ಬೆಂಗಳೂರು: ದೇಶದ ವಿವಿಧ ಭಾಗಗಳ ಬ್ಯಾಂಕ್ ಖಾತೆಗಳಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿ ಕೋಟಿ ಹಣ ಕಳವು ಮಾಡುತ್ತಿದ್ದ ಸೈಬರ್ ವಂಚಕರನ್ನು ಕಾಟನ್ ಸಿಟಿ ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆ ಮೂಲಕ ಹಲವಾರು ಬ್ಯಾಂಕ್ ವಂಚನೆ ಪ್ರಕರಣ ಭೇದಿಸಿದ ಪೊಲೀಸರು 150 ಕೋಟಿ ರೂಪಾಯಿ ವಂಚನೆಯ ಜಾಲವನ್ನು ಪತ್ತೆಹಚ್ಚಿದ್ದಾರೆ.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಈ ಸಂಬಂಧ ಹಾಸನ ಜಿಲ್ಲೆಯ ಬೇಲೂರಿನ ಶಾಂತಿನಗರ ನಿವಾಸಿ ಸೈಯದ್ ಅರ್ಫಾತ್ ಪಾಷ ಎಂಬುವನನ್ನು ಬಂಧಿಸಿದ್ದಾರೆ. ಈತನ ಬ್ಯಾಂಕ್ ಖಾತೆಯಲ್ಲಿ 18 ಕೋಟಿ ರೂಪಾಯಿ ಇರುವುದು ಪತ್ತೆಯಾಗಿದೆ.
ಪ್ರಕರಣದ ಮೊದಲ ಆರೋಪಿ ಹೈದರಾಬಾದ್ ಮೂಲದ ಉಬೇದ್ ಹಾಗೂ ಆತನ ಮತ್ತೊಬ್ಬ ಸಹಚರ ತಲೆಮರೆಸಿಕೊಂಡಿದ್ದಾನೆ. ಬಂಧಿತ ಸೈಯ್ಯದ್ ಅರ್ಫಾತ್ ಸಿ.ಸಿ.ಟಿ.ವಿ ಅಳವಡಿಸುವ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆಯ ನಿಟುವಳ್ಳಿ ನಿವಾಸಿ, ಕಟ್ಟಡ ನಿರ್ಮಾಣ ವಲಯದ ಉದ್ಯಮಿ ಪ್ರಮೋದ್ ಎಚ್.ಎಚ್. ಅವರ ಬ್ಯಾಂಕ್ ಖಾತೆಯಲ್ಲಿದ್ದ 52.60 ಲಕ್ಷ ಹಣವನ್ನು ಆರೋಪಿಗಳು ನೆಟ್ ಬ್ಯಾಂಕಿಂಗ್ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಖಾತೆಯು ಬ್ಲಾಕ್ ಆಗಿದ್ದನ್ನು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಆನ್‌ಲೈನ್ ಮೂಲಕ ವಂಚನೆ ನಡೆದಿರುವುದು ಗೊತ್ತಾಗಿತ್ತು. ಈ ಬಗ್ಗೆ ಪ್ರಮೋದ್ ಅವರು ನೀಡಿದ ದೂರು ಆಧರಿಸಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಸನದ ಸೈಯದ್ ಅರ್ಫಾತ್ ಪಾಷ ಎಂಬುವನನ್ನು ಬಂಧಿಸಿ 150 ಕೋಟಿ ರೂಪಾಯಿ ವಂಚನೆಯ ಜಾಲವನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳಾದ ಸೈಯದ್ ಅರ್ಫಾತ್ ಹಾಗೂ ಉಬೇದ್ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ 127 ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ಗೊತ್ತಾಗಿದೆ.
ಜುಲೈ 27 ರಿಂದ ಆಗಸ್ಟ್ 19ರವರೆಗೆ ಆರೋಪಿಗಳು ಬೇರೆಯವರ ಬ್ಯಾಂಕ್ ಖಾತೆಗಳಿಂದ 150 ಕೋಟಿ ಹಣವನ್ನು ತಮ್ಮ ಖಾತೆಗೆ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ. ಈ ಪೈಕಿ 132 ಕೋಟಿ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಖಾತೆಯಲ್ಲಿ ಉಳಿದಿದ್ದ 18 ಕೋಟಿ ಹಣವನ್ನು ಪೊಲೀಸರು ಬ್ಯಾಂಕ್ ಮೂಲಕ ಫ್ರೀಜ್ ಮಾಡಿಸಿದ್ದಾರೆ.
18 ಕೋಟಿ ಪೈಕಿ ಕೋರ್ಟ್ ಆದೇಶದಂತೆ ದೂರುದಾರ ಪ್ರಮೋದ್ ಅವರಿಗೆ 52.60 ಲಕ್ಷ ಹಣ ಕೊಡಿಸಲಾಗಿದೆ. ಆರೋಪಿಗಳ ಬಗ್ಗೆ ದೇಶದ ವಿವಿಧ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸೈಬರ್ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.




