ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಕಾರ್ಯಾರಂಭ
ತಿರುವನಂತಪುರ: ಇಂದು, ಕೇರಳದ ಕರಾವಳಿಯಲ್ಲಿ, ಪ್ರತಿಯೊಬ್ಬ ಭಾರತೀಯನೂ ಹೊಸ ಭವಿಷ್ಯದ ಸೂರ್ಯೋದಯಕ್ಕೆ ಸಾಕ್ಷಿಯಾಗುತ್ತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೊಚ್ಚಿಯಲ್ಲಿ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ಕ್ರಾಂತ್ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತಾಡಿದ ಅವರು, ಐಎನ್ಎಸ್ ವಿಕ್ರಾಂತ್ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ವಿಶ್ವದ ದಿಗಂತದಲ್ಲಿ ಭಾರತದ ಉದಯೋನ್ಮುಖ ಶಕ್ತಿಯ ದ್ಯೋತಕವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕನಸು ಕಂಡಿದ್ದ ಸಮರ್ಥ ಮತ್ತು ಬಲಿಷ್ಠ ಭಾರತವನ್ನು ಇಂದು ನಾವು ಕಾಣುತ್ತಿದ್ದೇವೆ ಎಂದರು.
“ವಿಕ್ರಾಂತ್ ಬೃಹತ್ತಾಗಿದೆ, ಅಗಾಧವಾಗಿದೆ ಮತ್ತು ವಿಶಾಲವಾಗಿದೆ. ವಿಕ್ರಾಂತ್ ವಿಶಿಷ್ಟವಾಗಿದೆ ಮತ್ತು ವಿಶೇಷವಾಗಿದೆ. ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ. ಇದು 21ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಗುರಿಗಳು ದೂರವಾಗಿದ್ದರೆ, ಪ್ರಯಾಣಗಳು ಸುದೀರ್ಘವಾಗಿರುತ್ತವೆ, ಸಾಗರ ಮತ್ತು ಸವಾಲುಗಳಿಗೆ ಅಂತ್ಯವೆಂಬುದು ಇರುವುದಿಲ್ಲ – ಇದಕ್ಕೆ ಭಾರತದ ಉತ್ತರ ವಿಕ್ರಾಂತ್. ಆಜಾದಿ ಕಾ ಅಮೃತ ಮಹೋತ್ಸವದ ಅನುಪಮ ಅಮೃತವೆಂದರೆ ವಿಕ್ರಾಂತ್. ವಿಕ್ರಾಂತ್ ಸ್ವಾವಲಂಬಿ ಭಾರತದ ವಿಶಿಷ್ಟ ಪ್ರತಿಬಿಂಬ ಎಂದರು.
ಇಂದಿನ ಭಾರತಕ್ಕೆ ಯಾವುದೇ ಸವಾಲು ಸಹ ತುಂಬಾ ಕಷ್ಟಕರವಲ್ಲ. ಇಂದು, ಭಾರತವು ದೇಶೀಯ ತಂತ್ರಜ್ಞಾನದೊಂದಿಗೆ ಇಂತಹ ಬೃಹತ್ ವಿಮಾನವಾಹಕ ನೌಕೆಯನ್ನು ನಿರ್ಮಿಸುವ ವಿಶ್ವದ ರಾಷ್ಟ್ರಗಳ ಸಾಲಿಗೆ ಸೇರಿಕೊಂಡಿದೆ. ಇಂದು ಐಎನ್ಎಸ್ ವಿಕ್ರಾಂತ್ ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ ಮತ್ತು ದೇಶದಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದೆ ಎಂದರು.
ನೌಕಾಪಡೆ, ಕೊಚ್ಚಿನ್ ಶಿಪ್ಯಾರ್ಡ್ನ ಎಂಜಿನಿಯರ್ಗಳು, ವಿಜ್ಞಾನಿಗಳು ಮತ್ತು ವಿಶೇಷವಾಗಿ ಈ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರ ಕೊಡುಗೆಯನ್ನು ಶ್ಲಾಘಿಸಿದರು. ಓಣಂನ ಶುಭ ಸಂದರ್ಭದಲ್ಲಿ ಇದು ಇನ್ನಷ್ಟು ಸಂತೋಷವನ್ನು ಹೆಚ್ಚಿಸಿದೆ ಎಂದರು.
ಐಎನ್ಎಸ್ ವಿಕ್ರಾಂತ್ನ ಪ್ರತಿಯೊಂದು ಭಾಗವೂ ತನ್ನದೇ ಆದ ಅರ್ಹತೆ, ಶಕ್ತಿ, ಮತ್ತು ಅಭಿವೃದ್ಧಿ ಪಯಣವನ್ನು ಹೊಂದಿದೆ. ಇದು ದೇಶೀಯ ಸಾಮರ್ಥ್ಯ, ದೇಶೀಯ ಸಂಪನ್ಮೂಲಗಳು ಮತ್ತು ದೇಶೀಯ ಕೌಶಲ್ಯಗಳ ಸಂಕೇತವಾಗಿದೆ. ಇದರ ವಾಯುನೆಲೆಯಲ್ಲಿ ಸ್ಥಾಪಿಸಲಾದ ಉಕ್ಕು ಸಹ ದೇಶೀಯವಾದುದು, ಇದನ್ನು ಡಿ ಆರ್ ಡಿ ಒ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಮತ್ತು ಭಾರತೀಯ ಕಂಪನಿಗಳು ನಿರ್ಮಿಸಿವೆ ಎಂದರು.
ಇದೊಂದು ತೇಲುವ ನಗರವಿದ್ದಂತೆ. ಇದು 5000 ಮನೆಗಳಿಗೆ ಸಾಕಾಗುವಷ್ಟು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಇದರಲ್ಲಿ ಬಳಸಿರುವ ವೈರಿಂಗ್ ಕೊಚ್ಚಿಯಿಂದ ಕಾಶಿಯವರೆಗೆ ತಲುಪುತ್ತದೆ. ಐಎನ್ಎಸ್ ವಿಕ್ರಾಂತ್ ತಾವು ಕೆಂಪು ಕೋಟೆಯಿಂದ ಘೋಷಿಸಿದ ಪಂಚಪ್ರಾಣಗಳ ಜೀವಂತ ಸಾಕಾರವಾಗಿದೆ ಎಂದರು.
ಛತ್ರಪತಿ ಶಿವಾಜಿ ಮಹಾರಾಜರು ಈ ಸಮುದ್ರ ಶಕ್ತಿಯ ಬಲದ ಮೇಲೆ ನೌಕಾಪಡೆಯನ್ನು ನಿರ್ಮಿಸಿದರು, ಇದರಿಂದ ಅವರು ತಮ್ಮ ಶತ್ರುಗಳನ್ನು ಹಿಮ್ಮೆಟ್ಟಿಸಿದರು. ಬ್ರಿಟಿಷರು ಭಾರತಕ್ಕೆ ಬಂದಾಗ, ಅವರು ಭಾರತೀಯ ಹಡಗುಗಳ ಬಲ ಮತ್ತು ಅವುಗಳ ಮೂಲಕ ನಡೆಯುತ್ತಿದ್ದ ವ್ಯಾಪರವನ್ನು ಕಂಡು ಹೆದರಿದರು. ಆದ್ದರಿಂದ ಅವರು ಭಾರತದ ಸಮುದ್ರ ಶಕ್ತಿಯ ಬಲವನ್ನು ಮುರಿಯಲು ನಿರ್ಧರಿಸಿದರು. ಆ ಸಮಯದಲ್ಲಿ ಬ್ರಿಟಿಷ್ ಸಂಸತ್ತಿನಲ್ಲಿ ಕಾನೂನನ್ನು ಜಾರಿಗೊಳಿಸುವ ಮೂಲಕ ಭಾರತೀಯ ಹಡಗುಗಳು ಮತ್ತು ವ್ಯಾಪಾರಿಗಳ ಮೇಲೆ ಹೇಗೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಯಿತು ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ ಎಂದರು.
ಇಂದು ಸೆಪ್ಟೆಂಬರ್ 2, 2022ರ ಐತಿಹಾಸಿಕ ದಿನವಾಗಿದೆ. ಭಾರತವು ಗುಲಾಮಗಿರಿಯ ಕುರುಹನ್ನು, ಗುಲಾಮಗಿರಿಯ ಹೊರೆಯನ್ನು ತೆಗೆದುಹಾಕಿದೆ ಎಂದರು.
ಭಾರತೀಯ ನೌಕಾಪಡೆಗೆ ಇಂದಿನಿಂದ ಹೊಸ ಧ್ವಜ ಸಿಕ್ಕಿದೆ. ಇಲ್ಲಿಯವರೆಗೆ ಭಾರತೀಯ ನೌಕಾಪಡೆಯ ಧ್ವಜದಲ್ಲಿ ಗುಲಾಮಗಿರಿಯ ಗುರುತು ಉಳಿದಿತ್ತು. ಆದರೆ ಇಂದಿನಿಂದ ಛತ್ರಪತಿ ಶಿವಾಜಿಯಿಂದ ಪ್ರೇರಿತವಾದ ನೌಕಾಪಡೆಯ ನೂತನ ಧ್ವಜವು ಸಮುದ್ರದಲ್ಲಿ ಹಾಗೂ ಆಕಾಶದಲ್ಲಿ ಹಾರಾಡಲಿದೆ ಎಂದರು.
ವಿಕ್ರಾಂತ್ ನಮ್ಮ ಕಡಲ ವಲಯವನ್ನು ರಕ್ಷಿಸಲು ಇಳಿದಾಗ, ನೌಕಾಪಡೆಯ ಅನೇಕ ಮಹಿಳಾ ಸೈನಿಕರು ಸಹ ಇಲ್ಲಿ ನೆಲೆಸುತ್ತಾರೆ. ಸಾಗರದ ಅಗಾಧ ಶಕ್ತಿ, ಅಪರಿಮಿತ ಸ್ತ್ರೀ ಶಕ್ತಿಯು ನವ ಭಾರತದ ಅತ್ಯುನ್ನತ ಗುರುತಾಗುತ್ತಿದೆ. ಇದೀಗ ಭಾರತೀಯ ನೌಕಾಪಡೆಯು ತನ್ನ ಎಲ್ಲಾ ಶಾಖೆಗಳನ್ನು ಮಹಿಳೆಯರಿಗಾಗಿ ಮುಕ್ತಗೊಳಿಸಲು ನಿರ್ಧರಿಸಿದೆ. ನಿರ್ಬಂಧಗಳನ್ನು ಈಗ ತೆಗೆದುಹಾಕಲಾಗುತ್ತಿದೆ. ದೈತ್ಯ ಅಲೆಗಳಿಗೆ ಯಾವುದೇ ಗಡಿಗಳಿಲ್ಲದಂತೆಯೇ, ಭಾರತದ ಹೆಣ್ಣುಮಕ್ಕಳಿಗೂ ಸಹ ಯಾವುದೇ ಗಡಿ ಅಥವಾ ನಿರ್ಬಂಧಗಳಿರುವುದಿಲ್ಲ ಎಂದರು.
ಹನಿ ಹನಿ ನೀರು ಸೇರಿ ವಿಶಾಲ ಸಾಗರವಾಗುವಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ‘ಲೋಕಲ್ ಫಾರ್ ವೋಕಲ್’ ಎಂಬ ಮಂತ್ರವನ್ನು ಪಾಲಿಸಿದರೆ, ದೇಶವು ಸ್ವಾವಲಂಬಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ಸ್ವಾತಂತ್ರ್ಯ ದಿನದಂದು ದೇಶೀಯ ಫಿರಂಗಿಗಳ ಮೂಲಕ ನೀಡಿದ ಗೌರವಕ್ಕೆ ಅಭಾರಿ ಎಂದರು.
ಈ ಹಿಂದೆ ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಹಿಂದೂ ಮಹಾಸಾಗರದಲ್ಲಿ ಭದ್ರತಾ ಕಾಳಜಿಗಳನ್ನು ನಿರ್ಲಕ್ಷಿಸಲಾಗಿತ್ತು. ಆದರೆ, ಇಂದು ಈ ಪ್ರದೇಶವು ನಮಗೆ ದೇಶದ ಪ್ರಮುಖ ರಕ್ಷಣಾ ಆದ್ಯತೆಯಾಗಿದೆ. ಅದಕ್ಕಾಗಿಯೇ ನಾವು ನೌಕಾಪಡೆಗೆ ಬಜೆಟ್ ಅನ್ನು ಹೆಚ್ಚಿಸುವುದರಿಂದ ಅದರ ಸಾಮರ್ಥ್ಯವನ್ನು ಹೆಚ್ಚಿಸುವವರೆಗೆ ಪ್ರತಿಯೊಂದು ದಿಕ್ಕಿನಲ್ಲೂ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಬಲಿಷ್ಠ ಭಾರತ ಶಾಂತಿಯುತ ಮತ್ತು ಸುರಕ್ಷಿತ ಜಗತ್ತಿಗೆ ದಾರಿ ಮಾಡಿಕೊಡಲಿದೆ ಎಂದರು.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸರ್ಬಾನಂದ ಸೋನೋವಾಲ್, ವಿ ಮುರಳೀಧರನ್, ಅಜಯ್ ಭಟ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ನೌಕಾಪಡೆಯ ಮುಖ್ಯಸ್ಥ ಆರ್ ಹರಿ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




