ನಿಮ್ಮ ಮನೆಯಲ್ಲಿ ವಿಪರೀತ ಇಲಿ ಕಾಟವೇ? ರಾತ್ರೆ ಲೈಟ್ ಆಫ್ ಮಾಡಿ ಮಲಗಿದ ಸ್ವಲ್ಪ ಹೊತ್ತಲ್ಲೇ ಚಿಲಿಚಿಲಿ ಕಿಚಿಕಿಚಿ ಕುಚುಕುಚು ಶಬ್ಧ ಮಾಡುತ್ತಾ ಹಾವಳಿ ಮಾಡುತ್ತಾ ನಿಮಗೆ ಮಲಗಲು ಬಿಡದೆ ಉಪಟಳ ಕೊಡುತ್ತಿವೆಯೇ? ಇದಕ್ಕೆ ನಾನೊಂದು ಉತ್ತಮ ಪರಿಹಾರ ಹೇಳ್ತಿನಿ ಹಾಗೆ ಮಾಡಿ..
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ನಮ್ಮ ನೂರಾರು ವರ್ಷ ಹಳೇಯದಾದ ಮಣ್ಣಿನ ಗೋಡೆಯ ಮನೆ ಇದ್ದಾಗ ಇಲಿಗಳ ಕಾಟ ಹೇಳತೀರದು. ಇಲಿಗಳು ರೈತಶತ್ರುಗಳು. ನಮ್ಮದೆಲ್ಲಾ ಕೃಷಿಕರ ಕುಟುಂಬಗಳಾದ್ದರಿಂದ ಹತ್ತು ಹಲವು ಬಗೆಯ ಬೀಜ ಭತ್ತ ಕಾಳು ಕಡಿ ಇದ್ದೇ ಇರುತ್ತಿದ್ದವಾದ್ದರಿಂದ ಇಲಿಗಳ ಸೇನೆಯೇ ಮನೆಯ ಮಹಡಿಯ ಸಂಧಿಗೊಂದಿಗಳಲ್ಲಿ ಮನೆಮಾಡಿಕೊಂಡಿತ್ತು. ಹಗಲೆಲ್ಲಾ ಸುದ್ದಿ ಸುಳಿವಿಲ್ಲದಂತಿರುತ್ತಿದ್ದ ಅವು ರಾತ್ರಿ ಆದೊಡನೆ ಅದೂ ಲೈಟು ಕಳವಿ ಮಲಗುತ್ತಿದ್ದಂತೆ ಕೆಲಸ ಶುರುಹಚ್ಚುತ್ತಿದ್ದವು. ಸಂತೆಯಲ್ಲಿ ನಿದ್ದೆ ಮಾಡಬಹುದು ಇಲಿ ಇರುವ ಮನೆಯಲ್ಲಿ ಕುಂಭಕರ್ಣನೂ ಮಲಗಲಾರ. ಅಸ್ಟೊಂದು ದಾಂಧಲೆ ಮಾಡುತ್ತವೆ ಇಲಿ. ಕುಂಭಕರ್ಣನನ್ನ ಎಬ್ಬಿಸಲು ಅಸ್ಟೊಂದು ಹರಸಾಹಸ ಪಡುವ ಬದಲು ಒಂದು ಇಲಿಸೇನೆಯನ್ನು ಬಿಟ್ಟಿದ್ದರೆ ಅವುಗಳೇ ಅವನನ್ನು ಎಬ್ಬಿಸಿಬಿಡುತ್ತಿದ್ದವು.
ಕತ್ತಲಾಗುತ್ತಿದ್ದಂತೆ ಅಡುಗೆ ಮನೆಯ ಪಾತ್ರೆ ಗಳನ್ನ ಡಣ್ ಟಣ್ ದುಬ್ಬೆಂದು ಉರುಳಿಸುವುದು, ವಯರ್ ಕಟ್ ಮಾಡಿ ಟಿವಿ, ರೇಡಿಯೊ, ಫ್ರೀಜ್, ಮೊದಲಾದವುಗಳ ಕನೆಕ್ಷನ್ ತಪ್ಪಿಸುವುದು, ಬಾತು ರೂಮಿನಿಂದ ಸೋಪು, ಟೂತ್ ಪೇಷ್ಟಿನ ಟ್ಯೂಬು, ಟೂತ್ ಬ್ರಷ್ಷು, ಶಾಂಪೂ ಪಾಕೆಟ್ಟುಗಳನ್ನೇ ಎಗರಿಸುವುದು. ಯಾವುದಾದರೂ ಸಂಧಿಯಲ್ಲಿ ಸೇರಿಕೊಂಡು ಕಟಕಟಕಟಕಟ್ ಕಟಕಟಕಟಕಟ್ ಶಬ್ಧ ಮಾಡುತ್ತಾ ಚೀಲ ಪುಸ್ತಕ ಬಟ್ಟೆ ಕತ್ತರಿಸುವುದು ಇಂತಹಾ ದರಿದ್ರ ತೀಟೆಗಳೇ ಇಲಿಗಳ ಸಂಸ್ಕೃತಿ. ಈ ಇಲಿಗಳು ಎಂಥಾ ಕಿಲಾಡಿಗಳು ಎಂದರೆ, ಕಾಟ ತಡೆಯಲಾರದೆ ಎದ್ದು ಲೈಟು ಹಾಕಿದರೆ, ಇದ್ದವೊ ಇಲ್ಲವೋ ಎನ್ನುವಂತೆ ಕ್ಷಣಾರ್ಧದಲ್ಲಿ ದೋರು ಸೇರಿ ಸ್ಥಬ್ಧವಾಗಿಬಿಡುತ್ತವೆ.
ಲಕ್ಷ ಲಕ್ಷ ಜನರನ್ನು ಜಗತ್ತಿನಾದ್ಯಂತ ಬಲಿಪಡೆದ ವಂಶ ಇದು. ಪಾರ್ವತಿಗೆ ಬುದ್ದಿ ಕಲಿಸಲು ಶಿವ ಅವಳ ಹೊಸ ಹೊಸ ಸೀರೆ ಕುಪ್ಪ ಇತ್ಯಾದಿ ಉಡುಗೆಗಳನ್ನು ಕತ್ತರಿಸಲು ಈ ಇಲಿಗಳನ್ನು ಬಿಡುತ್ತಾನೆ. ಪಾರೋತಿ ಬೆಳಗ್ಗೆದ್ದು ಬಟ್ಟೆ ನೋಡಿದರೆ ಇಲಿಗಳು ಅವಳ ಅಂದ ಚಂದದ ಬಟ್ಟೆಗಳಿಗೆ ಒಂದು ಗತಿ ಕಾಣಿಸುರುತ್ತವೆ. ಪಾರೋತಿಗೆ ಎಸ್ಟು ರೊಚ್ಚೆದ್ದಿರಬಾರದು? ಇವುಗಳ ಉಪಟಳ ತಪ್ಪಿಸಿ ರೈತರ ರಕ್ಷಿಸಲು ಬೆನಕ ಬರಬೇಕಾಯಿತು. ಅಂದಿನಿಂದ ಇವು ಗಣಪತಿಯ ವಾಹನ. ಇವಕ್ಕಾಗಿ ಇಲಿವಾರ ಅಂತ ಒಂದು ವಾರಬೇರೆ ಕೇಡು.
ಹ್ಞಾ… ನಮ್ಮ ಹಳೆಯ ಮಣ್ಣಿನ ಮನೆ ಬಗ್ಗೆ ಹೇಳ್ತಾ ಇದ್ದೆ ಅಲ್ವಾ? ಮನೇಲಿ ಬೆಕ್ಕು ನಾಯಿ ಸಾಕೊ ಹಾಗೆ ಇರಲಿಲ್ಲ. ನಮಗೆ ಬೆಕ್ಕು ನಾಯಿ ಒಲಿಯಲ್ಲ ಅಂತ ನಮ್ಮಮ್ಮ ದೊಡ್ಡಮ್ಮರ ಒಂದು ಇದು. ಹಾಗಾಗಿ ಸಾಕ್ತಿದ್ದಿಲ್ಲ. ಪಾಶಣ ಇಡೋದು, ಬೋನು ಇಡೋದು. ಎಲ್ಲಾ ಆಯ್ತು. ಹರಾಮಿಗಳು ಒನ್ಸಲ ಬಿದ್ರೆ ಮಾರನೆ ದಿನ ಏನು ಯಾವತ್ತು ಬೋನಿನ ಕಡೆ ಮುಖ ಹಾಕ್ತಿದ್ದಿಲ್ಲ. ನಮ್ಮ ದೇವರ ಮನೆಗೆ ಮಹಡಿಯಿಂದ ನೇರವಾಗಿ ಇಳಿಸುಬಿಡ್ತಿದ್ವು. ಹಿಂಡೇ ಹಿಂಡು. ಲೈಟು ಹಾಕಿದರೆ ಓಡಿ ಹೋಗುತ್ತವೆ ಅಂತ ಸದ್ದಿಲ್ಲದೆ ಎದ್ದು ಕೂಡಿಕೊಂಡು ಹೊಡೆಯೋಣ ಎಂದರೆ ಬಾಗಿಲು ಗರಕ್ ಎನ್ನುತ್ತಿದ್ದಂತೆ ಅಸ್ಟಕ್ಕೆ ಅಸ್ಟು ಬೀರೂವಿನ ಮೇಲೇರಿ ಸುರಕ್ಷಿತವಾಗಿ ಮಹಡಿ ಸೇರಿಬಿಡೋವು. ಆವತ್ತು ಒಂದು ದಿನ ಎಲ್ಲಿತ್ತೊ ನನಗೆ ಸಿಟ್ಟು ಎಂದಿನಂತೆ ಅವು ದೇವರ ಮನೆಗೆ ಇಳಿದವು. ನಾನು ಮೆಲ್ಲನೆ ಮಹಡಿಯ ಮೇಲೆ ಬೆಕ್ಕಿನ ಹಾಗೆ ಹೋಗಿ ಅವು ತಪ್ಪಿಸಿಕೊಳ್ತಾ ಇದ್ದಿ ಪಡವಿಗೆ ಬಲವಾಗಿ ಬಟ್ಟೆ ತುರುಕಿದೆ. ಮೂಲೆಯಲ್ಲಿದ್ದ ಈಚಲು ಕಸಬರಿಗೆಯನ್ನೇ ಹಿಡಿ ಕೆಳಗಾಗಿ ಟಿಪ್ಪುಸುಲ್ತಾನನ ಖಡ್ಗದಂತೆ ಹಿಡಿದು ಮಿಂಚಿನವೇಗದಲ್ಲಿ ದೇವರ ಕೋಣೆಗೆ ನುಗ್ಗಿ ಅಸ್ಟೇ ವೇಗವಾಗಿ ಬಾಗಿಲು ಲಾಕ್ ಮಾಡಿ ಲೈಟು ಹಾಕಿದೆ.. ದೇವರ ಮನೆಯಲ್ಲಿ ಹದಿನೇಳು ಇಲಿಗಳು… ಅವಗಳು ನನ್ನ ನೋಡಿ ಹೆದರುತ್ತಿವೆಯೋ ನಾನೇ ಅವುಗಳನ್ನ ನೋಡಿ ಹೆದರುತ್ತಿದ್ದೇನೋ ಒಂದು ಅರ್ಥ ಆಗಲಿಲ್ಲ ನನಗೆ… ಅಸ್ಟು ಸಂಖ್ಯೆಯ ಹಂದಿ ಮರಿಗಳಂತಹಾ ಇಲಿಗಳನ್ನು ನೋಡಿ ಹೆದರಿಬಿಟ್ಟೆ. ಪ್ರಾಣಿಗಳು ಕೆಲವೊಮ್ಮೆ ತಮ್ಮ ಜೀವರಕ್ಷಣೆಗಾಗಿ ತಮ್ಮ ಬಲಿಷ್ಠ ಶತ್ರುವಿನ ಮೇಲೇ ತಿರುಗಿಬಿದ್ದು ಕತೆ ಮುಗಿಸಿಬಿಡುತ್ತವೆ. ಇಲಿಗಳೂ ಹೆದರಿ ಮಾಮೂಲಿನಂತೆ ಮಹಡಿ ಏರಲು ಹೋದರೆ ಅಲ್ಲಿ ನಾನು ಅವುಗಳ ದಾರಿಯನ್ನೇ ಮುಚ್ಚಿಬಿಟ್ಟಿದ್ದೆ. ಅವು ಕಂಗಾಲಾಗಿ ವಾಪಸ್ ಬಂದು ಕಿಚಿಗುಟ್ಟುತ್ತಾ ನೆಲಗೆರೆಯುತ್ತಾ ದಿಕ್ಕಾಪಾಲಾಗಿ ಹರಿದಾಡತೊಡಗಿದವು. ನನ್ನ ಮೈಮೇಲೇ ಅಡರಲು ಕಾಲಿಗೆಲ್ಲ ತಾಗುತ್ತಾ ರಂಪ ಎಬ್ಬಿಸಿದವು. ನಾನು ‘ಇವತ್ತು ನಿಮ್ಮ ಯಜಮಾನ ಮಿಷ್ಟರ್ ಗಣಪತಿವರೇ ಬಂದರು ನಿಮ್ಮನ್ನು ರಕ್ಷಿಸಲಾರನು ಕಣ್ರೋ…’ ಎನ್ನುತ್ತಾ ನನ್ನ ಕೈಲಿ ಹಿಡಿದಿದ್ದ ಖಡ್ಗದಿಂದ ಮೂಷಿಕಾ ಮರ್ದನಕ್ಕೆ ತೊಡಗಿದೆ. ದಬ್ ದಬ್ ದುಪ್ ದುಪ್ ಬಾರಿಸತೊಡಗಿದೆ. ನನ್ನ ಕಸಬರಿಗೆಯ ಶಬ್ಧಗಳು ಭೀಮ ದುರ್ಯೋಧನರ ಗದಾಯುದ್ಧದ ದಧಿಲ್ ಬುಧಿಲ್ಲೆನೆ ದುಪ್ಪಡಿದುಭುಲ್ಲೆನೆ ಹೊಮ್ಮ ದೊಡಗಿದವು. ಹತ್ತು ಹದಿನೈದು ನಿಮಿಷಗಳ ಕಾಲ ನಡುರಾತ್ರಿ ನಡೆದ ಭೀಕರ ಭೀಕರ ಕಗ್ಗೊಲೆ ಕಾಳೆಗದಲ್ಲಿ ಅಂತೂ ನಾನೇ ಗೆದ್ದೆ… ಹದಿನೇಳು ಇಲಿಗಳ ಹೆಣಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಯಾವುದಾದರೂ ಇಲಿ ಅರೆಜೀವವಾಗಿ ಮಿಸುಕಾಡಿದರೂ ದೊಪ್ಪನೆ ಬಡಿದು ಹಾಕುತ್ತಿದ್ದೆ. ಹೊಡೆತಕ್ಕೆ ಕಸಬರಿಗೆಯೂ ಅಸ್ಥವ್ಯಸ್ಥವಾಗಿತ್ತು. ಹೆಣ ಕೆಡವಿ ಹೊರಗೆ ಬರುವಷ್ಟರಲ್ಲಿ ಮೈ ಬೆವೆತು ಹೋಗಿತ್ತು. ಯಾರಾದರೂ ಇಲಿ ತಿನ್ನುವ ಜನರು ಇದ್ದಿದ್ದರೆ ಒಂದೆರೆಡು ಕೇಜಿ ಬಾರೀ ಇಲಿಮಾಂಸ ಅವರಿಗೆ ನಿರಾಯಾಸವಾಗಿ ಸಿಗುತ್ತಿತ್ತು… ನಟ್ಟ ನಡುರಾತ್ರೆ ಮೂಷಿಕಗಳ ಹೆಣದ ರಾಶಿಯನ್ನು ದೂರ ವಯ್ದು ಎಸೆದು ಬಂದದ್ದಾಯಿತು. ಆಗಿನಿಂದ ಬೆಕ್ಕು ಸಾಕುವ ಪರಿಪಾಠ ಬೆಳೆಸಿಕೊಂಡೆವು. ಯಾವಾಗ ಬೆಕ್ಕು ಬಂದಿತೊ ಇಲಿಗಳು ಆದೃಷ್ಯವಾದವು. ಇದು ಈಗ ಹತ್ತಿಪ್ಪತ್ತು ವರ್ಷದ ಹಿಂದಿನ ಕತೆ..
ಹ್ಞಾ… ನಾನು ನಿಮಗೆ ಇಲಿಗಳ ಕಾಟಕ್ಕೆ ಪರಿಹಾರ ಹೇಳಬೇಕಲ್ಲವೇ. ಈಗ ಹೊಸ ತಾರಸಿ ಮನೆ ಕಟ್ಟಿ ವರ್ಷ ಕಳೆಯಿತು. ಮನೆಯ ಹಿಂದೊಂದು ತಗಡಿನ ಷೆಡ್ ಕಟ್ಟಿದ್ದೇವೆ. ‘ಷೆಡ್’ ಎಂದ ಕೂಡಲೇ ಪಟ್ಟಣಗೆರೆ ಷೆಡ್ಡು ನೆನೆದು ಹೆದರಿಕೊಳ್ಳಬೇಡಿ… ಈ ನಮ್ಮನೆಯ ಹೊಸ ಶೆಡ್ಡಿನಲ್ಲಿ ಮನೆಗೆ ಉಪಯುಕ್ತವಾದ ದಿನಸಿ ಬಟ್ಟೆ ಮೊದಲಾದ ವಸ್ತುಗಳನ್ನ ಇಟ್ಟಿದ್ದೀವಿ. ನಾನು ಓದೋದು ಮಲಗೋದು ಹೆಚ್ಚು ಹೊತ್ತುಗಳೆಯೋದು ಇದೇ ಷೆಡ್ಡಿನಲ್ಲೇ. ಷೆಡ್ಡಿನೊಳಗೆ ಮತ್ತೊಂದು ಸಣ್ಣ ಕೋಣೆ. ಅಲ್ಲಿ ಒತ್ತೊತ್ತಾಗಿ ಹಳೆಯ ಸಾಮಾನುಗಳಿವೆ. ಯಾವಾಗಲೋ ಯಾರೋ ಶೆಡ್ಡಿನ ಬಾಗಿಲು ತರೆದು ಬಿಟ್ಟಿದ್ದರೋ ಏನೊ ಎರಡು ಇಲಿಗಳು ಅಲ್ಲಿ ಸೇರಿಕೊಂಡುಬಿಟ್ಟಿವೆ. ರಾತ್ರೆ ಲೈಟು ಕಳವಿದರೆ ಅವಗಳು ಹಾವಳಿ ಮಾಡಲು ಶುರುವಿಡುತ್ತವೆ. ಬಿಟ್ಟರೆ ಕರೆಂಟು ಬಿಲ್ಲು ಏರುತ್ತದೆ. ಲೈಟಿದ್ದರೆ ನನಗೆ ನಿದ್ದೆಯೇ ಹತ್ತದು.
ಈಗ ವಾರದಿಂದ ನನಗೆ ಹಳೆಯ ಮನೆಯ ಇಪ್ಪತ್ತು ವರ್ಷದ ಹಿಂದಿನ ಇಲಿಕಾಟದ ನೆನಪುಗಳು ಬರತೊಡಗಿವೆ. ಎದ್ದು ಲೈಟ್ ಹಾಕುತ್ತಿದ್ದಂತೆ ಆ ಕಿರು ಕೋಣೆಯ ಯಾವುದೂ ಮೂಲೆ ಸೇರಿಬಿಡುತ್ತವೆ. ಇವುಗಳ ಕಾಟ ತಪ್ಪಿಸಿಕೊಳ್ಳಲು ನಾನೊಂದು ಉಪಾಯ ಹುಡುಕಿದೆ. ಅವು ಗಲಾಟೆ ಮಾಡುವಾಗ ನಾನು ನಿಧಾನವಾಗಿ ಮಲಗಿದ್ದಲ್ಲಿಂದಲೇ ಒಂದು ಬಾರಿ ಹೆಣ್ಣು ಬೆಕ್ಕಿನಂತೆ ‘ಮಿಯಾಂ…….ವ್ ಮಿಯಾಂ..ವ್’ ಎಂದು ಕೋಮಲವಾದ ದನಿಯಲ್ಲಿ ಕೂಗುತ್ತೇನೆ. ಮತ್ತೊಂದು ಬಾರಿ ಗಂಡು ಬೆಕ್ಕಿನಂತೆ ಕರ್ಕಷವಾಗಿ ಮುವಾಂ……ವ್್್್… ಮುವಾಂ……ವ್್್್… ಎಂದು ಕೂಗುತ್ತೇನೆ… ಇನ್ನೊಮ್ಮೆ ಮರಿ ಬೆಕ್ಕಿನಂತೆ ಸುಕುಮಾರವಾಗಿ ಮೀ……………..ಯಾಂವ್ ಮಿಯ್…. ಮೀ……..ಯಾಂವ್ ಮಿಯ್…☺☺ ಎಂದು ಕೂಗುತ್ತೇನೆ. ಆ ಇಲಿಗಳು ನಿಜವಾದ ಬೆಕ್ಕೇ ಇರಬೇಕೆಂದು ತಿಳಿದು ಧಿಕ್ಕೆಟ್ಟು ಓಡಿ ಅಡಗಿಕೊಳ್ಳುತ್ತವೆ. ಆಗ ಮತ್ತೆ ಗಲಾಟೆ ಮಾಡುತ್ತವೆಯೇ? ಎಂದು ಸ್ವಲ್ಪ ಹೊತ್ತು ಅಬ್ಸರ್ವ್ ಮಲಗುತ್ತೇನೆ.
ಭೋಸುಡಿ ಇಲಿಗಳು ಅರ್ಧಗಂಟೆ ಬಿಟ್ಟು ಮತ್ತೆ ಶುರು ಹಚ್ಚುತ್ತವೆ. ನಾನು ಮತ್ತೆ ಎಚ್ಚರವಾಗಿ ಬೆಕ್ಕಿನ ಹಾಡು ಹಾಡುತ್ತೇನೆ. ಈ ನನ್ನ ಮಾರ್ಜಾಲಾ ಗೀತಗಾಯನದ ಸತ್ಯ ಅವುಗಳಿಗೆ ಈಗ ತಿಳಿದಿರಬೇಕು. ನಾನು ಮಿಯಾಂವ್ ಅಂದರೂ ಕ್ಯಾರೇ ಎನ್ನುವುದಿಲ್ಲ. ಅದಕ್ಕೆ ಮತ್ತೊಂದು ಹೊಸ ಐಡಿಯ ಕಂಡು ಹಿಡಿದೆ. ಅದೇನೆಂದರೆ ಯೂಟ್ಯೂಬಿನಲ್ಲಿ ಕ್ಯಾಟ್ ವಾಯ್ಸ್ ನ ವೀಡಿಯೋಗಳನ್ನು ಸರ್ಚ್ ಮಾಡಿ ಪ್ಲೇ ಹಾಕೋದು. ನಿಜವಾದ ಚೆಕ್ಕುಗಳ ಈ ದನಿಗೆ ಇಲಿಗಳು ಬೆದರಿ ಮುದುರಿಕೊಳ್ಳುತ್ತವೆ…. ಅಲ್ಲಾ ನನ್ನ ಈ ಐಡಿಯಾ ನೀವ್ಯಾರೂ ಮಾಡೋಕೆ ಹೋಗ್ಬೇಡಿ. ಇದಕ್ಕಿಂತ ಇಲಿ ಕಾಟವೇ ಎಸ್ಟೋ ವಾಸಿ… ಇತ್ತಾ ಇಲಿಯೂ ಮಲಗಲ್ಲ ನಾವೂ ಮಲಗಲ್ಲ. ಇತ್ತಾ ಮಿಯಾಂವ್ ಮಿಯಾಂವ್ ಎನ್ನೂ ನಾವೇ ಎಚ್ಚರಾಗಬೇಕು, ಯೂಟೂಬು ಬೆಕ್ಕಿನ ಕೂಗಿ ಪ್ಲೇ ಮಾಡಲೂ ನಾವೇ ಎಚ್ಚರಿರಬೇಕು. ಇದು ಹೆಂಗೆ ಅಂದ್ರೆ ಇಲಿನ ಸೈಲೆಂಟ್ ಮಾಡಿ ನಾವು ಎಚ್ಚರ ಇರೋ ಗ್ರಹಚಾರ. ನಿಮಗೆ ಈ ಐಡಿಯಾ ಹೇಳುವ ನೆಪದಲ್ಲಿ ಈ ಇಲಿಪುರಾಣವನ್ನು ಓದಿಸಬೇಕಿತ್ತು ಅಷ್ಟೆ..
- ಸುರೇಶ ಎನ್ ಶಿಕಾರಿಪುರ ಶಿಕಾರಿಪುರ, ಚಿಂತಕರು



