ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿ, ತುರ್ತು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಿ: ಕೃಷ್ಣ ಬೈರೇಗೌಡ

5 hours ago

ತುರ್ತು ಪರಿಹಾರ ಹಾಗೂ ದೀರ್ಘಾವಧಿ ಅಭಿವೃದ್ಧಿ ಕ್ರಮಗಳನ್ನು ಸಮನ್ವಯಗೊಳಿಸಿ

ಸಂಚಾರಕ್ಕೆ ಅಡ್ಡಿಯಾಗುವ ಅಂಶಗಳನ್ನು ತೆರವುಗೊಳಿಸಿ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಿ

ಬೆಂಗಳೂರು: ಬೆಂಗಳೂರು ಪೂರ್ವ ಭಾಗದಲ್ಲಿ ನಡೆಯುತ್ತಿರುವ ವಿವಿಧ ರಸ್ತೆ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು, ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕಲ್ಪಿಸುವುದರ ಜೊತೆಗೆ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಜಾಪುರ ರಸ್ತೆ, ದೊಮ್ಮಸಂದ್ರ, ಗುಂಜೂರು, ವರ್ತೂರು, ಬಳಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ, ಒಳಚರಂಡಿ, ಸಂಚಾರ ವ್ಯವಸ್ಥೆ, ಭೂಸ್ವಾಧೀನ, ವಿದ್ಯುತ್ ಮೂಲಸೌಕರ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ತುರ್ತು ಸಮಸ್ಯೆಗಳಿಗೆ ಮೊದಲು ಪರಿಹಾರ ಕಲ್ಪಿಸಿ: ಸಾರ್ವಜನಿಕರಿಗೆ ತಕ್ಷಣ ತೊಂದರೆ ಉಂಟುಮಾಡುತ್ತಿರುವ ರಸ್ತೆ ಗುಂಡಿ, ನೀರು ನಿಲುಗಡೆ, ಸಂಚಾರ ಅಡಚಣೆ ಹಾಗೂ ಇತರೆ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಮೊದಲ ಆದ್ಯತೆಯಲ್ಲಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಬಹುದಾದ ಕಡೆಗಳಲ್ಲಿ ಕೂಡಲೇ ಕಾಮಗಾರಿ ನಡೆಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ದೀರ್ಘಾವಧಿಯ ಕಾಮಗಾರಿ ಅಗತ್ಯವಿರುವ ಕಡೆಗಳಲ್ಲಿ ಸಮಗ್ರ ಯೋಜನೆ ರೂಪಿಸಿ ಶಾಶ್ವತ ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಿದರು.

ರಸ್ತೆ ಅಭಿವೃದ್ಧಿಗೆ ಅಗತ್ಯವಿರುವ ಜಾಗದ ಕುರಿತು ಸ್ಪಷ್ಟತೆ ಪಡೆದುಕೊಳ್ಳಿ: ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಭೂಮಿಯ ಲಭ್ಯತೆ ಮತ್ತು ಭೂಸ್ವಾಧೀನದ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು, ಸಂಬಂಧಪಟ್ಟ ಆಸ್ತಿ ಮಾಲೀಕರು ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅಗತ್ಯವಿರುವ ಜಾಗದ ಕುರಿತು ಸ್ಪಷ್ಟ ಮಾಹಿತಿ ಪಡೆದು, ನಿಯಮಾನುಸಾರ ಭೂಸ್ವಾಧೀನ ಸೇರಿದಂತೆ ಅನ್ವಯವಾಗುವ ಕ್ರಮಗಳನ್ನು ಕೈಗೊಳ್ಳಬೇಕು. ಜಾಗದ ಸಮಸ್ಯೆಯಿಂದ ಕಾಮಗಾರಿಗಳು ವಿಳಂಬವಾಗದಂತೆ ಪರ್ಯಾಯ ಹಾಗೂ ತಾತ್ಕಾಲಿಕ ಪರಿಹಾರಗಳ ಸಾಧ್ಯತೆಯನ್ನೂ ಪರಿಶೀಲಿಸುವಂತೆ ನಿರ್ದೇಶನ ನೀಡಿದರು.

ಒಳಚರಂಡಿ ವ್ಯವಸ್ಥೆಗೆ ಸಮಗ್ರ ಪರಿಹಾರ ರೂಪಿಸಿ: ನೀರು ನಿಲುಗಡೆಯಾಗುತ್ತಿರುವ ಪ್ರದೇಶಗಳನ್ನು ಗುರುತಿಸಿ, ಮಳೆನೀರು ಸರಾಗವಾಗಿ ಹರಿದುಹೋಗಲು ಅಗತ್ಯವಿರುವ ಡ್ರೈನೇಜ್ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಸೂಚಿಸಿದರು.

ಮುಖ್ಯ ಒಳಚರಂಡಿ ಸಂಪರ್ಕ ಹಾಗೂ ಪೈಪ್‌ಲೈನ್ ಅಳವಡಿಕೆಗೆ ಸಾಧ್ಯವಿರುವ ಮಾರ್ಗಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಎಂಡ್ ಪಾಯಿಂಟ್‌ನಿಂದ ಪೈಪ್‌ಲೈನ್ ಮೂಲಕ ನೀರನ್ನು ಸೂಕ್ತ ಚೇಂಬರ್‌ಗಳಿಗೆ ಸಂಪರ್ಕಿಸುವ ಕುರಿತು ಯೋಜನೆ ರೂಪಿಸುವಂತೆ ತಿಳಿಸಿದರು.

ತಾತ್ಕಾಲಿಕ ವ್ಯವಸ್ಥೆಯ ಮೂಲಕ ತಕ್ಷಣದ ಪರಿಹಾರ ಕಲ್ಪಿಸುವುದರ ಜೊತೆಗೆ, ಸಮಸ್ಯೆ ಮರುಕಳಿಸದಂತೆ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.

ಸಂಚಾರ ಸುಗಮತೆಗೆ ಅಗತ್ಯ ಸುಧಾರಣೆ ಕೈಗೊಳ್ಳಿ: ವಿವಿಧ ಜಂಕ್ಷನ್‌ಗಳಲ್ಲಿ ವಾಹನ ಸಂಚಾರದ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯವಿರುವ ಕಡೆಗಳಲ್ಲಿ ರಸ್ತೆ ತಿರುವು‌ಗಳ ಸುಧಾರಣೆ ಸೇರಿದಂತೆ ಸಣ್ಣಪುಟ್ಟ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ರಸ್ತೆಯ ಲಭ್ಯವಿರುವ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡು ಸಂಚಾರಕ್ಕೆ ಅನುಕೂಲವಾಗುವಂತೆ ತಿರುವುಗಳು ಹಾಗೂ ಸಂಪರ್ಕ ರಸ್ತೆಗಳ ಸುಧಾರಣೆ ಕೈಗೊಳ್ಳಬೇಕು. ಪ್ರತಿಯೊಂದು ಜಂಕ್ಷನ್‌ನ ಸ್ಥಳೀಯ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.

ಭವಿಷ್ಯದ ಯೋಜನೆಗಳಿಗೆ ಅನುಗುಣವಾಗಿ ಕಾಮಗಾರಿ ರೂಪಿಸಿ: ಎಲಿವೇಟೆಡ್ ರಸ್ತೆ ಹಾಗೂ ಮೆಟ್ರೋ ಸೇರಿದಂತೆ ಭವಿಷ್ಯದಲ್ಲಿ ಕೈಗೆತ್ತಿಕೊಳ್ಳಲಿರುವ ಪ್ರಮುಖ ಸಾರಿಗೆ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಯೋಜಿಸುವಂತೆ ಸೂಚಿಸಿದರು.

ಒಂದು ಯೋಜನೆಯ ಕಾಮಗಾರಿಯಿಂದ ಮತ್ತೊಂದು ಯೋಜನೆಗೆ ಅಡಚಣೆಯಾಗದಂತೆ KRDCL, ಮೆಟ್ರೋ ಹಾಗೂ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಬೇಕು. ಭವಿಷ್ಯದಲ್ಲಿ ಪುನಃ ರಸ್ತೆ ಒಡೆದು ಕಾಮಗಾರಿ ಕೈಗೊಳ್ಳುವ ಪರಿಸ್ಥಿತಿ ಉಂಟಾಗದಂತೆ ಸಮಗ್ರ ಯೋಜನೆಯೊಂದಿಗೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು.

ವಿದ್ಯುತ್ ಮೂಲಸೌಕರ್ಯದಿಂದ ಅಡಚಣೆಯಾಗದಂತೆ ಕ್ರಮವಹಿಸಿ: ರಸ್ತೆ ಹಾಗೂ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬೆಸ್ಕಾಂ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ವಿದ್ಯುತ್ ಕಂಬಗಳನ್ನು ಗುರುತಿಸಿ, ಅಗತ್ಯವಿರುವ ಕಡೆಗಳಲ್ಲಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದರು.

ಬಳಕೆಗೆ ಬಾರದ ಹಾಗೂ ಸಾರ್ವಜನಿಕರಿಗೆ ಅಡಚಣೆಯಾಗುತ್ತಿರುವ ವಿದ್ಯುತ್ ಕಂಬಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತೆರವುಗೊಳಿಸುವಂತೆ ತಿಳಿಸಿದರು.

ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ: ರಸ್ತೆ ಗುಂಡಿಗಳು, ಹಾನಿಗೊಳಗಾದ ರಸ್ತೆ ಭಾಗಗಳು ಹಾಗೂ ರಸ್ತೆ ಬದಿಯ ಹೊಂಡಗಳನ್ನು ತ್ವರಿತವಾಗಿ ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು.

ಅಗತ್ಯವಿರುವ ಕಡೆಗಳಲ್ಲಿ ಜಲ್ಲಿ ಹಾಕಿ ರಸ್ತೆ ಮೇಲ್ಮೈಯನ್ನು ಸಮರ್ಪಕಗೊಳಿಸಿ, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಹೊಸದಾಗಿ ಆರಂಭವಾಗಿರುವ ಕಾಮಗಾರಿಗಳಿಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗುವ ಒತ್ತುವರಿ ತೆರವುಗೊಳಿಸಿ: ಸರ್ಕಾರಿ ಜಾಗದಲ್ಲಿ ಖಾಸಗಿ ಅಂಗಡಿಗಳು ಹಾಗೂ ಇತರೆ ರೀತಿಯ ಒತ್ತುವರಿ ಮಾಡಿಕೊಂಡಿರುವ ಕುರಿತು ಪರಿಶೀಲಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಅಭಿವೃದ್ಧಿ ಹಾಗೂ ಸಾರ್ವಜನಿಕ ಬಳಕೆಗೆ ಅಗತ್ಯವಿರುವ ಜಾಗವನ್ನು ಗುರುತಿಸಿ, ಒತ್ತುವರಿ ತೆರವು ಸೇರಿದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ನೀರಿನ ಪೈಪ್‌ಲೈನ್ ಕಾಮಗಾರಿಯನ್ನು ವೇಗಗೊಳಿಸಿ: ನೀರು ಸರಬರಾಜು ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಬೇಕು. ರಸ್ತೆ ಬದಿಯಲ್ಲಿ ಅಡ್ಡಿಯಾಗಿರುವ ಪೈಪ್‌ಗಳು ಹಾಗೂ ಕಾಮಗಾರಿ ಸಾಮಗ್ರಿಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

ನಿರ್ಮಾಣ ತ್ಯಾಜ್ಯ ತೆರವುಗೊಳಿಸಿ, ರಸ್ತೆ ಬದಿಯನ್ನು ಸುಗಮಗೊಳಿಸಿ: ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ಡೆಬ್ರಿಸ್ ಹಾಗೂ ಸಿಲ್ಟ್‌ನ್ನು ತಕ್ಷಣ ತೆರವುಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದರು.

ರಸ್ತೆ ಬದಿಯಲ್ಲಿ ನೀರು ನಿಲ್ಲುತ್ತಿರುವ ಸ್ಥಳಗಳನ್ನು ಗುರುತಿಸಿ, ನೀರು ಸರಾಗವಾಗಿ ಹರಿದುಹೋಗಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಪಾದಚಾರಿ ಸೌಲಭ್ಯಗಳನ್ನು ಸಮರ್ಪಕಗೊಳಿಸಿ: ಹಾನಿಗೊಳಗಾದ ಪಾದಚಾರಿ ಮಾರ್ಗದ ಸ್ಲ್ಯಾಬ್‌ಗಳನ್ನು ದುರಸ್ತಿಪಡಿಸಿ, ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಮಾರ್ಗವನ್ನು ಸಮರ್ಪಕ ಸ್ಥಿತಿಯಲ್ಲಿ ನಿರ್ವಹಿಸುವಂತೆ ಸೂಚಿಸಿದರು.

ಅಕ್ರಮ ಕಟ್ಟಡಗಳ ಕುರಿತು ನಿಯಮಾನುಸಾರ ಕ್ರಮವಹಿಸಿ: ಈ ಹಿಂದೆ ಪರಿಶೀಲಿಸಲಾಗಿರುವ ಅಕ್ರಮ ಕಟ್ಟಡಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು, ಬಾಕಿ ಇರುವ ಪ್ರಕರಣಗಳಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ಪೂರ್ಣಗೊಳಿಸಿ: ರಸ್ತೆ, ಡ್ರೈನೇಜ್, ವಿದ್ಯುತ್, ನೀರು ಸರಬರಾಜು, ಮೆಟ್ರೋ ಹಾಗೂ ಇತರೆ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವಾಗ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಬೇಕು.

ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸಿ, ಬಾಕಿ ಉಳಿದಿರುವ ಕಾಮಗಾರಿಗಳಿಗೆ ವೇಗ ನೀಡಬೇಕು. ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ, ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ ಕೆ., ಮುಖ್ಯ ಎಂಜಿನಿಯರ್ ಲೋಕೇಶ್, ಕೆ .ಆರ್. ಡಿ. ಸಿ. ಎಲ್, ಬೆಸ್ಕಾಂ, ಮೆಟ್ರೋ, ಬಿಡಬ್ಲ್ಯೂಎಸ್‌ಎಸ್‌ಬಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪರಿಶೀಲನೆ ವೇಳೆ “ಕೈ ಮುಗಿದು ಕೇಳ್ತೇನೆ ಇರುವ ಜಾಗದಲ್ಲಾದರೂ ಕನಿಷ್ಟ ಜೆಲ್ಲಿಯಾದರೂ ಹಾಕಿ ರಸ್ತೆ ನಿರ್ಮಿಸಿ” ಎಂದು ಕೆಆರ್ ಡಿಸಿಎಲ್ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ದೊಮ್ಮಸಂದ್ರ ಸರ್ಕಲ್ ನಿಂದ ವರ್ತೂರು ರಸ್ತೆ ಮಾರ್ಗದಲ್ಲಿ  ಸಾಕಷ್ಟು ಟ್ರಾಫಿಕ್ ಸಮಸ್ಯೆ ಇದೆ. ಆದರೆ, ಪರಿಶೀಲನೆ ವೇಳೆ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನಕ್ಕೆ ಸಂಬಂಧಿಸಿ ಪ್ರಸ್ತಾಪ ಮುಂದಿಟ್ಟರು. ಈ ವೇಳೆ ಕಿಡಿಕಾರಿದ ಸಚಿವ ಕೃಷ್ಣ ಬೈರೇಗೌಡ ಅವರು, “ಭೂ ಸ್ವಾಧೀನ ಆಮೇಲಿರಲಿ ನಿಮಗೆ ಕೈಮುಗಿದು ಕೇಳುವೆ ಮೊದಲು ಲಭ್ಯವಿರುವ ಜಾಗದಲ್ಲಿನ ಡೆಬ್ರೀಸ್ ತೆಗೆಸಿ ಕನಿಷ್ಟ ಜೆಲ್ಲಿಕಲ್ಲು ಹಾಕಿ ರಸ್ತೆ ನಿರ್ಮಿಸಿ” ತಾಕೀತು ಮಾಡಿದರು.

ಇನ್ನೂ ವರ್ತೂರು ಕೆರೆ ಏರಿ ಮೇಲೆ ರಸ್ತೆ ನಿರ್ಮಿಸಲು ಸಾಕಷ್ಟು ಸ್ಥಳಾವಕಾಶ ಇದ್ದರೂ ಸಹ ಭೂ ಸ್ವಾಧೀನ ಏಕೆ ಮಾಡಬೇಕು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಗುಂಜೂರಿನಿಂದ ದೊಮ್ಮಸಂದ್ರ ವರೆಗೆ ಸಾಕಷ್ಟು ಅಂಗಡಿಯವರು ಎಂಟು ಅಡಿಗಿಂತ ಅಧಿಕ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಆಗುವವರೆಗೆ ಅಧಿಕಾರಿಗಳು ಏನು ಮಾಡುತ್ತಿದ್ದಿರಿ? ಈಗ ಒತ್ತುವರಿಯಿಂದ ಇಷ್ಟು ಟ್ರಾಫಿಕ್ ಸಮಸ್ಯೆ ಉಲ್ಬಣಿಸಿದ್ದರೂ ಸಹ ಒತ್ತುವರಿ ತೆರವಿಗೆ ಏಕೆ ಮುಂದಾಗಿಲ್ಲ. ನಿಮ್ಮ ತಪ್ಪಿನಿಂದ ಜನ ಸಾಮಾನ್ಯರು ಇನ್ನೆಷ್ಟು ದಿನ ಸಂಕಷ್ಟ ಅನುಭವಿಸಬೇಕು? ಎಂದು ಕುಟುಕಿದರು. ಅಲ್ಲದೆ, ರಸ್ತೆ ತಿರುವಿನಲ್ಲಿರುವ ಟ್ರಾನ್ಸ್ ಫಾರ್ಮರ್ ಗಳನ್ನೂ ಸಹ ಬೇರೆಡೆ ಸ್ಥಳಾಂತರಿಸಲು ಸೂಚಿಸಿದರು.

Leave a Reply