ದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜನವರಿ 14ರಿಂದ ಭಾರತ ನ್ಯಾಯ ಯಾತ್ರೆಯನ್ನು ಆರಂಭಿಸಲಿದ್ದಾರೆ. ಈ ಯಾತ್ರೆ ಈಶಾನ್ಯ ಭಾರತದಲ್ಲಿ ಆರಂಭವಾಗಿ ಪಶ್ಚಿಮ ರಾಜ್ಯವನ್ನು ಜೋಡಿಸಲಿವೆ. ಉದ್ದೇಶಿತ ಯಾತ್ರೆಯು ಮಣಿಪುರದಲ್ಲಿ ಆರಂಭವಾಗಿ ಮುಂಬೈನಲ್ಲಿ ಅಂತ್ಯವಾಗಲಿದ್ದು, ಒಟ್ಟಾರೆ 6,200 ಕಿ.ಮೀ. ಮಾರ್ಗವನ್ನು ರಾಹುಲ್ ಗಾಂಧಿ ಬಸ್, ನಡಿಗೆ ಮೂಲಕ ಕ್ರಮಿಸಲಿದ್ದಾರೆ.
14 ರಾಜ್ಯಗಳಲ್ಲಿ 85 ಜಿಲ್ಲೆಗಳ ಮೂಲಕ ಯಾತ್ರೆ ನಡೆಯಲಿದೆ. ಜನವರಿ 14ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಣಿಪುರದ ಇಂಫಾಲದಲ್ಲಿ ಚಾಲನೆ ನೀಡಲಿದ್ದಾರೆ. ವಿಶೇಷವೆಂದರೆ ಜನಾಂಗೀಯ ಕಲಹದಿಂದ ಕಳೆದ ಐದಾರು ತಿಂಗಳಿಂದ ಮಣಿಪುರ ಜನಾಂಗೀಯ ಕಲಹದಿಂದ ಕುದಿಯುತ್ತಿತ್ತು. ಇದೇ ರಾಜ್ಯದಲ್ಲಿ ಯಾತ್ರೆಗೆ ಚಾಲನೆ ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
ಉದ್ದೇಶಿತ ಯಾತ್ರೆಯು ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸಂಚರಿಸಲಿದೆ.
ಭಾರತ ನ್ಯಾಯ ಯಾತ್ರೆಯು ದೇಶದ ಜನರಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಭದ್ರಪಡಿಸುವು ಉದ್ದೇಶ ಹೊಂದಿದೆ ಎಂದು ಕಾಂಗ್ರೆಸ್ ಹೇಳಿದೆ. ಮಣಿಪುರದಲ್ಲಿ ಯಾತ್ರೆ ಆರಂಭವಾಗುತ್ತಿದ್ದು, ಭಾರತದ ಗಾಯಕ್ಕೆ ಮುಲಾಮು ಹುಡುಕುವ ಕೆಲಸ ಎಂದು ಭಾರತ ನ್ಯಾಯ ಯಾತ್ರೆಯನ್ನು ವ್ಯಾಖ್ಯಾನಿಸಿದೆ.
ಸೆಪ್ಟಂಬರ್ 7, 2022ರಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದ ಭಾರತ್ ಜೋಡೋ ಯಾತ್ರೆಯು ಜನವರಿ 30, 2023ರಂದು ಶ್ರೀನಗರದಲ್ಲಿ ಮುಕ್ತಾಯವಾಗಿತ್ತು. ಮಳೆ, ಚಳಿ, ಗಾಳಿ ಮೊದಲಾದ ಪ್ರತಿಕೂಲ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಸರಾಸರಿ 20 ಕಿಮೀನಂತೆ 4080 ಕಿಮೀ ಕ್ರಮಿಸಿ ಯಾತ್ರೆಯನ್ನು ಪೂರ್ಣಗೊಳಿಸಿದ್ದರು.




