ಮಂಗಳೂರು: ಲೇಡಿಹಿಲ್ ನಗರ ಆರೋಗ್ಯ ಕೇಂದ್ರದಲ್ಲಿ ಸಣ್ಣ ಪುಟ್ಟ ರೋಗಗಳಿಗೂ ಚಿಕಿತ್ಸೆ ಸಿಗುತ್ತಿಲ್ಲ. ಅಗತ್ಯ ಜ್ವರಗಳಿಗೆ ನೀಡುವಂತಹ ಮಾತ್ರೆಗಳು ಕೂಡಾ ಕಳೆದ ಎರಡು ತಿಂಗಳುಗಳಿಂದ ಸರಬರಾಜು ಮಾಡುತ್ತಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತ ನಗರದ ಜನರ ಆರೋಗ್ಯ ಕಾಳಜಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೇಯರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದರು.
ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಒತ್ತಾಯಿಸಿ ಹಾಗೂ ಖಾಲಿ ಇರುವ ನಗರ ಆರೋಗ್ಯಾಧಿಕಾರಿ ಹುದ್ದೆಯನ್ನು ಭರ್ತಿಗೊಳಿಸಲು ಆಗ್ರಹಿಸಿ ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆಯ ನಗರ ಆರೋಗ್ಯ ಕೇಂದ್ರವನ್ನು ಸಂಪೂರ್ಣವಾಗಿ ಖಾಸಗೀ ಮೆಡಿಕಲ್ ಕಾಲೇಜುಗಳಿಗೆ ನಡೆಸಲು ಗುತ್ತಿಗೆ ನೀಡುವ ಮೂಲಕ ಖಾಸಗಿ ಲಾಭಿಗೆ ಮುಂದಾಗಿದೆ. ನಗರದ ಜನರ ಆರೋಗ್ಯ ಕಾಳಜಿ ವಹಿಸಬೇಕಾಗಿದ್ದ ಆರೋಗ್ಯ ಕೇಂದ್ರ ಇಂದು ನರಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಇನ್ನು ಸ್ಮಾರ್ಟ್ ಸಿಟಿ ಹೆಸರಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಅಗೆದು ಕಾಂಕ್ರೀಟಿಕರಣ ನಡೆಸಿ ಕಮಿಷನ್ ಹೆಸರಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಬಿಜೆಪಿ ಆಡಳಿತವನ್ನು ಹಾಗು ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಗೆ ನಗರ ಆರೋಗ್ಯ ಅವ್ಯವಸ್ಥೆ ಕಣ್ಣಿಗೆ ಕಾಣುತ್ತಿಲ್ಲವೆ? ಎಂದು ಪ್ರಶ್ನಿಸಿದರು.
ಲೇಡಿಹಿಲ್ ನಗರ ಆರೋಗ್ಯ ಕೇಂದ್ರಕ್ಕೆ ಅದರದೇ ಆದ ಹಿನ್ನೆಲೆ ಇದೆ. ಹಿಂದೆ ಇದು ಸರಕಾರಿ ಹೆರಿಗೆ ಆಸ್ಪತ್ರೆಯಾಗಿ ಹೆಸರುವಾಸಿಯಾಗಿತ್ತು. ಆದರೆ ಇಂದು ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಇನ್ನು ರಾಷ್ಟೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಆರೋಗ್ಯ ಇಲಾಖೆ ನಡೆಸುವ 10 ನಗರ ಆರೋಗ್ಯ ಕೇಂದ್ರದಲ್ಲೂ ವೈದ್ಯರು ಸಹಿತ ಹಲವಾರು ಗಂಭೀರ ಸಮಸ್ಯೆಗಳಿವೆ. ಇವುಗಳನ್ನೆಲ್ಲ ಸರಿಪಡಿಸದೆ ಈಗ ಮತ್ತೆ ನಮ್ಮ ಕ್ಲಿನಿಕ್ ಹೆಸರಲ್ಲಿ 7 ನಗರ ಆರೋಗ್ಯ ಕೇಂದ್ರಗಳು ನಗರ ಪಾಲಿಕೆ ವ್ಯಾಪ್ತಿಯಡಿಯಲ್ಲಿ ಬರಲಿದ್ದು ಅದನ್ನೂ ನಡೆಸುವಲ್ಲಿ ಸರಕಾರಗಳು ವಿಫಲವಾದಲ್ಲಿ ನಮ್ಮ ಹೋರಾಟವನ್ನು ತೀವ್ರವಾಗಿ ಕೈಗೊಳ್ಲಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ, ಲೇಡಿಹಿಲ್ ವೃತ್ತ ನಾರಾಯಣ ಗುರು ವೃತ್ತ ಆಗಬೇಕೆಂಬ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸಹಿತ ಎಲ್ಲಾ ಶಾಸಸಕರು ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಅವ್ಯವಸ್ಥೆಯಿಂದ ಕೂಡಿರುವ ಈ ಆರೋಗ್ಯ ಕೇಂದ್ರ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯನ್ನು ಬೆಂಬಲಿಸಿ ಸಾಮರಸ್ಯ ಮಂಗಳೂರು ಸಂಚಾಲಕರಾದ ಮಂಜುಳಾ ನಾಯಕ್ ಮಾತನಾಡಿದರು.
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ನಗರ ಪಾಲಿಕೆ ಸೀನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಅರುಣ್ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿದರು. ಇರುವ ಸಮಸ್ಯೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂಬ ಭರವಸೆಯನ್ನಿತ್ತರು.
ಪ್ರತಿಭಟನೆಯಲ್ಲಿ ಸಿಪಿಐಎಂ ನಗರ ಸಮಿತಿ ಮುಖಂಡರಾದ ಲೋಕೇಶ್ ಎಂ, ಭಾರತೀ ಬೋಳಾರ, ಸಾಧಿಕ್ ಕಣ್ಣೂರು, ನೌಶದ್ ಬೆಂಗರೆ,ಪ್ರಮೀಳಾ ಶಕ್ತಿನಗರ, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ರಾಧಾಕೃಷ್ಣ, CITU ಮುಖಂಡರಾದ ಮಹಮ್ಮದ್ ಮುಸ್ತಾಫಾ, ಅಶೋಕ್ ಶ್ರೀಯಾನ್, ಡಿವೈಎಫ್ಐ ಮುಖಂಡರಾದ ಜಗದೀಶ್ ಬಜಾಲ್, ಮಾಧುರಿ ಬೋಳಾರ, ವಿದ್ಯಾರ್ಥಿ ಮುಖಂಡರಾದ ರೇವಂತ್ ಕದ್ರಿ, ಶಾಹಿದ್, ಸಮಝ್ ಮುಂತಾದವರು ಉಪಸ್ಥಿತರಿದ್ದರು.




