ಬೆಂಗಳೂರು: ಹೊಸದಾಗಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಳನ್ನು ಪಡೆಯಲು ಚಾತಕ ಪಕ್ಷಿಗಳಂತೆ ಹಲವಾರು ದಿನಗಳಿಂದ ಕಾಯುತ್ತಿರುವ ಜನತೆಗೆ ರಾಜ್ಯ ಸರ್ಕಾರ ಕಹಿ ಸುದ್ದಿಯೊಂದನ್ನು ನೀಡಿದೆ. ಸದ್ಯಕ್ಕೆ ಹೊಸ ಕಾರ್ಡ್ ವಿತರಿಸಲು ಅರ್ಜಿ ಸ್ವೀಕರಿಸುವುದಿಲ್ಲ ಎಂದು ತಿಳಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಈ ಹಿಂದೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಮೊದಲು ವಿಲೇವಾರಿ ಮಾಡಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಹೊಸ ಕಾರ್ಡ್ ವಿತರಿಸಲು ಅರ್ಜಿ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯ ಹೊಸದಾಗಿ ಕಾರ್ಡ್ ಕೋರಿ ಸಲ್ಲಿಸಿರುವ 2.95 ಲಕ್ಷ ಅರ್ಜಿಗಳಿವೆ. ಇವುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಇದರಲ್ಲಿ ಸುಮಾರು ಒಂದು ಲಕ್ಷ ಅರ್ಜಿಗಳು ಬಿಪಿಎಲ್ ಕಾರ್ಡ್ ಗೆ ಅರ್ಹವಾಗಿವೆ. ಆದಷ್ಟು ಶೀಘ್ರವಾಗಿ ಇವರಿಗೆ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಉಳಿದ ಅರ್ಜಿಗಳ ಪರಿಶೀಲನೆಗೆ ಇನ್ನಷ್ಟು ಸಮಯಾವಕಾಶ ಬೇಕಾಗಿದೆ.ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಹೊಸದಾಗಿ ಕಾರ್ಡ್ ವಿತರಿಸಲು ಅರ್ಜಿ ಕರೆಯುವ ಕುರಿತಂತೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಈಗಾಗಲೇ ಎಪಿಎಲ್ ಕಾರ್ಡ್ ಪಡೆದಿರುವ ಸುಮಾರು ಹದಿನಾಲ್ಕು ಲಕ್ಷ ಮಂದಿ ಯಾವುದೇ ರೀತಿಯ ಸೌಲಭ್ಯ ಪಡೆಯುತ್ತಿಲ್ಲ. ಹೀಗಾಗಿ ಎಪಿಎಲ್ ಕಾರ್ಡ್ ವಿತರಿಸಲು ಅರ್ಜಿ ಕರೆಯುವ ಪ್ರಸಂಗ ಉದ್ಬವಿಸಿಲ್ಲ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆ ಅನುಷ್ಠಾನದ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಜಂಟಿ ನಿರ್ದೇಶಕರ ಜೊತೆ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಕಳೆದ ತಿಂಗಳು ನೇರ ನಗದು ವಿತರಣೆ ವಿಳಂಬವಾಯಿತು. ಇದಕ್ಕೆ ಕಾರಣವಾದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಈ ತಿಂಗಳ ಹಣ ಆಗಸ್ಟ್ ಅಂತ್ಯದಲ್ಲಿ ಸಂದಾಯವಾಗಲಿದೆ ಎಂದು ವಿವರಿಸಿದರು.
ಸರ್ಕಾರ ನೀಡಿರುವ ವಾಗ್ದಾನದಂತೆ ಪಡಿತರ ಧಾನ್ಯ ವಿತರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚುವರಿ ಅಕ್ಕಿ ನೀಡಲು ನೆರೆಯ ಆಂದ್ರ, ತೆಲಂಗಾಣ ಸರ್ಕಾರಗಳು ಮುಂದೆ ಬಂದಿವೆ. ದರ ನಿಗದಿ ಸಂಬಂಧ ಉಭಯ ರಾಜ್ಯಗಳ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಇದು ಅಂತಿಮವಾದ ಮಾಡಿದ ನಂತರ ಖರೀದಿಸಿ ವಿತರಣೆ ಮಾಡಲಾಗುತ್ತದೆ ಎಂದರು.
ಇದರ ಜೊತೆಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಜೋಳ ಬಳಸುತ್ತಿದ್ದಾರೆ. ಹೀಗಾಗಿ ಅಕ್ಕಿಯ ಜೊತೆಗೆ ರಾಗಿ ಮತ್ತು ಜೋಳಕ್ಕೂ ಬೇಡಿಕೆಯಿದೆ. ರಾಗಿ, ಜೋಳ ಬಳಕೆ ಬಗ್ಗೆ ಮಾಹಿತಿ ಪಡೆದು ಅದರ ಪ್ರಕಾರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪಡಿತರ ವಿತರಣೆ ಪದ್ದತಿ ಸಮರ್ಪಕವಾಗಿ ಅನುಷ್ಠಾನ ಮಾಡುವ ಸಲುವಾಗಿ ತಾಲ್ಲೂಕು ಮಟ್ಟದಲ್ಲಿ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಹೊಸ ವ್ಯವಸ್ಥೆ ರೂಪಿಸಲಾಗುವುದು. ಇಲ್ಲಿ ಅಗತ್ಯ ಸಿಬ್ಬಂದಿ ನಿಯೋಜಸುತ್ತಿದ್ದು, ಡಾಟಾ ಎಂಟ್ರಿ ಆಪರೇಟರ್ ಗಳನ್ನು ನೇಮಿಸಿ ತರಬೇತಿಗೆ ಸೂಚನೆ ನೀಡಲಾಗಿದೆ ಎಂದರು.



