ಮತ್ತೆ ಮತ್ತೆ ಕರಿದು ಬಳಸಿ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವುದಕ್ಕೆ ಕಡಿವಾಣ

8 hours ago

ಹೋಟೆಲ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಗೆ ಶಾಶ್ವತ ಮುಕ್ತಿ

ಬಯೋಡೀಸೆಲ್‌ ಉತ್ಪಾದನೆಗೆ ಬಳಸಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್‌!

ಬೆಂಗಳೂರು: ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು (UCO – Used Cooking Oil) ಮತ್ತೆ ಮತ್ತೆ ಕರಿದು ಬಳಸಿ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಬೃಹತ್‌ ಯೋಜನೆಗೆ ಕೈಹಾಕಿದೆ. ಮರುಬಳಕೆಯ ಎಣ್ಣೆಯನ್ನು ಸಂಪೂರ್ಣವಾಗಿ ತಡೆಗಟ್ಟಿ, ಅದನ್ನು ಜೈವಿಕ ಇಂಧನ (ಬಯೋಡೀಸೆಲ್‌) ಉತ್ಪಾದನೆಗೆ ಮಾತ್ರ ಪೂರೈಸುವ ಕಟ್ಟುನಿಟ್ಟಿನ ವ್ಯವಸ್ಥೆ ತರಲು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಈ. ಸುಧೀಂದ್ರ ಹಾಗೂ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಸಚಿವರು, ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಪರಿಸರ ಸ್ನೇಹಿ ಇಂಧನ ಉತ್ತೇಜನಕ್ಕೆ ಹಲವು ಕ್ರಾಂತಿಕಾರಿ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಸಾರ್ವಜನಿಕರ ಆರೋಗ್ಯ ಕಾಯುವುದು ಮತ್ತು ಪರಿಸರಸ್ನೇಹಿ ಬಯೋಡೀಸೆಲ್‌ ಇಂಧನ ಉತ್ಪಾದನೆಗೆ ಉತ್ತೇಜನ ನೀಡುವುದು ನಮ್ಮ ಸರ್ಕಾರದ ಮುಖ್ಯ ಆದ್ಯತೆಯಾಗಿದೆ.
— ಯು.ಟಿ. ಖಾದರ್, ಆಹಾರ ಸಚಿವ

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು:
ಕರಾರುವಾಕ್ ಕಾನೂನು ಚೌಕಟ್ಟು: ಬಳಸಿದ ಅಡುಗೆ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಮತ್ತೆ ಅಡುಗೆಗೆ ಬಳಸದಂತೆ ಹಾಗೂ ಸಣ್ಣಪುಟ್ಟ ಹೋಟೆಲ್‌ಗಳಿಗೆ ತಲುಪದಂತೆ ಕಟ್ಟುನಿಟ್ಟಿನ ನಿಯಮ ರೂಪಿಸಲಾಗುವುದು. ಇದನ್ನು ಕಡ್ಡಾಯವಾಗಿ ಬಯೋಡೀಸೆಲ್ ಘಟಕಗಳಿಗೆ ಮಾತ್ರ ನೀಡುವಂತೆ ಕಾನೂನುಬದ್ಧಗೊಳಿಸಲಾಗುವುದು.
ಮರುಖರೀದಿ ಯೋಜನೆ (Buy Back Scheme): ತೈಲ ಸರಬರಾಜು ಸಂಸ್ಥೆಗಳೇ ತಮ್ಮಿಂದ ಎಣ್ಣೆ ಪಡೆದ ಹೋಟೆಲ್‌ಗಳಿಂದ ಬಳಸಿದ ಎಣ್ಣೆಯನ್ನು ಹಿಂಪಡೆಯಲಿವೆ. ಹೀಗೆ ಹಿಂತಿರುಗಿಸುವ ಹೋಟೆಲ್‌ಗಳಿಗೆ ಹೊಸ ಎಣ್ಣೆ ಖರೀದಿಯಲ್ಲಿ ರಿಯಾಯಿತಿ (Discount) ನೀಡುವ ಲಾಭದಾಯಕ ವ್ಯವಸ್ಥೆಯನ್ನು ರೂಪಿಸಲು ಆಲೋಚಿಸಲಾಗಿದೆ.

ಡಿಜಿಟಲ್ ಆಪ್ ಹಾಗೂ ಪೈಲಟ್ ಪ್ರಾಜೆಕ್ಟ್: ಎಣ್ಣೆಯ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ಪಾರದರ್ಶಕತೆ ತರಲು ‘ವಿಶೇಷ ಮೊಬೈಲ್ ಆಪ್’ ಸಿದ್ಧಪಡಿಸಲಾಗುತ್ತಿದೆ. ಪ್ರಾಯೋಗಿಕವಾಗಿ (Pilot Project) ಮೊದಲ ಹಂತದಲ್ಲಿ ಬೆಂಗಳೂರು ಮತ್ತು ಮಂಗಳೂರು ನಗರಗಳಲ್ಲಿ ಈ ಡಿಜಿಟಲ್ ವ್ಯವಸ್ಥೆ ಜಾರಿಗೆ ಬರಲಿದೆ.

ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ: ಬಳಸಿದ ಎಣ್ಣೆಯನ್ನು ಮನೆಮನೆ ಹಾಗೂ ಹೋಟೆಲ್‌ಗಳಿಂದ ಸಂಗ್ರಹಿಸುವ ಜಾಲವನ್ನು ಬಲಪಡಿಸುವ ಮೂಲಕ ಸ್ಥಳೀಯ ಯುವಕರಿಗೆ ಹೊಸ ಕೆಲಸದ ಅವಕಾಶಗಳು ಸೃಷ್ಟಿಯಾಗಲಿವೆ.

ಈ ಮಹತ್ವದ ಸಭೆಯಲ್ಲಿ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಆಹಾರ ಸುರಕ್ಷತೆ ಆಯುಕ್ತ ಗುರುನಾಥ್ ಹೆಗಡೆ, ಆರೋಗ್ಯ ಆಯುಕ್ತ ಶ್ರೀನಿವಾಸ್, NHM ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಫಾಶ, ಜೈವಿಕ ಇಂಧನ ಮಂಡಳಿ MD ಶಿವಶಂಕರ್ ಎಲ್. ಸೇರಿದಂತೆ ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply