್ನಾಲಜೀಸ್ ಮತ್ತು ರಾಜ್ಯ ಸರ್ಕಾರದ ‘ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರ’ (ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸೈಬರ್ ಸೆಕ್ಯುರಿಟಿ)ಗಳು ಒಪ್ಪಂದಕ್ಕೆ ಸಹಿಹಾಕಿದವು.

    ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಮತ್ತು ಐಟಿಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಒಡಂಬಡಿಕೆಯು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಶಾಲಾ ವಿದ್ಯಾರ್ಥಿಗಳು, ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳು, ನವೋದ್ಯಮಗಳು ಮತ್ತು ಸರಕಾರಿ ಕಚೇರಿಗಳಿಗೆ ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ಕಲಿಕೆ ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಡೆಲ್ ಟೆಕ್ನಾಲಜೀಸ್ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳು, ನವ್ಯೋದ್ಯಮ ಮತ್ತು ಸರಕಾರಿ ಕಚೇರಿಗಳಲ್ಲಿ ಇಂಟರ್- ಆಕ್ಟೀವ್ ಕೋರ್ಸುಗಳನ್ನು ಒದಗಿಸಲಿದೆ. ವಿದ್ಯಾರ್ಥಿಗಳ ಪ್ರಯೋಜನಕ್ಕೆ ರೂಪಿಸಿರುವ ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ವಸ್ತುವಿಷಯಗಳು ಇಂಗ್ಲೀಷಿನ ಜೊತೆಗೆ ಕನ್ನಡದಲ್ಲೂ ಇರಲಿವೆ ಎಂದರು.

    ಸಂಸ್ಥೆಯು ತನ್ನ ‘ಅಸೆಂಡ್’ ವ್ಯವಸ್ಥೆಯ ಮೂಲಕ ರಾಜ್ಯದ ನವೋದ್ಯಮಗಳ ಬೆಳವಣಿಗೆಯನ್ನು ಉತ್ತೇಜಿಸಲಿದ್ದು, ಅಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಮರ್ಥ ಪರಿಹಾರಗಳನ್ನು ನೀಡಲಿದೆ. ಇದರಿಂದಾಗಿ ನವೋದ್ಯಮಗಳ ಮಾರುಕಟ್ಟೆ ವಿಸ್ತರಿಸಲಿದೆ. ಇವುಗಳ ಉತ್ಪನ್ನಗಳು ಮತ್ತು ಸೇವೆಗಳ ಮೌಲ್ಯವರ್ಧನೆ ಆಗಲಿದೆ ಎಂದರು.

    ರಾಜ್ಯ 2025ರ ಹೊತ್ತಿಗೆ 300 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆ ಬೆಳೆಸುವ ಗುರಿ ಹೊಂದಿದೆ. ಇಂಥ ಡಿಜಿಟಲೀಕರಣ ಸಾಧ್ಯವಾಗಬೇಕು ಎಂದರೆ ಅತ್ಯಂತ ದಕ್ಷ ಸೈಬರ್ ಸೆಕ್ಯುರಿಟಿ ವ್ಯವಸ್ಥೆ ಇರಬೇಕಾಗುತ್ತದೆ. ಇದನ್ನು ಮುಖ್ಯವಾಗಿ ಇಟ್ಟುಕೊಂಡೇ ಸರ್ಕಾರ ಐದು ವರ್ಷಗಳ ಹಿಂದೆಯೇ ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಿದೆ. ಡಿಜಿಟಲ್ ಆರ್ಥಿಕತೆ ಕಾಲಘಟ್ಟದಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ ಎಂದರು.

    ಡೆಲ್ ಸಂಸ್ಥೆ ತಾನು ಅಭಿವೃದ್ಧಿಪಡಿಸಿರುವ ‘ಟೆಕ್ ಟಿಯರ್ಡೌನ್’ ವ್ಯವಸ್ಥೆಯಡಿ ಆಯ್ದ ನವೋದ್ಯಮಗಳಿಗೆ ನಿರ್ದಿಷ್ಟ ತಂತ್ರಜ್ಞಾನ ಮತ್ತು ಸೈಬರ್ ಸೆಕ್ಯುರಿಟಿ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಿದ್ದು, ಅವುಗಳ ಆರ್ಥಿಕ ಬೆಳವಣಿಗೆಗೆ ಮಾರ್ಗದರ್ಶನ ಮಾಡಲಿದೆ. ಇದಲ್ಲದೆ, ಕಂಪನಿಯು ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳ ಜೊತೆಗೂಡಿ ಸೈಬರ್ ರಿಕವರಿ ಕುರಿತ ತಿಳಿವಳಿಕೆ ಮೂಡಿಸಲಿವೆ ಎಂದರು.

    ಸೈಬರ್ ಸೆಕ್ಯುರಿಟಿ ಪ್ರವರ್ಧಮಾನಕ್ಕೆ ಬರುತ್ತಿರುವ ಮಹತ್ವದ ಕ್ಷೇತ್ರವಾಗಿದೆ. ನಮ್ಮ ಸಾರ್ವಜನಿಕ ವಲಯವು ಇದಕ್ಕೆ ಸಂಬಂಧಿಸಿದಂತೆ ಐಟಿ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದುವುದು ಮುಂಬರುವ ದಿನಗಳಲ್ಲಿ ಮುಖ್ಯವಾಗಲಿದೆ. ಸೈಬರ್ ಬೆದರಿಕೆ ಯುಗದಲ್ಲಿ ಅಂಕಿಅಂಶ ಮತ್ತು ವಿವರಗಳ ಸುರಕ್ಷಿತ ಸಂರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನಗಳು ಅನಿವಾರ್ಯ. ಈ ಒಡಂಬಡಿಕೆ ಆಡಳಿತದ ಅಪರಿಮಿತ ಶಕ್ತಿಯ ಸಂಕೇತವಾಗಿದೆ ಎಂದರು.

    ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರದ ಮುಖ್ಯಸ್ಥ ಡಾ.ಕಾರ್ತೀಕ್ ರಾವ್ ಬಪ್ಪನಾಡು ಮಾತನಾಡಿ, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿರುವ ಪರಿಸರವು ಯಾವುದೇ ಬಗೆಯ ಸೈಬರ್ ದಾಳಿಯನ್ನು ಎದುರಿಸುವಷ್ಟು ಸಮರ್ಥವಾಗಿದೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಕೂಡ ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಉತ್ಕೃಷ್ಟತಾ ಕೇಂದ್ರ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದರು.

    ಕಾರ್ಯಕ್ರಮದಲ್ಲಿ ಡೆಲ್ ಟೆಕ್ನಾಲಜೀಸ್ನ ಉಪಾಧ್ಯಕ್ಷ ಮನೀಶ್ ಗುಪ್ತ, ನಿರ್ದೇಶಕ ಮತ್ತು ಪ್ರಧಾನ ವ್ಯವಸ್ಥಾಪಕ ರಿಪು ಬಾಜ್ವಾ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply