ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಶಿಫಾರಸು ಆಧಾರಿತ ವರ್ಗಾವಣೆಗೆ ತಡೆ: ಡಾ. ಶರಣ್ ಪ್ರಕಾಶ್ ಪಾಟೀಲ್

11 months ago

ಬೆಂಗಳೂರು: ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಶಿಫಾರಸು ಆಧಾರಿತ ವರ್ಗಾವಣೆ ಇರುವುದಿಲ್ಲ. ಎಲ್ಲಾ ಸಾಮಾನ್ಯ ವರ್ಗಾವಣೆಗಳನ್ನು ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಚಿವ ಡಾ. ಶರಣ್ ಪ್ರಕಾಶ್ ಪಾಟೀಲ್  ಘೋಷಿಸಿದ್ದಾರೆ.

ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹೊಸ ವ್ಯವಸ್ಥೆಗೆ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೌಶಲ್ಯ ಅಭಿವೃದ್ಧಿ ಕಾರ್ಯದರ್ಶಿ ಏಕ್ ರೂಪ್ ಕೌರ್ ಅವರಿಗೆ ಸೂಚಿಸಿದರು.

ಸಚಿವಾಲಯದ ಅಡಿಯಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ  ಅತಿ ಹೆಚ್ಚು ಉದ್ಯೋಗಸ್ತರನ್ನು ಹೊಂದಿದೆ.ಇಲ್ಲಿ ಪ್ರಭಾವ ಮತ್ತು ಶಿಫಾರಸುಗಳ ಮೂಲಕ ಆಗುತ್ತಿದ್ದ ವರ್ಗಾವಣೆ ಪ್ರಕ್ರಿಯೆಗಳಿಗೆ ಕೊನೆ ಹಾಡಬೇಕಾಗಿದೆ ಎಂದರು.

ಇನ್ನು ಮುಂದೆ ಎಲ್ಲಾ ವರ್ಗಾವಣೆಗಳನ್ನು ಕೌನ್ಸೆಲಿಂಗ್ ಮೂಲಕ ಮಾಡಬೇಕು. ಇದು ಸಿಬ್ಬಂದಿಗೆ ಆದ್ಯತೆಯ ಸ್ಥಳಗಳಲ್ಲಿ ಹುದ್ದೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದರು. 

ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳಿಗೆ ರಾಜ್ಯ ಸರ್ಕಾರ ಜೂನ್ 16 ಗಡುವು ನಿಗದಿಪಡಿಸಿದೆ. ಇದನ್ನು ಬಳಸಿಕೊಂಡು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಬಹುದಾಗಿದೆ ಎಂದರು.

ಸರ್ಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿರುವ ಹಿರಿಯ ಅಧಿಕಾರಿಗಳನ್ನು ಅವರು ಇದೇ ವೇಳೆ ತರಾಟೆಗೆ ತೆಗೆದುಕೊಂಡರು.

ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ವಿಳಂಬವಿಲ್ಲದೆ ವರ್ಗಾಯಿಸಲು ಇದೇ ಸಂದರ್ಭದಲ್ಲಿ ಇಲಾಖಾ ಕಾರ್ಯದರ್ಶಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಯುವಜನರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಸಾಧಿಸಲು ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ, ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ  ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್ ನಂತಹ ಸಂಸ್ಥೆಗಳಿಗೆ ಯುವನಿಧಿ ಯೋಜನೆ ಮತ್ತು ಉದ್ಯೋಗ ಮೇಳಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಅಳವಡಿಸಲು  ನಿರ್ದೇಶಿಸಿದರು.

ಪದವೀಧರರಾಗಿದ್ದರೂ, ಉದ್ಯೋಗ ಮೇಳಗಳಲ್ಲಿ ಅನೇಕ ಅಭ್ಯರ್ಥಿಗಳು ತಾಂತ್ರಿಕ ಕೌಶಲ್ಯಗಳ ಕೊರತೆಯಿಂದಾಗಿ ತಿರಸ್ಕರಿಸಲ್ಪಡುತ್ತಾರೆ. ಈ ಅಂತರವನ್ನು ತರಬೇತಿಯೊಂದಿಗೆ ಕಡಿಮೆಗೊಳಿಸಲು ನಾವು ಯುವನಿಧಿ ಆಕಾಂಕ್ಷಿಗಳು ಮತ್ತು ಉದ್ಯೋಗ ಮೇಳ ಅರ್ಜಿದಾರರ ವಿಶಾಲ ಡೇಟಾಬೇಸ್ ಅನ್ನು ಬಳಸಬೇಕು ಎಂದು ಸಲಹೆ ನೀಡಿದರು.

Leave a Reply