ಪಿಯುಸಿ ಫಲಿತಾಂಶ ಕುಸಿತ: ಬಾಲಕಿರಯದೇ ಮೇಲುಗೈ

1 year ago

ಬೆಂಗಳೂರು: ವಿದ್ಯಾರ್ಥಿ ಜೀವನದ  ಅತಿ ಮಹತ್ವದ ಘಟ್ಟ ಎನಿಸಿರುವ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಯಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ ಈ ಬಾರಿ ತೇರ್ಗಡೆ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಈ ಬಾರಿ ಒಟ್ಟಾರೆ ಶೇ.73.45 ರಷ್ಟು ಫಲಿತಾಂಶ ಬಂದಿದೆ.‌ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.7.7ರಷ್ಟು ಕಡಿಮೆಯಾಗಿದೆ.

ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ದ.ಕ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕೆನರಾ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ 600 ಕ್ಕೆ 599 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮಂಗಳೂರು ಕೊಡಿಯಾಲ್‌ ಬೈಲ್‌ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ 600 ಕ್ಕೆ 599 ಅಂಕ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಕೊಟ್ಟೂರಿನ ಹಿಂದೂ ಪಿಯು ಕಾಲೇಜಿನ ಎಲ್‌.ಆರ್‌.ಸಂಜನಾ ಬಾಯಿ 600 ಅಂಕಗಳಿಗೆ 597 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.

ಶಾಲಾ  ಶಿಕ್ಷಣ ಸಚಿವ ಮಧುಬಂಗಾರಪ್ಪ ಪರೀಕ್ಷಾ ಮಂಡಳಿ ಅಧ್ಯಕ್ಷ ಬಸವ ರಾಜೇಂದ್ರ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ಪದವಿಪೂರ್ವ ಮಂಡಳಿ ನಿರ್ದೇಶಕಿ ಸಿಂಧು ರೂಪೇಶ್‌ ಫಲಿತಾಂಶವನ್ನು ಪ್ರಕಟಿಸಿದರು.

ಒಟ್ಟಾರೆ ಶೇಕಡ 93.90ರಷ್ಟು ಫಲಿತಾಂಶದ ಮೂಲಕ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಶೇ 48.45 ರಷ್ಟು ಫಲಿತಾಂಶದ ಮೂಲಕ ಯಾದಗಿರಿ ಕೊನೆಯ ಸ್ಥಾನ  ಪಡೆದಿದೆ.

ಕಳೆದ ವರ್ಷ ಪ್ರಥಮ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ದ್ವಿತೀಯ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯ ಒಟ್ಟು ಫಲಿತಾಂಶ ಶೇ 93.57ರಷ್ಟು ದಾಖಲಾಗಿದೆ.

ಫಲಿತಾಂಶದ ಪ್ರಕಾರ ಒಟ್ಟಾರೆ ಹಾಜರಾದವರ ಪೈಕಿ ಶೇ 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಿರೀಕ್ಷೆಯಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 77.88 ರಷ್ಟು ಬಾಲಕಿಯರು ತೇರ್ಗಡೆಯಾದರೆ ಶೇ 68.22 ರಷ್ಟು ಬಾಲಕರು ಪಾಸಾಗಿದ್ದಾರೆ. ಶೇ 69.33 ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಪಾಸಾಗಿದ್ದರೆ ಶೇ 74.55 ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 3,45,694 ಬಾಲಕಿಯರು ಹಾಜರಾಗಿದ್ದರು. ಈ ಪೈಕಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇಕಡಾ 73.45 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದಂತಾಗಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.57.11ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 62.69ರಷ್ಟು, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 82.66ರಷ್ಟು, ಬಿಬಿಎಂಪಿ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 68.88ರಷ್ಟು, ವಿಭಜಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.78.58ರಷ್ಟು ಹಾಗೂ ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 86.18ರಷ್ಟು ಫಲಿತಾಂಶ ಬಂದಿದೆ.

ಜಿಲ್ಲವಾರು ಫಲಿತಾಂಶ
1.ಉಡುಪಿ – ಶೇ. 93.90
2.ದ.ಕನ್ನಡ – ಶೇ.93.57
3.ಬೆಂಗಳೂರು ದಕ್ಷಿಣ – ಶೇ.85.36
4.ಕೊಡಗು – ಶೇ. 83.84
5.ಬೆಂಗಳೂರು ಉತ್ತರ – ಶೇ. 83.31
6.ಉತ್ತರ ಕನ್ನಡ – ಶೇ. 82.93
7.ಶಿವಮೊಗ್ಗ – ಶೇ. 79.91
8.ಬೆಂಗಳೂರು ಗ್ರಾ. – ಶೇ. 79.70
9.ಚಿಕ್ಕಮಗಳೂರು – ಶೇ. 79.56
10.ಹಾಸನ – ಶೇ. 77.56
11.ಚಿಕ್ಕಬಳ್ಳಾಪುರ – ಶೇ.75.80
12.ಮೈಸೂರು – ಶೇ.74.30
13.ಚಾಮರಾಜನಗರ – ಶೇ.73.97
14.ಮಂಡ್ಯ – ಶೇ.73.27
15.ಬಾಗಲಕೋಟೆ – ಶೇ.72.83
16.ಕೋಲಾರ – ಶೇ.72.45
17.ಧಾರವಾಡ – ಶೇ.72.32
18.ತುಮಕೂರು – ಶೇ.72.02
19.ರಾಮನಗರ – ಶೇ.69.71
20.ದಾವಣಗೆರೆ – ಶೇ. 69.45
21.ಹಾವೇರಿ – ಶೇ. 67.56
22.ಬೀದರ್‌ – ಶೇ.67.31
23.ಕೊಪ್ಪಳ – ಶೇ.67.20
24.ಚಿಕ್ಕೋಡಿ – ಶೇ.66.76
25.ಗದಗ – ಶೇ. 66.64
26.ಬೆಳಗಾವಿ – ಶೇ.65.37
27.ಬಳ್ಳಾರಿ – ಶೇ.64.41
28.ಚಿತ್ರದುರ್ಗ – ಶೇ. 59.87
29.ವಿಜಯಪುರ – ಶೇ. 58.81
30.ರಾಯಚೂರು – ಶೇ.58.75
31.ಕಲಬುರುಗಿ – ಶೇ. 55.70
32.ಯಾದಗಿರಿ – ಶೇ.48.4

ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ತನ್ವಿ ಪಾಟೀಲ, 600ಕ್ಕೆ 597 ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಗಳಿಸಿದ್ದಾರೆ.

ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಶಾಸ್ತ್ರ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ವಿಷಯಗಳಲ್ಲಿ ತಲಾ 100 ಮತ್ತು ಇಂಗ್ಲಿಷ್‌ನಲ್ಲಿ 97 ಅಂಕ ಗಳಿಸಿದ್ದಾರೆ. ಹಿಂದಿಯಲ್ಲಿ 100 ಅಂಕ ಗಳಿಸಿದ್ದಾರೆ.

ಮರು ಪರೀಕ್ಷೆ ದಿನಾಂಕ: ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ದಿನಾಂಕ 8/04/25ರಿಂದ 17/04/2025ರೊಳಗೆ ತಮ್ಮ ಕಾಲೇಜಿನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ದಂಡ ಸಹಿತವಾಗಿ 16/04/2025ರಿಂದ 17/04/2025ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಲು ಪಿಯು ಮಂಡಳಿ ತಿಳಿಸಿದೆ.

ಯಾವುದೇ ಅಭ್ಯರ್ಥಿಗಳು ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸಲು ಮರುಮೌಲ್ಯ ಮಾಪನ ಫಲಿತಾಂಶಕ್ಕಾಗಿ ಕಾಯಬೇಕಾಗಿಲ್ಲ. 2025ರ ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ 24/04/2025ರಿಂದ 8/05/2025ರವರೆಗೆ ನಡೆಯಲಿದೆ.

2025ರ ದ್ವಿತೀಯ ಪಿಯುಸಿ ಪರೀಕ್ಷೆ-3 ದಿನಾಂಕ 9/06/2025ರಿಂದ 21/06/2025ರವರೆಗೆ ನಡೆಯಲಿದೆ. 2025ರ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಪರೀಕ್ಷೆ 2/3ಕ್ಕೆ ಮಂಡಳಿಯ ನಿಯಮಾನುಸಾರ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಬಹುದು.

Leave a Reply