ಉದ್ಯಮಿಗಳು ಮುಕ್ತ ಮನಸ್ಸಿನಿಂದ ಬಂಡವಾಳ ಹೂಡಲು ಮುಂದೆ ಬರಬೇಕು: ನರೇಂದ್ರ ಮೋದಿ 

3 years ago

ಬೆಂಗಳೂರು: ಭಾರತ ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇಲ್ಲಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉದ್ಯಮಿಗಳು ಮುಕ್ತ ಮನಸ್ಸಿನಿಂದ ಬಂಡವಾಳ ಹೂಡಲು ಮುಂದೆ ಬರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆರಂಭವಾದ ಭಾರತೀಯ ಇಂಧನ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಹೂಡಿಕೆಗೆ ಮುಕ್ತ ಅವಕಾಶಗಳಿವೆ ಎಂದು ಹೇಳಿದರು.

ಈವರೆಗೂ ನಿರ್ಬಂಧಿತವಾಗಿದ್ದ ಹತ್ತು ಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ಹೂಡಿಕೆ ಚಟುವಟಿಕೆಗಳಿಗೆ ಮುಕ್ತಗೊಳಿಸಲಾಗಿದೆ. ಹಸಿರು ಇಂಧನ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಹೂಡಿಕೆದಾರರು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.

ದೇಶದಲ್ಲಿ ಈಗ ಸ್ಥಿರವಾದ ಸರ್ಕಾರ ಇದೆ. ಗಟ್ಟಿಯಾದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಕೆಳಸ್ತರದ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ದೇಶವು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಎಲ್ ಪಿಜಿ ಬೇಡಿಕೆ ಶೇಕಡ 600ರಷ್ಟು ಹೆಚ್ಚಲಿದೆ. ಅದಕ್ಕೆ ಪ್ರತಿಯಾಗಿ ಇಂಧನ ಮೂಲಗಳ ಶೋಧ ಮತ್ತು ಉತ್ಪಾದನೆ ಹೆಚ್ಚಿಸಬೇಕಿದೆ. ಹೂಡಿಕೆದಾರರು ಈ ಕ್ಷೇತ್ರದಲ್ಲಿ ಹೂಡಿಕೆಗೆ ಯೋಚಿಸಬೇಕು ಎಂದರು.

ತಮ್ಮ 30 ನಿಮಿಷಗಳ ಭಾಷಣದಲ್ಲಿ ಇಂಧನ ಕ್ಷೇತ್ರ, ಮಾಹಿತಿ ಮತ್ತು ತಂತ್ರಜ್ಞಾನ ಸೇರಿದಂತೆ ಭಾರತ ವಿವಿಧ ಕ್ಷೇತ್ರದಲ್ಲಿ ಸಾಧಿಸಿರುವ ಯಶೋಗಾಥೆಯನ್ನು ಉದ್ದಿಮೆದಾರರ ಮುಂದಿಟ್ಟ ಅವರು ವಿದ್ಯುತ್ ಪೂರೈಕೆಯಲ್ಲಿ ಸಮಗ್ರ ಸುಧಾರಣೆತರುವುದಕ್ಕಾಗಿ ಒಂದು ದೇಶ – ಒಂದು ವಿತರಣಾ ಜಾಲ ಯೋಜನೆಯನ್ನು ರೂಪಿಸಲಾಗಿದೆ. ಅದಕ್ಕಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿ‌ನ ಒತ್ತು ನೀಡಲಾಗಿದೆ ಎಂದರು.

ನಮ್ಮ ಪೆಟ್ರೋಲಿಯಂ ಸಂಸ್ಕರಣಾಗಾರಗಳ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುತ್ತಿದ್ದೇವೆ. ಇಲ್ಲಿ ಸ್ಟಾರ್ಟಪ್‍ಗಳಿಗೆ ಹೆಚ್ಚು ಉತ್ತೇಜನವಿದೆ. ನೀವು ಇಲ್ಲಿನ ಇಂಧನ ಕ್ಷೇತ್ರದ ವಿಕಸನದ ಸಹಭಾಗಿಗಳಾಗಬಹುದು. ನೈಸರ್ಗಿಕ ಅನಿಲ ಕ್ಷೇತ್ರದಲ್ಲಿಯೂ ಸುಧಾರಣೆಗೆ ಸತತ ಪ್ರಯತ್ನ ನಡೆಯುತ್ತಿದೆ. ನಮ್ಮ ಒನ್ ನೇಷನ್, ಒನ್ ಗ್ರಿಡ್ ಆಶಯ ಸಾಕಾರಗೊಳಿಸಲು ಸತತ ಪ್ರಯತ್ನಗಳು ನಡೆಯುತ್ತಿವೆ ಎಂದರು

ಭಾರತದ ಅಭಿವೃದ್ಧಿಯ ವೇಗ ಗಮನಿಸಿದರೆ ಮುಂದಿನ ವರ್ಷಗಳಲ್ಲಿ ಹಲವು ಹೊಸ ನಗರಗಳು ರೂಪುಗೊಳ್ಳಲಿವೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯೇ ಹೇಳಿದೆ. ದೇಶದಲ್ಲಿ ಇಂಧನದ ಬೇಡಿಕೆಯು ಅತ್ಯಂತ ಹೆಚ್ಚಾಗಲಿದೆ. ಹೀಗಾಗಿಯೇ ನಿಮ್ಮಂಥ ಹೂಡಿಕೆದಾರರು ಹಾಗೂ ಸಹವರ್ತಿಗಳಿಗೆ ಭಾರತದಲ್ಲಿ ಹೊಸ ಅವಕಾಶಗಳು ಲಭ್ಯವಾಗಲಿವೆ ಎಂದು ಆಶ್ವಾಸನೆ ನೀಡಿದರು.

ಭಾರತದಲ್ಲಿ ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ವಿಶ್ವದ ಒಟ್ಟು ಬೇಡಿಕೆಯಲ್ಲಿ ಶೇ 5ರಷ್ಟು ಇದೆ. ಇದು ಮುಂದಿನ ಕೆಲವೇ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಭಾರತದ ಅಭಿವೃದ್ಧಿಗೆ 4 ಮುಖ್ಯ ಸ್ತಂಭಗಳಿವೆ. ದೇಶೀಯ ಉತ್ಪಾದನೆಯ ಹೆಚ್ಚಳ. ಪೂರೈಕೆಯಲ್ಲಿ ವೈವಿಧ್ಯ. ಜೈವಿಕ ಇಂಧನ, ಸೋಲಾರ್‍ನಂಥ ಪರ್ಯಾಯ ಇಂಧನ ಬಳಕೆಯಲ್ಲಿ ವೃದ್ಧಿ, ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ವಾಹನಗಳ ಬಳಕೆಗೆ ಒತ್ತು. ಈ ನಾಲ್ಕೂ ಅಂಶಗಳಲ್ಲಿ ಭಾರತ ವೇಗವಾಗಿ ಕೆಲಸ ಮಾಡುತ್ತಿದೆ ಎಂದರು.

ತಂತ್ರಜ್ಞಾನದ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇಂಧನ ಕ್ಷೇತ್ರಕ್ಕೆ ಇಂದಿನ ದಿನಮಾನಗಳಲ್ಲಿ ಬಹಳ ಮಹತ್ವವಿದೆ. ಇಂಧನ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವು ವಿಶ್ವದ ಅತ್ಯಂತ ಮುಂದುವರೆದ ಶಕ್ತಿಗಳ ಪೈಕಿ ಒಂದೆನಿಸಿದೆ ಎಂದರು.

ಐಎಂಎಫ್ 2023ರ ಪ್ರಗತಿಯ ಮುನ್ಸೂಚನೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ. ಮಹಾಮಾರಿ ಹಾಗೂ ಯುದ್ಧದ ಪ್ರಭಾವದ ನಡುವೆಯೂ ಭಾರತವು ಜಾಗತಿಕ ಆಶಾಕಿರಣ (ಬ್ರೈಟ್ ಸ್ಪಾಟ್) ಆಗಿದೆ. ಆಂತರಿಕ ಸತ್ವದಿಂದಾಗಿ ಭಾರತವು ಬಾಹ್ಯ ಒತ್ತಡಗಳನ್ನು ತಡೆದುಕೊಂಡಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಗ್ರೀನ್ ಹೈಡ್ರೋಜನ್ ಪವರ್ ಪ್ರಾಜೆಕ್ಟ್‍ಗೆ ರಾಜ್ಯದಲ್ಲಿ ಮೂರು ಲಕ್ಷ ಕೋಟಿ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬಂದಿದ್ದು, ಕರ್ನಾಟಕ ದೇಶದಲ್ಲೇ ಅತಿಹೆಚ್ಚು ಎಥನಾಲ್ ಉತ್ಪಾದನೆ ಮಾಡುವ ರಾಜ್ಯ ವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ತಿಂಗಳು ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ಅತಿಹೆಚ್ಚು ಬಂಡವಾಳವನ್ನು ಆಕರ್ಷಿಸಿದೆ.ಒಟ್ಟು 9 ಉದ್ಯಮಿಗಳು ರಾಜ್ಯದಲ್ಲಿ ಇಂಧನ ಕ್ಷೇತ್ರಕ್ಕೆ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ. ಗ್ರೀನ್ ಹೈಡ್ರೋಜನ್ ಪವರ್ ಪ್ರಾಜೆಕ್ಟ್‍ನಲ್ಲಿ ನಮಗೆ ಬಂಡವಾಳ ಹೂಡಿಕೆಯಾಗಲಿದೆ ಎಂದರು.

ಕರ್ನಾಟಕ ಇಂದು ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ. ಇಂಧನಶಕ್ತಿ ಉತ್ಪಾದನೆಗೆ ಎರಡು ಲಕ್ಷ ಕೋಟಿ ಅನುದಾನವನ್ನು ಮೀಸಲಿಟ್ಟಿದ್ದೇವೆ. ಇಲ್ಲಿರುವಷ್ಟು ಅವಕಾಶಗಳು ಬೇರೆ ಎಲ್ಲಿಯೂ ಇಲ್ಲ ಎಂದರು.

ಕರ್ನಾಟಕ ದೇಶದಲ್ಲೇ ಅತಿಹೆಚ್ಚು ವಿದ್ಯುತ್ ವಾಹನಗಳನ್ನು ಉತ್ಪಾದನೆ ಮಾಡುವ ರಾಜ್ಯವಾಗಿದೆ. ನವೀಕರಣ ಇಂಧನದಲ್ಲಿ ರಾಜ್ಯ ಮುಂದಿದೆ. ನಾವು 15,000 ಮೆಗಾವ್ಯಾಟ್ ವಿದ್ಯುತ್ ತಯಾರಿಸುತ್ತಿದ್ದೇವೆ. ಇಂಧನ ಸಂಗ್ರಹಣೆಯಲ್ಲೂ ನಾವು ಮುಂದಿದ್ದೇವೆ ಎಂದರು.

ಪರಿಸರ ಮಾಲಿನ್ಯ ತಗ್ಗಿಸುವುದನ್ನು ನಮ್ಮ ಸರ್ಕಾರ ಆದ್ಯತೆಯಾಗಿ ಪರಿಗಣಿಸಿದೆ. ಹಸಿರು ಇಂಧನದ ಬಗ್ಗೆ ಬಜೆಟ್ ಭಾಷಣದಲ್ಲಿಯೂ ಪ್ರಸ್ತಾಪಿಸಲಾಗಿತ್ತು. ದೊಡ್ಡ ಮೊತ್ತದ ಅನುದಾನವನ್ನು ಈ ಕ್ಷೇತ್ರಕ್ಕೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಶೂನ್ಯ ಇಂಗಾಲ ಹೊರಸೂಸುವಿಕೆ ಆಶಯ ಸಾಕಾರಗೊಳಿಸಲು ನಾವು ಶ್ರಮಿಸಬೇಕಿದೆ. ಅದು ನಮ್ಮ ಆದ್ಯತೆಯಾಗಬೇಕು ಎಂದರು.

ಸೂರ್ಯನ ಬೆಳಕಿನಿಂದ ಅಡುಗೆ ಮಾಡುವ ಸೋಲಾರ್ ಕುಕ್‍ಟಾಪ್‍ಗಳ ಬಳಕೆಗೆ ಇಂದು ಚಾಲನೆ ಸಿಗಲಿದೆ. ಈ ತಂತ್ರಜ್ಞಾನವನ್ನು ಭಾರತ ಹಂಚಿಕೊಳ್ಳಲಿದೆ. ಇದನ್ನು ಯಥಾವತ್ತಾಗಿ ಏಷ್ಯಾದ ಇತರ ದೇಶಗಳೂ ಬಳಸಬಹುದಾಗಿದೆ. ತ್ಯಾಜ್ಯ ಪೆಟ್ ಬಾಟಲಿಗಳಿಂದ ಹಲವು ಉತ್ಪನ್ನಗಳನ್ನು ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಪರಿಸರ ಮಾಲಿನ್ಯ ತಗ್ಗಿಸಲು ಇದು ನೆರವಾಗಲಿದೆ ಎಂದರು.

Leave a Reply