ನಿನ್ನೆ ಸಂಜೆಯಿಂದ ಕನ್ನಡ ಚಿತ್ರರಂಗದ ಓರ್ವ ನಟ ಹಾಗೂ ಆತನ ಗೆಳತಿ ಸೇರಿದಂತೆ ಹತ್ತು ಜನರ ಬಂಧನ ಸುದ್ದಿ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ನಟನ ಅಭಿಮಾನಿ ಎನಿಸಿಕೊಂಡ ಚಿತ್ರದುರ್ಗದ ವ್ಯಕ್ತಿಯೊಬ್ಬ ತನ್ನ ಮೆಚ್ಚಿನ ನಟ ಬೇರೊಬ್ಬ ನಟಿಯನ್ನು ಗೆಳತಿಯಾಗಿ ಸ್ವೀಕರಿಸಿದ ಕಾರಣಕ್ಕೆ, ಆ ನಟಿಗೆ ಕೆಟ್ಟ ಸಂದೇಶವನ್ನು ಕಳುಹಿಸಿ ಈಗ ಹೆಣವಾಗಿದ್ದಾನೆ. ಕಳೆದ ವರ್ಷ ವಿವಾಹವಾಗಿದ್ದ ಈ ಅಭಿಮಾನಿಯ ಪತ್ನಿ ಈಗ ಎಂಟು ತಿಂಗಳ ತುಂಬು ಗರ್ಭಿಣಿ. ಆಕೆಯ ಭವಿಷ್ಯದ ಬದುಕಿಗೆ ಯಾರು ಹೊಣೆ?
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇಂದಿನ ಯುವಕರ ಸಿನಿಮಾ ಪ್ರೀತಿಗೆ ನನ್ನ ಅಡ್ಡಿಯಿಲ್ಲ. ಆದರೆ, ಸಿಕ್ಸ್ ಪ್ಯಾಕ್, ಡಜನ್ ಪ್ಯಾಕ್ ಎಂದು ಕರೆದು ನಟರೆನ್ನೆಲ್ಲಾ ಕೀರ್ತಿ ಶಿಖರದ ತುತ್ತ ತುದಿಗೆ ಏರಿಸುವುದನ್ನು ಮೊದಲು ನಿಲ್ಲಿಸಬೇಕಿದೆ. ಯಾವುದೇ ವ್ಯಕ್ತಿ ಯಾವುದೇ ರಂಗದಲ್ಲಿ ಜನಪ್ರಿಯನಾದಕೂಡಲೇ ಆತನಿಗೆ ನೈತಿಕತೆಯ ಜೊತೆಗೆ ಸಾರ್ವಜನಿಕ ಬದುಕಿನ ಜವಾಬ್ದಾರಿಗಳು ಇರಬೇಕು. ನನ್ನ ಬದುಕಿನ ಪ್ರತಿಯೊಂದು ಘಟನೆ ಅಥವಾ ವಿವರಗಳು ಸಾರ್ವಜನಿಕವಾಗಿ ಚರ್ಚೆ ಆಗುತ್ತವೆ ಎಂಬುದರ ಬಗ್ಗೆ ಎಚ್ಚರಿಕೆ ಇರಬೇಕು. ಅದು ಇಂದು ಭಾರತೀಯ ಚಿತ್ರಂಗದ ಬಹುತೇಕ ನಟ ಮತ್ತು ನಟಿಯರಲ್ಲಿ ಇಲ್ಲವಾಗಿದೆ.
ಇಂದಿಗೂ ಕೂಡ ಕನ್ನಡ ಚಿತ್ರರಂಗದ ನಟನೆಯ ಭೀಷ್ಮ ಎಂದು ಹೆಸರಾಗಿದ್ದ ರಾಜಕುಮಾರ್ ಅವರು ಕೇವಲ ಅಭಿನಯದಿಂದ ಮಾತ್ರ ಹೆಸರಾದವರಲ್ಲ. ನಟನೆಯ ಜೊತೆಗೆ ತಮ್ಮ ನಡೆ ನುಡಿಗಳಿಂದ ಭಾರತದ ಚಿತ್ರರಂಗದಲ್ಲಿ ಹೆಸರಾದವರು. ತಮ್ಮ ಅಭಿಮಾನಿಗಳನ್ನು ದೇವರೆಂದು ಕರೆದ ಭಾರತೀ ಯ ಚಿತ್ರರಂಗದ ಏಕೈಕ ಸಿನಿಮಾ ಕಲಾವಿದ ಅವರು. ರಾಜಕುಮಾರ್ ಅವರಿಂದ ಭಾರತದ ಇತರೆ ಭಾಷೆಯ ನಟರೂ ಕೂಡಾ ಪ್ರಭಾವಿತರಾಗಿದ್ದರು. ಅವರುಗಳಲ್ಲಿ ಹಿಂದಿ ನಟ ಅಮಿತಾಬ್ ಬಚ್ಚನ್, ತಮಿಳು ಚಿತ್ರಂಗದ ರಜನಿಕಾಂತ್ ಮತ್ತು ತೆಲುಗು ನಟ ಚಿರಂಜೀವಿ ಈಗಲೂ ಸಹ ತಮ್ಮ ಬದುಕಿಗೆ ರಾಜಕುಮಾರ್ ಅವರು ಮಾದರಿ ಎಂದು ಎದೆತುಂಬಿ ಹೇಳುತ್ತಾರೆ.
ರಾಜಕುಮಾರ್ ಅವರು ತನ್ನ ತಂದೆಯವರಾದ ಗಾಜನೂರು ಪುಟ್ಟಸ್ವಾಮಯ್ಯನವರಿಂದ ಕಲಿತ ಬದುಕಿನ ಪಾಠಗಳನ್ನು ತಮ್ಮ ಮಕ್ಕಳಿಗೂ ಧಾರೆಯೆರೆದು ಹೋಗಿದ್ದಾರೆ. ಇಂದಿಗೂ ರಾಜಕುಮಾರ್ ಕುಟುಂಬದ ಮಕ್ಕಳಾದ ಶಿವರಾಜಕುಮಾರ್, ರಾಘವೇಂದ್ರ ಮತ್ತು ಪುನೀತ್ ಬಗ್ಗೆ ಸಾರ್ವಜನಿಕವಾಗಿ ಯಾರೊಬ್ಬರೂ ಮಾತನಾಡದ ಹಾಗೆ ಬದುಕಿದ್ದಾರೆ. ಈಗ ಪುನೀತ್ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ, ಆ ಜೀವದ ನಗು ನಮ್ಮೊಂದಿಗೆ ಶಾಶ್ವತವಾಗಿ ಇದೆ. ಅಪ್ಪಾಜಿ ಎನ್ನುವ ಹೆಸರು ಮತ್ತು ಸ್ಮರಣೆ ಈ ನಟರ ಸಾರ್ವಜನಿಕ ಬದುಕಿಗೆ ನೈತಿಕವಾಗಿ ಲಕ್ಷ್ಮಣ ರೇಖೆಯನ್ನು ಹಾಕಿದೆ.
ರಾಜ್ ಕುಮಾರ್ ಅವರ ಬದುಕಿನ ವಿವರಗಳಿಗೆ ಈ ಘಟನೆಯೊಂದು ಸಾಕು.
ರಾಜಕುಮಾರ್ ಸಿನಿಮಾ ರಂಗ ಸೇರುವ ಮೊದಲು ನಾಟಕ ಕಂಪನಿಗಳಲ್ಲಿ ಅಭಿನಯಿಸುತ್ತಿದ್ದರು. ಅವರಿಗೆ 1956 ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಭಿನಯಿಸಲು ಮದ್ರಾಸ್ ನಗರದಿಂದ ಪತ್ರ ಬಂದಾಗ, ರಾಜಕುಮಾರ್ ಹುಬ್ಬಳ್ಳಿ ನಗರದಲ್ಲಿ ತಡರಾತ್ರಿಯವರೆಗೆ ನಡೆದ ನಾಟಕದಲ್ಲಿ ಅಭಿನಯಿಸಿ, ಬೆಳಿಗ್ಗೆ ಅಲ್ಲಿನ ಸಿದ್ಧಾರೂಢ ಮಠದ ಆವರಣದಲ್ಲಿ ಮಲಗಿದ್ದರು. ಅವರಿಗೆ ಪತ್ರವು ಮಠದ ಆವರಣದಲ್ಲಿ ಸಿಕ್ಕಿತು. ಸಿದ್ಧರೂಢರ ಸನ್ನಿಧಿಯಲ್ಲಿ ನನಗೆ ಸಿನಿಮಾ ಗೆ ಅವಕಾಶ ದೊರೆಯಿತು ಎಂಬ ಏಕೈಕ ಕಾರಣಕ್ಕಾಗಿ ರಾಜಕುಮಾರ್ ಅವರು ಬದುಕಿರುವವರೆಗೂ ಹುಬ್ಬಳ್ಳಿಗೆ ಬಂದಾಗ ಸಿದ್ಧರೂಡ ಮಠಕ್ಕೆ ತಪ್ಪದೆ ಭೇಟಿ ನೀಡುತ್ತಿದ್ದರು. ಜೊತೆಗೆ ಪ್ರತಿ ವರ್ಷ ಪೆಬ್ರವರಿ ತಿಂಗಳಲ್ಲಿ ನಡೆಯುವ ರಥೋತ್ಸವಕ್ಕೆ ಆಗಮಿಸುವ ಭಕ್ತರ ಅನ್ನದಾಸೋಹಕ್ಕೆ ಕ್ವಿಂಟಾಲ್ ಗಟ್ಟಲೆ ಅಕ್ಕಿಯನ್ನು ದಾನ ನೀಡುತ್ತಿದ್ದರು. ಈ ಪರಂಪರೆ ಅವರ ಮಕ್ಕಳಿಂದ ಈಗಲೂ ಮುಂದುವರಿದಿದೆ.
ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಭಾಗಗಳಿಗೆ ಚಲನ ಚಿತ್ರಗಳನ್ನು ವಿತರಿಸಲು ವಜ್ರೇಶ್ವರಿ ಕಂಬೈನ್ಸ್ ಸಂಸ್ಥಯನ್ನು ಸ್ಥಾಪಿಸಲಾಗಿತ್ತು. ರಾಘವೇಂದ್ರ ರಾಜಕುಮಾರ್ ವಾರಕ್ಕೊಮ್ಮ ಹುಬ್ಬಳ್ಳಿಗೆ ಬಂದು ಎರಡು ದಿನ ುಳಿದುಕೊಂಡು ಸಂಸ್ಥೆಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.
ಸಿದ್ಧಾರೂಢ ರಥೋತ್ಸವ ಸಂದರ್ಭದಲ್ಲಿ ಹುಬ್ಬಳ್ಳಿಯ ದುರ್ಗದ ಬೈಲಿನ ಹಿಂಭಾಗ ಇರುವ ಅಕ್ಕಿ ಮಂಡಿಯಲ್ಲಿ ಹತ್ತು ಕ್ವಿಂಟಾಲ್ ಅಕ್ಕಿ, ಎರಡು ಕ್ವಿಂಟಾಲ್ ಬೇಳೆ, ಒಂದು ಕ್ವಿಂಟಾಲ್ ಸಕ್ಕರೆ, ಚಹಾ ಪುಡಿ ಇವುಗಳನ್ನು ಖರೀದಿಸಿ, ಮಠಕ್ಕೆ ತೆಗೆದುಕೊಂಡು ಹೋಗಿ ನೀಡುತ್ತಿದ್ದುದನ್ನು ಹಲವಾರು ವರ್ಷ ನಾನೇ ಕಣ್ಣಾರೆ ನೋಡಿದ್ದೀನಿ. ಸಿದ್ಧಾರೂಢ ಮಠವು ಕರ್ನಾಟಕದಲ್ಲಿ ಈಗಿರುವ ಮಠಗಳಂತೆ ಅಲ್ಲ. ಅದಕ್ಕೆ ಮಠಾಧೀಶರು ಇಲ್ಲ. ಜಾತಿ, ಹಾಗೂ ಧರ್ಮದ ಹಂಗಿಲ್ಲ. ಧಾರವಾಡ ಜಿಲ್ಲಾ ನ್ಯಾಯಾಧೀಶರು ಅಧ್ಯಕ್ಷರಾಗಿರುತ್ತಾರೆ. ಸಾರ್ವಜನಿಕರ ಸದಸ್ಯರ ಒಂದು ಮಂಡಳಿಯು ಕಾರ್ಯನಿರ್ವಹಿಸುತ್ತದೆ. ಪ್ರತಿ ವರ್ಷ ಮಹಾರಾಷ್ಟ್ರ ಮತ್ತು ಗೋವಾ ದಿಂದ ಸಾವಿರಾರು ಜನಕ್ಕೆ ಮಠಕ್ಕೆ ಬಂದು ಹೋಗುತ್ತಾರೆ.
ಸಿದ್ಧಾರೂಢರಿಂದ ಪ್ರಭಾವಿತರಾಗಿದ್ದ ರಾಜಕುಮಾರ್, ಜಾತಿ ಧರ್ಮಗಳಾಚೆ ಬದುಕಿ ಕನ್ನಡಿಗರ ಕಣ್ಮಣಿ ಎಂದು ಅನಿಸಿಕೊಂಡರು. ತಾವು ಅಳವಡಿಸಿಕೊಂಡ ತತ್ವಗಳನ್ನು ತಮ್ಮ ಮಕ್ಕಳಿಗೂ ಕಲಿಸಿದರು. ಇದನ್ನು ಈಗಿನ ಸಿನಿಮಾ ನಟರೆಂಬ ತಾತ್ಕಾಲಿಕ ಸ್ಟಾರ್ ಗಳು ಕಲಿಯಬೇಕಿದೆ. ಇಲ್ಲದಿದ್ದರೆ, ಸ್ಟಾರ್ ಗಿರಿ ಪಂಕ್ಷರ್ ಆಗುವುದು ಶತಸಿದ್ಧ. ಇಂತಹ ಬಣ್ಣದ ಗೊಂಬೆಗಳನ್ನು ನಂಬಿಕೊಂಡು. ಅಭಿಮಾನಿಗಳು ಎಂಬ ಹೆಸರಿನಲ್ಲಿ ಜೀವ ಕಳೆದುಕೊಳ್ಳುವುದು ಯುವಕರ ಪಾಲಿಗೆ ಒಳ್ಳೆಯ ಮಾರ್ಗವಲ್ಲ. ಚಿತ್ರದುರ್ಗದ ಯುವಕನ ಸಾವು ಎಲ್ಲರಿಗೂ ಎಚ್ಚರಿಕೆಯಾಗಬೇಕಿದೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




