ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರಿಗೆ ಇದೀಗ ಭೂಕಂಟಕ ಎದುರಾಗಿದೆ.
ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪ್ರತ್ಯೇಕ ಪ್ರಕರಣಗಳಲ್ಲಿ ಸಿ ಎ ನಿವೇಶನ ಪಡೆಯುವಲ್ಲಿ ಈ ಇಬ್ಬರೂ ತಮ್ಮ ಪ್ರಭಾವ ಬಳಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ದೂರಿಗೆ ಸಂಬಂಧಿಸಿದಂತೆ ರಾಜ್ಯಪಾಲರು ವಿವರಣೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ವಿಧಾನಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಎಂಬುವವರು ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಎಂ.ಬಿ.ಪಾಟೀಲ್ ವಿರುದ್ಧ ನಿಯಮ ಉಲ್ಲಂಘಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ದೂರು ಸಲ್ಲಿಸಿದ್ದಾರೆ.
ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ಭಾಗಮನೆ ಡೆವಲಪರ್ಸ್ ಅವರಿಂದ 400 ಲಕ್ಷಗಳನ್ನು ಸಾಲವಾಗಿ ಪಡೆದಿರುವುದಾಗಿ ಘೋಷಿಸಿದ್ದಾರೆ. ಇದೀಗ ಅವರು ಕೈಗಾರಿಕಾ ಮಂತ್ರಿಯಾಗಿ ಭಾಗಮನೆ ಡೆವಲಪರ್ಸ್ ಸಂಸ್ಥೆಯ ನಿರ್ದೇಶಕರ ಒಡೆತನದ ವೈಗೈ ಇನ್ವೆಸ್ಟ್ಮೆಂಟ್ ಪ್ರೈವೇಟ್ ಲಿಮಿಟೆಡ್ ಗೆ ಸಿಎ ನಿವೇಶನ ನೀಡಿದ್ದಾರೆ. ಇದರಲ್ಲಿ ಅವರು ಅಧಿಕಾರ ದುರ್ಬಳಕೆ ಮತ್ತು ಸ್ವಜನ ಪಕ್ಷಪಾತ ಎಸಗಿರುವುದು ಸಾಬೀತಾಗಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ತಮ್ಮ ಮನವಿಯಲ್ಲಿ ದೂರಿದ್ದಾರೆ.
ಅದೇ ರೀತಿ ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ 5 ಎಕರೆ ಜಮೀನು ನೀಡಲಾಗಿದೆ. ಈ ಟ್ರಸ್ಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಟ್ರಸ್ಟಿಯಾಗಿದ್ದಾರೆ. ಇವರು ಕೂಡ ಪ್ರಕ್ರಿಯೆಯಲ್ಲಿ ತಮ್ಮ ಪ್ರಭಾವ ಬಳಸಿರುವುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರ ವಿರುದ್ಧ ಖಾಸಗಿ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಈ ಮನವಿಯ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಈ ಇಬ್ಬರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಸೆಕ್ಷನ್ 17ಎ ಅಡಿ ದೂರು ದಾಖಲಿಸಲು ಮನವಿ ಮಾಡಿದ್ದಾರೆ. ಹೀಗಾಗಿ ಸರ್ಕಾರ ವಿರುದ್ಧ ಉತ್ತರ ಬಯಸುತ್ತೇನೆ ಎಂದು ರಾಜ್ಯಪಾಲರು ಪತ್ರದಲ್ಲಿ ಕೋರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಸಿಎ ನಿವೇಶನ ಪಡೆದಿರುವ ಕ್ರಮ ಸಂಪೂರ್ಣ ಕಾನೂನು ಪ್ರಕಾರವಾಗಿಯೇ ಇದೆ. ಈ ಕುರಿತಂತೆ ತಾವು ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ದ ಎಂದರು.
ಆರೋಪ ಬರುತ್ತಿದ್ದ ಹಾಗೆ ಬಿಜೆಪಿಯವರ ರೀತಿಯಲ್ಲಿ ತಡೆಯಾಜ್ಞೆ ಪಡೆಯುತ್ತಿಲ್ಲ. ನಮ್ಮ ಬಳಿ ಎಲ್ಲಾ ಆರೋಪಗಳಿಗೆ ಉತ್ತರ ಕೊಡುವ ಸೂಕ್ತ ದಾಖಲೆಗಳು ಇವೆ. ನಾವು ಯಾವ ಆರೋಪಗಳಿಂದಲೂ ಹೆದರಿ ಕುಳಿತುಕೊಳ್ಳುವುದಿಲ್ಲ ಎಂದರು.
ಕೈಗಾರಿಕಾ ಸಿಎ ನಿವೇಶನ ಪಡೆದ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಮಗೂ ನೋಟಿಸ್ ಕೊಟ್ಟು ವಿವರಣೆ ಕೇಳಿದ್ದಾರೆ. ಕಾಂಗ್ರೆಸಿಗರ ವಿರುದ್ಧ ಆರೋಪಗಳು ಬಂದಾಗ ಬೆಳಕಿನ ವೇಗದಲ್ಲಿ ರಾಜಭವನ ಕ್ರಮ ಕೈಗೊಳ್ಳುತ್ತದೆ. ಅದೇ ಬಿಜೆಪಿ-ಜೆಡಿಎಸ್ ವಿರುದ್ಧ ದೂರುಗಳು ಬಂದರೆ ಕಂಡೂ ಕಾಣದಂತೆ ಇರಲಾಗುತ್ತಿದೆ ಎಂದರು.
ಬಿಜೆಪಿಯವರು ಸಿಡಿ ಇದೆ ಎಂದರೆ ಒಂದಷ್ಟು ಮಂದಿ ತಡೆಯಾಜ್ಞೆ ತರುತ್ತಾರೆ. ಕೋವಿಡ್ ಹಗರಣದ ಮಧ್ಯಂತರ ವರದಿ ಬಂದಾಕ್ಷಣ ಒಂದಷ್ಟು ಜನ ಕಾನೂನು ಹೋರಾಟದ ಮಾತನಾಡುತ್ತಾರೆ. ವರದಿಯಲ್ಲಿ ಏನಿದೆ ಎಂಬುದು ತಿಳಿಯದೆ ಇವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದು ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸ್ಪಷ್ಟೀಕರಿಸುತ್ತಿದೆ ಎಂದರು.




