ಬೆಂಗಳೂರು: ಹವಾಮಾನ ಬದಲಾವಣೆಯಿಂದ ರಾಜ್ಯ ಭೀಕರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ಕೊಟ್ಟಿದ್ದರು. ಸರ್ಕಾರ ಈ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಮುಂಜಾಗ್ರತಾ ಕ್ರಮಕೈಗೊಳ್ಳದೆ ಇರುವುದೇ ಈಗಿನ ಅನಾಹುತಕ್ಕೆ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆ ಅಧಿವೇಶನದಲ್ಲಿ ಮಾತಾಡಿದ ಅವರು, 2030ರ ಒಳಗಡೆ ಒಟ್ಟಾರೆ ಉತ್ಪಾದನೆಯಲ್ಲಿ ಭತ್ತ ಸುಮಾರು 5.6% , ಕಡ್ಲೆ 19.2%. ರಾಗಿ 12%, ಶೇಂಗಾ 9.6%, ಸೋಯಾಬೀನ್ 28.6%, ಕಡಿಮೆಯಾಗಬಹುದು ಎಂದು ಹವಾಮಾನ ತಜ್ಞರು ನೀಡಿದ್ದ ಎಚ್ಚರಿಕೆಯನ್ನೂ ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದರು.
ಬೆಂಗಳೂರು ನಗರ ಮತ್ತು ಸುತ್ತಮುತ್ತ ಹಾಗೂ ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತಿಹೆಚ್ಚು ಮಳೆಯಾಗಬಹುದೆಂದು Envioronmental management and policy research institute ತಯಾರಿಸಿದ್ದ Karnataka state action plan on Climate change ವರದಿ ಹೇಳಿತ್ತು. ರಾಜ್ಯ ಸರ್ಕಾರ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ದೂರಿದರು.
ಬಾದಾಮಿ ಮತ್ತು ಗುಳೇದಗುಡ್ಡದಲ್ಲಿ ಒಂದೇ ದಿನ 100 ಮಿ.ಮೀ ಗೂ ಅಧಿಕ ಮಳೆ ಆಗಿದೆ. ಬೆಂಗಳೂರಿನಲ್ಲಿ ಒಂದೇ ದಿನ 134 ಮಿ.ಮೀ ಮಳೆ ಆಗಿದೆ. ಬೆಂಗಳೂರಿನ ವಾಡಿಕೆ ಮಳೆ 475 ಮಿ.ಮೀ, ಆದರೆ ಸೆಪ್ಟೆಂಬರ್ 6ರ ವರೆಗೆ 1086 ಮಿ,ಮೀ ಮಳೆ ಆಗಿದೆ. ಬೆಂಗಳೂರು ಸುತ್ತಮುತ್ತ 446 ಮಿ.ಮೀ ಮಳೆ ಆಗಬೇಕಿತ್ತು, ಆದರೆ 1098 ಮಿ.ಮೀ ಮಳೆ ಆಗಿದೆ. ರಾಮನಗರದಲ್ಲಿ 465 ಮಿ.ಮೀ ವಾಡಿಕೆ ಮಳೆ. ಆದರೆ ಬಿದ್ದಿದ್ದು 1090, ತುಮಕೂರಿನಲ್ಲಿ 355 ಮಿ.ಮೀ ಮಳೆ ಆಗಬೇಕಿತ್ತು, 1004 ಮಿ.ಮೀ ಮಳೆ ಆಗಿದೆ ಎಂದರು.
ಅತಿವೃಷ್ಟಿಯ ಬಗೆಗಿನ ವರದಿ ಸರ್ಕಾರದ ಬಳಿ ಇದ್ದರೂ ಈ ವರದಿಗೆ ಅನುಗುಣವಾಗಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಸರ್ಕಾರದ ಬೇಜವಾಬ್ದಾರಿಯಿಂದ 122 ಜನ ಪ್ರಾಣ ಕಳೆದುಕೊಂಡಿದ್ದಾರೆ, 462 ಜಾನುವಾರುಗಳು ಸತ್ತಿವೆ, ಮನೆಗಳು ಬಿದ್ದುಹೋಗಿದೆ, ಬೆಳೆ ನಷ್ಟವಾಗಿದೆ ಎಂದರು.
ಮೊನ್ನೆ ಬೆಂಗಳೂರು ನಗರದಲ್ಲಿ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಮಹದೇವಪುರದ ಕೆಲವು ಜನ ವಸತಿ ಪ್ರದೇಶಗಳಲ್ಲಿ ಸುಮಾರು 4 ರಿಂದ 5 ಅಡಿ ನೀರು ನಿಂತಿತ್ತು. ಮಳೆಯಾದ ದಿನ 10 ರಿಂದ 12 ಅಡಿ ನೀರು ನಿಂತಿತ್ತು. ಸ್ಕೂಟರ್, ಕಾರುಗಳು ಮಳೆ ನೀರಿನಲ್ಲಿ ಮುಳುಗಿದ್ದವು, ಮನೆಯೊಳಗಿನ ವಸ್ತುಗಳೆಲ್ಲ ಕೊಚ್ಚಿಕೊಂಡು ಹೋಗಿವೆ ಎಂದರು.
ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದ ಪ್ರಕಾರ ಈ ವರ್ಷ 4 ಬಾರಿ ಪ್ರವಾಹ ಬಂದಿದೆ. ಕೋಲಾರ, ಚಿಕ್ಕಬಳ್ಳಾಪುರ, ಬಿಜಾಪುರ, ಬಾಗಲಕೋಟೆ ಮುಂತಾದ ಕಡೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಈ ಹವಾಮಾನ ಬದಲಾವಣೆಯ ಮುನ್ಸೂಚನೆ ಇದ್ದರೂ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದರು.
ರಾಜ್ಯ ಸರ್ಕಾರ ಆಗಸ್ಟ್ 20ರವರೆಗಿನ ಅತಿವೃಷ್ಟಿ ನಷ್ಟಕ್ಕೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದೆ. ಆ ನಂತರದಿಂದ ಇಂದಿನವರೆಗೆ ಮಳೆ ಬಿದ್ದು ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಈ ವರೆಗೆ ಮನವಿ ನೀಡಿಲ್ಲ. ಬೆಳೆಹಾನಿ ಸಮೀಕ್ಷೆಯೇ ನಡೆದಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಿರುವ ಮನವಿ ಪ್ರಕಾರ 110 ಜನ ಸಾವಿಗೀಡಾಗಿದ್ದಾರೆ, 462 ಜಾನುವಾರುಗಳು ಸತ್ತಿವೆ, 5.81 ಲಕ್ಷ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನನ್ನ ಪ್ರಕಾರ ಸುಮಾರು 10 ರಿಂದ 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದರು.
ಕಳೆದ 15 ವರ್ಷಗಳಲ್ಲಿ ಸುಮಾರು 28 ಮನವಿ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ನೀಡಿದೆ, ಇದರಲ್ಲಿ ಬಿಜೆಪಿ ಸರ್ಕಾರ 16 ಮನವಿ ಪತ್ರ ನೀಡಿದೆ. 2017-18 ವರ್ಷವೊಂದನ್ನು ಬಿಟ್ಟರೆ ಉಳಿದ ಎಲ್ಲಾ ವರ್ಷಗಳೂ ಅತಿವೃಷ್ಟಿ ಅಥವಾ ಅನಾವೃಷ್ಟಿ ಎದುರಿಸಿವೆ, ಕೆಲವು ವರ್ಷ ಎರಡೂ ಪರಿಸ್ಥಿತಿ ಎದುರಾಗಿದೆ ಎಂದರು.
ರಾಜ್ಯ ಸರ್ಕಾರ ಮಳೆಯಿಂದ ರೂ. 7,647.13 ಕೋಟಿ ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದೆ. ಎಸ್,ಡಿ,ಆರ್,ಎಫ್ ನ ನಿಯಮಗಳ ಪ್ರಕಾರ 1,012 ಕೋಟಿ 50 ಲಕ್ಷ ಪರಿಹಾರದ ಹಣವನ್ನು ರಾಜ್ಯ ಸರ್ಕಾರ ಕೇಳಿದೆ. ಈ ವರೆಗೆ 1 ಪೈಸೆ ಹಣ ಕೇಂದ್ರದಿಂದ ಬಂದಿಲ್ಲ ಎಂದರು.
ಅಡಿಕೆಗೆ ಕೊಳೆ ರೋಗ ಬಂದಾಗ, ಮಳೆಯಿಂದ ಈರುಳ್ಳಿ, ದ್ರಾಕ್ಷಿ, ನಿಂಬೆಹಣ್ಣು ಬೆಳೆ ಹಾನಿಗೀಡಾದಾಗ, ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾದಾಗ ಪರಿಹಾರ ನೀಡಿದ್ದೆವು, ಕಬ್ಬಿನ ಬೆಲೆ ಕುಸಿತವಾಗಿ ರೈತರು ನಷ್ಟಕ್ಕೀಡಾದಾಗ 1800 ಕೋಟಿ ಪರಿಹಾರ ನೀಡಿದ್ದೆವು. ನಾವು ಎನ್,ಡಿ,ಆರ್,ಎಫ್ ಪರಿಹಾರ ಕಾಯುತ್ತಾ ಕೂತಿರಲಿಲ್ಲ ಎಂದರು.
ಐದು ವರ್ಷಗಳಿಗೊಮ್ಮೆ ಪರಿಷ್ಕರಣೆಗೊಳ್ಳಬೇಕಾಗಿದ್ದರೂ 2015ರ ನಂತರ ಎನ್.ಡಿ.ಆರ್.ಎಫ್ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡಿಲ್ಲ. ಈ ಸದನದಲ್ಲಿ ನಾವು ಎನ್,ಡಿ,ಆರ್,ಎಫ್ ನಿಯಮಗಳನ್ನು ಪರಿಷ್ಕರಣೆ ಮಾಡುವಂತೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡೋಣ ಎಂದು ಸಲಹೆ ನೀಡಿದರು.
ಎಸ್.ಡಿ.ಆರ್ ಎಫ್ ಮೂಲಕ ನಮಗೆ ವಾರ್ಷಿಕ 885 ಕೋಟಿ ಹಣ ಬರುತ್ತದೆ. ಇದರಲ್ಲಿ 75% ಕೇಂದ್ರ ಸರ್ಕಾರದ್ದು, 25% ರಾಜ್ಯ ಸರ್ಕಾರದ್ದು. ಇದರಲ್ಲಿ ಮೊದಲ ಕಂತು ನೀಡಿದೆ, ಎರಡನೇ ಕಂತು ನೀಡಿಲ್ಲ. ಇದನ್ನು ಬಿಟ್ಟು ಕೇಂದ್ರ ಸರ್ಕಾರ ಬೇರೆ ಯಾವ ಪರಿಹಾರ ನೀಡಿಲ್ಲ ಎಂದು ವಿವರಿಸಿದರು.
ಮನಮೋಹನ್ ಸಿಂಗ್ ಅವರ ಅವಧಿಗಿಂತ ನರೇಂದ್ರ ಮೋದಿ ಅವರ ಸರ್ಕಾರ ಹೆಚ್ಚು ಪರಿಹಾರ ನೀಡಿದೆ ಎಂದು ಕಳೆದ ಅಧಿವೇಶನದಲ್ಲಿ ಆರ್, ಅಶೋಕ್ ಹೇಳಿದ್ದರು. ಈ ಅವಧಿಯಲ್ಲಿ ನಮ್ಮ ತೆರಿಗೆ ಸಂಗ್ರಹ ಎಷ್ಟು ಹೆಚ್ಚಾಗಿದೆ ಮತ್ತು ನಮಗೆ ಸಿಗುವ ತೆರಿಗೆ ಪಾಲು ಎಷ್ಟು ಕಡಿಮೆಯಾಗಿದೆ ಎಂದು ಅವರು ತಿಳಿದುಕೊಳ್ಳಲಿ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ರಾಜ್ಯದಿಂದ ಕೇಂದ್ರಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸಂಗ್ರಹವಾಗುತ್ತಿದ್ದ ವಾರ್ಷಿಕ ತೆರಿಗೆ ಕೇವಲ 4,500 ಕೋಟಿ, ಈಗ ಇದೇ ತೆರಿಗೆ ಸಂಗ್ರಹ 35,000 ಕೋಟಿಗೆ ಏರಿಕೆಯಾಗಿದೆ. ಇದು ಕೂಡಾ ಅಶೋಕ್ ಅವರಿಗೆ ಗೊತ್ತಿರಬೇಕು ಎಂದರು.
ವಾರ್ಷಿಕ ಅಂದಾಜು ಮೂರುವರೆ ಲಕ್ಷ ಕೋಟಿ ರೂಪಾಯಿ ತೆರಿಗೆ ರಾಜ್ಯದಿಂದ ಕೇಂದ್ರಕ್ಕೆ ಸಂದಾಯವಾಗುತ್ತಿದೆ. ನಮಗೆ ವಾಪಾಸು ಸಿಗುವುದು 50,000 ಕೋಟಿಗೂ ಕಡಿಮೆ. ಇದನ್ನು ಹೆಚ್ಚಿಸುವಂತೆ ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿಗಳು ಹಾಗೂ ಕೇಂದ್ರ ವಿತ್ತ ಸಚಿವರ ಗಮನಕ್ಕೆ ತಂದಿದ್ದೆ. ನಾವೆಲ್ಲ ಒಟ್ಟಾಗಿ ಮತ್ತೊಮ್ಮೆ ಕೇಳೋಣ ಎಂದರು.




