ವಿಶ್ವಗುರು ಎಂದು ಕರೆದುಕೊಳ್ಳುವ ಮೋದಿಯವರು ಉತ್ತರಿಸಬೇಕು: ಸಿದ್ದರಾಮಯ್ಯ

2 years ago

#Modi #Vishwaguru #answer #Siddaramaiah

ಬೆಂಗಳೂರು: ಪೌಷ್ಠಿಕತೆ ಸೂಚ್ಯಂಕದಲ್ಲಿ ಗುಜರಾತ್ ಮತ್ತು ಭಾರತದ ಸೂಚ್ಯಂಕ ಏರಿಕೆ ಆಗುತ್ತಲೇ ಇದೆ. ಏಕೆ ಹೀಗಾಯ್ತು ಎಂದು ತನ್ನನ್ನು ತಾನು ವಿಶ್ವಗುರು ಎಂದು ಕರೆದುಕೊಳ್ಳುವ ಪ್ರಧಾನಿ ಮೋದಿಯವರು ಉತ್ತರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಅತ್ಯಂತ ಮಹತ್ವಪೂರ್ಣ ಮತ್ತು ಅತ್ಯಂತ ಜನಾರೋಗ್ಯ ಕಾರ್ಯಕ್ರಮವಾದ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ್ ಮಾದರಿ ಎನ್ನುವವರು ಗುಜರಾತ್ ಅಪೌಷ್ಠಿಕತೆ ಸೂಚ್ಯಂಕದಲ್ಲಿ ಮೇಲಕ್ಕೆ ಏರುತ್ತಿರುವುದು ಏಕೆ ಎನ್ನುವುದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಗುಜರಾತ್ ನ ಈ ಸ್ಥಿತಿ ಮಾದರಿ ಆಗಲು ಸಾಧ್ಯವೇ ಎಂದು ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ 4 ಮತ್ತು 5 ರಲ್ಲಿ ಇರುವ ಅಂಕಿ ಅಂಶಗಳನ್ನು ವಿವರಿಸಿದ ಸಿದ್ದರಾಮಯ್ಯ, ಬಡತನ-ದಾರಿದ್ರ್ಯ-ಅನಕ್ಷರತೆ ಹೋಗದೆ ಎಲ್ಲರಿಗೂ ಉತ್ತಮ ಆರೋಗ್ಯ ಸಿಗುವುದಿಲ್ಲ. ಆದ್ದರಿಂದ ಈ ಮೂರು ಪಿಡುಗುಗಳಿಗೆ ಚಿಕಿತ್ಸೆ ಕೊಡುವುದು ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ.
ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯದ ಸವಲತ್ತು ತಲುಪಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಸರ್ಕಾರ ಅಗತ್ಯವಿದ್ದಷ್ಟು ಹಣ ನೀಡಲು ಸಿದ್ದವಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಬ್ಬರೂ ಸೇರಿ ನಮ್ಮ ರಾಜ್ಯದ ಮಕ್ಕಳು ಮತ್ತು ಪ್ರತಿಯೊಬ್ಬರೂ ಅತ್ಯಂತ ಆರೋಗ್ಯವಂತರಾಗುವಂತೆ ಇನ್ನಷ್ಟು ಹೆಚ್ಚೆಚ್ಚು ಶ್ರಮಿಸಿ ಸರ್ಕಾರದ ಗುರಿಯನ್ನು ಸಾಧಿಸಿ ತೋರಿಸಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ,
ರಕ್ತ ಹೀನತೆ ತೊಡಗಿಸುವಲ್ಲಿ ರಾಜ್ಯ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸಿಎಂ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ತೋರಿಸಿದ್ದಾರೆ ಎಂದರು.

ಅನೀಮಿಯ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ಇಲ್ಲ. ರಕ್ತಹೀನತೆ ಕುರಿತು ನಮ್ಮ ಜನ ಕಾಳಜಿ ವಹಿಸಿಲ್ಲ. ಜನಸಾಮಾನ್ಯರ ಉತ್ತಮ ಆರೋಗ್ಯದ ದೃಷ್ಟಿಯಿಂದ ಈ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸುವ ಅಗತ್ಯ ಇದ್ದು, ಸಿದ್ದರಾಮಯ್ಯ ಅವರು ಹೆಚ್ಚಿನ ಸಹಕಾರ ನೀಡಿದ್ದಾರೆ. ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಗೆ 185.74 ಕೋಟಿ ಅನುದಾನ ಒದಗಿಸಿದ್ದು, ಸಿದ್ದರಾಮಯ್ಯ ಅವರ ಅತ್ಯಂತ ಮುತುವರ್ಜಿ ವಹಿಸಿದ್ದಾರೆ ಎಂದರು.

ಅನೀಮಿಯದಿಂದ ಗ್ರಹಿಕಾ ಶಕ್ತಿ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತಿದೆ. ಐದು ವರ್ಷದೊಳಗಿನ 65% ಮಕ್ಕಳು ಅನೀಮಿಯಾಗೆ ಒಳಗಾಗಿದ್ದಾರೆ. 15-49 ವಯಸ್ಸಿನ ಮಹಿಳೆಯರಲ್ಲಿ 47.8% ಅನೀಮಿಯ ಇದೆ. ಹಿಮೋಗ್ಲೋಬಿನ್ ಕಡಿಮೆಯಾದಾಗ ಅನೀಮಿಯ ಶುರುವಾಗುತ್ತೆ. ಇದಕ್ಕೆ ಪೌಷ್ಠಿಕಾಂಶದ ಕೊರತೆಯೇ ಮುಖ್ಯ ಕಾರಣ. ಕಬ್ಬಿಣಾಂಶ ಕೊರತೆಯಿಂದ ಹಿಮೋಗ್ಲೋಬಿನ್ ಕಡಿಮೆಯಾಗುತ್ತದೆ. ಈ ಬಗ್ಗೆ ನಮ್ಮ ಜನರು ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಇದರಿಂದ ನಮ್ಮ ದೈಹಿಕ, ಮಾನಸಿಕ ಬೆಳವಣಿಗೆ ಕಡಿಮೆಯಾಗುತ್ತೆ. ಸುಸ್ತು ಆಯಾಸದಿಂದ ಮಾನವನ ಶಕ್ತಿಯೇ ಕುಗ್ಗುತ್ತದೆ. ಹೀಗಾಗಿ ಅನೀಮಿಯ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇವೆ ಎಂದರು.

ಒಟ್ಟು 6 ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಮೊದಲ ಹಂತದಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಗಾಗಿ ಸಾಮೂಹಿಕ ತಪಾಸಣೆ ನಡೆಸಲಾಗುವುದು. ಎರಡು ಮತ್ತು ಮೂರನೇ ಹಂತದಲ್ಲಿ ಮೇಲ್ವಿಚಾರಣೆ, ರಕ್ತ ಸಂವರ್ಧಿನಿ ಐಎಫ್ಎ ಪೂರಕ ಮತ್ತು ಜಂತುಹುಳು ನಿವಾರಣೆಯತ್ತ ಇಲಾಖೆ ಗಮನಹರಿಸಲಿದೆ. ನಾಲ್ಕನೇ ಹಂತದಲ್ಲಿ ಮನೆಗೆ ಪಡಿತರ ಮತ್ತು ಆಹಾರ ವಿತರಣೆ ಹಾಗೂ ಪೌಷ್ಠಿಕ ಅಭಿಯಾನ ಸಮಾಲೋಚನೆ ಸೇವೆಗಳು ಔಷಧಿ ವಿತರಣೆ
ಆರೋಗ್ಯ ಕೌಶಲ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Leave a Reply