ಸಡಿಲವಾದ ಚಿತ್ರಕತೆಯ ವಿಡುದಲೈ.
ವೇಟ್ರಿಮಾರನ್ ತಮಿಳು ಚಿತ್ರರಂಗದ ಪ್ರತಿಭಾವಂತ ಚಿತ್ರ ನಿರ್ದೇಶಕ. ಯಾವುದೇ ಸನ್ನಿವೇಶ ಅಥವಾ ಸಂಗತಿ ಇರಲಿ ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಬಲ್ಲ ನಿರ್ದೇಶಕ. ಈ ಕುರಿತು ಎರಡು ಮಾತಿಲ್ಲ.
ಪಾಂಡಿಚೆರಿ ಸಮೀಪದ ಕಡಲೂರಿನಲ್ಲಿ ಪಶುವೈದ್ಯರಾಗಿದ್ದ ತಂದೆ ಹಾಗೂ ತಮಿಳು ಕಾದಂಬರಿಗಾರ್ತಿಯಾಗಿರುವ ತಾಯಿಯ ಮಗನಾಗಿ ಜನಿಸಿದ ವೇಟ್ರಿಮಾರನ್ ಇಂಗ್ಲೀಷ್ ಸಾಹಿತ್ಯವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡು ಪದವಿ ಗಳಿಸಿದ ವ್ಯಕ್ತಿ.
ಸಿನಿಮಾ ನಿರ್ಮಾಣದಲ್ಲಿ, ನಿರ್ದೇಶನದಲ್ಲಿ ಆಸಕ್ತಿ ಇದ್ದ ಕಾರಣ ಪ್ರಸಿದ್ಧ ಚಿತ್ರನಿರ್ದೇಶಕ ಬಾಲುಮಹೇಂದ್ರರ ಬಳಿ ಸಹಾಯಕನಾಗಿ ದುಡಿದು ನಂತರ ಸ್ವತಂತ್ರ ನಿರ್ದೇಶಕನಾಗಿ ಬೆಳೆದು ಈವರೆಗೆ ತನ್ನ ಸಿನಿಮಾಗಳಿಗೆ ಐದು ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭಾವಂತ.
ಧನುಷ್ ನಾಯಕನಾಗಿ ನಟಿಸಿದ ಪೊಲ್ಲಾದವನ್ ಸಿನಿಮಾ ಮೂಲಕ ಬೆಳಕಿಗೆ ಬಂದ ವೇಟ್ರಿ ಮಾರನ್ ಈವರೆಗೆ ಧನುಷ್ ಅಭಿನಯದ ವಡಚೆನ್ನೈ, ಆಡುಕುಲಂ ಮತ್ತು ಅಸುರನ್ ಸಿನಿಮಾಗಳ ಮೂಲಕ ಪ್ರಸಿದ್ಧಿಗಳಿಸಿದನು.
ವೇಟ್ರಿಮಾರನ್ ಸೂಕ್ಷ್ಮ ಮನಸ್ಸಿನ ಚಿತ್ರ ನಿರ್ದೇಶಕ ಎಂದು ವಿಸಾರಣೈ ಮತ್ತು ಅಸುರನ್ ಮೂಲಕ ಸಾಬೀತು ಪಡಿಸಿದ್ದ. ಆದರೆ, ವಿಡುತಲೈ ಸಿನಿಮಾ ಕ್ಕೆ ಒಳ್ಳೆಯ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರೂ ಸಹ ಎರಡು ಭಾಗಗಳಲ್ಲಿ ನಿರ್ಮಿಸಲು ಹೋಗಿ ಅನಾವಶ್ಯಕವಾಗಿ ಕಥೆಯನ್ನು ಎಳೆಯಲಾಗಿದೆ ಎನಿಸುತ್ತದೆ.
ಆದಿವಾಸಿಗಳ ಬೆಂಬಲಕ್ಕೆ ನಿಂತ ಅನೇಕ ಕ್ರಾಂತಿಕಾರಿ ಯುವಕರು ಸರ್ಕಾರದ ವಿರುದ್ಧ ಸಿಡಿದೆದ್ದ ಕಥೆ ನಮಗೆ ಹೊಸದಲ್ಲ. ಆಂಧ್ರದ ನಕ್ಸಲ್ ಇತಿಹಾಸದಲ್ಲಿ ನೂರಾರು ಕಥೆಗಳಿವ . ಈ ಸಿನಿಮಾದಲ್ಲಿ ಆದಿವಾಸಿಗಳ ಮೇಲೆ ಪೊಲೀಸರು ನಡೆಸುವ ಕ್ರೌರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆಯೇ ಹೊರತು. ಈ ನೆಲದ ನಿಜವಾದ ಮಣ್ಣಿನ ಮಕ್ಕಳಾದ ಆದಿವಾಸಿಗಳ ಬವಣೆ ಮತ್ತು ಅವರ ನಿಜವಾದ ಸಮಸ್ಯೆಗಳಿಗೆ ಆದ್ಯತೆ ಸಿಕ್ಕಿಲ್ಲ.
ಇಡೀ ಚಿತ್ರಕಥೆಯನ್ನು ಸಂಕ್ಷಿಪ್ತಗೊಳಿಸಿ ಅವರ ವಾಸ್ತವಿಕ ಸಮಸ್ಯೆ ಮತ್ತು ಆಳುವ ಸರ್ಕಾರಗಳ ಗೊಸುಂಬೆತನವನ್ನು ಒಂದೇ ಭಾಗದ ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಹೇಳಬಹುದಿತ್ತು ಎಂಬ ಭಾವನೆ ಪ್ರೇಕ್ಷಕರಲ್ಲಿ ಮೂಡುತ್ತದೆ.
ಮಂಡ್ಯ ಜಿಲ್ಲೆಯಲ್ಲಿ ಒಂದು ಪೋಲಿ ಗಾದೆ ಇದೆ. ,, ಮದುವೆಯಾಗೋ ಗಂಡಿಗೆ ಅದೇ ಇಲ್ಲ,, ಎಂದು. ಚಿತ್ರಕಥೆ ಇಲ್ಲದ ಈ ಸಿನಿಮಾ ನೋಡಿದಾಗ ನನಗೆ ಆ ಗಾದೆ ನೆನಪಾಯಿತು.
ಈ ಸಿನಿಮಾದ ಏಕೈಕ ಪ್ಲಸ್ ಪಾಯಿಂಟ್ ಎಂದರೆ ತಮಿಳಿನ ಖ್ಯಾತ ಹಾಸ್ಯ ನಟ ವಡಿವೇಲು ನಂತರ ಕಳೆದ ಒಂದು ದಶಕದಲ್ಲಿ ಪ್ರಸಿದ್ಧ ಹಾಸ್ಯನಟನಾಗಿ ಹೆಸರುವಾಸಿಯಾಗಿದ್ದ ಸೂರಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಮೂಲಕ ಭಾವನಾತ್ಮಕವಾಗಿ ಅಭಿನಯಿಸುವುದರಲ್ಲಿ ತಾನೋರ್ವ ಪ್ರತಿಭಾವಂತ ಎಂದು ಈ ಸಿನಿಮಾ ಮೂಲಕ ದೃಢಪಡಿಸಿದ್ದಾನೆ.
ವಿಡುದಲೈ ಎರಡನೇ ಭಾಗವನ್ನು ನೋಡುವ ಯಾವ ಆಸಕ್ತಿಯೂ ನನಗೆ ಉಳಿದಿಲ್ಲ. 2011 ರಲ್ಲಿ ಭಾರತದ ನಕ್ಸಲ್ ಇತಿಹಾಸ ಕುರಿತು ಸಂಶೋಧನೆ ನಡೆಸುತ್ತಿದ್ದಾಗ ಆಂಧ್ರದ ಶ್ರೀಕಾಕುಲಂ ಜಿಲ್ಲೆಯ ಪಾರ್ವತಿ ಪುರಂ ಎಂಬಲ್ಲಿ ಎರಡು ದಿನಗಳ ಕಾಲ ಇಂತಹದ್ದೇ ಆದಿವಾಸಿಗಳ ನೋವಿನ ಕಥೆ ಕೇಳುತ್ತಾ ಕಣ್ಣೀರು ಹಾಕಿದ್ದೆ. ಅವರ ನೋವಿನ ಕಥನವನ್ನು ನನ್ನ ಎಂದೂ ಮುಗಿಯದ ಯುದ್ಧ ಕೃತಿಯಲ್ಲಿ ಸವಿವರವಾಗಿ ದಾಖಲಿಸಿದ್ದೀನಿ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




