ಅಧಿವೇಶನಕ್ಕೆ ಒಟ್ಟಾರೆ 400 ಕೋಟಿ ರೂ. ವ್ಯಯ
ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲ ಉದ್ದೇಶ ಸಮರ್ಪಕವಾಗಿ ಈಡೇರುತ್ತಿಲ್ಲ
ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ
ಬೆಂಗಳೂರು: ರಾಜ್ಯ ವಿಧಾನ ಮಂಡಲದ 151ನೇ ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿ.4ರಿಂದ 15ರ ವರೆಗೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಧಿವೇಶನಕ್ಕಾಗಿ ಒಟ್ಟಾರೆ 400 ಕೋಟಿ ರೂಪಾಯಿಯನ್ನು ಸರ್ಕಾರ ಖರ್ಚು ಮಾಡುತ್ತಿದೆ. ಹೀಗಾಗಿ ಕಲಾಪ ಅರ್ಥಪೂರ್ಣವಾಗಿ ನಡೆಯಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಅಧಿವೇಶನದಲ್ಲಿ ಎರಡು ದಿನಗಳ ಕಲಾಪವನ್ನು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕಾಯ್ದಿರಿಸುವುದಾಗಿ ಹೇಳಿದರು.
ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭವಾಗುವುದಕ್ಕೂ ಪೂರ್ವದಲ್ಲೇ ಧರಣಿ, ಪ್ರತಿಭಟನೆ, ಸತ್ಯಾಗ್ರಹ ಮಾಡುವಂತಹ ಸಂಘಟನೆಗಳ ಮುಖಂಡರೊಂದಿಗೆ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಒಂದು ಅರ್ಥದಲ್ಲಿ ಬೆಳಗಾವಿಯ ಅಧಿವೇಶನ ಎಂದರೆ ಕೇವಲ ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳಿಗೆ ವೇದಿಕೆ ಕಲ್ಪಿಸಿದಂತಾಗಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು ಎನ್ನುವುದು ಹಲವರ ಅಭಿಪ್ರಾಯವಾಗಿದ್ದು, ಬಹಳಷ್ಟು ಜನ ಈ ರೀತಿಯ ಭಾವನೆಯನ್ನು ನನ್ನ ಮುಂದೆ ವ್ಯಕ್ತಪಡಿಸಿದ್ದಾರೆ ಎಂದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲಾಗುವ ಅಧಿವೇಶನದ ಸಂದರ್ಭದಲ್ಲಿ ವಿಧಾನ ಸೌಧದ ಹೊರಗಡೆ ಧರಣಿ, ಸಮಾವೇಶ, ಸತ್ಯಾಗ್ರಹ ಮುಂತಾದ ಚಟುವಟಿಕೆಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲ ಉದ್ದೇಶ ಸಮರ್ಪಕವಾಗಿ ಈಡೇರುತ್ತಿಲ್ಲ ಎನ್ನುವುದು ಹಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ ಎಂದರು.
ಕಳೆದ ವರ್ಷ ಡಿಸೆಂಬರ್ 19 ರಿಂದ 29 ರ ವರೆಗೆ ನಡೆದ ಅಧಿವೇಶನದ ಸಂದರ್ಭದಲ್ಲಿ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕೃತ ಮಾಹಿತಿ ಪ್ರಕಾರ 102 ಕ್ಕೂ ಹೆಚ್ಚು ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿವೆ. ಅವುಗಳಲ್ಲಿ ಸುಮಾರು 64 ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ, ಸತ್ಯಾಗ್ರಹ, ಧರಣಿ ಮುಂತಾದ ಹೋರಾಟದ ಚಟುವಟಿಕೆಗಳನ್ನು ನಡೆಸಿವೆ. ಈ ಎಲ್ಲಾ ಪ್ರತಿಭಟನೆ ಸತ್ಯಾಗ್ರಹಗಳಲ್ಲಿ ಸುಮಾರು 65,000 ದಿಂದ 80,000 ಜನರು ಪಾಲ್ಗೊಂಡಿದ್ದರು ಎಂದರು ಹೇಳಿದರು.
ಈ ಎಲ್ಲಾ ಪ್ರತಿಭಟನೆ, ಸತ್ಯಾಗ್ರಹ, ಸಮಾವೇಶ, ಧರಣಿಗಳಿಗಾಗಿ ಸರ್ಕಾರದ ವತಿಯಿಂದ ಸುಮಾರು 14 ಟೆಂಟ್ಗಳನ್ನು ನಿರ್ಮಾಣ ಮಾಡಲಾಗಿತ್ತು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ಸೌಧದ ಹೊರಗಡೆ ಪ್ರತಿಭಟನೆಗಳ ಸಂಖ್ಯೆ ಇಳಿಮುಖವಾದರೆ ಹಾಗೂ ಸದನದ ಒಳಗಡೆ ಜನಸಾಮಾನ್ಯರ ಹಾಗೂ ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಹಾಗೂ ಗಂಭೀರ ಚರ್ಚೆ ನಡೆದು ಪರಿಹಾರ ಕಂಡುಕೊಂಡರೆ ಉತ್ತರ ಕರ್ನಾಟಕ ಭಾಗದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸಿದ್ದು, ಸಾರ್ಥಕವಾಗಲಿದೆ. ಇದರಿಂದ ಸರ್ಕಾರಕ್ಕೆ ಗೌರವ ಹಾಗೂ ಒಳ್ಳೆಯ ಹೆಸರು ಬರುತ್ತದೆ ಎನ್ನುವುದು ನನ್ನ ಮನದಾಳದ ಇಂಗಿತ ಎಂದರು.




