ಪ್ರತಿಬಾರಿ ಊರಿಗೆ ಹೊರಡುವಾಗ, ಸಣ್ಣಪ್ರಾಯದಲ್ಲಿ ಮಳೆ ಬಂದು ರಜೆ ಸಿಕ್ಕಾಗ ಶಾಲೆಯಿಂದ ಮನೆಗೆ ಓಡೋಡಿ ಬರುತ್ತಿದ್ದ ಹಾಗೆ ಕುಣಿದಾಡಿಕೊಂಡು ಹೋಗುತ್ತೇನೆ, ಊರಿನಿಂದ ವಾಪಸು ಬರುವಾಗ ರಜೆ ಮುಗಿದು ಶಾಲೆಗೆ ಹೊರಡುತ್ತಿದ್ದ ಹಾಗೆ ಒಲ್ಲದ ಮನಸ್ಸಿನಿಂದ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಹೊರಟು ಬರುತ್ತೇನೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇತ್ತೀಚೆಗೆ ಒಟಿಟಿಯಲ್ಲಿ ಸಿನೆಮಾ ನೋಡುವ ಹುಚ್ಚು ಹತ್ತಿದೆ, ಊರಿನ ಮನೆಯಲ್ಲಿ ಇಲ್ಲಿಯ ವರೆಗೆ ಟಿವಿ ಇಟ್ಟಿಲ್ಲ. ಮೊಬೈಲ್ ನಲ್ಲಿ ಬೆರಳಾಡಿಸುತ್ತಿರುವಾಗ ‘’ಮೆಯಳಗನ್’’ ಚಿತ್ರದ ರಿವ್ಯೂಗಳನ್ನು ನೋಡಿದೆ. ನಿನ್ನೆ ಬೆಳಿಗ್ಗೆ ಬಂದವನೇ ಬೆಳಿಗ್ಗೆ ತಿಂಡಿಯನ್ನೂ ತಿನ್ನದೆ ಎಂಟು ಗಂಟೆಗೆ ನೆಟ್ ಫ್ಲಿಕ್ಸ್ ನಲ್ಲಿ ಆ ಚಿತ್ರ ನೋಡಲು ಶುರುಮಾಡಿದೆ.. ಯಾರಾದರೂ ನನ್ನನ್ನು ಹುಚ್ಚ ಅನ್ನುತ್ತಾರೋ ಎನ್ನಬಹುದು ಎಂಬ ಭಯದಿಂದ ಸಂಯಮ ತಂದುಕೊಂಡು ಸುಮ್ಮನಾದೆ. ಇಲ್ಲದೆ ಇದ್ದರೆ ಚಿತ್ರ ಮುಗಿದ ಕೂಡಲೇ ರೈಲೋ, ಬಸ್ಸೋ ಹತ್ತಿ ಮತ್ತೆ ಊರಿಗೆ ಓಡಿಹೋಗುತ್ತಿದ್ದೆ. ಅದು ಬಡಿದೆಬ್ಬಿಸಿದ ಭಾವನೆಗಳ ಗುಂಗಿನಿಂದ ಇನ್ನೂ ಹೊರಬರಲು ಆಗುತ್ತಿಲ್ಲ.
ನನಗೆ ನನ್ನ ಊರಿನ ಬಗ್ಗೆ ಕರುಳುಬಳ್ಳಿಯ ಸಂಬಂಧ ಇದೆ. ಅದು ಬಹಳ ಸುಂದರವಾಗಿದೆ, ಅಲ್ಲಿದ್ದವರೆಲ್ಲರೂ ಸಜ್ಜನರು, ಒಳ್ಳೆಯವರು ಎಂದಲ್ಲ. ಎಲ್ಲ ಊರುಗಳಂತೆ ನನ್ನದು ಒಂದು ಊರು. ಆದರೆ ಅದು ನನ್ನೂರು.






ಈಗಲೂ ಊರಿಗೆ ಹೋದಾಗ ಒಬ್ಬನೇ ನದಿ ದಡದಲ್ಲಿ ಕೂರುತ್ತೇನೆ, ಹೆಚ್ಚು ಮಾತನಾಡುವುದಿಲ್ಲ, ಉಳಿದವರು ಮಾತನಾಡುವುದನ್ನು ಕೇಳುತ್ತೇನೆ. ವಾದ, ಜಗಳ ಏನೂ ಮಾಡುವುದಿಲ್ಲ. ಅಸೂಯೆ, ದ್ವೇಷ, ಮೋಸ, ಹಿಪಾಕ್ರಸಿಗಳನ್ನು ಒಳಗೊಂಡ ಊರ ಜನರ ನಡೆನುಡಿಗಳನ್ನು ಗಮನಿಸುತ್ತಿರುತ್ತೇನೆ. ಈ ದೊಡ್ಡವರೆನಿಸಿಕೊಂಡವರು ದುಡ್ಡಿದ್ದವರು, ವಿದ್ಯೆ ಇದ್ದವರು, ನಗರ-ಪಟ್ಟಣದವರ ಆಡುವ-ಮಾಡುವ ಸುಳ್ಳು, ಮೋಸ, ದ್ರೋಹ, ಸಣ್ಣತನಗಳ ನಡುವೆ ಈ ಹಳ್ಳಿ ಜನರ ದುರ್ಗುಣಗಳೆಲ್ಲ ನದಿಯ ತಿಳಿನೀರಿನ ಮೇಲೆ ತೇಲುತ್ತಿರುವ ಕಸಕಡ್ಡಿಗಳಂತೆ ಕಾಣುತ್ತದೆ.
ಸೇಮ್ ಟು ಸೇಮ್ ಅಲ್ಲದೆ ಇದ್ದರೂ ಈ ಚಿತ್ರದಲ್ಲಿನ ಹಲವು ಘಟನೆಗಳು ನನ್ನ ಊರಿನ ಸಾಮಾಜಿಕ ಮತ್ತು ಕೌಟುಂಬಿಕ ಬದುಕಿನಲ್ಲಿಯೂ ನಡೆದಿದೆ. ನನ್ನೂರಿನಲ್ಲಿಯೂ ಹಾಲೆರೆದ ಕೈಗಳಿಗೆ ಕಡಿದ ಹಾವುಗಳಿವೆ. ಆದರೆ ಹಾವುಗಳು ಕಡಿದರೂ ಹಾಲೆರೆಯುವುದನ್ನು ನಿಲ್ಲಿಸಬಾರದು ಎಂದು ಬಹಳ ವರ್ಷಗಳ ಹಿಂದೆಯೇ ನಿರ್ಧಾರ ಮಾಡಿರುವ ಕಾರಣ ಮೆಯಳಗನ್ ಕೊನೆಯಲ್ಲಿ ‘’ಮೋಸ ಮಾಡಿರುವ ಬಂಧುಗಳನ್ನು ಕ್ಷಮಿಸುಬಿಡು”’ ಎಂದು ಮಗುವಿನಂತೆ ಕೋರಿಕೊಂಡಾಗ ಅರುಲ್ ಒಪ್ಪಿರುವುದು ಆಶ್ಚರ್ಯ ಹುಟ್ಟಿಸಲಿಲ್ಲ
‘ ನಾನು ಪ್ರತಿಬಾರಿ ಊರಿಗೆ ಹೋದಾಗ ನಾನು ಕಲಿತ ಹೈಸ್ಕೂಲ್ ನ ಮೈದಾನಕ್ಕೆ ಬೆಳಿಗ್ಗೆ ವಾಕಿಂಗ್ ಹೋಗಿ ಅಲ್ಲಿಯೇ ಇರುವ ಶಾಲೆಯ ಒಳಹೊಕ್ಕು ಕಾರಿಡಾರ್ ನಲ್ಲಿ ಅಲೆದಾಡಿ, ನಾನು ಕೂರುತ್ತಿದ್ದ ಕ್ಲಾಸ್ ರೂಮ್ ಗಳ ಒಳಗೆ ಇಣುಕಿ, ಅಲ್ಲಿಯೇ ಸುಮ್ಮನೆ ಸ್ವಲ್ಪ ಹೊತ್ತು ಕೂತು ಪೋಟೊ ತೆಗೆದುಕೊಂಡು ಬರುತ್ತೇನೆ. ಮೊನ್ನೆ ಶನಿವಾರವೂ ಹೋಗಿದ್ದೆ. ವಾಕಿಂಗ್ ನಿಂದ ವಾಪಸು ಬರುವಾಗ ಬಹಳ ದಿನಗಳಿಂದ ಕಾಣಬೇಕೆಂದಿದ್ದ ನನ್ನ ಕ್ಲಾಸ್ ಮೇಟ್ ಹುಡುಗಿ ಗಂಡನ ಜೊತೆ ಎದುರಾಗಿ ಬಂದಳು. ಒಮ್ಮೆಲೆ ಆಘಾತವಾಯಿತು. ನಾನು ನೋಡಿದ್ದು ಆ ಹುಡುಗಿನೋ ಇಲ್ಲ ಅವಳ ತಾಯಿನೋ ಎನ್ನುವ ಗೊಂದಲ ಒಂದು ಕ್ಷಣ ಹುಟ್ಟಿಕೊಂಡದ್ದು ನಿಜ. ತಕ್ಷಣ ಸಾವರಿಸಿಕೊಂಡು ವಯಸ್ಸು ನನಗೂ ಆಗಿದೆಯಲ್ಲಾ ಎಂದು ಕೂದಲಿಲ್ಲದ ತಲೆ ಸವರಿಕೊಂಡೆ.
ಮೆಯಳಗನ್ ತನ್ನ ಬಾಲ್ಯದ ಬದುಕನ್ನು ಮೆಲುಕಾಡುವಾಗ ಉಲ್ಲೇಖವಾಗುವ ಜಾತಿತಾರತಮ್ಯದ ಪ್ರಸ್ತಾಪಗಳನ್ನು ಬಿಟ್ಟರೆ ಈ ಚಿತ್ರದಲ್ಲಿ ನೇರವಾಗಿ ಸಿದ್ದಾಂತದ ಭಾಷಣ, ಸಂಭಾಷಣೆ, ಘೋಷಣೆಗಳಿಲ್ಲ. ಇಲ್ಲವೇ ಇಲ್ಲ ಎಂದು ಹೇಳುವ ಹಾಗೆಯೂ ಇಲ್ಲ. ಇದೇ ತಮಿಳು-ಮಲೆಯಾಳಿ ಚಿತ್ರಗಳ ವಿಶೇಷ. ಯಾವ ಚಿತ್ರವಾದರೂ ಅವರು ಒಂದು ಸೂಚನೆ-ಸಂದೇಶವನ್ನು ತಣ್ಣಗೆ ಕೊಟ್ಟೇ ಬಿಡುತ್ತಾರೆ. ‘’ವಾಳೈ’’ ಚಿತ್ರದಲ್ಲಿ ನಿರ್ದೇಶಕ ವೆಟ್ರಿಮಾರನ್, ಬಾಲಕ ಸಿವನೈಂದನ್ ಕೈಯಲ್ಲಿ ಕಮ್ಯುನಿಸ್ಟ್ ಪಕ್ಷದ ಚಿಹ್ನೆ ಕೊಡುತ್ತಾನೆ. ಈ ಚಿತ್ರದಲ್ಲಿ ಮೆಯಳಗನ್ ಮೊದಲ ಬಾರಿ ತೆರೆಯಲ್ಲಿ ಕಾಣಿಸಿಕೊಂಡಾಗಲೇ ನಿರ್ದೇಶಕ ಆತನಿಂದ “” ನಾನು ಈಗಷ್ಟೇ ಪ್ರತಿಭಟನೆ ಮುಗಿಸಿಕೊಂಡು ಬಂದೆ ಎಂದು ಹೇಳಿಸುತ್ತಾನೆ, ಇದಕ್ಕೆ ಸಾಕ್ಷಿಯಾಗಿ ಅವನ ಅಂಗಿಯ ಕಿಸೆಯಲ್ಲಿ ಪ್ರತಿಭಟನೆಯ ಸಂಕೇತವಾದ ಕಪ್ಪು ಪಟ್ಟಿ ಕಾಣಿಸುತ್ತದೆ.
ಇದಕ್ಕಿಂತಲೂ ಮುಖ್ಯವಾಗಿ ಮೆಯಳಗನ್ ಮನೆ ಪ್ರವೇಶಿಸಿದವರನ್ನು ಮೊದಲು ಎದುರುಗೊಳ‍್ಳುವುದೇ ಮನೆ ಗೋಡೆಯ ಮೇಲಿನ ಪೆರಿಯಾರ್ ಪೋಟೊ. ಸಾಲಲ್ಲಿರುವ ಇತರ ಪೋಟೊಗಳ ಜೊತೆ ಪೆರಿಯಾರ್ ಪೋಟೊವನ್ನು ಮಾತ್ರ ನಿರ್ದೇಶಕ ಕ್ಲೋಸ್ ಅಪ್ ನಲ್ಲಿ ತೋರಿಸಿ ಮೋಸ-ಕಪಟ-ಸ್ವಾರ್ಥ ದ ಲವಲೇಶವೂ ಇಲ್ಲದ ಕೇವಲ ಒಳ್ಳೆಯತನವನ್ನಷ್ಟೇ ತುಂಬಿಕೊಂಡ ಮಗುವಿನಂತಹ ಮೆಯಳಗನ್ ವ್ಯಕ್ತಿತ್ವ ಯಾರಿಂದ ರೂಪುಗೊಂಡಿದೆ ಎನ್ನುವುದನ್ನು ಸೂಚ್ಯವಾಗಿ ತೋರಿಸಿ ಸುಮ್ಮನಾಗುತ್ತಾನೆ.
ಅದನ್ನು ಹೊರತುಪಡಿಸಿ ಜಾತಿ, ಧರ್ಮಗಳಿಗೂ ಸಂಬಂಧಿಸಿದ ಚರ್ಚೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಚಿತ್ರದಲ್ಲಿ ನಡೆಯುವುದಿಲ್ಲ. ಮೇಯಳಗನ್ ತಳಸಮುದಾಯಕ್ಕೆ ಮತ್ತು ಅರುಲ್ ಮೇಲ್ಜಾತಿಗೆ ಸೇರಿರಬಹುದೆಂಬ ಅನುಮಾನ ಹುಟ್ಟಿದರೂ, ನಿರ್ದೇಶಕ ಅದಕ್ಕೆ ಅವಕಾಶ ನೀಡದೆ ಮೇಯಳಗನ್ ಬಾಯಿಯಲ್ಲಿ ಇಬ್ಬರೂ ಒಂದೇ ಕುಟುಂಬದವರು ಎನ್ನುವುದನ್ನು ಹೇಳಿಸುವ ಮೂಲಕ ಆ ಅನುಮಾನವನ್ನೂ ದೂರ ಮಾಡುತ್ತಾನೆ.
ಸರಿ-ತಪ್ಪುಗಳ ವಿಮರ್ಶೆ ಬೇರೆ, ಆದರೆ ನಿರ್ದೇಶಕ ಉದ್ದೇಶಪೂರ್ವಕವಾಗಿ ಜಾತಿ, ಧರ್ಮಗಳ ಬೈನರಿಯಲ್ಲಿ ಚಿತ್ರದ ಚರ್ಚೆ ನಡೆಯದಂತೆ ಎಚ್ಚರಿಕೆ ವಹಿಸಿದಂತೆ ಕಾಣುತ್ತದೆ
ಸಾಮಾನ್ಯವಾಗಿ ಇಂತಹ ನಾಸ್ಟಾಲಿಜಿಯಾದ ಚಿತ್ರಗಳು ಭಗ್ನ ಪ್ರೇಮದ ಕತೆಗಳೇ ಆಗಿರುತ್ತವೆ.. ಕಮರ್ಷಿಯಲ್ ಕೋನದಲ್ಲಿ ನಿರ್ದೇಶಕ ಯೋಚಿಸಿದ್ದರೆ ಇದರಲ್ಲಿ ಬರುವ ಅಣ್ಣ-ತಂಗಿಯ ಪಾತ್ರಗಳನ್ನು ಸುಲಭದಲ್ಲಿ ಪ್ರೇಮಿಗಳ ಪಾತ್ರವನ್ನಾಗಿ ಮಾಡುವ ಅವಕಾಶ ಇತ್ತು. ಅದು ಇಲ್ಲದೆ ಇರುವುದೇ ಈ ಚಿತ್ರದ ವಿಶೇಷ.
ಯಾರಪ್ಪಾ ಈ ಚಿತ್ರದ ನಿರ್ದೇಶಕ ಎಂದು ಹುಡುಕಾಡಿದರೆ ಅದು ಪ್ರೇಮ ಕುಮಾರ್. ಇದು ಇವರ ಎರಡನೇ ಸಿನೆಮಾ. ಮೊದಲನೆಯದು ಆರೇಳು ವರ್ಷಗಳ ಹಿಂದೆ ತೆರೆ ಕಂಡಿದ್ದ ‘’96’’ ಚಿತ್ರ. ನನ್ನಂತಹವರನ್ನು ಬಹಳ ದಿನ ನಾಸ್ಟಾಲಿಜಿಯಾದ ಜೋಕಾಲಿಯಲ್ಲಿ ಜೀಕಿದ ಚಿತ್ರ ಅದು. ಅದರಲ್ಲಿ ಶಾಲಾ ದಿನಗಳ ಸಹಪಾಠಿಗಳು 15-20 ವರ್ಷಗಳ ನಂತರ ವಾಟ್ಟಪ್ ಗ್ರೂಪ್ ಮಾಡಿಕೊಂಢು ಒಟ್ಟು ಸೇರುವ ನಾಸ್ಟಾಲಿಜಿಯಾದ ಕತೆ ಇದೆ. ಆ ಚಿತ್ರದಿಂದ ಪ್ರೇರಣೆ ಪಡೆದು ಶಾಲಾ ದಿನಗಳ ಸಹಪಾಠಿಗಳ ನೂರಾರು ವಾಟ್ಸ್ ಪ್ ಗ್ರೂಪ್ ಗಳು ರಚನೆಗೊಂಡಿವೆ. ವಿಜಯ್ ಸೇತುಪತಿ ಎನ್ನುವ ತಮಿಳು ಚಿತ್ರರಂಗದ ಇನ್ನೊಬ್ಬ ನಟ ಭಯಂಕರ ಭಗ್ನಪ್ರೇಮಿಯಾಗಿ ನಟಿಸಿದ್ದ ಆ ಚಿತ್ರದ ಕನ್ನಡದ ರಿಮೇಕ್ ನಲ್ಲಿ ಗಣೇಶ್ ಕಾಣಿಸಿಕೊಂಡು ಕೆಡಿಸಿಬಿಟ್ಟಿದ್ದರು.
ಕೊನೆಯದಾಗಿ ನಟ ಕಾರ್ತಿ.
ಅಣ್ಣ ಸೂರ್ಯ, ರಜನಿಕಾಂತ್, ವಿಜಯ್, ಕಮಲ್ ಹಾಸನ್ ಮೊದಲಾದ ದಿಗ್ಗಜ ನಟರ ನಡುವೆ ಮಸುಕಾಗಿ ಹೋಗಿರುವ ಕಾರ್ತಿ ತಮಿಳು ಚಿತ್ರರಂಗದ ಅಂಡರ್ ರೇಟೆಡ್ ನಟ. ಕೆಲ ದಿನಗಳ ಹಿಂದೆ ಈತನ ‘ತೀರನ್’ ಚಿತ್ರ ನೋಡಿದ್ದೆ. ಬಹಳ ದಿನಗಳ ಹಿಂದೆ ಪಾ.ರಂಜಿತ್ ಅವರ ‘’ಮದ್ರಾಸ್’ ನೋಡಿದ್ದೆ. ಆ ಚಿತ್ರಗಳ ನಟ ಕಾರ್ತಿ ಮತ್ತು ಮೇಯಳಗನ್ ನಟ ಕಾರ್ತಿ ಬೇರೆ ಬೇರೆಯೇ ಇರಬಹುದು ಎಂದು ನಮಗನಿಸುವ ಹಾಗೆ ಭಿನ್ನವಾದ ಮನೋಜ್ಞ ನಟನೆ ಕಾರ್ತಿಯದ್ದು.
ನಾನು ಚಲನಚಿತ್ರ ವಿಮರ್ಶಕನಲ್ಲ. ‘’ಮೇಯಳಗನ್’’ ಒಂದು ರೀತಿಯಲ್ಲಿ ಬೆಳೆದ ಮನುಷ್ಯ ಮತ್ತೆ ಮಗುವಾಗುವ ಮತ್ತು ಮನುಷ್ಯ ಸಂಬಂಧಗಳ ಹುಡುಕಾಟದ ಚಿತ್ರ ಎಂದು ಹೇಳಬಹುದೇನೋ. ಅರವಿಂದ ಸ್ವಾಮಿ ಆಗಾಗ ಕಣ್ಣು ಒದ್ದೆ ಮಾಡಿಕೊಂಡು ಕೊನೆಗೊಮ್ಮೆ ಬಿಕ್ಕಿ ಬಿಕ್ಕಿ ಅತ್ತು ನಮ್ಮನ್ನು ಅಳಿಸುತ್ತಾನೆ. ಈ ಕಾರ್ತಿ ಎನ್ನುವ ನಟ ರಾಕ್ಷಸ ನಗುನಗುತ್ತಲೇ ನಮ್ಮನ್ನು ಅಳಿಸುತ್ತಾನೆ. ನಾನೂ ಹೆಚ್ಚಲ್ಲದಿದ್ದರೂ ಕೆಲವು ಚಮಚೆಗಳಷ್ಟಾದರೂ ಕಣ್ಣೀರು ಹಾಕಿದ್ದೇನೆ.
ನೆಟ್ ಫ್ಲಿಕ್ಸ್ ನಲ್ಲಿದೆ. ನೋಡಲೇಬೇಕಾದ ಚಿತ್ರ.
ವಿ.ಸೂ: ಈ ಬರಹದಲ್ಲಿ ಬಳಸಿರುವ ಚಿತ್ರಗಳು ನಮ್ಮ ನದಿ ದಂಡೆಯಲ್ಲಿ ಹಗಲು ಮತ್ತು ರಾತ್ರಿ ಕಾಲದಲ್ಲಿ ತೆಗೆದದ್ದು.
– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು




