ಬಿಜೆಪಿ ಅವಧಿಯ ಭ್ರಷ್ಟಾಚಾರ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಕಾಣಿಸುವುದು ನಮ್ಮ ಜವಾಬ್ದಾರಿ: ಕಾಂಗ್ರೆಸ್

2 years ago

ಬೆಂಗಳೂರು: ಸಾಂಕ್ರಾಮಿಕ ಕೋವಿಡ್ ಅವಧಿಯಲ್ಲಿ ನಡೆದ ಖರೀದಿ ಅಕ್ರಮ ಸೇರಿದಂತೆ ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿದೆ ಎನ್ನಲಾದ 21 ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ತಪ್ಪಿತಸ್ಥರಿಗೆ ಶಿಕ್ಷೆ ಯಾಗುವಂತೆ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಲಾಗಿದೆ.

ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮತ್ತು ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಬಿಜೆಪಿ ಅವಧಿಯಲ್ಲಿ ನಡೆದ 21 ಹಗರಣಗಳನ್ನು ವಿಧಾನಮಂಡಲದಲ್ಲಿ ಪ್ರಸ್ತಾಪಿಸಲಾಗಿದೆ. ಅವುಗಳಿಗೆ ತಾರ್ಕಿಕ ಅಂತ್ಯ ಕಾಣಿಸುವುದು ನಮ್ಮ ಜವಾಬ್ದಾರಿ. ಕೋವಿಡ್‌ ಸಂದರ್ಭದಲ್ಲಿ ಚಾಮರಾಜನಗರದ ಆಮ್ಲಜನಕ ಕೊರತೆಯಿಂದಾದ ದುರಂತ, ಪಿಪಿಇ ಕಿಟ್‌ ಖರೀದಿ, ಕೆಎಸ್‌‍ಆರ್‌ಟಿಸಿ ಪ್ರಯಾಣ ದರ ದ್ವಿಗುಣ ಸೇರಿದಂತೆ ಹಲವು ವಿಚಾರಗಳು ಆಳ ಅಗಲದ ತನಿಖೆ ನಡೆಯಲಿವೆ ಎಂದರು.

ಪಿಎಸ್‌‍ಐ ನೇಮಕಾತಿ ಹಗರಣದ ವಿಚಾರಣಾ ವರದಿ ಬಂದಿದೆ. ಅದರ ಕ್ರಿಮಿನಲ್‌ ತನಿಖೆಗಾಗಿ ಎಸ್‌‍ಐಟಿ ರಚನೆ ಮಾಡಲಾಗಿದೆ. ಬಿಟ್‌ ಕಾಯಿನ್‌ ಹಗರಣದ ತನಿಖೆ ಯಾವ ಹಂತದಲ್ಲಿದೆ ಎಂದು ತಮಗೆ ಗೊತ್ತಿಲ್ಲ ಎಂದು ಹೇಳಿದ ಪ್ರಿಯಾಂಕ ಖರ್ಗೆ, ಬಿಟ್‌ ಕಾಯಿನ್‌ ಬಗ್ಗೆ ತಾಂತ್ರಿಕ ಅಂಶಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಾವು ವಿವರಣೆ ನೀಡಿದ್ದರಿಂದಾಗಿ ಆ ಹಗರಣದಲ್ಲಿ ನನ್ನ ಹೇಳಿಕೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುತ್ತಿದೆ ಎಂದರು.

ಕೋವಿಡ್‌ ಹಗರಣದ ಮಧ್ಯಂತರ ವರದಿ ಬಂದಾಕ್ಷಣ ಒಂದಷ್ಟು ಜನ ಕಾನೂನು ಹೋರಾಟದ ಮಾತನಾಡುತ್ತಾರೆ. ವರದಿಯಲ್ಲಿ ಏನಿದೆ ಎಂಬುದು ತಿಳಿಯದೆ ಇವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದು ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸ್ಪಷ್ಟೀಕರಿಸುತ್ತಿದೆ ಎಂದರು.

ಸಚಿವ ಎಂಬಿ ಪಾಟೀಲ್ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಸಾವಿನ ನಡುವೆಯೂ ಹಣ ಲೂಟಿ ಹೊಡೆದಿದ್ದಾರೆ. ಪಿಎಸ್‌‍ಐ, ಬಿಟ್‌ ಕಾಯಿನ್‌ ಹಗರಣ ಸೇರಿದಂತೆ ಎಲ್ಲವನ್ನೂ ತನಿಖೆಗೊಳಪಡಿಸಲಾಗಿದೆ. ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿಡ್‌ ಸಂದರ್ಭದಲ್ಲಿನ ಹಗರಣಗಳಿಗೆ ಆಗಿನ ಸಚಿವರೇ ಹೊಣೆಗಾರರು. ವೈದ್ಯಕೀಯ ಕಾಲೇಜುಗಳ ನಿರ್ಮಾಣದಲ್ಲಿ ಏಕಾಏಕಿ ಹಲವುಪಟ್ಟು ಯೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ. ಸುಮಾರು 15-20 ಸಚಿವ ಸಂಪುಟ ಸಭೆಗಳಲ್ಲಿ ಈ ಬಗ್ಗೆ ನಿರಂತರ ಚರ್ಚೆಯಾಗಿದೆ. 300-400 ಕೋಟಿ ರೂ. ಏಕಾಏಕಿ ಹೆಚ್ಚಿಸುವ ಬಗ್ಗೆ ಸಚಿವ ಪರಮೇಶ್ವರ್‌ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದರು.

Leave a Reply