ಬೆಂಗಳೂರು: ತೈವಾನ್ ಮೂಲದ ಚಿಪ್ ತಯಾರಿಕಾ ಕಂಪನಿ ಫಾಕ್ಸ್ ಕಾನ್, ಕರ್ನಾಟಕದಲ್ಲಿ ಎರಡು ಯೋಜನೆಗಳಲ್ಲಿ ಸುಮಾರು ₹5,000 ಕೋಟಿ ರೂ. ಹೂಡಿಕೆ ಮಾಡಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಐಫೋನ್ ಬಿಡಿಭಾಗಗಳನ್ನು ಉತ್ಪಾದಿಸುವ ಘಟಕ ಸ್ಥಾಪಿಸಲು ಸುಮಾರು ₹3000 ಕೋಟಿ ಹೂಡಿಕೆ ಮತ್ತು ಚಿಪ್ ತಯಾರಿಕೆಯ ಸಾಧನಗಳನ್ನು ತಯಾರಿಸಲು ಅಪ್ಲೈಡ್ ಮೆಟೀರಿಯಲ್ಸ್’ನೊಂದಿಗೆ ₹2000 ಕೋಟಿ ಮೊತ್ತದ ಯೋಜನೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದರು.
ಈ ಎರಡು ಯೋಜನೆಗಳಿಂದ ರಾಜ್ಯದಲ್ಲಿ 14,000 ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಲ್ಲೇ ತಂತ್ರಜ್ಞಾನದ ಪ್ರಗತಿ ಮತ್ತು ಒಟ್ಟಾರೆ ಸಾಮಾಜಿಕ – ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಬದಲಾವಣೆ ತರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರದ ಜೊತೆಗಿನ ಒಪ್ಪಂದ ಪತ್ರಕ್ಕೆ ಫಾಕ್ಸ್ ಕಾನ್ ಅಧ್ಯಕ್ಷ ಯಂಗ್ ಲಿ ಯು ಸೋಮವಾರ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಉಪಸ್ಥಿತರಿದ್ದರು.



